Thursday, September 19, 2024

ಪ್ರಾಯೋಗಿಕ ಆವೃತ್ತಿ

ನಾಗಮಂಗಲ ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತ : ಎಲ್.ಆರ್.ಶಿವರಾಮೇಗೌಡ 

ನಾಗಮಂಗಲ ಕ್ಷೇತ್ರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಅಭಿವೃದ್ಧಿ ಕೆಲಸಗಳು ಕುಂಠಿತವಾಗಿದೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ವಾಗ್ದಾಳಿ ನಡೆಸಿದರು.

ನಾಗಮಂಗಲ ತಾಲ್ಲೂಕಿನ ದೇವಲಾಪುರ ಹೋಬಳಿಯ ಭೀಮನಹಳ್ಳಿ ಗ್ರಾಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಜಿ ಸಂಸದ ಎಲ್‌.ಆರ್.ಶಿವರಾಮೇಗೌಡ ಹಾಗೂ ಪುತ್ರ ಚೇತನ್ ಗೌಡ ಅವರನ್ನು ಬೃಹತ್ ಗಾತ್ರದ ಸೇಬಿನ ಹಾರ ಹಾಕಿ ಹೂವಿನ ಸುರಿಮಳೆ ಸುರಿಸಿ ಬಹಳ ಅದ್ದೂರಿಯಾಗಿ ಸ್ವಾಗತಿಸಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಮೇಗೌಡ, ತಾಲ್ಲೂಕಿನಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಎಲ್ಲಾ ಇಲಾಖೆಗಳಲ್ಲಿ ಲಂಚ ತಾಂಡವವಾಡುತ್ತಿದೆ. ಆದರೂ ಜನಪ್ರತಿನಿಧಿಗಳು ಏನು ಆಗಿಲ್ಲದಂತೆ ಇದ್ದಾರೆ. ಇಂದಿನ ಮಕ್ಕಳಿಗೆ ಶಿಕ್ಷಣ ಬಹಳ ಮುಖ್ಯ ಎಂದರು.

ಆದರೆ ಶಾಲೆಗಳಲ್ಲಿ ಕಲಿಸಲು ಶಿಕ್ಷಕರಿಲ್ಲದೆ, ಒಬ್ಬ ಶಿಕ್ಷಕನನ್ನೇ ಎರಡು -ಮೂರು ಶಾಲೆಗೆ ನಿಯೋಜಿಸಿದರೆ ಮಕ್ಕಳ ವಿದ್ಯಾಭ್ಯಾಸದ ಗತಿ ಏನಾಗಬೇಕು. ಇದರ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕೇಳಿದರೇ ನಾವೇನು ಮಾಡುವುದು, ಇರುವ ಶಿಕ್ಷಕರನ್ನು ಬಳಸಿಕೊಂಡು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದೇವೆ ಎನ್ನುತ್ತಾರೆ. ಸರ್ಕಾರ ಶಿಕ್ಷಣ ಕ್ಷೇತ್ರದ ಮೂಲ ಸೌಕರ್ಯಗಳತ್ತ ಗಮನ ಹರಿಸಬೇಕು ಎಂದರು.

ನಮ್ಮ ತಾಲೂಕಿನಲ್ಲಿ ಪಶು ಆಸ್ಪತ್ರೆ ಇಲ್ಲದೆ ಜನರು ಪರದಾಡುವ ಪರಿಸ್ಥಿತಿ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಮೇಲಾಧಿಕಾರಿಗಳಿಗೆ ಪಶು ಆಸ್ಪತ್ರೆ ನಿರ್ಮಾಣ ಮಾಡಿಕೊಡಿ ಎಂದು ಹೇಳಿದರೂ ಜನಪ್ರತಿನಿಧಿಗಳ ಅದಕ್ಕೂ ಕೂಡ ಅಡ್ಡಿ ಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ನನ್ನ ಅಧಿಕಾರದ ಅವಧಿಯಲ್ಲಿ ಕುಡಿಯುವ ನೀರು, ಜಮೀನು ಮಂಜೂರು, ಪಶು ಆಸ್ಪತ್ರೆ ಗಳನ್ನು ನಿರ್ಮಾಣ ಮಾಡಿದ್ದೆ. ಅನಂತರ ಬಂದ ಜನಪ್ರತಿನಿಧಿಗಳು ಅಭಿವೃದ್ಧಿ ಮಾಡುವಲ್ಲಿ ವಿಫಲರಾಗಿದ್ದಾರೆ. ಈ ಬಾರಿ ಜನರ ಅಭಿಪ್ರಾಯದಂತೆ ನಾನು ಪಕ್ಷೇತರ ಅಭ್ಯರ್ಥಿಯಾಗಿ ನಾಗಮಂಗಲ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ ಎಂದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಸದಸ್ಯ ಎಂ.ರಾಜ್, ಬಿ.ಕೆ.ರಾಮಸ್ವಾಮಿ, ಮಾಜಿ ಸದಸ್ಯರಾದ ಕೃಷ್ಣೇಗೌಡ, ನಾಗರಾಜ್, ಶಂಕರ್, ರಮೇಶ್, ಲಕ್ಷ್ಮಣ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!