ವಿಸ್ಮಯ ಬುಕ್ ಹೌಸ್, ಮೈಸೂರು ಮತ್ತು ಕರ್ನಾಟಕ ಲೇಖಕಿಯರ ಸಂಘ, ಜಿಲ್ಲಾ ಘಟಕ ಮಂಡ್ಯ ಇವರ ವತಿಯಿಂದ ಮಂಡ್ಯದ ಮಾಂಡವ್ಯ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾಶಿವಲಿಂಗಯ್ಯ ರಚಿಸಿರುವ ಸುಮಾರು 250 ಪುಟಗಳ “ಮರೆಯಲಾಗದ ಮಹಾನುಭಾವ – ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್” ಕೃತಿ ಲೋಕಾರ್ಪಣೆ ಸಮಾರಂಭವು ಸೆ.10ರಂದು ಬೆಳಿಗ್ಗೆ 10.30 ಗಂಟೆಗೆ ಮಂಡ್ಯನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ನಡೆಯಲಿದೆ ಎಂದು ವಿಸ್ಮಯ ಪ್ರಕಾಶನ ವ್ಯವಸ್ಥಾಪಕ ವೀರಭದ್ರಪ್ಪ ಬಿಸಿಲಹಳ್ಳಿ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಮಹಾರಾಜರ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಪ್ರಸಿದ್ಧ ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಕೃತಿ ಕುರಿತು ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ್ರಸಿದ್ಧ ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ. ಜಯಪ್ರಕಾಶ್ಗೌಡ ಭಾಗವಹಿಸುವರು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಅಧ್ಯಕ್ಷ ಪ್ರೊ.ಬಿ. ಶಿವಲಿಂಗಯ್ಯರವರ ಉಪಸ್ಥಿತರಿರುವರು ಎಂದರು.
ಕನ್ನಡ ನಾಡು-ನುಡಿಯನ್ನು ಬೆಳೆಸಿ ಪೋಷಿಸಿದವರಲ್ಲಿ ಮೈಸೂರು ರಾಜಮನೆತನದವರು ಪ್ರಮುಖರು, ಕನ್ನಡ ನಾಡನ್ನು ರೂಪಿಸಿದ ವಿವಿಧ ಮೈಸೂರು ಒಡೆಯರ್ ಮತ್ತು ಅವರ ಆಡಳಿತ, ಸಾಧನೆಗಳ ಸಮಗ್ರ ಚಿತ್ರಣವನ್ನು ನೀಡುವ ಪ್ರಯತ್ನವನ್ನು ಲೇಖಕರು ಈ ಕೃತಿಯಲ್ಲಿ ಮಾಡಿದ್ದಾರೆ ಎಂದರು.
ಗೋಷ್ಠಿಯಲ್ಲಿ ವಿಸ್ಮಯ ಬುಕ್ ಹೌಸ್ ಮಾಲೀಕ ಪ್ರಕಾಶ್ ಚಿಕ್ಕಪಾಳ್ಯ, ಕರ್ನಾಟಕ ಲೇಖಕಿಯರ ಸಂಘ ಮಂಡ್ಯ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ.ಎಂ.ಕೆಂಪಮ್ಮ, ಪ್ರಮೀಳಾ ಧರಣೀಂದ್ರಯ್ಯ ಹಾಗೂ ಡಾ.ಸುಮಾರಾಣಿ ಶಂಭು ಉಪಸ್ಥಿತರಿದ್ದರು.




