Friday, September 20, 2024

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ | ನಂದಿಪುರ ಬಡವರನ್ನು ಒಕ್ಕಲೆಬ್ಬಿಸಲು ಹುನ್ನಾರ: ಗ್ರಾಮಸ್ಥರ ಪ್ರತಿಭಟನೆ

ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ನಂದಿಪುರ ಗ್ರಾಮದಲ್ಲಿ ಕಳೆದ 30ವರ್ಷಗಳ ಹಿಂದೆ ಸರ್ಕಾರವು ಮಂಜೂರು ಮಾಡಿದ ಗುಂಪು ವಸತಿ ಯೋಜನೆಯ ಮನೆಯಲ್ಲಿ ವಾಸುತ್ತಿರುವ ಬಡವರನ್ನು ಬೀರುವಳ್ಳಿ ಗ್ರಾಮದ ಪಟೇಲ್ ತಿಮ್ಮೇಗೌಡರ ಕುಟುಂಬದವರು ಜೆಸಿಬಿ ಯಂತ್ರಗಳನ್ನು ಬಳಸಿ ಮನೆಗಳನ್ನು ಒಡೆದು ಹಾಕಲು ಯತ್ನಿಸುತ್ತಿದ್ದು, ಬಡವರನ್ನು ಒಕ್ಕಲೆಬ್ಬಿಸಲು ಕೆಲವರು ಮುಂದಾಗಿದ್ದಾರೆ ಎಂದು ಆರೋಪಿಸಿ  ನಂದಿಪುರ ನಿವಾಸಿಗಳು ಬುಧವಾರ ಪ್ರತಿಭಟನೆ ನಡೆಸಿದರು.

ನಂದಿಪುರ ಗ್ರಾಮದಲ್ಲಿ ಪಟೇಲ್ ತಿಮ್ಮೇಗೌಡ ಅವರ ಕುಟುಂಬದವರು ಒಡೆದು ಹಾಕಿರುವ ಮನೆಯ ತಳಪಾಯದ ಬಳಿ ಪ್ರತಿಭಟನೆ ನಡೆಸಿದ ನಂದಿಪುರ ಮಹಿಳೆಯರು ಮತ್ತು ಆಶ್ರಯ ಮನೆ ನಿವಾಸಿಗಳು ಪಟೇಲ್ ತಿಮ್ಮೇಗೌಡರ ಕುಟುಂಬದ ದೌರ್ಜನ್ಯದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ತಾಲ್ಲೂಕು ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶ ಮಾಡಿ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.

ಮುಖಂಡ ನರಸಿಂಹಮೂರ್ತಿ ಮಾತನಾಡಿ, ನಂದಿಪುರ ಗ್ರಾಮದ ಸರ್ವೆ ನಂ.27 ಮತ್ತು 28ರಲ್ಲಿದ್ದ ಸರ್ಕಾರಿ ಬೀಳು ಭೂಮಿಯನ್ನು 1995ರಲ್ಲಿ ಅಂದಿನ ತಾಲ್ಲೂಕು ಆಡಳಿತವು ವಸತಿ ರಹಿತ ಬಡವರಿಗೆ 126 ನಿವೇಶನಗಳನ್ನು ಹಂಚಿಕೆ ಮಾಡಿ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗಿತ್ತು. ಆದರೆ ಈ ಸರ್ಕಾರಿ ಬೀಳು ಭೂಮಿಯನ್ನು 1998ರಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ಬಳ್ಳೇಕೆರೆ ನಾಟನಹಳ್ಳಿ ಗ್ರಾಮದ ವ್ಯಕ್ತಿ ಯೊಬ್ಬರಿಗೆ ಇದೇ ಪಟೇಲ್ ತಿಮ್ಮೇಗೌಡ ಅವರು ಬೀಳು ರೆಸ್ಟೋರ್ ಮಾಡಿಸಿದ್ದಾರೆ. ನಂತರ ಇದೇ ಪಟೇಲ್ ತಿಮ್ಮೇಗೌಡರ ಹೆಂಡತಿಗೆ ಕ್ರಮ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ವಾಸ್ತವವಾಗಿ ವಸತಿ ಯೋಜನೆ ಅಡಿಯಲ್ಲಿ ನಿವೇಶನ ಹಾಗೂ ಮನೆ ಮಂಜೂರು ಮಾಡಿರುವ ಜಾಗವನ್ನೇ, ಆರ್.ಟಿ.ಸಿ.ಯಲ್ಲಿ ಸರ್ಕಾರಿ ಬೀಳು ಎಂದು ಇದ್ದಂತಹ ಭೂಮಿಯನ್ನು ಈ ಗ್ರಾಮಕ್ಕೆ ಸಂಬಂಧಿಸದೇ ಇರುವ 20ಕಿ.ಮೀ ದೂರದ ನಾಟನಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರಿಗೆ ರೆಸ್ಟೋರ್ ಮಾಡಲು ಅವಕಾಶವಿಲ್ಲದಿದ್ದರೂ ಅಂದಿನ ಅಧಿಕಾರಿಗಳ ಕೈಚಳಕದಿಂದ ಮಂಜೂರು ಮಾಡಿಸಿ ನಂತರ ಅವರಿಂದ ಕ್ರಯಕ್ಕೆ ಬರೆಸಿಕೊಂಡು, ಈಗ ಇದು ನಾವು ಕ್ರಯಕ್ಕೆ ಪಡೆದಿರುವ ಜಮೀನು ಎಂದು ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಬಡವರು ದೂರಿದ್ದಾರೆ.

ಇಲ್ಲಿರುವ 126ನಿವೇಶನಗಳ ಪೈಕಿ ಸುಮಾರು 70 ಮಂದಿ ಬಡವರು ಕಳೆದ 30 ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಉಳಿಕೆ ನಿವೇಶನದಾರರಿಗೆ ಮನೆ ಕಟ್ಟದಂತೆ ತಿಮ್ಮೇಗೌಡ ಕುಟುಂಬದವರು ಬೆದರಿಕೆ ಹಾಕುತ್ತಾ ಬಂದಿದ್ದಾರೆ. ಇದರಿಂದ ಉಳಿದವರು ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗಿಲ್ಲ. ಈಗ ಅಳತೆ ಮಾಡಿಸಿ ಇಡೀ ನಂದೀಪುರ ಗ್ರಾಮ ನಮಗೆ ಸೇರಿದ ಕೂಡಲೇ ಮನೆ ಖಾಲಿ ಮಾಡಬೇಕು ಎಂದು ಬೆದರಿಕೆ ಹಾಕುತ್ತಿದ್ದಾರೆ. ಪಲ್ಲವಿ ರಾಜು ಎಂಬುವವರು ಲಕ್ಷಾಂತರ ರೂ ಖರ್ಚು ಮಾಡಿ ಕಟ್ಟಿದ್ದ ಮನೆಯ ಅಡಿಪಾಯವನ್ನು ಜೆಸಿಬಿಯಿಂದ ಒಡೆದು ಹಾಕಿದ್ದಾರೆಂದು ದೂರಿದರು.

ಉಳಿದ ಮನೆಗಳನ್ನು ಒಡೆದು ಹಾಕುವ ಬೆದರಿಕೆ ಹಾಕುತ್ತಿದ್ದಾರೆ ಹಾಗಾಗಿ ಕೂಡಲೆ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತವು ನೊಂದು ಭಯದ ವಾತಾವರಣದಲ್ಲಿ ಬದುಕುತ್ತಿರುವ ನಂದಿಪುರ ಗ್ರಾಮದ ಬಡ ಕುಟುಂಬಗಳಿಗೆ ನ್ಯಾಯ ಕೊಡಿಸಬೇಕು. ಇದಲ್ಲದೆ ಗ್ರಾಮದಲ್ಲಿ ಕಟ್ಟಿರುವ ಮಾರಮ್ಮ ದೇವಾಲಯಕ್ಕೆ ವಿಗ್ರಹ ಪ್ರತಿಷ್ಠಾಪಿಸಿ ದೇವಾಲಯ ಉದ್ಠಾಟನೆ ಮಾಡಲು ಸಹ ಅವಕಾಶ ನೀಡುತ್ತಿಲ್ಲ. ಹೀಗೆ ಎಲ್ಲಾ ರೀತಿಯಲ್ಲಿಯೂ ದಬ್ಬಾಳಿಕೆ ದೌರ್ಜನ್ಯ ನಡೆಸುತ್ತಿರುವ ಪಟೇಲ್ ತಿಮ್ಮೇಗೌಡ, ಹಾಗೂ ಕುಟುಂಬದ ಸದಸ್ಯರಾದ ಗಿರೀಶ್, ಸಚ್ಚದಾನಂದ್, ಶಾಂತಮ್ಮ ಅವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯ ಮಾಡಿದರು.

ಪ್ರತಿಭಟನೆಯಲ್ಲಿ ಪಲ್ಲವಿ, ರಾಜು, ಚಂದ್ರೇಗೌಡ, ವಿಜಿಯಮ್ಮ, ಪುಟ್ಟಮ್ಮ, ನಾಗರಾಜು, ಮಂಜು, ಮಹೇಶ್ ನಾಯಕ್, ನರಸಿಂಹಮೂರ್ತಿ, ಭಾಗ್ಯಮ್ಮ, ಸುರೇಶ್ ಹರಿಜನ, ಮಹಾದೇವ್ , ಎನ್.ಎಸ್. ಗಂಗಾಧರ್, ಚಂದ್ರು ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!