Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾವೇರಿ ವಿಚಾರದಲ್ಲಿ 28 ಸಂಸದರು ಮೌನವಹಿಸಿರುವುದೇಕೆ ? – ನಂಜಾವಧೂತ ಸ್ವಾಮೀಜಿ

ಕರ್ನಾಟಕಕ್ಕೆ ನಿರಂತರ ಅನ್ಯಾಯವಾಗುತ್ತಿದ್ದರೂ ರಾಜ್ಯದ 28 ಸಂಸದರು ಸಂಸತ್ತಿನೊಳಗೆ ಹೋರಾಟ ಮಾಡದೇ ಮೌನವಹಿಸಿರುವುದೇಕೆ ?, ಈಗಲಾದರೂ ಸಂಸತ್ತಿನ ಎದುರು ಹೋರಾಟ ಮಾಡುವ ಮೂಲಕ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು, ಇಂತಹದೇ ಸಂಕಷ್ಟದ ಸನ್ನಿವೇಶದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಗಾಂಧಿ ಪ್ರತಿಮೆ ಎದುರು ಧರಣಿ ಕುಳಿತಾಗ, ಅಂದಿನ ಪ್ರಧಾನಿ ಮಧ್ಯಪ್ರವೇಶ ಮಾಡಿದ್ದರು ಇದನ್ನ ಸಂಸತ್ ಸದಸ್ಯರು ಅರಿಯಬೇಕಾಗಿದೆ ಎಂದು ತುಮಕೂರಿನ ಸ್ಪಟಿಕಪುರಿ ಮಠದ ಶ್ರೀನಂಜಾವಧೂತ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ಕಾವೇರಿ ಹೋರಾಟ ಬೆಂಬಲಿಸಿ ಪಾದಯಾತ್ರೆ ನಡೆಸಿದ ಶ್ರೀಗಳು ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯ ಧರಣಿ ಸ್ಥಳಕ್ಕೆ ಆಗಮಿಸಿ ಮಾತನಾಡಿದ ಅವರು, ಕಾವೇರಿ ನದಿ ನೀರು ವಿಚಾರವಾಗಿ ಸಂಕಷ್ಟದ ಸಂದಿಗ್ಧ ಸಮಯದಲ್ಲಿ ರೈತರು ಮತ್ತು ನಾಡಿನ ಜನರ ಹಿತ ಕಾಯಲು ರಾಜ್ಯ ಸರ್ಕಾರ ಹಿಂಜರಿಕೆ ತೊರೆದು, ದಿಟ್ಟ ನಿರ್ಧಾರ ಕೈಗೊಳ್ಳಬೇಕೆಂದರು.

ಕಾವೇರಿ ನದಿ ನೀರಿನ ವಿಚಾರದಲ್ಲಿ ಕರ್ನಾಟಕಕ್ಕೆ ನಿರಂತರ ಅನ್ಯಾಯವಾಗುತ್ತಿದೆ, ಹಾಗಾಗಿ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಡಬೇಕಿದೆ, ರಾಜಕೀಯ ಹಿನ್ನಡೆಯಾಗಲಿದೆ ಎಂಬ ಮನೋಭಾವ ಬೇಡ, ನಿಮ್ಮ ದೃಢ ನಿರ್ಧಾರದಿಂದ ರಾಜಕೀಯ ನಷ್ಟವಾದರೆ ನಾಡಿನ ಜನತೆ ಅದನ್ನ ಭರಿಸಿಕೊಡಲಿದ್ದಾರೆ, ಜನತೆ ಯಾರ ಋಣದಲ್ಲಿಯೂ ಇರುವುದಿಲ್ಲ, ಇದನ್ನು ಮನಗಂಡು ದೃಢ ನಿಲುವು ಕೈಗೊಳ್ಳಬೇಕೆಂದರು.

ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದಾಗ ಸುಗ್ರೀವಾಜ್ಞೆ ಮೂಲಕ ನಾಡಿನ ಹಿತಕ್ಕೆ ಮುಂದಾದರು, ಅವರನ್ನು ಜೈಲಿಗೆ ಹಾಕಲಿಲ್ಲ, ಹಾಗಾಗಿ ಯಾವುದಕ್ಕೂ ಹೆದರಬಾರದು, ಭಯಬೇಡ ರೈತರ ಹಿತರಕ್ಷಣೆ ಮುಖ್ಯ, ಸರ್ಕಾರ ಇಡುವ ದಿಟ್ಟ ಹೆಜ್ಜೆ ಮುಂದಿನ ದಿನಗಳಲ್ಲಿ ಕಾನೂನಾಗಿ ಪರಿವರ್ತನೆ ಆಗಲಿದೆ, ನಿಮ್ಮ ಹಿಂಜರಿಕೆ ಕೋಟ್ಯಾಂತರ ಜನರ ಬದುಕು ಮತ್ತು ಭಾವನೆಯನ್ನ ತಲ್ಲಣ ಗೊಳಿಸಲಿದೆ, ಎಂತಹ ಸನ್ನಿವೇಶದಲ್ಲೂ ರಾಜಕೀಯ ಪಕ್ಷಗಳು, ನಾಡಿನ ಜನತೆ ನಿಮ್ಮ ಜೊತೆ ನಿಲ್ಲಲಿದ್ದಾರೆ, ಹಾಗೇ ನಿಲ್ಲುತ್ತಾರೆಂಬ ಅರಿವು ಅಧಿಕಾರಸ್ಥರಿಗಿರಬೇಕೆಂದರು.

ಜನತೆ ಅಧಿಕಾರ ಕೊಟ್ಟಿರುವುದು ಜನಸಾಮಾನ್ಯರ ಹಿತ ಕಾಪಾಡಲು ಎಂಬುದನ್ನ ಮರೆಯಬಾರದು, ಸಂವಿಧಾನದ ಮುಖ್ಯ ಉದ್ದೇಶ ಜನರ ಹಿತ, ರಾಜ್ಯದ ಜನತೆ ನಿಮ್ಮ ಜೊತೆ ಇದ್ದಾರೆ ಎಂಬ ಭಾವನೆ ಇರಲಿ, ಕಠಿಣ ನಿಲುವು ಮೂಲಕ ನ್ಯಾಯ ಪಡೆಯಲು ಮುಂದಾಗಲಿ ಎಂದರು.

ರಾಜಕೀಯ ಮಾಡುವ ಸಂದರ್ಭ ಇದಲ್ಲ. ಸಂಕಷ್ಟದ ಸಮಯದಲ್ಲಿ ರಾಜಕೀಯ ಪಕ್ಷಗಳು ರಾಜಕೀಯ ಇಚ್ಛಾ ಶಕ್ತಿ ಮತ್ತು ಸಮಗ್ರತೆ ಪ್ರದರ್ಶಿಸಬೇಕು, ಕಾವೇರಿ ವಿಚಾರವಾಗಿ ಪಕ್ಷಗಳ ನಿಲುವು ರೈತ ಪರವಾಗಿರಬೇಕು, ಒಗ್ಗಟ್ಟು ಇಲ್ಲದಿದ್ದರೆ ನ್ಯಾಯ ಪಡೆಯಲು ಆಗದು ಈಗಲೇ ಎಚ್ಚೆತ್ತುಕೊಳ್ಳಬೇಕೆಂದು ತಿಳಿಸಿದರು.

ಮಳೆ ಬಿದ್ದಾಗ ತಮಿಳುನಾಡಿಗೆ ಸಾಕಷ್ಟು ನೀರು ಹರಿದು ಹೋಗಿದೆ, ನೀರು ಸಾಕಷ್ಟಿದ್ದು ಕೊಡಲ್ಲ ಅನ್ನಲು ನಾವೇನು ಕ್ರೂರಿಗಳಲ್ಲ, ಹಂಚಿ ತಿನ್ನುವ ನೆಲದಲ್ಲಿ ಹುಟ್ಟಿದ್ದೇವೆ, ಸ್ವಲ್ಪ ಪ್ರಮಾಣದಲ್ಲಿ ಜಲಾಶಯಗಳಿಗೆ ನೀರು ಹರಿದು ಬರುತ್ತಿದೆ, ಎಂದೇಳಿ ನೆರೆ ರಾಜ್ಯಕ್ಕೆ ನೀರು ಹರಿಸುತ್ತಿದ್ದರೆ ಇಲ್ಲಿನ ರೈತರ ಮತ್ತು ಜನರ ಗತಿ ಏನು, ಮತ್ತೆ ಮಳೆ ಬರುವ ಮುನ್ಸೂಚನೆ ಇಲ್ಲ, ಈಗಾಗಲೇ ಕೆ ಆರ್ ಎಸ್ 96 ಅಡಿಗೆ ಕುಸಿದಿದೆ, ಕೋಟ್ಯಾಂತರ ಜನರಿಗೆ ಕುಡಿಯುವ ನೀರು ಒದಗಿಸಬೇಕಾಗಿದೆ ಸರ್ಕಾರ ಮುನ್ನೆಚ್ಚರಿಕೆ ವಹಿಸದಿದ್ದರೆ ಮುಂದಿನ ವರ್ಷದ ಮುಂಗಾರು ಆರಂಭವಾಗುವರೆಗೂ ಸಂಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಾವೇರಿ ಪ್ರಾಧಿಕಾರ, ಸಮಿತಿ ಮತ್ತು ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಲಿಲ್ಲ ಎಂಬುದು ನಾಡಿನ ಜನರ ಮನಸ್ಸಿನಲ್ಲಿದೆ, ರೈತರಿಗಿಂತ ತಜ್ಞರು ಬೇಕೆ ಅವರ ಜೊತೆ ವಕೀಲರು ಬೆರೆತು ನೆಲದ ಸಮಸ್ಯೆ ಬಗೆಹರಿಯುವಂತೆ ಮಾಡಬೇಕು, ವಾಸ್ತವ ಪರಿಸ್ಥಿತಿ ವಕೀಲರಿಗೆ ಅರ್ಥ ಆಗದಿದ್ದರೆ ಅವರಿಗೆ ಸಮರ್ಥವಾದ ಮಂಡಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಸಂಕಷ್ಟದ ಸನ್ನಿವೇಶದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು, ಕರ್ನಾಟಕಕ್ಕೆ ನೀರಿನ ವಿಚಾರದಲ್ಲಿ ಆಗುತ್ತಿರುವ ನಿರಂತರ ದಬ್ಬಾಳಿಕೆ ತಪ್ಪಿಸಿ ನ್ಯಾಯಯುತ ಪರಿಹಾರಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ ಅವರು ಕನ್ನಡ ನಾಡಿಗೆ ವರುಣ ಕೃಪೆ ತೋರಲಿ ಸಂಕಷ್ಟದ ಸಮಯ ದೂರವಾಗಲಿ ಎಂದು ಆಶಿಸಿದರು.

ಕೆರಗೋಡು ಶಾಖಾ ಮಠದ ಶಿವಾನಂದ ಸ್ವಾಮಿ, ಕನ್ನಡಪರ ಸಂಘಟನೆಗಳ ಮುಖಂಡರಾದ ರೂಪೇಶ್ ರಾಜಣ್ಣ, ರಮೇಶ್ ಗೌಡ, ರಾಮ್ ಪ್ರಸಾದ್, ಗೋವಿಂದೇಗೌಡ, ರಾಜಶೇಖರ್, ವೆಂಕಟೇಶ್, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!