Friday, September 20, 2024

ಪ್ರಾಯೋಗಿಕ ಆವೃತ್ತಿ

ದೃಶ್ಯ ಮಾಧ್ಯಮ ಅತ್ಯಂತ ಪ್ರಭಾವಿಶಾಲಿ – ನಂಜುಂಡೇಗೌಡ

ಏಕಕಾಲದಲ್ಲಿ ಎಲ್ಲರಿಗೆ ಹೇಳಬೇಕಾದದ್ದನ್ನು ಅತ್ಯಂತ ಪರಿಣಾಮಕಾರಿಯಾಗಿ ತಲುಪಿಸಬಲ್ಲ ಮಾಧ್ಯಮವೆಂದರೆ ಅದು ದೃಶ್ಯ ಮಾಧ್ಯಮ. ಇದು ಅತ್ಯಂತ ಪ್ರಭಾವಿಶಾಲಿ ಮಾಧ್ಯಮವಾಗಿದೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಎನ್.ಆರ್.ನಂಜುಂಡೇಗೌಡ ಅಭಿಪ್ರಾಯಪಟ್ಟರು.

ಮಂಡ್ಯ ನಗರದ ಕರ್ನಾಟಕ ಸಂಘದ ವತಿಯಿಂದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆದಎಂ.ಸಿದ್ದರಾಮು ವಿಜ್ಞಾನ ಶಿಕ್ಷಕ ಪ್ರಶಸ್ತಿ, ಸಿ.ನಾಗರಾಜು- ಗುಣಸಾಗರಿ ಸಿ ನಾಗರಾಜು ಜನಪದ ಕಲಾ ಪ್ರಶಸ್ತಿ ಹಾಗೂ ಚೆನ್ನಮ್ಮ ಕರಿಯಪ್ಪ ಜನಪದ ಕಲಾಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೃಶ್ಯ ಮಾಧ್ಯಮದ ಮೇಲಿನ ನಂಬಿಕೆಯಿಂದ, ನಾನು ಸಾಮಾಜಿಕ ಜವಾಬ್ದಾರಿ ಹೊತ್ತು ‘ಸಂಕ್ರಾಂತಿ’ ಚಿತ್ರದಿಂದ ಹಿಡಿದು, ‘ಹೆಬ್ಬೆಟ್ಟು ರಾಮಕ್ಕ’ ಸೇರಿದಂತೆ ಇತ್ತೀಚಿನ ‘ಕಾಸಿನಸರ’ ಚಿತ್ರದವರೆಗೆ ಚಿತ್ರ ನಿರ್ಮಿಸಿ ಬದ್ಧತೆಯಿಂದ ಕಾರ್ಯನಿರ್ವಹಿಸಿದ್ದೇನೆ. ನನಗೆ ಮಕ್ಕಳ ಚಿತ್ರಗಳ ಬಗ್ಗೆ ಒಲವು ಹೆಚ್ಚು. ಹೀಗಾಗಿ ‘ಚುಕ್ಕಿ ಚಂದ್ರಮ’, ‘ನಾನು ಗಾಂಧಿ’ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದೇನೆ. ಮಕ್ಕಳು ಮುಂದಿನ ಜನಾಂಗ. ಮಕ್ಕಳನ್ನು ಸರಿ ಮಾಡಿದರೆ ಇಡೀ ಸಮಾಜ, ದೇಶ ಸರಿಯಾಗುತ್ತದೆ. ಮೊದಲು ಅವರನ್ನು ಸರಿಪಡಿಸಬೇಕು. ಅವರಿಗೆ ಸರಿಯಾದ ಶಿಕ್ಷಣ, ಜ್ಞಾನಾರ್ಜನೆ ನೀಡುವುದರ ಜೊತೆಗೆ ಕಲೆಯನ್ನು ಕಲಿಸಬೇಕು ಎಂಬ ನುಡಿಗಳನ್ನಾಡಿದರು.

ಚೆನ್ನಮ್ಮ ಕರಿಯಪ್ಪ ಜನಪದ ಕಲಾಪ್ರಶಸ್ತಿ ದಾನಿ ಪ್ರೊ.ನರಸಿಂಹೇಗೌಡ ನಾರಣಾಪುರ ಮಾತನಾಡಿ, ಮಂಡ್ಯ ಜಿಲ್ಲೆ ಜನಪದ ಸಾಹಿತ್ಯ ಸಂಸ್ಕೃತಿಯಲ್ಲಿ ಖ್ಯಾತಿ ಪಡೆದಿದೆ. ಕರಾವಳಿಯ ಜನ ಯಕ್ಷಗಾನವನ್ನು ಒಪ್ಪಿ ಅಪ್ಪಿಕೊಂಡಂತೆ ನಮ್ಮಲ್ಲಿ ಇರುವ ಭಾಗವತಿಕೆ, ಮೂಡಲಪಾಯ ಯಕ್ಷಗಾನ, ಪಟ-ಪೂಜಾ ಕುಣಿತ,ಸೋಬಾನೆ ಪದ ಮುಂತಾದ ವೈವಿಧ್ಯಮಯ ಪ್ರಕಾರಗಳು ಚಾಲ್ತಿಯಲ್ಲಿದ್ದರೂ ಹೆಚ್ಚು ಪ್ರಚಲಿತತೆಗೆ ತರಲು ಸಾಧ್ಯವಾಗಿಲ್ಲ, ವಿದೇಶಿಯರು ನಮ್ಮ ಕಲೆಗಳನ್ನು ಗುರುತಿಸಿದರೂ ನಾವು ಗುರುತಿಸುವ ಕೆಲಸ ಮಾಡುತ್ತಿಲ್ಲ. ನೆರೆಮನೆಯ ಹುಡುಗರನ್ನು ನೆಗೆದು ಮುದ್ದಿಸುವವರು ನಾವು.ನಮಗೆ ಹಿತ್ತಲ ಗಿಡ ಮದ್ದಲ್ಲ ಎಂದು ವಿಷಾದಿಸಿದರು.

ಸಮಾರಂಭದಲ್ಲಿ ಕರ್ನಾಟಕ ಸಂಘದ ಉಪಾಧ್ಯಕ್ಷ ಹೆಚ್.ಎಸ್.ಮುದ್ದೇಗೌಡ, ಅಧ್ಯಕ್ಷ ಬಿ.ಜಯಪ್ರಕಾಶಗೌಡ ಮಾತನಾಡಿದರು.

ಮಳವಳ್ಳಿ ತಾಲೂಕು ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕ ಕೆ.ಎಂ.ಬಸವರಾಜು ಅವರಿಗೆ ಎಂ.ಸಿದ್ದರಾಮು ವಿಜ್ಞಾನ ಶಿಕ್ಷಕ ಪ್ರಶಸ್ತಿಯನ್ನು, ಪೂಜಾ ಕುಣಿತ ಕಲಾವಿದರಾದ ಕಾರಸವಾಡಿಯ ಕೆ.ಪಿ.ದೇವರಾಜು ಹಾಗೂ ಸವಿತಾ ಚೀರುಕುನ್ನಯ್ಯ ಅವರಿಗೆ ಸಿ.ನಾಗರಾಜು-ಗುಣಸಾಗರಿ ಸಿ. ನಾಗರಾಜು ಜನಪದ ಕಲಾ ಪ್ರಶಸ್ತಿಯನ್ನು ಮತ್ತು ಕೆರೆತೊಣ್ಣೂರಿನ ಜನಪದ ಕಲಾವಿದೆ ಸರೋಜಮ್ಮ ಅವರಿಗೆ ಚೆನ್ನಮ್ಮ ಕರಿಯಪ್ಪ ಜನಪದ ಕಲಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ದತ್ತಿದಾನಿ ಎಸ್.ಸುದೀಪ್ ಕುಮಾರ್, ಕರ್ನಾಟಕ ಸಂಘದ ಪದಾಧಿಕಾರಿಗಳಾದ ಹರೀಶ್ ಕುಮಾರ್, ಲೋಕೇಶ್ ಚಂದಗಾಲು, ಹನಕೆರೆ ನಾಗಪ್ಪ, ಡಾ.ಕೆಂಪಮ್ಮ ಕಾರ್ಕಹಳ್ಳಿ, ಅನಿತಾ ಮಂಗಲ, ದೇವಿಕಾ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!