Thursday, September 19, 2024

ಪ್ರಾಯೋಗಿಕ ಆವೃತ್ತಿ

ಪ್ರತಿಯೊಬ್ಬರಿಗೂ ನಾರಾಯಣಗುರು ತತ್ವಾದರ್ಶ ಅಗತ್ಯ: ಡಾ.ಕುಮಾರ

ನಾರಾಯಣ ಗುರುಗಳು ಕೇರಳದಲ್ಲಿ ಹುಟ್ಟಿ ಬೆಳೆದು ಸಾಧನೆ ಮಾಡಿದರೂ ಕೂಡ, ಇವತ್ತು ಇಡೀ ನಾಡಿನಾದ್ಯಂತ ಅವರ ಆದರ್ಶಗಳು, ಚಿಂತನೆಗಳು ಹಾಗೂ ಅವರು ಹಾಕಿಕೊಟ್ಟಂತ ಮಾರ್ಗದರ್ಶನಗಳು ಬಹುಅವಶ್ಯವಾಗಿದ್ದು, ಅವುಗಳನ್ನು ಇಂದಿಗೂ ಸಹ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಮಂಡ್ಯ ನಗರದ ಗಾಂಧಿಭವನದಲ್ಲಿ ನಡೆದ 2024 – 25ನೇ ಸಾಲಿನ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಬ್ರಹ್ಮಶ್ರೀ ನಾರಾಯಣಗುರುರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ  ಅವರು ಮಾತನಾಡಿದರು.

ನಾಡಿಗೆ ಕೊಡುಗೆ ನೀಡಿದ ಎಲ್ಲಾ ಮಹಾತ್ಮರ ಜಯಂತಿಗಳನ್ನು ಸರ್ಕಾರದ ಕಾರ್ಯಕ್ರಮವಾಗಿ ಆಚರಿಸಲಾಗುತ್ತಿದ್ದೂ ಇಂದು ನಾವು ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ಆಚರಿಸುತ್ತಿದ್ದೇವೆ. ನಾವು ಕೇವಲ ಜಯಂತಿಯನ್ನು ಆಚರಿಸಿ ಅವರ ಭಾವಚಿತ್ರಕ್ಕೆ ಪೂಜೆ ಮಾಡುವುದಕ್ಕೆ ಸೀಮಿತವಾಗದೆ, ಅವರು ನೀಡಿದಂತಹ ಕೊಡುಗೆಗಳು, ಅವರು ಇಟ್ಟುಕೊಂಡಿದ್ದಂತಹ ಒಳ್ಳೆಯ ಚಿಂತನೆ ಹಾಗೂ ಮೌಲ್ಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜಕ್ಕೆ ಒಳ್ಳೆಯ ಪ್ರಜೆಗಳಾಗಿ ಎಂದರು.

ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಇದ್ದಂತಹ ನಾರಾಯಣ ಗುರುಗಳು ಅಂದಿನ ಸಮಾಜದಲ್ಲಿದ್ದ ಮೂಢನಂಬಿಕೆ, ಅಸ್ಪೃಶ್ಯತೆಯನ್ನು ಧಿಕ್ಕರಿಸಿ ಅವುಗಳನ್ನು ಹೋಗಲಾಡಿಸುವಲ್ಲಿ ಹಾಗೂ ಒಳ್ಳೆಯ ಬದಲಾವಣೆ ತರುವ ನಿಟ್ಟಿನಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ. ಆದ್ದರಿಂದ ಅವರನ್ನು ಸಾಮಾಜಿಕ ಸುಧಾರಣೆಯ ಹರಿಕಾರ ಎಂದು ಕರೆದರು ಸಹ ತಪ್ಪಾಗಲಾರದು ಎಂದರು.

ಕರಾವಳಿಯ ಭಾಗಗಳಾದ ಉಡುಪಿ, ಮಂಗಳೂರು, ಕೇರಳ ಮುಂತಾದ ಭಾಗದಲ್ಲಿ ನಾರಾಯಣ ಗುರುವನ್ನು ಯಾವುದೇ ಜಾತಿ, ಧರ್ಮಗಳ ಹೊರತಾಗಿ ಪ್ರತಿ ಮನೆ, ಬೀದಿಗಳಲ್ಲಿಯೂ ಕೂಡ ಅವರನ್ನು ದೈವ ಸ್ವರೂಪವಾಗಿ ಪೂಜೆಯ ಮೂಲಕ ಆರಾಧಿಸಲಾಗುತ್ತದೆ. ಅದನ್ನ ನಾವು ಅರಿತುಕೊಂಡು ಅವರ ಸಾಧನೆಯನ್ನು ಸ್ಮರಿಸಬೇಕು. ಜೊತೆಗೆ ತಮ್ಮ ಮಕ್ಕಳಿಗೂ ಅವರ ಜೀವನ ಚರಿತ್ರೆಯ ಬಗ್ಗೆ ತಿಳಿಸುವ ಕಾರ್ಯವಾಗಬೇಕು ಎಂದರು.

ಮಹಾನ್ ದಾರ್ಶನಿಕರಾದ ಮತ್ತು ಯಾವುದೇ ಜಾತಿ, ಧರ್ಮ, ಭೇದಗಳಿಲ್ಲ ನಾವೆಲ್ಲರೂ ಕೂಡ ಮನುಷ್ಯರು ಎಂದು ತಿಳಿಸಿದ ಬ್ರಹ್ಮಶ್ರೀ ನಾರಾಯಣ ಗುರು ಅವರ ತತ್ವ ಹಾಗೂ ಚಿಂತನೆ ನಮ್ಮ ನಡೆ – ನುಡಿಯಲ್ಲಿ ಅಡಗಿರಬೇಕು. ಸಮಾಜದಲ್ಲಿರುವಂತಹ ಯಾವುದೇ ಮೂಢನಂಬಿಕೆಗಳು, ಅಸ್ಪೃಶ್ಯತೆ, ಮಡಿವಂತಿಕೆಗಳೆಲ್ಲವೂ ಹೋಗಲಾಡುವುದು ಶಿಕ್ಷಣದಿಂದ ಮಾತ್ರ ಸಾಧ್ಯ. ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಸುಧಾರಣೆ ತರಲು ಸಾಧ್ಯ ಎಂಬ ವಿಚಾರವನ್ನು ಬಲಿಷ್ಠವಾಗಿ ಪ್ರತಿಪಾದನೆ ಮಾಡಿದಂತಹ ಒಬ್ಬ ಮಹಾನ್ ಚಿಂತಕ ಇವರಾಗಿದ್ದಾರೆ ಎಂದರು.

ನಾರಾಯಣ ಗುರು ಅವರು ಮಹಿಳೆಯರ ಬಗ್ಗೆ ಅಪರವಾದ ಗೌರವವನ್ನು ಇಟ್ಟುಕೊಂಡು ಎಲ್ಲಾ ವರ್ಗದ ಮಹಿಳೆಯರಿಗೆ ಶಿಕ್ಷಣವನ್ನ ನೀಡಿದರೆ ಇಡೀ ಸಮಾಜವನ್ನ ಬೆಳಗಬಲ್ಲಳು. ಆಕೆಗೆ ಶಿಕ್ಷಣ ನೀಡಬೇಕು ಎಂದು ಪಣತೊಟ್ಟವರು. ಜೊತೆಗೆ ಮಡಿವಂತಿಕೆ ವಿರುದ್ದ ಹೋರಾಡಿ ಮಾನವರೆಲ್ಲರೂ ಒಂದೇ, ಒಂದೇ ರೀತಿಯಲ್ಲಿ ಮಾನವರೆಲ್ಲರೂ ಬದುಕಬೇಕು. ಮಾನವೀಯ ಮೌಲ್ಯಗಳಿಗಿಂತ ಮಿಗಿಲಾದ ಜಾತಿ ಇಲ್ಲ. ಇಂದು ಅವರು ಇಲ್ಲವಾದರು ಸಹ ಅವರ ತತ್ವಾದರ್ಶಗಳು ನಮ್ಮ ನಡುವೆ ಇಂದಿಗೂ ಜೀವಂತ ಹಾಗೂ ಪ್ರಸ್ತುತವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಮಂಡ್ಯ ವಿಶ್ವವಿದ್ಯಾನಿಲಯ ವಾಣಿಜ್ಯಶಾಸ್ತ್ರದ ಉಪನ್ಯಾಸಕ ಜಿ ವಿ ರಮೇಶ್ ಮಾತನಾಡಿ, ಬ್ರಹ್ಮಶ್ರೀ ನಾರಾಯಣಗುರುಗಳು 1856 ಆಗಸ್ಟ್ 20 ರಂದು ಕೇರಳದಲ್ಲಿ ಜನಿಸಿದರು. ಇವರು ಸಮಯವನ್ನು ವ್ಯರ್ಥ ಮಾಡದೆ ಯೋಗ, ಧ್ಯಾನಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಅಂದಿನ ಕಾಲದ ಅತೀ ಕೆಳ ವರ್ಗದಲ್ಲಿ ಇದ್ದಂತಹ ಕಡು ಬಡತನವನ್ನು, ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಮುಂದಾದವರು ಎಂದು ತಿಳಿಸಿದರು.

ಕೆಳವರ್ಗದಲ್ಲಿ ಜನಿಸಿದ ನಾರಾಯಣ ಗುರು ಅವರು ಅಂದಿನ ಸಮಾಜದಲ್ಲಿದ್ದ ಎಲ್ಲಾ ರೀತಿಯ ಮೇಲ್ವರ್ಗದ ದೌರ್ಜನ್ಯಗಳ ವಿರುದ್ದ ಹೋರಾಡಿ, ಸಮಾಜದಲ್ಲಿ ಸಮಾನತೆಯನ್ನು ತರುವಲ್ಲಿ ಬಹಳವಾಗಿ ಶ್ರಮಿಸಿದ್ದಾರೆ. ಕೆಳ ವರ್ಗದ ಹೆಣ್ಣುಮಕ್ಕಳ ಮೇಲೆ ಆಗುತ್ತಿದ್ದಂತಹ ಶೋಷಣೆಗಳನ್ನು ಹೋಗಲಾಡಿಸಲು ಪ್ರಮುಖ ಪಾತ್ರ ವಹಿಸಿದವರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಂಡ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ ಬಿ ವಿ ನಂದೀಶ್, ಮೈಶುಗರ್ ಕಾರ್ಖಾನೆಯ ಮಾಜಿ ಅಧ್ಯಕ್ಷ ರಾಮಲಿಂಗಯ್ಯ, ಮಂಡ್ಯ ಜಿಲ್ಲಾ ಆರ್ಯ ಈಡಿಗರ ಸಂಘದ ಗೌರವಾಧ್ಯಕ್ಷ ಡಾ.ಎಂ ವಿ ಸತ್ಯನಾಥ್, ಅಧ್ಯಕ್ಷ ಅಪ್ಪಾಜಿಗೌಡ, ಉಪಾಧ್ಯಕ್ಷರಾದ ಹೆಚ್ ದಾಸೇಗೌಡ, ಎಂ ಪಿ ಅರುಣ ಕುಮಾರ್, ಎಂ ವಿ ಪುಟ್ಟಸ್ವಾಮಿ, ಪ್ರಧಾನ ಕಾರ್ಯದರ್ಶಿ ಜಿ ಸಿ ರಾಜ್ ಕುಮಾರ್, ಖಜಾಂಚಿ ಟಿ ಅರವಿಂದ ಕುಮಾರ್, ಸಹ ಕಾರ್ಯದರ್ಶಿಗಳಾದ ಮಾದೇವ, ಸಿ ಸೋಮಶೇಖರ್, ಸಂಘಟನಾ ಕಾರ್ಯದರ್ಶಿ ಟಿ ಎಸ್ ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!