Friday, June 21, 2024

ಪ್ರಾಯೋಗಿಕ ಆವೃತ್ತಿ

ಮಗ ಸೋತಿದ್ದಕ್ಕೆ 8 ಸಾವಿರ ಕೋಟಿ ರೂ. ವಾಪಸ್ ಪಡೆದರು: ನರೇಂದ್ರಸ್ವಾಮಿ

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಕಳೆದ 2019ರ ಲೋಕಸಭೆ ಚುನಾವಣೆಯಲ್ಲಿ ತಮ್ಮ ಮಗ  ನಿಖಿಲ್ ಕುಮಾರಸ್ವಾಮಿ ಸೋತ ನಂತರ ಮಂಡ್ಯಕ್ಕೆ ನೀಡಿದ್ದ 8 ಸಾವಿರ ಕೋಟಿ ವಾಪಸ್ ತೆಗೆದುಕೊಂಡರು. ಇಲ್ಲಿ ಐದು ವರ್ಷ ಶಾಸಕರಾಗಿದ್ದವರು ಏನೂ ಮಾಡಲಿಲ್ಲ. ಕುಡಿಯುವ ನೀರು, ಶಿಕ್ಷಣ, ನೀರಾವರಿ ಸೇರಿದಂತೆ ಯಾವುದೇ ಅಭಿವೃದ್ಧಿ ಮಾಡಿಲ್ಲ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಕಿಡಿಕಾರಿದರು.

ಮಳವಳ್ಳಿ ತಾಲ್ಲೂಕಿನ ಹಲಗೂರು ಹೋಬಳಿಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಪರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು,  ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡಿದ ಜಾ.ದಳದ ನಾಯಕರು ಈಗ ಮೋದಿ ಅವರ ಮೊರೆ ಹೋಗಿದ್ದಾರೆ, ರಾಮನಗರ, ಚನ್ನಪಟ್ಟಣ, ಚಿಕ್ಕಬಳ್ಳಾಪುರ ಆಯ್ತು ಈಗ ಮಂಡ್ಯಕ್ಕೆ ಬಂದಿದ್ದಾರೆ. ಟೂರಿಂಗ್ ಟಾಕೀಸ್ ಬಗ್ಗೆ ಮಾತನಾಡಲ್ಲ. ಆದರೆ ಈ ಚುನಾವಣೆ ಜಾ.ದಳದ್ದು ಕಡೇ ಆಟ ಎಂದು ಛೇಡಿಸಿದರು.

ನಮ್ಮ ಕಾಂಗ್ರೆಸ್ ಸರ್ಕಾರ ಬಂದ 8 ತಿಂಗಳಲ್ಲಿ ಮಳವಳ್ಳಿ ಕ್ಷೇತ್ರಕ್ಕೆ 500 ಕೋಟಿ ರೂ. ಅನುದಾನ ತಂದಿದ್ದೇನೆ. ಕಸಬಾ, ಹಲಗೂರು ಹೋಬಳಿಯ ಎಲ್ಲಾ ಮನೆಗಳಿಗೆ 184 ಕೋಟಿ ರೂ. ವೆಚ್ಚದಲ್ಲಿ ಕಾವೇರಿ ನೀರು ಪೂರೈಕೆ ಮಾಡಲಾಗುತ್ತದೆ. ಅಧಿಕಾರದಲ್ಲಿ ಇದ್ದಾಗ ಏನಾದರೂ ಮಾಡಬೇಕು. ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರು ಜನಸೇವೆ ಮಾಡಲು ಬಂದಿದ್ದಾರೆ. ಅವರನ್ನು ಬೆಂಬಲಿಸಬೇಕು ಎಂದರು.

ಹೊರಗಿನವರು ಗೆದ್ದ ಇತಿಹಾಸ ಇಲ್ಲ

ವಿಧಾನಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುವವರನ್ನು ದೂರವಿಡಿ. ಹೊರ ಜಿಲ್ಲೆಯವರು ಇಲ್ಲಿ ಗೆದ್ದ ಇತಿಹಾಸ ಇಲ್ಲ. ಸ್ವಾಭಿಮಾನದ ಕೋಟೆ ಬಿಟ್ಟುಕೊಟ್ಟಿಲ್ಲ ಎಂದು ಹೇಳಿದರು.

ರೈತ ವಿರೋಧಿ ಎಪಿಎಂಸಿ ಕಾಯ್ದೆಗೆ ಜಾ.ದಳ ಬೆಂಬಲಿಸಿ ಈಗ ರೈತನ ಮಗ ಅನ್ನುತ್ತಾರೆ. ರೈತ ವಿರೋಧಿ, ಬಡವರ ವಿರೋಧಿ ಮೋದಿ ಜೊತೆ ಕೈಜೋಡಿಸಿ ಅವರ ಹೆಸರಿನಲ್ಲಿ ಮತ ಯಾಚಿಸುತ್ತಿದ್ದಾರೆ. ಜಾ.ದಳದ ಕೊಟ್ಟಿಗೆಯಲ್ಲಿ ೩೦ ವರ್ಷದಿಂದ ಇದ್ದೆ. ಮಂಡ್ಯದಲ್ಲಿ ಒಕ್ಕಲಿಗ ನಾಯಕರನ್ನು ಬೆಳೆಯಲು ದೇವೇಗೌಡರು ಬಿಡಲಿಲ್ಲ. ಎಸ್.ಎಂ.ಕೃಷ್ಣ ಎರಡನೇ ಬಾರಿ ಸಿಎಂ ಆಗುವುದನ್ನು ತಪ್ಪಿಸಿದರು ಎಂದು ಆರೋಪಿಸಿದರು.

ಸಿದ್ದರಾಮಯ್ಯ, ಡಿಕೆಶಿ ಕೈ ಬಲಪಡಿಸಿ

ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಮಾತನಾಡಿ, ಈ ಚುನಾವಣೆಯಲ್ಲಿ ಮತದಾರರು ನನ್ನನ್ನು ಬೆಂಬಲಿಸುವ ಮೂಲಕ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಕೈ ಬಲಪಡಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಚಾರಕ್ಕೆ ಹೋದ ಕಡೆಯಲೆಲ್ಲ ಜನರು ತೋರುತ್ತಿರುವ ಪ್ರೀತಿ, ಅಭಿಮಾನ ನನ್ನ ಗೆಲುವಿನ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ. ಸುಡುಬಿಸಿಲಿನಲ್ಲೂ ಜನರು ರಸ್ತೆಯಲ್ಲಿ ನನಗಾಗಿ ಕಾಯುತ್ತ ನಿಂತಿರುವುದನ್ನು ಕಂಡರೆ ಅವರ ಪ್ರೀತಿ ವಿಶ್ವಾಸಕ್ಕೆ ಚಿರ ಋಣಿಯಾಗಿದ್ದೇನೆ. ಚುನಾವಣೆಯಲ್ಲಿ ಗೆಲುವು ನಿಶ್ಚಿತವಾಗಿದ್ದು ಜನತೆ ಖಚಿತ ಎಂದರು.

ಉದ್ಯೋಗ ಸೃಷ್ಟಿ

ರೈತಾಪಿ ವರ್ಗವೇ ಹೆಚ್ಚಾಗಿರುವ ಮಳವಳ್ಳಿ ತಾಲ್ಲೂಕು ಅನೇಕ ಪ್ರವಾಸಿತಾಣಗಳು, ಪುಣ್ಯಕ್ಷೇತ್ರಗಳನ್ನು ಒಳಗೊಂಡಿದೆ. ಕೇಂದ್ರದಿಂದ ವಿಶೇಷ ಅನುದಾನ ತಂದು ಇಲ್ಲಿನ ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿಪಡಿಸಿದರೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗಿ ಆರ್ಥಿಕವಾಗಿ ಸದೃಢರಾಗಲಿದ್ದಾರೆ ಎಂದು ಹೇಳಿದರು.

ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದ ನನಗೆ ರೈತರ ಕಷ್ಟಸುಖ ಗೊತ್ತಿದೆ. ದೇವರು ನನಗೆ ಎಲ್ಲವನ್ನೂ ಕೊಟ್ಟಿದ್ದಾನೆ. ಹಣ ಮಾಡಲು ರಾಜಕೀಯಕ್ಕೆ ಬಂದಿಲ್ಲ. ಸಂಸತ್ತಿನಲ್ಲಿ ಜನರ ದನಿಯಾಗಲು ಬಂದಿದ್ದೇನೆ. ಜನ ನನ್ನನ್ನು ಆಶೀರ್ವದಿಸುವ ಸಂಪೂರ್ಣ ವಿಶ್ವಾಸವಿದೆ ಎಂದರು.

ಪಕ್ಷ ಸೇರ್ಪಡೆ

ಮಳವಳ್ಳಿ ತಾಲ್ಲೂಕಿನ ಟಿ.ಕೆ.ಹಳ್ಳಿ, ಅಟ್ಟುವನಹಳ್ಳಿ ಭಾಗದಲ್ಲಿ ಪ್ರಚಾರದಲ್ಲಿ ತೊಡಗಿದ್ದ ವೇಳೆ ಅನ್ಯ ಪಕ್ಷದ ಮುಖಂಡರು ಶಾಸಕ ನರೇಂದ್ರಸ್ವಾಮಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ಮಳವಳ್ಳಿ ತಾಲ್ಲೂಕಿನ ದಳವಾಯಿ ಕೋಡಿಹಳ್ಳಿ, ಎಚ್.ಬಸವನಪುರ, ಕರಲ್ಲುಕಟ್ಟೆ, ಹಲಗೂರು, ಲಿಂಗಪಟ್ಟಣ, ನಿಟ್ಟೂರು, ಯತ್ತಂಬಾಡಿ, ಟಿ.ಕೆ.ಹಳ್ಳಿ, ಹುಸ್ಕೂರು, ಅಗಸನಪುರ, ಹಾಡ್ಲಿ, ಹಲಸಹಳ್ಳಿ, ಧನಗೂರು, ನಿಡಘಟ್ಟ, ಕಂದೇಗಾಲ, ನೆಲಮಾಕನಹಳ್ಳಿ, ನಾಗೇಗೌಡನದೊಡ್ಡಿ, ಚೊಟ್ಟನಹಳ್ಳಿ, ಪಂಡಿತಹಳ್ಳಿ, ಹೊಸಹಳ್ಳಿ, ಕುಂದೂರು, ಕ್ಯಾತನಹಳ್ಳಿ ಸೇರಿದಂತೆ ಹಲವೆಡೆ ಪ್ರಚಾರ ನಡೆಸಿದರು.

ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್. ಚಿದಂಬರ್, ಮುಖಂಡ ದಡದಪುರ ಶಿವಣ್ಣ ಇತರರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!