Friday, June 21, 2024

ಪ್ರಾಯೋಗಿಕ ಆವೃತ್ತಿ

ರಂಜಾನ್ ಹಬ್ಬದ ಶುಭಾಶಯಗಳು……. ತಿಳಿವಳಿಕೆ ನಡವಳಿಕೆಯಾಗಬೇಕಾದ ಸಂದರ್ಭದಲ್ಲಿ………

ವಿವೇಕಾನಂದ ಎಚ್.ಕೆ

ಧರ್ಮವೇ ಕರ್ಮ( ಕಾಯಕ ) ವಾಗಬೇಕಾದ ಸನ್ನಿವೇಶದಲ್ಲಿ……..

ಹೆಚ್ಚಿಗೆ ಏನೂ ಹೇಳಲು ಉಳಿದಿಲ್ಲ. ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳಲ್ಲಿ ಈಗಾಗಲೇ ದೇವರು ಧರ್ಮ ಸಂವಿಧಾನ ಪ್ರಜಾಪ್ರಭುತ್ವ ಹಿಂದು ಮುಸ್ಲಿಂ ಕ್ರಿಶ್ಚಿಯನ್, ಖುರಾನ್ ಬೈಬಲ್ ಭಗವದ್ಗೀತೆ, ಭಾರತ ಪಾಕಿಸ್ತಾನ ಚೀನಾ, ಸೌಹಾರ್ಧತೆ ಸಂಯಮ ಸಮನ್ವಯ ಮುಂತಾದ ವಿಷಯಗಳ ಬಗ್ಗೆ ಬಹುತೇಕ ಸಾಮಾನ್ಯ ಜನರಿಗೂ ತಲುಪುವಷ್ಟು ಚರ್ಚೆಗಳು ಅಭಿಪ್ರಾಯಗಳು ವ್ಯಕ್ತವಾಗಿದೆ……

ಈಗ ಉಳಿದಿರುವುದು ಮತ್ತು ಮುಂದುವರಿಯ ಬೇಕಾಗಿರುವುದು ನಮ್ಮ ತೀರ್ಮಾನ ಹಾಗೂ ತಿಳಿವಳಿಕೆ ಮತ್ತು ನಡವಳಿಕೆ. ಇದೇ ಅತ್ಯಂತ ಮಹತ್ವದ ವಿಷಯ……

ಆಧುನಿಕ ಸಮಾಜ ನೀಡಿರುವ ಎಲ್ಲಾ ‌ಸಿರಿ ಸಂಪತ್ತುಗಳು – ಪ್ರಜಾಪ್ರಭುತ್ವ ಎಂಬ ಅಪರಿಮಿತ ಸ್ವಾತಂತ್ರ್ಯ ಎಲ್ಲವನ್ನೂ ಉಪಯೋಗಿಸಿಕೊಂಡು ಇರುವಷ್ಟು ದಿನ‌ ಇರುವುದರಲ್ಲಿ ಒಂದಷ್ಟು ಸುಖ ಸಂತೋಷ ನೆಮ್ಮದಿಯಿಂದ ಬಾಳಬೇಕೆ ಅಥವಾ ಈಗಿನ ಸಂದರ್ಭಕ್ಕೆ ಅಪ್ರಸ್ತುತವಾದ ಅಥವಾ ಅಷ್ಟೇನೂ ಪ್ರಯೋಜನವಲ್ಲದ ಪುರಾತನ ಕಾಲದ ಯಾವುದೋ ನಂಬಿಕೆ, ಸಂಪ್ರದಾಯಗಳಿಗೆ ಕಟ್ಟುಬಿದ್ದು ಮನುಷ್ಯರೇ ಧರ್ಮದ, ಜಾತಿಯ ಆಧಾರದಲ್ಲಿ ಒಬ್ಬರಿಗೊಬ್ಬರು ದ್ವೇಷಿಸುತ್ತಾ, ಅಸೂಯೆಪಡುತ್ತಾ, ಮಚ್ಚು ಚಾಕು ಬಂದೂಕು ಬಾಂಬುಗಳಿಂದ ಕೊಂದುಕೊಳ್ಳುತ್ತಾ, ಸದಾ ಆತಂಕದಿಂದ ಬದುಕಬೇಕೇ ಎಂಬ ಆಯ್ಕೆಗಳು ಮಾತ್ರ….

ನಿಮಗೆ ಧರ್ಮ ಗ್ರಂಥಗಳು, ಹಿಜಾಬ್, ಕುಂಕುಮ, ನಾಮ, ಹಲಾಲ್ ಕಟ್, ಜಟ್ಕಾ ಕಟ್, ವಿಭೂತಿ, ಗಡ್ಡ, ಅಜಾನ್, ಹನುಮಾನ್ ಚಾಲೀಸು ಮುಂತಾದ ಆಚರಣೆಗಳು ಬೇಕೆ ಅಥವಾ ಮನುಷ್ಯ – ಮನುಷ್ಯತ್ವ ಪ್ರೀತಿ, ಸಹಕಾರ, ಸಂಯಮ, ಸುಖಬದುಕು ಬೇಕೆ ಎಂಬ ಆಯ್ಕೆಗಳು ಮಾತ್ರ ನಮ್ಮ ಮುಂದಿವೆ.

ಇದನ್ನು ಯಾರೋ ಮುಲ್ಲಾಗಳು, ಪಾದ್ರಿಗಳು, ಮೌಲ್ವಿಗಳು, ಸ್ವಾಮೀಜಿಗಳು, ಮಠಾಧೀಶರು ಹೇಳಿಕೊಡಬೇಕಿಲ್ಲ ಅಥವಾ ನಿರ್ಧರಿಸ ಬೇಕಿಲ್ಲ. ನಮ್ಮ ನಮ್ಮ ಜ್ಞಾನದ ಮಿತಿಯಲ್ಲಿ, ನಾವೇ ನಿರ್ಧಾರ ತೆಗೆದುಕೊಳ್ಳಬೇಕು. ಇದನ್ನು ನಿಮ್ಮ ವಿವೇಚನೆಗೆ ಬಿಡುತ್ತಾ……

ಮತ್ತೊಮ್ಮೆ ಎಲ್ಲರಿಗೂ ರಂಜಾನ್ ಹಬ್ಬದ ಶುಭಾಶಯಗಳು

ಏಳಿ ಎದ್ದೇಳಿ ಜಾಗೃತಗೊಳ್ಳಿ, ನಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ

ಆಟೋ ಡ್ರೈವರ್ ಆದ ನಾನು ಇತ್ತೀಚಿನ ಚುನಾವಣಾ ಸಮಯದಲ್ಲಿ ನನ್ನ 10 ವರ್ಷದ ಮಗನೊಂದಿಗೆ
ತರಕಾರಿ ತರಲು ಮಾರ್ಕೆಟ್ ಗೆ ಕಾಲು ನಡಿಗೆಯಲ್ಲಿ ಹೋಗಿದ್ದೆ……….

ಹಿಂದಿರುಗಿ ಬರುವಾಗ ಒಂದು ಪಕ್ಷದ ಚುನಾವಣಾ ಪ್ರಚಾರ ಸಭೆ ನಡೆಯುತ್ತಿತ್ತು. ಜನರ ಗುಂಪು ನೋಡಿ ನನ್ನ ಮಗ ಅದನ್ನು ತೋರಿಸು ಎಂದು ಹಠ ಹಿಡಿದ. ನಾನು ಗುಂಪಿನಲ್ಲಿ ಹೋಗಿ ಕುಳಿತೆ…..

ಆ ಕ್ಷೇತ್ರದ ಅಭ್ಯರ್ಥಿ ಭಾಷಣ ಮಾಡುತ್ತಿದ್ದ,… ” ಅಕ್ಕ ತಂಗಿಯರೇ, ಅಣ್ಣ ತಮ್ಮಂದಿರೇ, ನಾನು ನಿಮ್ಮ ಮನೆ ಮಗ, ಇಲ್ಲೇ ಹುಟ್ಟಿ ಬೆಳೆದ ಬಡ ರೈತನ ಮಗ, ನನಗೆ ಗೊತ್ತು ಬಡತನ ಎಷ್ಟು ಕಷ್ಟ ಅಂತ. ಒಳ್ಳೆಯ ರಸ್ತೆ ಇಲ್ಲ, ಬೀದಿ ದೀಪ ಇಲ್ಲ, ಕುಡಿಯುವ ನೀರಿಲ್ಲ, ಎಲ್ಲೆಲ್ಲೂ ಗಲೀಜು, ಬೀದಿ ನಾಯಿ ಕಾಟ, ಕಾಮುಕರು, ರೌಡಿಗಳ ತೊಂದರೆ, ಲಂಚ ಅತಿಯಾಗಿದೆ. ಅದನ್ನು ನಿವಾರಿಸುವೆ…. ಹಬ್ಬ, ಉತ್ಸವಗಳನ್ನು ದೊಡ್ಡ ಪ್ರಮಾಣದಲ್ಲಿ ಆಯೋಜಿಸುತ್ತೇನೆ. ದೇವ ಮಂದಿರಗಳನ್ನು ಕಟ್ಟಿಸುತ್ತೇನೆ. ನೀವು ನನ್ನನ್ನು ಗೆಲ್ಲಿಸಿದರೆ 24 ಗಂಟೆಯು ನಾನು ನಿಮಗೆ ಸೇವೆ ಸಲ್ಲಿಸುತ್ತೇನೆ. ನಾನು ನಿಮ್ಮ ಸೇವಕ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತೇನೆ. ನಿಮ್ಮ ಕಾಲಿಡಿದು ಕೇಳಿಕೊಳ್ಳುತ್ತೇನೆ ನನಗೇ ಮತ ನೀಡಿ.” ಎಂದು ಕಣ್ಣೀರು ಸುರಿಸಿದ….ನನ್ನ ಮಗನ ಕಣ್ಣಿನಲ್ಲಿಯೂ ನೀರು. ಏಕೆಂದು ಕೇಳಿದೆ.

“ಅಪ್ಪಾ ಇವರು ಎಷ್ಟು ಒಳ್ಳೆಯವರು. ನಮ್ಮ ಕಷ್ಟ ಎಲ್ಲಾ ಪರಿಹರಿಸುತ್ತಾರಂತೆ. ನಿನ್ನ ಓಟು ಇವರಿಗೇ ಹಾಕಪ್ಪ “ಅವನ ಮುಗ್ಧತೆಗೆ ಮನದಲ್ಲೇ ನಕ್ಕು ಆಗಲಿ ಎಂದು ಹೇಳಿ ಮನೆ ಕಡೆ ಹೊರಟೆ. ಕರಳು ಚುರಕ್ ಎಂದಿತು. ಅವನು ಕೇಳದಿದ್ದರೂ ನಾನೇ ಐಸ್ ಕ್ರೀಮ್ ಕೊಡಿಸಿದೆ. ತಿನ್ನುತ್ತಾ ಬರುತ್ತಿರುವಾಗ ಸ್ವಲ್ಪ ದೂರದ ಮ್ಯೆದಾನದಲ್ಲಿ ಮತ್ತೊಂದು ಪಕ್ಷದ ಸಭೆ ನಡೆಯುತ್ತಿತ್ತು.
ಅದಕ್ಕೂ ಹಠ ಮಾಡಿದ. ಹೋಗಲಿ, ಹೇಗಿದ್ದರೂ ಭಾನುವಾರ, ಪರವಾಗಿಲ್ಲ ಎಂದು ಅಲ್ಲಿಗೂ ಕರೆದೊಯ್ದೆ….

ಅಲ್ಲಿನ ಅಭ್ಯರ್ಥಿಯೂ ಮಾತನಾಡುತ್ತಿದ್ದ. “ಮಹನೀಯರೆ, ಮಹಿಳೆಯರೆ, ಹುಟ್ಟಿನಿಂದಲೇ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ನನಗೆ ನಿಮ್ಮ ಸೇವೆಯನ್ನು ಹೆಚ್ಚಿಗೆ ಮಾಡಲು ಚುನಾವಣೆಗೆ ನಿಂತಿರುವೆ. ನಾನೇನಾದ್ರು ಆಯ್ಕೆಯಾದರೆ ನಿಮ್ಮ ಮನೆಬಾಗಿಲಿಗೆ ಉಚಿತ ಅಕ್ಕಿ, ರಾಗಿ, ಜೋಳ, ಎಣ್ಣೆ, ಬಟ್ಟೆ, ತಾಳಿ, ಟಿವಿ,
ಲ್ಯಾಪ್ ಟಾಪ್ ಇನ್ನೂ ಎಲ್ಲಾ ಕೊಡುತ್ತೇನೆ. ನಿಮಗೆ ಆರೋಗ್ಯ, ನಿಮ್ಮ ಮಕ್ಕಳಿಗೆ ಉಚಿತ ಶಿಕ್ಷಣ, ವೃದ್ಧರಿಗೆ
ಪಿಂಚಣಿ ಎಲ್ಲಾ ಕೊಡಿಸುತ್ತೇನೆ. ದಯವಿಟ್ಟು ನಿಮ್ಮ ಅಮೂಲ್ಯ ಓಟು ನನಗೇ ಕೊಡಿ.”…

ಜನರ ಜೋರು ಚಪ್ಪಾಳೆ. ನಡುವೆ ಮಗನನ್ನು ನೋಡುತ್ತೇನೆ. ಅವನು ಮತ್ತೆ ಕಣ್ಣೀರು.
“ಅಪ್ಪಾ ಇವರು ಇನ್ನೂ ಒಳ್ಳೆಯವರು. ಎಲ್ಲಾ ಉಚಿತ ಕೊಡುತ್ತಾರೆ. ನಿನ್ನ ಓಟು ಇವರಿಗೇ ಕೊಡು”…

ಆಯ್ತು ಮಗ ಎಂದು ಹೇಳಿ ಮನೆಗೆ ಬಂದೆವು.
ರಾತ್ರಿ ಮಲಗಿರುವಾಗ ಕೇಳಿದ, ” ಅಪ್ಪಾ ಇಷ್ಟೊಂದು ಒಳ್ಳೆಯ ಜನ ಚುನಾವಣೆಗೆ ನಿಲ್ಲುವಾಗ ನೀನ್ಯಾಕೆ ಯಾವಾಗಲೂ ರಾಜಕಾರಣಿಗಳನ್ನು ಬಯ್ಯುತ್ತೀಯ. ಪಾಪ ಅವರು ಒಳ್ಳೆಯವರು. ನೀನೇ ಸರಿಯಿಲ್ಲ. “ಎಂದ….

” ಮಗನೇ ನನಗೆ ಸುಮಾರು 55 ವರ್ಷ ಸಮೀಪಿಸುತ್ತಿದೆ. ನಾನು 20 ರಿಂದ 25 ಚುನಾವಣೆಗಳನ್ನು
ನೋಡಿದ್ದೇನೆ. ಎಲ್ಲಾ ಅಭ್ಯರ್ಥಿಗಳು, ಪಕ್ಷಗಳೂ ಹೀಗೇ ಹೇಳುತ್ತವೆ. ಚುನಾವಣೆ ಮುಗಿದು ಗೆದ್ದಮೇಲೆ
ನಾವು ಅವರನ್ನು ಭೇಟಿಯಾಗುವುದು ಅಸಾಧ್ಯ. ಒಂದು ವೇಳೆ ಭೇಟಿಯಾದರು ಎರಡು ನಿಮಿಷ ಮಾತನಾಡಿ ಸಾಗುಹಾಕುತ್ತಾರೆ. ಅವರ ಕೆಲವು ಹಿಂಬಾಲಕರಿಗೆ ಬಿಟ್ಟರೆ ಯಾರಿಗೂ ಏನೂ ಮಾಡುವುದಿಲ್ಲ. ಚುನಾವಣಾ ಸಮಯದಲ್ಲಿ ಮಾತ್ರ ಮೊಸಳೆ ಕಣ್ಣೀರು ಸುರಿಸುತ್ತಾರೆ.” ಎಂದು ಹೇಳುತ್ತಿದ್ದಂತೆ ಮನೆಯ ಕಾಲಿಂಗ್ ಬೆಲ್ ಶಬ್ದವಾಯಿತು….

ಬಾಗಿಲು ತೆಗೆದರೆ ಒಬ್ಬ,….. ” ಅಣ್ಣಾ ತಗೋ 4000 ರೂಪಾಯಿ, ಅಕ್ಕನಿಗೆ ಒಂದು ಸೀರೆ ಇದೆ. ಕವರ್ ಒಳಗೆ
ಒಂದು ಎಣ್ಣೇ ಬಾಟಲ್ ಇಟ್ಟಿದ್ದೇನೆ. ನಮ್ಮ ಅಭ್ಯರ್ಥಿಯನ್ನು ಮರೆಯಬೇಡ “ಎಂದು ಹೇಳಿ ಕ್ಯೆಮುಗಿದು
ಹೊರಟ. ಇನ್ನೊಬ್ಬ ನನ್ನ ಮಗನನ್ನು ನೋಡಿ ಅವನಿಗೂ 100 ರ ನೋಟು ನೀಡಿದ….

ಮಗನಿಗೆ ಏನೂ ಅರ್ಥವಾಗಲಿಲ್ಲ. 100 ರೂಪಾಯಿ ನೋಟು ನೋಡಿ ಖುಷಿಯಾಯಿತು….

ನನಗೆ ನನ್ನ ಮಗನ ಭವಿಷ್ಯ ನೆನಪಾಗಿ ಭಯವಾಯಿತು.

ನಿಮಗೆ….. ಏಳಿ ಎದ್ದೇಳಿ ಜಾಗೃತಗೊಳ್ಳಿ, ನಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ,……

ಮೊದಲು ಉತ್ತಮ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸುವ ವಾತಾವರಣ ನಿರ್ಮಾಣ ಮಾಡೋಣ. ಅನಂತರ ಮತದಾನದ ಹಕ್ಕಿನ ಬಗ್ಗೆ ಯೋಚಿಸೋಣ……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!