Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ವಾಸವಿರಬೇಕು: ನರೇಂದ್ರಸ್ವಾಮಿ

ಗ್ರಾಮ ಲೆಕ್ಕಿಗರು ಮತ್ತು ಗ್ರಾಮಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಬೆಂಗಳೂರು, ಮಂಡ್ಯ, ಮೈಸೂರು ಸೇರಿದಂತೆ ಹೊರಗಡೆಯಲ್ಲಿ ವಾಸ ಮಾಡುವವರೇ ಹೆಚ್ಚಾಗಿರುವುದರಿಂದ ಸರಿಯಾದ ಸಮಯಕ್ಕೆ ಕಚೇರಿಗೆ ಬರುತ್ತಿಲ್ಲ, ಪಿಡಿಒ ಮತ್ತು ಗ್ರಾಮ ಲೆಕ್ಕಿಗರು ಇನ್ನೂ ಮುಂದೆ ಕಡ್ಡಾಯವಾಗಿ ಅವರ ವ್ಯಾಪ್ತಿಯಲ್ಲಿಯೇ ವಾಸವಿರಬೇಕು ಎಂದು ಶಾಸಕ ಪಿ.ಎಂ ನರೇಂದ್ರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಳವಳ್ಳಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ವಾಸವಿರುವಂತೆ ತಹಶೀಲ್ದಾರ್ ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಕ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

ಇಲಾಖಾವಾರು ಅಭಿವೃದ್ಧಿಗೆ ಬೇಕಾಗಿರುವ ಕ್ರಿಯಾ ಯೋಜನೆಗಳನ್ನು ಅಧಿಕಾರಿಗಳು ಸಿದ್ದಪಡಿಸಿಕೊಂಡು ವರದಿ ನೀಡಿದರೇ, ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಲಾಗುವುದು, 15ನೇ ಹಣಕಾಸು ಯೋಜನೆಯಡಿ ಪಟ್ಟಣದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ಸೂಚನೆ ನೀಡಿದರು.

ಶೋಷಣೆಗೆ ಅವಕಾಶ ಕೊಡುವುದಿಲ್ಲ

ತಾಲ್ಲೂಕು ಆಸ್ಪತ್ರೆ ಒಳಗೆ ಕೆಲವರು ಅಕ್ರಮ ಪ್ರವೇಶಮಾಡಿ ತೊಂದರೆ ಕೊಡಲು ಮುಂದಾಗುತ್ತಿದ್ದಾರೆ, ಪಟ್ಟಣದಲ್ಲಿ ಉದ್ದೇಶಪೂರ್ವಕವಾಗಿಯೇ ಕೆಲವೊಂದು ಘಟನೆಗಳನ್ನು ಸೃಷ್ಠಿಸಿ ಸಾರ್ವಜನಿಕರಿಗೆ ತಪ್ಪು ಸಂದೇಶ ಕೊಡಲು ಹೊರಟ್ಟಿದ್ದಾರೆ, ಪೊಲೀಸ್ ಇಲಾಖೆ ಮಪ್ತಿಯಲ್ಲಿ ಇಂತಕ ಕೃತ್ಯವನ್ನು ತಡೆಯಬೇಕು, ನನ್ನ ಅಧಿಕಾರದ ಅವಧಿಯಲ್ಲಿ ಶೋಷಣೆಗೆ ಅವಕಾಶ ಕೊಡುವುದಿಲ್ಲ, ರೌಡಿಸಂ, ಅಕ್ರಮ ಗಾಂಜಾ ಮಾರಾಟ ಸೇರಿದಂತೆ ಇತರೆ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕಿದೆ ಎಂದು ಪೊಲೀಸ್ ಇಲಾಖೆಗೆ ತಿಳಿಸಿದರು.

ತಾಲ್ಲೂಕಿನ ಹಲವೆಡೆ ಹಾಗೂ ಪಟ್ಟಣದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿ ಮಕ್ಕಳು ಸೇರಿದಂತೆ ಸಾರ್ವಜನಿಕರನ್ನು ಕಚ್ಚಿ ರಾಬೀಸ್ ರೋಗ ಹರಡುವ ಭೀತಿ ಇರುವುದರಿಂದ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕೆಂದು ಪುರಸಭೆ, ತಾ.ಪಂ ಇಓ ಹಾಗೂ ಪಶು ವೈದ್ಯಾಧಿಕಾರಿಗಳಿಗೆ ತಿಳಿಸಿದರು.

ಹಲಗೂರು ಸಮೀಪದ ಹಗದೂರು ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕೆ ಕ್ರಮ ವಹಿಸಬೇಕು. ಮಾದಹಳ್ಳಿ ರಸ್ತೆಯ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಸಬೇಕು. ಹಿಟ್ಟನಹಳ್ಳಿ ಕೊಪ್ಪಲು ರಸ್ತೆಯ ಕಾಮಗಾರಿ ಆರಂಭಿಸಿ ಹಾಗೂ ದಂಡಿನಮಾರಮ್ಮ ದೇವಸ್ಥಾನದಿಂದ ಹಾಗೂ ಪಟ್ಟಣದಿಂದ ತಮ್ಮಡಹಳ್ಳಿಗೆ ಸಂಪರ್ಕದ ರಸ್ತೆ ಹಾಗೂ ಮತ್ತಿತಾಳೇಶ್ವರ ದೇವಸ್ಥಾನದ ರಸ್ತೆ ಕಾಮಗಾರಿಗೆ ಕ್ರಿಯಾ ಯೋಜನೆ ರೂಪಿಸಬೇಕು. ಗುತ್ತಿಗೆದಾರರು ಕಪ್ಪುಪಟ್ಟಿ ಸೇರುವ ಭಯದಿಂದ ಓಡಿ ಬಂದು ಕುಡಿಯುವ ನೀರಿನ ಯೋಜನೆಯನ್ನು ಇನ್ನೂ ಒಂದೂವರೆ ತಿಂಗಳಲ್ಲಿ ಸರಿ ಮಾಡುತ್ತೇನೆಂದು ಒಳಚರಂಡಿ ಮತ್ತು ನಗರ ನೀರು ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಬಂದಿದ್ದಾರೆ, ಪಟ್ಟಣದ 71 ಕೋಟಿ ರೂ.ವೆಚ್ಚದ ಕುಡಿಯುವ ನೀರಿನ ಯೋಜನೆ ಕಾಮಗಾರಿಯಲ್ಲಿನ ಅವ್ಯವಸ್ಥೆಯನ್ನು ಸರಿಮಾಡುವವರೆಗೂ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ತಾಲ್ಲೂಕು ಮಟ್ಟದ ಅಧಿಕಾರಿಗಳು ಇಲಾಖೆ ಸಂಬಂಧಿಸಿದ ಮಾಹಿತಿಯನ್ನು ಶಾಸಕರಿಗೆ ಮಾಹಿತಿ ನೀಡಿದರು. ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಇಓ ಮಮತ ಅವರಿಗೆ ಸೂಚನೆ ನೀಡಿದರು.

ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ಶಾಸಕರು ಪರಿಹಾರದ ಚೆಕ್‌ಗಳನ್ನು ವಿತರಣೆ ಮಾಡಿದರು.

ಸಭೆಯಲ್ಲಿ ತಹಶೀಲ್ದಾರ್ ಕೆ.ಎನ್.ಲೊಕೇಶ್, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಸಿದ್ದಲಿಂಗೇಶ್ ಬೇವಿನಹಟ್ಟಿ, ಡಿವೈಎಸ್‌ಪಿ ಕೃಷ್ಣಪ್ಪ ಸೇರಿದಂತೆ ಇತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!