Thursday, September 19, 2024

ಪ್ರಾಯೋಗಿಕ ಆವೃತ್ತಿ

ರಾಷ್ಟ್ರೀಯ ರೈತರ ದಿನ : ಮಾಜಿ ಪ್ರಧಾನಿ ಚೌಧರಿ ಚರಣ್‌ಸಿಂಗ್‌ ಜನ್ಮದಿನ

ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್, ರೈತಾಪಿಗಳ ಕಷ್ಟಸುಖಗಳನ್ನು ಕಂಡುಂಡವರು. ಆ ಕಾರಣಕ್ಕಾಗಿಯೇ ಶಾಸಕನಿಂದ ಮುಖ್ಯಮಂತ್ರಿಯವರೆಗೆ, ಸಂಸದನಿಂದ ಪ್ರಧಾನಮಂತ್ರಿ ವರೆಗಿನ ಅಧಿಕಾರದ ಸ್ಥಾನಗಳಿಗೇರಿದಾಗ ದೇಶದ ರೈತರ ಪರಿಸ್ಥಿತಿಯನ್ನು ಪರಾಮರ್ಶಿಸಿ ಅದಕ್ಕೆ ಪೂರಕವಾದ ಕಾಯ್ದೆಗಳನ್ನು ಜಾರಿಗೆ ತರುವಲ್ಲಿ ಶಕ್ತಿಮೀರಿ ಶ್ರಮಿಸಿದರು

ಭಾರತ ಕೃಷಿ ಪ್ರಧಾನ ದೇಶ ಎನ್ನುವುದನ್ನು ನಮಗೆ ಬುದ್ಧಿ ಬಂದಾಗಿನಿಂದ ಕೇಳುತ್ತಲೇ ಬಂದಿದ್ದೇವೆ. ಇರುವ ಬುದ್ಧಿ ಭ್ರಮಣೆಗೊಳಗಾಗುವಂತೆ ದೇಶ ವಿಶ್ವಗುರುವಾಗುವತ್ತ ದಾಪುಗಾಲು ಹಾಕುತ್ತಿದೆ ಎಂಬುದನ್ನೂ ಕಿವಿ ತುಂಬಿಕೊಳ್ಳುತ್ತಿದ್ದೇವೆ. ಇವುಗಳ ನಡುವೆಯೇ, ದೇಶದ ಅರ್ಧದಷ್ಟು ಜನಸಂಖ್ಯೆ ಕೃಷಿಯನ್ನು ಮುಖ್ಯ ಕಸುಬನ್ನಾಗಿ ಅವಲಂಬಿಸಿ, ಆರಕ್ಕೇರದೆ ಮೂರಕ್ಕಿಳಿಯದೆ ಅತಂತ್ರವಾಗಿರುವುದನ್ನೂ ನೋಡುತ್ತಿದ್ದೇವೆ. ಸ್ವಾತಂತ್ರ್ಯಾನಂತರ, ಅರವತ್ತರ ದಶಕದಲ್ಲಿ ದೇಶ ಹಸಿರು ಕ್ರಾಂತಿಯನ್ನು ಆತುಕೊಂಡು, ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ಚಿತ್ರಣ ಕೊಂಚ ಬದಲಾಗಿದ್ದನ್ನು ಬಿಟ್ಟರೆ, ಬೇಸಾಯ ನೀ ಸಾಯ ನಾ ಸಾಯ, ಮನೆಮಂದಿಯಲ್ಲ ಸಾಯ ಎನ್ನುವುದನ್ನು ತಪ್ಪಿಸಲಾಗಿಲ್ಲ. ದಿನ ಬೆಳಗಾದರೆ ರೈತನ ಆತ್ಮಹತ್ಯೆ ಸುದ್ದಿಗಳಿಗೆ ಸಮಾಪ್ತಿಯಾಗುವುದು ಯಾವ ಸರ್ಕಾರಕ್ಕೂ ಸಾಧ್ಯವಾಗಲಿಲ್ಲ.

ಇಂತಹ ಹೊತ್ತಲ್ಲಿ, ಡಿಸೆಂಬರ್‌ 23 ಬಂದಿದೆ, ಆ ದಿನದ ನೆಪದಲ್ಲಿ ರೈತ ದಿನವೂ ಬಂದಿದೆ. ರೈತರನ್ನು ಕೊಂಡಾಡುವ, ಅವರ ಕಾಯಕಕ್ಕೆ ಗೌರವ ತೋರುವ, ಕೃಷಿ ಬದುಕನ್ನು ಬಂಗಾರವೆಂದು ಬಣ್ಣಿಸುವ, ರೈತ ದೇಶದ ಬೆನ್ನೆಲುಬು ಎಂದು ಬೆರಗುಟ್ಟಿಸುವ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳೂ ಬಂದು ಹೋಗಬಹುದು. ಉದ್ದುದ್ದ ಬರಹ ಮತ್ತು ಭಾಷಣಗಳು ಸುದ್ದಿ ಮಾಧ್ಯಮಗಳಿಗೆ ಸರಕು ಒದಗಿಸಬಹುದು. ಇಷ್ಟು ಬಿಟ್ಟರೆ, ರೈತರ ಮತ್ತದೇ ಮಣ್ಣಿಡಿದ ಬದುಕು.

ಅಸಲಿಗೆ ರೈತ ದಿನ ಎಂದರೇನು? ಡಿಸೆಂಬರ್‌ 23ರನ್ನೇ ಯಾಕಾಗಿ ರೈತ ದಿನ ಎಂದು ಆಚರಿಸಲಾಗುತ್ತದೆ? ಎಂಬ ಪ್ರಶ್ನೆಗಳೇಳುವುದು ಸಹಜ. ರೈತ ದಿನ ಎಂದರೆ, ಅಸಲಿಗೆ ರೈತರಿಗಾಗಿಯೇ ಮೀಸಲಿಟ್ಟ ದಿನವಲ್ಲ. ಸರ್ಕಾರಿ ರಜಾ ದಿನವೂ ಅಲ್ಲ. ಇದನ್ನು ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರಗಳಾಗಲಿ ಕಡ್ಡಾಯವಾಗಿ ಆಚರಿಸುವುದೂ ಇಲ್ಲ. ಆದರೂ ಕೆಲವು ರಾಜ್ಯಗಳು ಡಿ.23 ಅನ್ನು ರೈತ ದಿನವನ್ನಾಗಿ ಅಚರಿಸುತ್ತವೆ. ಏಕೆಂದರೆ, ಡಿ.23 ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನ. ರೈತಾಪಿ ಕುಟುಂಬದಲ್ಲಿ ಜನಿಸಿ, ಅಧಿಕಾರದ ಸ್ಥಾನಗಳಲ್ಲಿದ್ದಷ್ಟು ದಿನವೂ ರೈತರ ಒಳಿತಿಗಾಗಿ ಶ್ರಮಿಸಿದ ರೈತನಾಯಕನ ನೆನಪಿಗಾಗಿ, ಅವರ ಜನ್ಮದಿನವನ್ನು ರೈತ ದಿನವನ್ನಾಗಿ ಆಚರಿಸಲಾಗುತ್ತಿದೆ. 2001ರಿಂದ ಜಾರಿಗೆ ಬಂದ ಈ ರೈತ ದಿನ(ಕಿಸಾನ್ ದಿವಸ್)ವನ್ನು ಉತ್ತರ ಪ್ರದೇಶದಲ್ಲಿ ಮಾತ್ರ ಸರ್ಕಾರಿ ರಜಾ ದಿನವನ್ನಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಉಳಿದಂತೆ ಹರ್ಯಾಣ, ಪಂಜಾಬ್ ಮತ್ತು ಮಧ್ಯಪ್ರದೇಶಗಳಲ್ಲಿ ರೈತರಿಗಾಗಿ ಶ್ರಮಿಸಿದವರನ್ನು ಸನ್ಮಾನಿಸುವ ಮೂಲಕ ರೈತ ದಿನವನ್ನು ಸ್ಮರಿಸಿಕೊಳ್ಳಲಾಗುತ್ತದೆ.

ಇದು ಒಂದು ರೀತಿಯಲ್ಲಿ ಚರಣ್ ಸಿಂಗ್ ಎಂಬ ರೈತನಾಯಕನಿಗೆ ಗೌರವ ತೋರುತ್ತಲೇ, ಅವರು ಇಷ್ಟಪಡುವ ಕೃಷಿ ಕಸುಬಿಗೆ ಘನತೆ ತರುವ ಕೆಲಸವೂ ಆಗಿದೆ. ಹಾಗೆ ನೋಡಿದರೆ, ಉತ್ತರ ಪ್ರದೇಶದಲ್ಲಿ ಜನಿಸಿದ ಚರಣ್ ಸಿಂಗ್, ಜಾಟ್ ಸಮುದಾಯಕ್ಕೆ ಸೇರಿದವರು. ರೈತ ಕುಟುಂಬದಿಂದ ಬಂದವರು. ರೈತಾಪಿಗಳ ಕಷ್ಟಸುಖಗಳನ್ನು ಕಂಡುಂಡವರು. ಆ ಕಾರಣಕ್ಕಾಗಿಯೇ ಶಾಸಕನಿಂದ ಮುಖ್ಯಮಂತ್ರಿಯವರೆಗೆ, ಸಂಸದನಿಂದ ಪ್ರಧಾನಮಂತ್ರಿವರೆಗಿನ ಅಧಿಕಾರದ ಸ್ಥಾನಗಳಿಗೇರಿದಾಗ ಕೃಷಿ ಆರ್ಥಿಕತೆಯ ಮಹತ್ವವರಿತು, ದೇಶದ ರೈತರ ಪರಿಸ್ಥಿತಿಯನ್ನು ಪರಾಮರ್ಶಿಸಿ ಅದಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು, ಕಾಯ್ದೆಗಳನ್ನು ಜಾರಿಗೆ ತರುವಲ್ಲಿ ಶಕ್ತಿಮೀರಿ ಶ್ರಮಿಸಿದರು. ಅದಕ್ಕಿಂತಲೂ ಹೆಚ್ಚಾಗಿ ನಡೆ-ನುಡಿಯಲ್ಲಿ ಸಾಮಾನ್ಯ ರೈತನಂತೆಯೇ ಇದ್ದರು. ಹುಟ್ಟಿದಾಗಿನಿಂದ ಕಂಡ ಕೃಷಿ ಕುರಿತು ಬಹಳ ಮುಖ್ಯವಾದ ಪುಸ್ತಕಗಳನ್ನು ಬರೆದರು. ಕೊನೆವರೆಗೂ ರೈತಪರ ಹೋರಾಟಗಾರನಾಗಿಯೇ ಉಳಿದರು. ಆ ಕಾರಣಕ್ಕಾಗಿಯೇ ಅವರ ಜನ್ಮದಿನವನ್ನು ರೈತ ದಿನವನ್ನಾಗಿ ಆಚರಿಸಲಾಗುತ್ತಿದೆ. ಹಾಗೆಯೇ ಚೌಧರಿ ಚರಣ್ ಸಿಂಗ್ ಸ್ಮಾರಕವನ್ನು ಕಿಸಾನ್ ಘಾಟ್ ಎಂದು ಕರೆದು ಗೌರವ ಸೂಚಿಸಲಾಗುತ್ತಿದೆ.

ದೇಶ ಕಂಡ ಇಂತಹ ಅಪರೂಪದ ರೈತನಾಯಕನಿಗೆ ಕರ್ನಾಟಕದ ರೈತ ಚಿಂತಕರಾದ ಪ್ರೊ. ನರಸಿಂಹಪ್ಪನವರೊಂದಿಗೆ ನಿಕಟ ಸಂಪರ್ಕವಿತ್ತು. ವಿಧುರಾಶ್ವತ್ಥದ ನರಸಿಂಹಪ್ಪನವರು ಎಂ ಕಾಂ ಮುಗಿಸಿ ಉಪನ್ಯಾಸಕರಾಗಿದ್ದವರು, ಇದ್ದಕ್ಕಿದ್ದಂತೆ ಒಂದು ದಿನ ಉಪನ್ಯಾಸಕ ವೃತ್ತಿಗೆ ವಿದಾಯ ಹೇಳಿ, ಸೂಟು ಬೂಟು ಕಳಚಿಟ್ಟು ಕೃಷಿಕರಾದರು. ಆಗ್ರೋ ಇಂಡಸ್ಟ್ರೀಸ್, ಸಕ್ಕರೆ ಕಾರ್ಖಾನೆಗಳ ಸ್ಥಾಪನೆ, ಭದ್ರಾ ಡ್ಯಾಂ ರಿಪೇರಿಗಳಂತಹ ಹತ್ತಾರು ಜನಪರ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ತರ್ಕಬದ್ಧವಾಗಿ ಮಾತನಾಡುವ, ಅಂಕಿ-ಅಂಶಗಳ ಸಮೇತ ವಿದ್ವತ್ಪೂರ್ಣವಾಗಿ ವಿಷಯ ಮಂಡಿಸುವ ಪ್ರೊ. ನರಸಿಂಹಪ್ಪನವರು, ನಾಡು ಕಂಡ ಅಪರೂಪದ ಕೃಷಿ ಪಂಡಿತರು.

ಜಯಪ್ರಕಾಶ್ ನಾರಾಯಣ್, ರಾಮಮನೋಹರ ಲೋಹಿಯಾ ಅವರ ವಿಚಾರಧಾರೆಗಳಿಂದ ಪ್ರಭಾವಿತರಾಗಿ, ಹಿಂದುಳಿದ ವರ್ಗಗಳನ್ನು ಸಂಘಟಿಸುತ್ತಾ, ರೈತರ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಿರುವವರು. ರೈತ ಸಂಘಟನೆ, ಜನತಾ ಪಕ್ಷ, ಲೋಕಶಕ್ತಿ ಪಕ್ಷಗಳ ಆರಂಭಿಕ ಹಂತದಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದ ನರಸಿಂಹಪ್ಪನವರು, ಮಾಜಿ ಪ್ರಧಾನಿ ಚರಣ್‌ಸಿಂಗ್‌ರಿಗೆ ನಿಕಟವರ್ತಿಯಾಗಿದ್ದು, ಲೋಕದಳದ ಕರ್ನಾಟಕದ ಅಧ್ಯಕ್ಷರಾಗಿಯೂ ಕೆಲಸ ಮಾಡಿದವರು.

ರೈತ ದಿನದ ನೆಪದಲ್ಲಿ ಚರಣ್ ಸಿಂಗ್‌ರಿಗೆ ಆಪ್ತರಾಗಿದ್ದ ಪ್ರೊ. ನರಸಿಂಹಪ್ಪನವರನ್ನು ಮಾತಿಗೆಳೆದರೆ, “ನಿಜವಾದ ರೈತನಾಯಕ ಅಂದರೆ ಚರಣ್ ಸಿಂಗ್. ಬೇರೆಯವರು ಹೆಗಲುಮೇಲೆ ಟವಲ್ ಹಾಕ್ಕೊಂಡು ರೈತ ಬಂಧು, ಮಣ್ಣಿನಮಗ ಅಂತೆಲ್ಲ ಅಂದ್ಕೊಂಡು ಓಡಾಡಿದರೆ, ಅವರು ಏನೂ ಹೇಳ್ತಿರಲಿಲ್ಲ. ಅವರೇ ರೈತರಾಗಿದ್ದರು. ರೈತರೇ ಅವರಾಗಿದ್ದರು. ಅವರ ಜನ್ಮದಿನವನ್ನೇ ರೈತ ದಿನವನ್ನಾಗಿ ಆಚರಿಸೋದು ಅರ್ಥಪೂರ್ಣ. ಅವರಿಗೆ ತೋರುವ ಗೌರವ. ಪ್ರತಿವರ್ಷ ನಾವೊಂದಿಷ್ಟು ಜನ ಸೇರ್ತೀವಿ, ರೈತ ದಿನ ಆಚರಿಸ್ತೀವಿ. ಇದು ಚರಣ್ ಸಿಂಗ್ ರನ್ನು ನೆನಪು ಮಾಡಿಕೊಳ್ಳುವುದಕ್ಕೊಂದು ನೆಪ’’ ಎಂದರು.

ರಾಷ್ಟ್ರೀಯ ನಾಯಕರು, ಗೃಹಮಂತ್ರಿ, ಪ್ರಧಾನಮಂತ್ರಿಗಳಾಗಿದ್ದ ಚರಣ್ ಸಿಂಗ್‌ರಿಗೆ ಕರ್ನಾಟಕ ಎಂದಾಕ್ಷಣ ನೆನಪಾಗುತ್ತಿದ್ದುದು ನರಸಿಂಹಪ್ಪನವರು. ನೀವೂ ಕೂಡ ದೆಹಲಿಗೆ ಹೋದರೆ ಚರಣ್ ಸಿಂಗ್ ಮನೆಯಲ್ಲಿಯೇ ಉಳಿದುಕೊಳ್ಳುವಷ್ಟು ಆತ್ಮೀಯರಾಗಿದ್ದವರು, ಎಂದು ಆ ಕಾಲವನ್ನು ಕೆದಕಿದರೆ, “ನಿಜವಾದ ರೈತ ಪ್ರತಿನಿಧಿ ಅಂದರೆ ಅದು ಚರಣ್ ಸಿಂಗ್. ಅವರು ಗೃಹ ಮಂತ್ರಿಯಾಗಿದ್ದಾಗ ಅವರನ್ನು ನೋಡಲು ಹೋಗಿದ್ದೆ. ಬೆಳಗಿನ ಜಾವ ಆರು ಗಂಟೆಯ ಸಮಯ. ಮನೆಯ ಹೊರಗಿನ ಹುಲ್ಲುಹಾಸಿನ ಮೇಲೆ, ಒಬ್ಬರೇ ಕೂತು ಶೇವ್ ಮಾಡ್ಕೊತಿದ್ರು. ನಾನು ಹೋಗಿ ಅವರ ಪಕ್ಕದಲ್ಲಿ ಕೂತೆ. ಆಗ ದೇಶದೆಲ್ಲೆಡೆ ಕಾಂಗ್ರೆಸ್ ವಿರೋಧಿ ಅಲೆ ಇತ್ತು. 1977ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಜನತಾ ಪಕ್ಷ ದಿಗ್ವಿಜಯ ಸಾಧಿಸುತ್ತಿದ್ದಂತೆ, ರಾಜ್ಯದಲ್ಲಿ ಅರಸು ವಿರೋಧಿ ಪಾಳೆಯದಲ್ಲಿದ್ದವರು ಅವರನ್ನು ಕೆಳಗಿಳಿಸಲು ಪಿತೂರಿ ನಡೆಸಿದ್ದರು. ನನ್ನನ್ನು ಕಂಡ ತಕ್ಷಣ, `ಅರಸು ಯಾವ ಪೈಕಿ’ ಎಂದರು. ನಾನು ಯಾದವರು ಎಂದೆ. ಅಷ್ಟೇ ನೋಡಿ, ಅರಸು ಬಚಾವಾಗಿದ್ದರು’ ಎಂದು ಅಂದು ದೇವರಾಜ ಅರಸು ವಿರುದ್ಧ ನಡೆದಿದ್ದ ರಾಜಕೀಯ ಪಿತೂರಿಯನ್ನು ಬಿಡಿಸಿಟ್ಟರು.

ಮುಂದುವರೆದು, `ಸರ್, ನೀವು ಲೋಕದಳಕ್ಕೆ ಕರ್ನಾಟಕದ ಅಧ್ಯಕ್ಷನಾಗಿದ್ದಾಗಲೇ, ದೆಹಲಿಯಲ್ಲಿ ದೊಡ್ಡ ಮಟ್ಟದಲ್ಲಿ ಕಿಸಾನ್ ರ್‍ಯಾಲಿಯೊಂದು ಜರುಗಿತು, ನೀವು ಅದರಲ್ಲಿ ಭಾಗವಹಿಸಿದ್ರಿ’ ಎಂದು ನೆನಪಿಸಿದಾಗ, ”ಹೌದು, ಅದು ಡಿಸೆಂಬರ್ 23, 1978. ಅಂದು ಚರಣಸಿಂಗ್ ಜನ್ಮದಿನ. ಚರಣ್ ಸಿಂಗ್ ಬದುಕಿದ್ದಾಗಲೇ, ಅವರ ಜನ್ಮದಿನದಂದು ಕಿಸಾನ್ ರ್‍ಯಾಲಿ ಹಮ್ಮಿಕೊಂಡಿದ್ದರು. ದೆಹಲಿಯ ರ್‍ಯಾಲಿಗೆ ದೇಶದ ಮೂಲೆ ಮೂಲೆಯಿಂದ ಲಕ್ಷಾಂತರ ಜನ ಬಂದಿದ್ದರು. ಬಹಳ ದೊಡ್ಡ ವೇದಿಕೆಯ ಮೇಲೆ ರಾಷ್ಟ್ರೀಯ ನಾಯಕರಾದ ಬಿಜು ಪಟ್ನಾಯಕ್, ಕರ್ಪೂರಿ ಠಾಕೂರ್, ಪ್ರಕಾಶಸಿಂಗ್ ಬಾದಲ್, ಬೈರಾನ್‌ಸಿಂಗ್ ಶೆಖಾವತ್, ರಾಮನರೇಶ್ ಯಾದವ್‌ರು ಆಸೀನರಾಗಿದ್ದರು. ಇವರೆಲ್ಲರ ನಡುವೆ, ವೈಯಕ್ತಿಕವಾಗಿ ನನಗೆ, ನಮ್ಮ ಕಿಸಾನ್ ರ್‍ಯಾಲಿಗೆ ಶುಭ ಕೋರಿ, ಅಂದಿನ ಕರ್ನಾಟಕದ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ದೇವರಾಜ ಅರಸರು ಬೊಕ್ಕೆ ಕಳುಹಿಸಿಕೊಟ್ಟಿದ್ದರು. ಅದು ಹೇಳಿಕೇಳಿ ಇಂದಿರಾಗಾಂಧಿ ಜೈಲಿನಲ್ಲಿದ್ದ ಸಮಯ. ಅಂಥದ್ದರಲ್ಲಿ ಕಾಂಗ್ರೆಸ್ಸಿನ ಅರಸು, ಕಾಂಗ್ರೆಸ್ ವಿರೋಧಿಗಳು ಆಯೋಜಿಸಿದ್ದ ರ್ಯಾಜಲಿಗೆ ಶುಭ ಸಂದೇಶ ಕಳುಹಿಸಿದ್ದು ಅಲ್ಲಿದ್ದವರಿಗೆಲ್ಲ ಆಶ್ಚರ್ಯವಾಯಿತು. ರ್‍ಯಾಲಿಯೇ ಹೊಸ ದಿಕ್ಕನ್ನು ಪಡೆದುಕೊಂಡಂತಾಯಿತು’’ ಎಂದು ಅಂದಿನ ರಾಜಕಾರಣವನ್ನು ಬಣ್ಣಿಸಿದರು.

ಆನಂತರ, “ಚರಣ್ ಸಿಂಗ್ ಪ್ರಧಾನಿ(28.7.1979ರಿಂದ 14.1.1980)ಯಾಗಿದ್ದಾಗ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಸಮಾರಂಭಕ್ಕೆ ಬಂದಿದ್ದರು. ಅದರಲ್ಲಿ ಮುಖ್ಯಮಂತ್ರಿ ದೇವರಾಜ ಅರಸರೂ ಭಾಗವಹಿಸಿದ್ದರು. ಚರಣ್ ಸಿಂಗ್ ಭಾರತ ಕಂಡ ಅಪರೂಪದ ನೆಲಮೂಲದ ನಿಜನಾಯಕ. ಬಡವರ, ರೈತರ ಕಷ್ಟ ಗೊತ್ತಿದ್ದ ರಾಜಕಾರಣಿ. ಅದನ್ನು ತಮ್ಮ ಭಾಷಣದಲ್ಲಿ ಅಂಕಿ ಅಂಶಗಳ ಸಮೇತ ವಿದ್ವತ್ಪೂರ್ಣವಾಗಿ ಮಂಡಿಸುವ ಕಲೆ ಕರಗತ ಮಾಡಿಕೊಂಡಿದ್ದರು. ಅಂದಿನ ಸಮಾರಂಭದಲ್ಲೂ ಅಂಥದ್ದೇ ಒಂದು ಭಾಷಣ. ಅವರ ಮಾತಿನಲ್ಲಿ ಇಸವಿಗಳು, ಅಂಕಿ ಅಂಶಗಳು ಲೀಲಾಜಾಲವಾಗಿ ಉಲ್ಲೇಖಗೊಂಡವು. ಅದನ್ನು ಕಂಡ ಅರಸು ತಬ್ಬಿಬ್ಬಾದರು, ನನ್ನ ಕಡೆ ತಿರುಗಿ, `ಏ ನರಸಿಂಹಪ್ಪ, ಕೈಯಲ್ಲಿ ಪೇಪರ್ ಇಲ್ಲ, ಅಧಿಕಾರಿಗಳ ನೋಟ್ಸ್ ಇಲ್ಲ. ಅಂಕಿ ಅಂಶಗಳನ್ನೆಲ್ಲ ಇಟ್ಟು ಅದ್ಯಂಗೆ ಮಾತಾಡ್ತಾರೆ’ ಎಂದು ಕೇಳಿದರು. ನಾನು `ಈ ದೇಶದ ಚರಿತ್ರೆ, ಭೂಗೋಳ, ಆರ್ಥಿಕ, ಸಾಮಾಜಿಕ ಸ್ಥಿತಿ- ಇವೆಲ್ಲವನ್ನೂ ಅನುಭವದಿಂದಲೇ ಅರಿತಿರುವ ಮಹಾನ್ ಮೇಧಾವಿಗಳಲ್ಲಿ ಇವರೂ ಒಬ್ಬರು’ ಎಂದೆ. ಅರಸರು ಆಶ್ಚರ್ಯ ವ್ಯಕ್ತಪಡಿಸಿದರು. ಮತ್ತು ಅವರ ನಿಕಟವರ್ತಿಯಾಗಲು ಬಯಸಿದರು. ಇಬ್ಬರ ಆಸಕ್ತಿ ಕ್ಷೇತ್ರ ಕೃಷಿಯಾದ್ದರಿಂದ, ಇಬ್ಬರ ಮನಸ್ಥಿತಿ ಒಂದೆಯಾದ್ದರಿಂದ ಹತ್ತಿರವಾದರು’’ ಎಂದರು.

ರೈತನಾಯಕ ಚರಣಸಿಂಗ್ ರ ಒಡನಾಟದಲ್ಲಿ ಇಂತಹ ಹಲವಾರು ಘಟನೆಗಳಿಗೆ ಕಾರಣೀಭೂತರಾದ ನರಸಿಂಹಪ್ಪನವರು, ಅವರ ಗುಣಸ್ವಭಾವಗಳ ಬಗ್ಗೆ ಮಾತನಾಡುತ್ತಾ, “ಚರಣಸಿಂಗ್ ಸಾಮಾನ್ಯ ರೈತನಂತಿದ್ದರು, ಅಂತಹವರನ್ನೇ ಬಯಸುತ್ತಿದ್ದರು. ಆದರೆ ಅವರ ಅನುಭವ, ತಿಳಿವಳಿಕೆ, ಓದು, ವಿದ್ವತ್ತು ಶ್ರೇಷ್ಠ ಮಟ್ಟದ್ದಾಗಿತ್ತು. ಅವರು ಇಂಡಿಯನ್ ಎಕಾನಮಿಕ್ಸ್ ಮೇಲೆ ಬರೆದ ಪುಸ್ತಕ ಆ ಕಾಲಕ್ಕೇ ಹಾರ್ವರ್ಡ್ ಯೂನಿವರ್ಸಿಟಿಗೆ ಪಠ್ಯವಾಗಿತ್ತು. ಅಷ್ಟೇ ಅಲ್ಲ, ಅಮೆರಿಕಾದ ಪೌಲ್ ರಿಚರ್ಡ್ ಬ್ರಾಸ್ ಎಂಬ ರಾಜಕೀಯ ವಿಶ್ಲೇಷಕ, ಚರಣ್ ಸಿಂಗ್ ರ ರಾಜಕಾರಣ, ರೈತಪ್ರೀತಿ ಮತ್ತು ಜೀವನ ಕುರಿತು ಮೂರು ಬಹುಮುಖ್ಯವಾದ ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ಅಂತಹವರ ಜೊತೆ ಇದ್ದದ್ದು ರೈತರ ಬಗ್ಗೆ ನನಗಿದ್ದ ಕಾಳಜಿಯನ್ನು ಇನ್ನಷ್ಟು ಇಮ್ಮಡಿಗೊಳಿಸಿತು’’ ಎನ್ನುವ ನರಸಿಂಹಪ್ಪನವರು, ನಮ್ಮ ನಡುವಿನ ನೈಜ ರೈತ ಚಿಂತಕರು.

ಇಂತಹ ರೈತನಾಯಕ ನರಸಿಂಹಪ್ಪನವರು ಈಗ 90ರ ಅಂಚಿನಲ್ಲಿದ್ದಾರೆ. ಈಗಲೂ ರೈತರಿಗೆ ಸಂಬಂಧಿಸಿದ ವಿಷಯಗಳನ್ನು ವಿದ್ವತ್ಪೂರ್ಣವಾಗಿ ಮಂಡಿಸುವ, ಕೃಷಿ ಬಿಕ್ಕಟ್ಟುಗಳಿಗೆ ಪರಿಹಾರ ಸೂಚಿಸುವ, ಸರ್ಕಾರಗಳಿಗೆ ಸಲಹೆ ಸೂಚನೆಗಳನ್ನು ಕೊಡುವ, ಕೃಷಿ ಬಜೆಟ್ ಬಗ್ಗೆ ತರ್ಕಬದ್ಧವಾಗಿ ಮಾತನಾಡುವ, ಇವತ್ತಿನ ಸರ್ಕಾರಗಳು ಕೃಷಿ ಕ್ಷೇತ್ರವನ್ನು ಕಡೆಗಣಿಸುತ್ತಿರುವ ಬಗ್ಗೆ ಸಿಟ್ಟಿಗೇಳುವ ಅಪರೂಪದ ರೈತ ಚಿಂತಕ. ಇವರು ರೈತ ದಿನದ ನೆಪದಲ್ಲಿ ರಾಷ್ಟ್ರೀಯರೈತ ಚರಣ್ ಸಿಂಗ್ ರೊಂದಿಗೆ ದೇಸೀರೈತ ದೇವರಾಜ ಅರಸು ಅವರನ್ನು ಸಮೀಕರಿಸಿದ್ದು, ಆ ಚೇತನಗಳಿಗೆ ಗೌರವ ಸಲ್ಲಿಸಿದ್ದು ರೈತ ದಿನದ ವಿಶೇಷವಾಗಿತ್ತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!