Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯದ ವ್ಯಾಪಾರಿಗಳಿಗೆ ಮಾರಕವಾದ ರಾಷ್ಟ್ರೀಯ ಹೆದ್ದಾರಿ : ನೆಲಕಚ್ಚಿದ ವಾಣಿಜ್ಯ ಚಟುವಟಿಕೆಗಳು

   ✍️ ನಾಗೇಶ್ ಎನ್


  • ವಾಹನಗಳಿಲ್ಲದೆ ಎಂ.ಸಿ. ರಸ್ತೆ ಖಾಲಿ ಖಾಲಿ : ಗ್ರಾಹಕರೂ ಇಲ್ಲ.. ವ್ಯಾಪಾರವು ಇಲ್ಲ… 

  • ಭಣಗುಟ್ಟುತ್ತಿರುವ ಹೊಟೇಲ್ ಗಳು, ಪೆಟ್ರೋಲ್ ಬಂಕ್ ಗಳು, ಬೀದಿ ಬದಿ ವ್ಯಾಪಾರಿಗಳು

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಬಹುತೇಕ ಮುಗಿದಿದ್ದು,ಕಳೆದ ಮೂರು ದಿನಗಳ ಹಿಂದೆ ಮಂಡ್ಯದ ಹೊರವಲಯದ ಶ್ರೀನಿವಾಸಪುರ ಗೇಟ್ ಬಳಿ ಸಂಚಾರಕ್ಕೆ ಅವಕಾಶ ನೀಡಿದ್ದರಿಂದ ನಗರದಲ್ಲಿ ವಾಹನಗಳ ಸಂಚಾರ ತೀರಾ ಕಮ್ಮಿಯಾಗಿದ್ದು, ಭಣಗುಟ್ಟುತ್ತಿದೆ. ಇಡೀ ಮಂಡ್ಯ ನಗರದ ವಾಣಿಜ್ಯ ಚಟುವಟಿಕೆ ಗಳು ನೆಲ ಕಚ್ಚಿ, ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿದೆ.

ಆದಾಯ ಈಗ ಕುಗ್ಗಿ ಹೋಗಿದೆ

ಮಂಡ್ಯ ನಗರದ ಹೃದಯ ಭಾಗದಲ್ಲಿ ಹಾದು ಹೋಗುವ ಎಂ.ಸಿ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ಕಾರು, ಬಸ್ಸು, ಲಾರಿ ಮೊದಲಾದ ವಾಹನಗಳಿಂದ ಗಿಜಿಗುಡುತ್ತಿತ್ತು. ಅದರಲ್ಲೂ ಶನಿವಾರ, ಭಾನುವಾರ ಬಂತೆಂದರೆ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿ ಟ್ರಾಫಿಕ್ ಜಾಮ್ ಆಗುತ್ತಿತ್ತು. ಮಂಡ್ಯದಲ್ಲಿರುವ ಹೋಟೆಲ್ ಗಳ ಬಳಿ ವಾಹನಗಳನ್ನು ನಿಲ್ಲಿಸುವುದಕ್ಕೂ ಜಾಗವಿರುತ್ತಿರಲಿಲ್ಲ‌. ಪೆಟ್ರೋಲ್ ಬಂಕ್ ಗಳಲ್ಲಿ ಲಕ್ಷಾಂತರ ರೂ. ವಹಿವಾಟು ನಡೆಯುತ್ತಿತ್ತು. ಮಂಡ್ಯದ ಎರಡೂ ಕಡೆ ರಸ್ತೆ ಬದಿಗಳಲ್ಲಿ ವಾಹನಗಳ ನಂಬಿ ಬದುಕು ಕಟ್ಟಿಕೊಂಡಿದ್ದ ಸಣ್ಣಪುಟ್ಟ ಟೀ ಅಂಗಡಿಗಳು, ಟಾಯ್ಸ್ ಅಂಗಡಿಗಳು, ಎಳನೀರು ವ್ಯಾಪಾರ ಮಾಡುತ್ತಿದ್ದವರ ಆದಾಯ ಈಗ ಕುಗ್ಗಿ ಹೋಗಿದೆ.

nudikarnataka.com
ಎಂ ಸಿ ರಸ್ತೆ ಹೆಚ್ಚಿನ ವಾಹನಗಳಿಲ್ಲದೆ ಭಣಗುಟ್ಟುತ್ತಿರುವುದು

ಬೆಂಗಳೂರು-ಮೈಸೂರಿಗೆ ತೆರಳುತ್ತಿದ್ದ ವಾಹನಗಳು ಈಗ ಮಂಡ್ಯ ನಗರದ ಒಳಕ್ಕೆ ಬಾರದಂತಾಗಿವೆ. ಈ ಗ್ರಾಹಕರನ್ನೆ ನಂಬಿ ವ್ಯಾಪಾರ ನಡೆಸುತ್ತಿದ್ದ ಎಲ್ಲಾ ವರ್ತಕರ ಆದಾಯಕ್ಕೆ ಕತ್ತರಿ ಬಿದ್ದಿದೆ. ರಾಷ್ಟ್ರೀಯ ಹೆದ್ದಾರಿ ಮಂಡ್ಯದ ವ್ಯಾಪಾರಿಗಳಿಗೆ ಮಾರಕವಾಗಿದೆ.

ಹೋಟಲ್ ಗಳು ಖಾಲಿ.. ಖಾಲಿ…

ಮಂಡ್ಯ ನಗರದ ಪ್ರಮುಖ ಹೋಟೆಲ್ ಗಳಾದ ಹರಿಪ್ರಿಯ, ಗುರುರಾಜ ಕಾಂಟಿನೆಂಟಲ್, ಮಹಾರಾಜ ಗ್ರಾಂಡ್, ಸಾಯಿ ಸಾಗರ್ ಹೋಟೆಲ್ ಗಳ ಮುಂದೆ ದಿನನಿತ್ಯ ನೂರಾರು ವಾಹನಗಳಲ್ಲಿ ಪ್ರಯಾಣಿಕರು ಬಂದು ತಿಂಡಿ, ಊಟ ಮಾಡುತ್ತಿದ್ದರು. ಅದರಲ್ಲೂ ಶನಿವಾರ, ಭಾನುವಾರ ಹೋಟೆಲ್ ಗಳ ಮುಂದೆ ವಾಹನಗಳ ಸಂಖ್ಯೆಯೂ ಹೆಚ್ಚು. ವ್ಯಾಪಾರವೂ ಜೋರಾಗಿತ್ತು. ನಿನ್ನೆ ಭಾನುವಾರ ಹರಿಪ್ರಿಯ, ಮಹರಾಜ, ಗುರುರಾಜ, ಸಾಯಿ ಸಾಗರ್ ಹೋಟೆಲ್ ಮುಂದೆ ಬೆರಳೆಣಿಕೆಯ ವಾಹನಗಳಷ್ಟೆ ಇದ್ದವು.

nudikarnataka.com
ಹರಿಪ್ರಿಯ ಹೋಟೆಲ್ ಗ್ರಾಹಕರಿಲ್ಲದೇ ಖಾಲಿ ಖಾಲಿ..

ಹರಿಪ್ರಿಯ ಹೋಟೆಲ್ ನಲ್ಲಿ 100% ಇದ್ದ ವ್ಯಾಪಾರ ಈಗ, ದಿನನಿತ್ಯ 30-40% ಗೆ ಬಂದು ನಿಂತಿದೆ. ಮಹರಾಜ, ಗುರುರಾಜ ಎಲ್ಲ ಹೋಟೆಲ್ ಗಳ ಕಥೆಯೂ ಅಷ್ಟೇ. ಕೋಟಿ ಕೋಟಿ ಬಂಡವಾಳ ಹಾಕಿ ಹೋಟೆಲ್ ತೆರೆದಿದ್ದ ಈ ಉದ್ಯಮಿಗಳ ವ್ಯಾಪಾರವನ್ನು ಹೆದ್ದಾರಿ ನುಂಗಿದೆ.

ಪೆಟ್ರೋಲ್ ಬಂಕ್ ಗಳು ತತ್ತರ

ಇನ್ನು ಮಂಡ್ಯದ ಬಹುತೇಕ ಪೆಟ್ರೋಲ್ ಬಂಕ್ ಗಳು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಆದಾಯವನ್ನು ನಂಬಿಕೊಂಡಿದ್ದವು. ಪ್ರತಿದಿನ ಬಂಕ್ ಗಳ ಆದಾಯ ₹ 4, 5, 6 ಲಕ್ಷಗಳಲ್ಲಿತ್ತು. ಈಗ ಇದೇ ಬಂಕ್ ಗಳಲ್ಲಿ ₹ 70 ಸಾವಿರ, ₹1 ಲಕ್ಷ, ಎರಡು ಲಕ್ಷಕ್ಕೆ ಬಂದು ನಿಂತಿದೆ. ದಿನಕ್ಕೆ 4 ಲಕ್ಷ ಆಗುತ್ತಿದ್ದ ಬಂಕ್ ನಲ್ಲೀಗ 70, 80 ಸಾವಿರವಷ್ಟೇ ವ್ಯಾಪಾರ ಆಗುತ್ತಿದೆ.

ಸಣ್ಣಪುಟ್ಟ ಅಂಗಡಿಗಳು ಬಂದ್

ಮಂಡ್ಯ ಹೊರವಲಯದಲ್ಲಿ ಬದುಕು ಕಟ್ಟಿಕೊಂಡಿದ್ದ ಸಣ್ಣ ಪುಟ್ಟ ಢಾಬಾಗಳು, ಟೀ ಅಂಗಡಿಗಳು, ಬೇಕರಿಗಳು, ಎಳನೀರು, ಹೂವು, ಹಣ್ಣಿನ ವ್ಯಾಪಾರಿಗಳಿಗೆ ಬೆಂಗಳೂರು-ಮೈಸೂರು ಮಾರ್ಗದಲ್ಲಿ ಚಲಿಸುವ ಪ್ರಯಾಣಿಕರೇ ಆದಾಯದ ಮೂಲ. ಈಗ ಹೊರಗಿನ ಯಾವ ವಾಹನಗಳು ಇವರ ಬಳಿಗೆ ಬರುತ್ತಿಲ್ಲ. ನಗರದಲ್ಲಿರುವ ಜನರು ಇವರತ್ತ ಸುಳಿಯಲ್ಲ. ಹಾಗಾಗಿ ಇವರಿಗೆಲ್ಲ ವ್ಯಾಪಾರವೇ ಇಲ್ಲದೆ ಬಂದ್ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

nudikarnataka.com
ಮಹಾರಾಜ ಹೋಟೆಲ್ ಹೊಟೇಲ್ ಗೂ ಗ್ರಾಹಕರ ಕೊರತೆ

ರಸ್ತೆ ಭಣ ಭಣ

ಮಂಡ್ಯದಲ್ಲಿ ಈಗ ಟ್ರಾಫಿಕ್ ಕಿರಿಕಿರಿ ಇಲ್ಲ.ಮೊದಲಿನ ಹಾಗೆ ವಾಹನಗಳು ಬರದ ಕಾರಣ ಟ್ರಾಫಿಕ್ ಪೋಲಿಸರ ಕೆಲಸ ಬಹಳ ಸಲೀಸಾಗಿದೆ. ಶನಿವಾರ, ಭಾನುವಾರ ಬಂತೆಂದರೆ ವಾಹನಗಳ ಕಂಟ್ರೋಲ್ ಮಾಡುತ್ತಾ ಟ್ರಾಫಿಕ್ ಪೋಲಿಸರು ಹೈರಾಣಾಗಿ ಹೋಗುತ್ತಿದ್ದರು. ಆದರೆ ನಿನ್ನೆ ಭಾನುವಾರ ಯಾವ ಸಿಗ್ನಲ್ ನಲ್ಲಿ ಟ್ರಾಫಿಕ್ ಪೋಲಿಸರಿರಲಿಲ್ಲ. ಒಂದಷ್ಟು ವಾಹನಗಳು ರಸ್ತೆಯಲ್ಲಿ ಸಂಚರಿಸುತ್ತಿದ್ದವು.

ಹೆದ್ದಾರಿ ಹೊಡೆತ

ಆಧುನೀಕರಣದ ಹೊಡೆತ ಹೇಗಿದೆ ಎಂದರೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಪ್ರವಾಸೋದ್ಯಮ ಸ್ಥಳಗಳಾದ ಶ್ರೀರಂಗಪಟ್ಟಣ, ಮದ್ದೂರಿನಲ್ಲಿ ಹೆದ್ದಾರಿ ನಂಬಿಕೊಂಡಿದ್ದ ಹೆಚ್ಚು ವರ್ತಕರಿದ್ದರು. ಈ ಭಾಗದಲ್ಲಿ ಬದುಕು ಕಟ್ಟಿಕೊಂಡಿದ್ದ ಸಣ್ಣಪಟ್ಟ ವ್ಯಾಪಾರಿಗಳು, ಟೀ-ಕಾಫಿ ಅಂಗಡಿ, ಗೂಡಂಗಡಿಗಳು, ಟಯರ್ ಪಂಕ್ಚರ್ ಅಂಗಡಿ, ಕಾರ್, ಮೆಕ್ಯಾನಿಕ್ ಶಾಪ್, ಪೆಟ್ರೋಲ್ ಬಂಕ್, ಹೋಟೆಲ್ ಉದ್ಯಮ ಸೇರಿದಂತೆ ಹಲವು ರೀತಿಯ ವಾಣಿಜ್ಯ ಉದ್ಯಮಗಳನ್ನು ನಂಬಿ ಜೀವನ ಸಾಗಿಸುತ್ತಿದ್ದರು. ಈಗ ಇವರೆಲ್ಲರ ಆದಾಯಕ್ಕೆ ಕಲ್ಲು ಬಿದ್ದಿದೆ. ಅವರ ಜೀವನ ಕೂಡ ದುಸ್ಥಿತಿಗೆ ಇಳಿದಿದೆ. ರಾಷ್ಟ್ರೀಯ ಹೆದ್ದಾರಿ ಒಂದು ವರ್ಗದ ಜನರಿಗೆ ಬೇಕಾದರೆ, ಅವರನ್ನೆ ನಂಬಿ ಬದುಕು ರೂಪಿಸಿಕೊಂಡಿದ್ದ ಮತ್ತೊಂದು ವರ್ಗದ ಜನರಿಗೆ ಮಾರಕವಾಗಿ ಪರಿಣಮಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!