ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ಮಂಡ್ಯ ಜಿಲ್ಲೆಯಾದ್ಯಂತ ಸೆಪ್ಟೆಂಬರ್ 13 ರಂದು ರಾಷ್ಟ್ರೀಯ ಲೋಕ್-ಅದಾಲತ್ನ್ನು ಹಮ್ಮಿಕೊಂಡಿದ್ದು, ಮಂಡ್ಯ ಜಿಲ್ಲೆಯಲ್ಲಿ ಬರುವಂತಹ 7 ತಾಲ್ಲೂಕುಗಳಲ್ಲಿಯೂ ಸಹ ಲೋಕ್ ಅದಾಲತ್ ಮುಖಾಂತರ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಪೂರ್ವಭಾವಿ ಬೈಠೆಕ್ಗಳನ್ನು ನಡೆಸಲಾಗುವುದು ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಸುಬ್ರಮಣ್ಯ ಜೆ.ಎನ್ ತಿಳಿಸಿದರು.
ಮಂಡ್ಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆಸ್ತಿ ವಿವಾದಗಳನ್ನು ಒಳಗೊಂಡಂತೆ ಸಿವಿಲ್ ವ್ಯಾಜ್ಯಗಳು, ವಿಭಾಗದ ದಾವೆಗಳು, ಹಣವಸೂಲಾತಿ ದಾವೆಗಳು, ನಿರ್ದಿಷ್ಟ ಪರಿಹಾರ ಕಾಯ್ದೆಯಡಿ ದಾಖಲಿಸಿರುವ ದಾವೆಗಳು, (MVC) ಮೋಟಾರು ವಾಹನಗಳ ಪ್ರಕರಣಗಳು, MMRD ಪ್ರಕರಣಗಳು, ಜೀವನಾಂಶ ಪ್ರಕರಣ, ದಾಂಪತ್ಯ ಪುನರ್ ಸ್ಥಾಪನೆ ಪ್ರಕರಣಗಳು, ರಾಜಿ ಆಗಬಹುದಾದಂತಹ ಕ್ರಿಮಿನಲ್ ಪ್ರಕರಣಗಳನ್ನು ಮತ್ತು ಚೆಕ್ ಬೌನ್ಸ್ ಪ್ರಕರಣಗಳು, LAC ಪ್ರಕರಣಗಳು, Exectution ಪ್ರಕರಣಗಳನ್ನು ರಾಜಿಗೆ ತೆಗೆದುಕೊಂಡು ಆಯಾ ನ್ಯಾಯಾಲಯಗಳಲ್ಲಿ ಲೋಕ್ ಅದಾಲತ್ ನ್ಯಾಯಾಲಯಗಳನ್ನು ರಚಿಸಿ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಲೋಕ ಅದಾಲತ್ ಪೀಠದಲ್ಲಿ ನ್ಯಾಯಾಧೀಶರು ಮತ್ತು ನುರಿತ ವಕೀಲರು ಕುಳಿತು ವಾದಿ-ಪ್ರತಿವಾದಿಗಳನ್ನು ಕೂರಿಸಿಕೊಂಡು ಅವರ ಮನವೊಲಿಸಿ ವ್ಯಾಜ್ಯಕ್ಕೆ ಅವರ ಸಮಕ್ಷಮದಲ್ಲೇ ಪರಿಹಾರ ಕಂಡು ಕೊಳ್ಳಬಹುದಾಗಿರುತ್ತದೆ ಹಾಗೂ ಲೋಕ ಅದಾಲತ್ ಮೂಲಕ ವ್ಯಾಜ್ಯ ಇತ್ಯರ್ಥಪಡಿಸಿ ಕೊಂಡರೆ ನ್ಯಾಯಾಲಯದ ಶುಲ್ಕ ವಿಧಿಸುವುದಿಲ್ಲ, ಈಗಾಗಲೇ ಕಟ್ಟಿರುವಂತಹ ನ್ಯಾಯಾಲಯದ ಶುಲ್ಕವನ್ನು ಸಹ ಮರಳಿ ನೀಡಲಾಗುತ್ತದೆ ಎಂದರು.
ಲೋಕ ಅದಾಲತ್ ನಲ್ಲಿ ಪ್ರಕರಣಗಳು ಇತ್ಯರ್ಥಗೊಂಡರೆ ಅದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಾಧ್ಯವಿಲ್ಲ. ಸದರಿ ತೀರ್ಮಾನವು ನ್ಯಾಯಾಲಯ ನೀಡಿದ ತೀರ್ಮಾನದಷ್ಟೇ ಮೌಲ್ಯ ಹೊಂದಿರುತ್ತದೆ ಎಂದರು.
ವ್ಯಾಜ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಲೋಕ್ ಅದಾಲತ್ ಸಹಕಾರಿ: ನ್ಯಾ ಆನಂದ್ ಎಂ
ವ್ಯಾಜ್ಯ ಮುಕ್ತ ಸಮಾಜ ನಿರ್ಮಾಣ ಮಾಡುವುದು ಲೋಕ್ ಅದಾಲತ್ ನ ಮುಖ್ಯ ಉದ್ದೇಶವಾಗಿದ್ದು ಲೋಕ್ ಅದಾಲತ್ ನಲ್ಲಿ ರಾಜಿ ಮಾಡಬಹುದಾದ ಪ್ರಕರಣಗಳ ಕಕ್ಷಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವಂತೆ ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆನಂದ್ ಎಂ ತಿಳಿಸಿದರು.
ಲೋಕ ಅದಾಲತ್ನಲ್ಲಿ ನ್ಯಾಯಾಲಯಗಳಲ್ಲಿ ಬಾಕಿ ಇರುವಂತಹ ಪ್ರಕರಣಗಳ ಜೊತೆಗೆ, ನ್ಯಾಯಾಲಯಕ್ಕೆ ದಾಖಲಾಗುವ ಮುನ್ನ ಅಂದರೆ, ವ್ಯಾಜ್ಯಪೂರ್ವ ಪ್ರಕರಣಗಳು (ಬ್ಯಾಂಕ್ ಸಾಲ ವಸೂಲಾತಿ ಪ್ರಕರಣಗಳು, ವಿದ್ಯುತ್ ಹಾಗೂ ನೀರಿನ ಶುಲ್ಕಗಳು, ಕಾರ್ಮಿಕ ವಿವಾದ ಪ್ರಕರಣಗಳು, ರಾಜೀಯಾಗಬಲ್ಲ ಅಪರಾಧಿಕ ಪ್ರಕರಣಗಳು, ವೈವಾಹಿಕ ಕುಟುಂಬ ನ್ಯಾಯಾಲಯ ಹಾಗೂ ಇತರೆ ಸಿವಿಲ್ ಪ್ರಕರಣಗಳು) ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಉಭಯ ಪಕ್ಷಗಾರರಿಗೆ ನೋಟೀಸ್ ನೀಡಿ ಕರೆಸಿ ಪ್ರಾಧಿಕಾರದ ವತಿಯಿಂದ ಪೂರ್ವಭಾವಿ ಬೈಠಕ್ ನಡೆಸಿ ಅದಾಲತ್ನಲ್ಲಿ ರಾಜಿಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದರು.
ಇಂತಹ ಪ್ರಕರಣಗಳಿಗೆ ನ್ಯಾಯಾಲಯಕ್ಕೆ ಶುಲ್ಕ ಪಾವತಿಸುವ ಅವಶ್ಯಕತೆ ಇರುವುದಿಲ್ಲ. ವಕೀಲರ ಮುಖಾಂತರ ಅಥವಾ ಖುದ್ದಾಗಿ ಪ್ರಾಧಿಕಾರಕ್ಕೆ ಭೇಟಿ ನೀಡಿ ಪ್ರಕರಣವನ್ನು ರಾಜಿಮಾಡಿಕೊಳ್ಳಬಹುದಾಗಿರುತ್ತದೆ. ಇದರಿಂದ ಪ್ರಕರಣವು ಶೀಘ್ರವಾಗಿ ಇತ್ಯರ್ಥವಾಗುತ್ತದೆ ಹಾಗೂ ಹಣ ಹಾಗೂ ಅಮೂಲ್ಯವಾದ ಸಮಯ ಉಳಿತಾಯವಾಗುತ್ತದೆ ಎಂದರು.
ಈ ಬಾರಿಯ ಲೋಕ್-ಅದಾಲತ್ನಲ್ಲಿ ಕಕ್ಷಿದಾರರ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥಪಡಿಸಿ ಕಕ್ಷಿದಾರರಿಗೆ ಅನುಕೂಲವಾಗುವ ರೀತಿಯಲ್ಲಿ ನ್ಯಾಯಧಾನ ಮಾಡಬೇಕೆಂಬ ಇಚ್ಫೆಯಿಂದ ಪ್ರಕರಣಗಳನ್ನು ತೆಗೆದುಕೊಂಡಿದ್ದು, ಜನ ಸಾಮಾನ್ಯರು ಹಾಗೂ ಕಕ್ಷಿದಾರರು ಇದರ ಸದುಪಯೋಗವನ್ನು ಪಡೆದುಕೊಂಡು ಲೋಕ್ ಅದಾಲತ್ನಲ್ಲಿ ಭಾಗವಹಿಸಿ ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವ ಮೂಲಕ ಲೋಕ್-ಅದಾಲತ್ ಅನ್ನು ಯಶಸ್ವಿಗೊಳಿಸಬೇಕು ಎಂದರು.
ಮಧ್ಯಸ್ಥಿಕೆ ಅಭಿಯಾನ
ನ್ಯಾಯಾಲಯಗಳಲ್ಲಿ ಬಾಕಿ ಇರುವ ರಾಜಿಯಾಗಬಹುದಾದ ಪ್ರಕರಣಗಳಲ್ಲಿ ರಾಜಿಸಂಧಾನವನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸಿಕೊಳ್ಳಲು ದಿನಾಂಕ 01.07.2025 ರಿಂದ 30.09.2025 ರವರೆಗೆ “90 ದಿನಗಳ ವಿಶೇಷ ಮಧ್ಯಸ್ಥಿಕೆ ಅಭಿಯಾನ”ವು ನಡೆಯುತ್ತಿರುತ್ತದೆ. ವಕೀಲರು ಹಾಗೂ ಕಕ್ಷಿದಾರರು ಸದರಿ ಅಭಿಯಾನದ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕರ್ನಾಟಕ ಸರ್ಕಾರವು ಪೊಲೀಸ್ ಇಲಾಖೆಯವರು ಸಂಚಾರಿ ಇ-ಚಲನ್ ಮೂಲಕ ವಿಧಿಸಿದ ದಂಡದ ಮೊತ್ತದಲ್ಲಿ ಶೇಕಡ 50ರಷ್ಟು ರಿಯಾಯಿತಿ ನೀಡಿ ಆದೇಶಿಸಲಾಗಿದ್ದು, ಈ ರಿಯಾಯಿತಿಯು ದಿನಾಂಕಃ 12.09.2025ರವರೆಗೆ ಮಾತ್ರ ಅನ್ವಯವಾಗುತ್ತಿದ್ದು ಸದರಿ ಕಾಲಾವಕಾಶವನ್ನು ಸದುಪಯೆಾೕಗಪಡಿಸಿಕೊಳ್ಳಬೇಕು ಎಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಅವರು ಮಾತನಾಡಿ ಸಂಚಾರಿ ಪೊಲೀಸ್ ಇ.ಚಲನ್ ದಂಡವು ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಿಗೂ ಅನ್ವಯವಾಗುತ್ತದೆ. ಪ್ರತಿ ದಿನ ಅಂದಾಜು 300 ಇ.ಚಲನ್ ಮೂಲಕ ದಂಡ ಪಾವತಿಯಾಗುತ್ತಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ರಾಜೇಂದ್ರ ಅವರು ಮಾತನಾಡಿ ನ್ಯಾಯಾಲಯಗಳಲ್ಲಿ ವ್ಯಾಜ್ಯ ನಡೆದಷ್ಟು ಕಕ್ಷಿದಾರರಿಗೆ ಒತ್ತಡ ಹಾಗೂ ಖರ್ಚು ಹೆಚ್ಚಾಗುತ್ತದೆ. ಇದರ ಬದಲಿಗೆ ಲೋಕ್ ಅದಾಲತ್ ನಲ್ಲಿ ರಾಜಿ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಪ್ರಧಾನ ಸಿವಿಲ್ ಹಿರಿಯ ನ್ಯಾಯಧೀಶರಾದ ಸಂದೀಪ್ ಸಾಲಿಯಾನ, ಸರ್ಕಾರಿ ಅಭಿಯೋಜಕರಾದ ವೆಂಕಟ ಲಕ್ಷ್ಮಮ್ಮ, ಕೆ.ಎಸ್.ಆರ್.ಟಿ.ಸಿ ಜಿಲ್ಲಾ ನಿಯಂತ್ರಕ ಬಸವರಾಜು, ವಕೀಲರ ಸಂಘದ ಕಾರ್ಯದರ್ಶಿ ಸಿದ್ದರಾಜು ಉಪಸ್ಥಿತರಿದ್ದರು.




