Friday, September 20, 2024

ಪ್ರಾಯೋಗಿಕ ಆವೃತ್ತಿ

ರಾಷ್ಟ್ರೀಯ ಯುವ ದಿನ…. ಸ್ವಾಮಿ ವಿವೇಕಾನಂದರ ಜನುಮ ದಿನ…..

ವಿವೇಕಾನಂದ ಎಚ್.ಕೆ

ಜನವರಿ 12………ನಾಳೆ…

ರಾಷ್ಟ್ರೀಯ ಯುವ ದಿನ,
ಸ್ವಾಮಿ ವಿವೇಕಾನಂದರ ಜನುಮ ದಿನ,
ನಮ್ಮೆಲ್ಲರ ಆತ್ಮಾವಲೋಕನ ದಿನ,
ಸ್ವಾಭಿಮಾನ ಜಾಗೃತ ದಿನ….

ಯುವ ಸಂದೇಶ.
ಸ್ವಾಮಿ ವಿವೇಕಾನಂದರ ಪಾತ್ರದಲ್ಲಿ…..

ನನ್ನ ಪ್ರೀತಿಯ ಸಹೋದರ ಸಹೋದರಿಯರೆ………

ನನ್ನ ನೆಲ ಭಾರತ ಇಂದು ಸರ್ವತಂತ್ರ ಸ್ವತಂತ್ರ ರಾಷ್ಟ್ರ. ವಿಭಜನೆಯ ನಂತರ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ಪ್ರದೇಶವೇ ನನ್ನ ಭಾರತ….

ಅಂದು ನಾನು ಚಿಕಾಗೋ ಭಾಷಣದಲ್ಲಿ ಹೇಳಿದ್ದೆ, ವಿಶ್ವ ಆಧ್ಯಾತ್ಮದ ತವರೂರು ಭಾರತ. ಸರ್ವ ಧರ್ಮ ಸಮನ್ವಯ ಮತ್ತು ಸಹೋದರತೆಯ ಸೌಹಾರ್ದ ನಾಡು ನಮ್ಮ ದೇಶ. ಅನೇಕ ನಿರಾಶ್ರಿತರಿಗೆ ಆಶ್ರಯ ನೀಡಿದ ನೆಲ ನಮ್ಮದು. ಇಡೀ ವಿಶ್ವಕ್ಕೆ ಧಾರ್ಮಿಕ ಸಹಾನುಭೂತಿಯನ್ನು ಕಲಿಸಿದ ದೇಶ. ಎಲ್ಲಾ ಧರ್ಮಗಳನ್ನು ಸತ್ಯ ಎಂದು ಒಪ್ಪಿಕೊಳ್ಳುವ ದೇಶ ಭಾರತ. ಧಾರ್ಮಿಕ ಸ್ವಾತಂತ್ರ್ಯದ ಹೆಮ್ಮೆಯ ಧರ್ಮ ಹಿಂದೂ ಧರ್ಮ ಎಂದು ಘಂಟಾಘೋಷವಾಗಿ ಹೇಳಿದ್ದೆ.

ಬಂಧುಗಳೇ ,
ಅಂದು ವಿದೇಶದಲ್ಲಿ ನನ್ನ ಧರ್ಮ ಮತ್ತು ದೇಶದ ಅಭಿಮಾನದಿಂದ ಅದರ ಘನತೆಯನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಇಲ್ಲಿನ ಕೊರತೆಗಳನ್ನು ಹೇಳದೆ ಕೇವಲ ಧರ್ಮದ ಶ್ರೇಷ್ಠತೆಯ ಬಗ್ಗೆ ಮಾತ್ರ ಮಾತನಾಡಿದೆ.

ಆದರೆ,……

ಇಂದು ಈ ಕ್ಷಣದಲ್ಲಿ ಅದೇ ಮಾತುಗಳನ್ನು ಪುನರುಚ್ಚಿರಿಸಲು ನನ್ನ ಗಂಟಲು ಹಿಡಿಯುತ್ತಿದೆ. ನಾಲಿಗೆ ತೊದಲುತ್ತಿದೆ. ಧ್ವನಿ ತಗ್ಗಿದೆ. ಮನಸ್ಸು ಆತ್ಮವಿಶ್ವಾಸ ಕಳೆದುಕೊಂಡಿದೆ……

ನನ್ನ ಭಾರತೀಯರೆ,…..

131 ವರ್ಷಗಳ ನಂತರವೂ ಅಸ್ಪೃಶ್ಯತೆ ಎಲ್ಲರ ಆತ್ಮಗಳಲ್ಲಿ ಇನ್ನೂ ಜೀವಂತವಿದೆ. ದೇವಸ್ಥಾನ ಮಠ ಮಂದಿರಗಳಲ್ಲಿ ಪ್ರತ್ಯೇಕತೆಯ ಪ್ರವೇಶದ ಆಚರಣೆ ಈಗಲೂ ಇದೆ‌‌. ದಲಿತರ ಮೇಲೆ ಜಾತಿಯ ಕಾರಣಕ್ಕೆ ಹಲ್ಲೆಗಳಾಗುತ್ತಿವೆ. ಹುಟ್ಟಿನಿಂದ ಸಾಯುವವರೆಗೂ ಎಲ್ಲಾ ಕೆಲಸಗಳಿಗೂ ಜಾತಿಯ ಸರ್ಟಿಫಿಕೇಟ್ ಅನಿವಾರ್ಯವಾಗಿದೆ. ಜಾತಿಯ ಜನಗಣತಿ ನಡೆಯುತ್ತಿದೆ. ಜಾತಿಯ ಅಸಮಾನತೆಯಿಂದ ಮೀಸಲಾತಿಯೂ ಅಸ್ತಿತ್ವದಲ್ಲಿದೆ.

ಭಾರತದ ಮಕ್ಕಳೇ,……

ಹೆಣ್ಣನ್ನು ಪೂಜಿಸಲ್ಪಡುವ ದೇಶ ನನ್ನದೆಂಬ ಹೆಮ್ಮೆ ನನಗಿತ್ತು. ಆದರೆ, ವರದಕ್ಷಿಣೆ ರೂಪದಲ್ಲಿ ಹೆಣ್ಣಿನ ಮಾರಾಟ, ಹೆಣ್ಣು ಭ್ರೂಣ ಹತ್ಯೆ , ವೇಶ್ಯಾವಾಟಿಕೆ, ಸಾರ್ವಜನಿಕ ಸಾಮೂಹಿಕ ಅತ್ಯಾಚಾರ ಪ್ರತಿನಿತ್ಯದ ಘಟನೆಗಳೇ ಆಗಿರುವುದರಿಂದ ಅದನ್ನು ನಾನು ಹೇಗೆ ವರ್ಣಿಸಲಿ.

ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಅಪೂರ್ವ ಅವಕಾಶ ಮತ್ತು ಪಾವಿತ್ರ್ಯವನ್ನು ಹಣ ಹೆಂಡ ಸೀರೆ ಪಂಚೆ ಜಾತಿ ಧರ್ಮಗಳಿಗೆ ಮಾರಿಕೊಳ್ಳುತ್ತಿರುವಾಗ ದೇಶದ ಬಗ್ಗೆ ಹೇಗೆ ಪ್ರತಿಕ್ರಿಯಿಸಲಿ.

ಹಸಿವಿಗಿಂತ ಹಸು ಶ್ರೇಷ್ಠ,
ರಾಮನ ಆದರ್ಶಕ್ಕಿಂತ ರಾಮ ಮಂದಿರ ಶ್ರೇಷ್ಠ,
ಜೀವಕ್ಕಿಂತ ಮಸೀದಿ ಶ್ರೇಷ್ಠ,
ಪ್ರಾಣಕ್ಕಿಂತ ಚರ್ಚು ಶ್ರೇಷ್ಠ,

ಇಸ್ಲಾಂ ಉಳಿಸಲು ಬಾಂಬುಗಳು,
ಹಿಂದೂ ಧರ್ಮ ಉಳಿಸಲು ಬಂದೂಕುಗಳು,
ಕ್ರಿಶ್ಚಿಯನ್ ಧರ್ಮ ಉಳಿಸಲು ಮತಾಂತರಗಳು,,

ಇದೇ ಏನು ನನ್ನ ನೆಲದ ಸ್ವಭಾವ.

ಬರ್ತ್ ಸರ್ಟಿಫಿಕೇಟಗೂ, ಡೆತ್ ಸರ್ಟಿಫಿಕೇಟಗೂ ಲಂಚ ಪಡೆಯುವ ದೇಶವನ್ನು ವಿವರಿಸುವುದಾದರೂ ಹೇಗೆ ?

ಉಕ್ಕಿನ ಶರೀರದ ಯುವಕರೇ,…..

ಈ ದೇಶದ ಭವಿಷ್ಯ ನೀವೇ ಎಂದು ಕನಸು ಕಂಡಿದ್ದೆ.

ಆದರೆ ,….

ಓ ನನ್ನ ಭಾರತದ ಯುವಕರೇ ,

ಕೇಸರಿ ಕೆಂಪು ನೀಲಿ ಹಸಿರು ಬಾವುಟಗಳ ಮುಖವಾಡಗಳಲ್ಲಿ ಹುದುಗಿರುವಿರಿ. ಕ್ರಿಯಾಶೀಲ ಚಿಂತನೆ ಮಾಡದೆ ದಾಸ್ಯಕ್ಕೆ, ಗುಲಾಮಗಿರಿಗೆ ಒಳಗಾಗಿ ನೀರ್ವೀರ್ಯರಾಗಿರುವಿರಿ.

ಅದು ಈ ನೆಲದ ಗುಣವಲ್ಲ. ರಕ್ತಕ್ಕೆ ರಕ್ತ ಕೊಲೆಗೆ ಕೊಲೆ‌ ಈ ಮಣ್ಣಿನ ಸ್ವಭಾವವಲ್ಲ………

ಹಿಂದುವೋ, ಮುಸ್ಲಿಮೋ, ಕ್ರಿಶ್ಚಿಯನ್ನೋ, ಸಿಖ್ಖೋ, ಬೌದ್ಧನೋ, ಜೈನನೋ, ಪಾರ್ಸಿಯೋ ಏನಾದರೂ ಆಗಿರು ಅದು ನಿನ್ನ ವೈಯಕ್ತಿಕ ಗುರುತು ಮಾತ್ರ. ಈ ನೆಲದ ನೀವೆಲ್ಲರೂ ಭಾರತೀಯರು.
ನಿಮ್ಮ ನಿಷ್ಠೆ ಈ ನೆಲಕ್ಕೆ ಮಾತ್ರ.

ಏಳಿ, ಎದ್ದೇಳಿ, ಎಚ್ಚರಗೊಳ್ಳಿ,…….

ದಿಕ್ಕರಿಸಿ ಜಾತಿ ಸಂಕೋಲೆಯನ್ನು, ಬೆಳೆಸಿಕೊಳ್ಳಿ ವಿಶಾಲ ಮನೋಭಾವವನ್ನು.

ಅಂದು ನಾನು ಚಿಕಾಗೋದಲ್ಲಿ ಬಾವಿ ಕಪ್ಪೆ ಮತ್ತು ಸಮುದ್ರದ ಕಪ್ಪೆಯ ಉದಾಹರಣೆ ನೀಡಿದ್ದೆ. ಇಂದು ಅದೇ ಉದಾಹರಣೆಯನ್ನು ಭಾರತೀಯ ಯುವಜನಾಂಗವನ್ನು ಕುರಿತು ಹೇಳಬೇಕಿದೆ.

ವಿಶಾಲ ಚಿಂತನೆಯ ಮಾದರಿಯಾಗದೆ ಬಾವಿ ಕಪ್ಪೆಯಾಗಿರುವಿರಿ. ನನ್ನ ದೃಷ್ಟಿಕೋನವನ್ನೇ ತಿರುಚಿ ಸಂಕ್ಷಿಪ್ತಗೊಳಿಸಿರುವಿರಿ.
ವಿವೇಚನೆ ಕಳೆದುಕೊಂಡಿರುವಿರು. ಜಾತಿ ಧರ್ಮ ಪಂಥಗಳ ಆಧಾರದಲ್ಲಿ ಸಣ್ಣ ಸಣ್ಣ ಗುಂಪುಗಳನ್ನು ಕಟ್ಟಿಕೊಂಡು ಅಸಹನೆಯಿಂದ ದೇಶವನ್ನು ನಿಮ್ಮನ್ನೂ ವಂಚಿಸಿಕೊಳ್ಳುತ್ತಿರುವಿರಿ.

ಆಧುನಿಕ ಭಾರತೀಯ ಯುವಕರ ದೇಹ ಉಕ್ಕಿನಂತಿರಲಿ. ಮನಸ್ಸಿನಲ್ಲಿ ಪ್ರೀತಿ ಕರುಣೆ ತುಂಬಿರಲಿ.
ಉಡಾಫೆ ಬಿಡಿ. ಮತಾಂಧರಾಗಬೇಡಿ.
ಸಾರ್ವಜನಿಕ ಸೇವೆಯ – ದೇಶಭಕ್ತಿಯ ಹೆಸರಿನಲ್ಲಿ ದೇಶದ ಸಮಾಜದ ವಿಭಜನೆಗೆ ಕಾರಣರಾಗದೆ ತಾಳ್ಮೆವಹಿಸಿ.

ದೇವರು ಧರ್ಮ ನಮ್ಮ ಒಳಿತಿಗಾಗಿ, ಸಮಾಜದ ಕ್ರಮಬದ್ಧತೆಗಾಗಿ, ಬದುಕಿನ ಸಾರ್ಥಕತೆಗಾಗಿ ಉಪಯೋಗವಾಗಬೇಕೆ ಹೊರತು ಮಾನವ ಜನಾಂಗದ ವಿನಾಶಕ್ಕಲ್ಲ.
ಇದನ್ನು ಮರೆತು
ವಿಶ್ವಗುರುವಾಗುವ ಭಾರತದ ಅವಕಾಶಗಳನ್ನು ನಾಶಮಾಡುತ್ತಿರುವಿರಿ.

ಇನ್ನಾದರೂ ಎಚ್ವೆತ್ತುಕೊಳ್ಳಿ.
ನನ್ನ ಕನಸಿನ ಸಮಾನತೆಯ, ವೈಚಾರಿಕತೆಯ, ಸಹೋದರತೆಯ, ಸರ್ವ ಧರ್ಮ ಸಮನ್ವಯದ ಭಾರತವನ್ನು ಮರು ಸೃಷ್ಟಿಸಲು ನಿಮ್ಮ ಎಲ್ಲಾ ಪ್ರಯತ್ನ ಸಾಗಲಿ ಎಂದು ಆಶಿಸುತ್ತಾ…….

ಜೈ ಭಾರತ್………..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!