Tuesday, September 17, 2024

ಪ್ರಾಯೋಗಿಕ ಆವೃತ್ತಿ

2 ದಿನಗಳಲ್ಲಿ ನೀಟ್-ಯುಜಿ ಅಂತಿಮ ಫಲಿತಾಂಶ ಪ್ರಕಟ: ಧರ್ಮೇಂದ್ರ ಪ್ರಧಾನ್

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ನೀಟ್-ಯುಜಿ 2024ರ ಅಂತಿಮ ಫಲಿತಾಂಶವನ್ನು ಎರಡು ದಿನಗಳಲ್ಲಿ ಬಿಡುಗಡೆ ಮಾಡಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಂಗಳವಾರ ತಿಳಿಸಿದ್ದಾರೆ. ಹಾಗೆಯೇ ಇಂದಿನಿಂದ (ಜುಲೈ 23) ಸುಪ್ರೀಂ ಕೋರ್ಟ್‌ನ ಅವಲೋಕನಗಳ ಆಧಾರದ ಮೇಲೆ ನೀಟ್-ಯುಜಿ ಮೆರಿಟ್ ಪಟ್ಟಿಯನ್ನು ನವೀಕರಿಸಲಾಗುವುದು ಎಂದು ಹೇಳಿದ್ದಾರೆ.

ನೀಟ್‌-ಯುಜಿ 2024 ರದ್ದುಗೊಳಿಸಿ ಹೊಸದಾಗಿ ಪರೀಕ್ಷೆ ನಡೆಸುವುದನ್ನು ನಿರಾಕರಿಸಿ ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ಪ್ರಕಟಿಸಿದೆ. ನೀಟ್-ಯುಜಿ ಪರೀಕ್ಷೆಯ ಫಲಿತಾಂಶಗಳು ಅಮಾನ್ಯವಾಗಿದೆ ಅಥವಾ ಪರೀಕ್ಷೆಯ ಸಮಗ್ರತೆಯ ಪ್ರಮುಖ ಉಲ್ಲಂಘನೆಯಾಗಿದೆ ಎಂದು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

ಇದಾದ ಬೆನ್ನಲ್ಲೇ ನೀಟ್-ಯುಜಿ ಫಲಿತಾಂಶಗಳ ಬಗ್ಗೆ ಧರ್ಮೇಂದ್ರ ಪ್ರಧಾನ್ ಮಾಹಿತಿ ನೀಡಿದ್ದಾರೆ. “ಯಾರಾದರೂ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗಿರುವುದು ಕಂಡುಬಂದರೆ, ಅವರನ್ನು ಬಿಡಲಾಗುವುದಿಲ್ಲ. ಯಾವುದೇ ರೀತಿಯ ಉಲ್ಲಂಘನೆಯಾದರೂ ಸಹಿಸಲಾಗದು. ಪರೀಕ್ಷೆಗಳ ಪಾವಿತ್ರ್ಯತೆ ನಮಗೆ ಅತ್ಯುನ್ನತವಾಗಿದೆ” ಎಂದು ತಿಳಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠ ಆಪಾದಿತ ಪ್ರಶ್ನೆ ಪತ್ರಿಕೆ ಸೋರಿಕೆ ಕಾರಣ ನೀಟ್-ಯುಜಿ 2024 ಪರೀಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದೆ. ಪ್ರಸ್ತುತ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಸಂಪೂರ್ಣ ಪರೀಕ್ಷೆಯನ್ನು ರದ್ದುಗೊಳಿಸುವುದು ಸಮರ್ಥನೀಯವಲ್ಲ ಎಂದು ನ್ಯಾಯಾಲಯ ತೀರ್ಮಾನಿಸಿದೆ.

ಇನ್ನು ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಕೇಂದ್ರೀಯ ತನಿಖಾ ದಳವು ಸುಪ್ರೀಂ ಕೋರ್ಟ್‌ಗೆ ದೃಢಪಡಿಸಿದೆ. ಜೂನ್‌ನಲ್ಲಿ ಪ್ರಕರಣದ ತನಿಖೆ ಆರಂಭಿಸಿದ ನಂತರ ಸಿಬಿಐ ನೀಡಿದ ಮೊದಲ ಅಧಿಕೃತ ಹೇಳಿಕೆ ಇದಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!