Tuesday, September 17, 2024

ಪ್ರಾಯೋಗಿಕ ಆವೃತ್ತಿ

ಪರೀಕ್ಷಾ ವಿವಾದ| NEET – UG ಮರುಪರೀಕ್ಷೆಯಿಲ್ಲ ಎಂದ ಸುಪ್ರೀಂ ಕೋರ್ಟ್

ವ್ಯವಸ್ಥಿತವಾಗಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದಕ್ಕೆ ಸಾಕಷ್ಟು ಪುರಾವೆಯಿಲ್ಲದ ಕಾರಣ ನೀಟ್‌ – ಯುಜಿ ಪರೀಕ್ಷೆಯನ್ನು ಮರು ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.ಒಂದು ವೇಳೆ ನೀಟ್‌ – ಯುಜಿ ಮರುಪರೀಕ್ಷೆ ನಡೆಸಿದರೆ ಈಗಾಗಲೇ ಹಾಜರಾಗಿದ್ದ 24 ಲಕ್ಷ ವಿದ್ಯಾರ್ಥಿಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಕೋರ್ಟ್ ಒತ್ತಿ ಹೇಳಿತು.

ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಮೂವರು ಸದಸ್ಯರ ಪೀಠ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಇತರ ಅಕ್ರಮಗಳ ಆಧಾರದ ಮೇಲೆ ಮೇ 5 ರಂದು ಕೈಗೊಳ್ಳಲಾಗಿದ್ದ ನೀಟ್‌ – ಯುಜಿ ಪರೀಕ್ಷೆಯನ್ನು ರದ್ದುಗೊಳಿಸಿ ಮರುಪರೀಕ್ಷೆ ನಡೆಸಬೇಕೆಂದು ಸಲ್ಲಿಸಲಾಗಿದ್ದ ಅರ್ಜಿಗಳ ಬ್ಯಾಚ್‌ಅನ್ನು ವಿಚಾರಣೆ ನಡೆಸಿ ತೀರ್ಪನ್ನು ಆದೇಶಿಸಿದರು.

ತೀರ್ಪು ನೀಡುವ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌, ರಾಷ್ಟ್ರೀಯ ಪರೀಕ್ಷಾ ಮಂಡಳಿ ಹಾಗೂ ಐಐಟಿ ಮದ್ರಾಸ್‌ ಪ್ರಸ್ತುತಪಡಿಸಿದ ಅಂಕಿಅಂಶಗಳನ್ನು ಪರಿಶೀಲಿಸಲಾಗಿದ್ದು, ಬೃಹತ್‌ ಮಟ್ಟದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ ಎಂದು ತಿಳಿಸಿದರು.

“ಈ ಸಂದರ್ಭದಲ್ಲಿ ವ್ಯವಸ್ಥಿತವಾಗಿ ಪರೀಕ್ಷೆಯ ಪಾವಿತ್ರ್ಯತೆಯ ಮೇಲೆ ಧಕ್ಕೆಯಾಗಿದೆ ಎಂಬುದನ್ನು ನಿರ್ಧರಿಸಲು ಸಾಕಷ್ಟು ದಾಖಲೆಗಳ ಕೊರತೆಯಿದೆ. ಸಿಬಿಐ ಕೈಗೊಂಡಿರುವ ವಿಚಾರಣೆ ಇನ್ನು ಅಂತಿಮತೆಯನ್ನು ತಲುಪಿಲ್ಲ. ಕೋರ್ಟ್‌ ಕೂಡ ಕೇಂದ್ರ ಸರ್ಕಾರ 571 ನಗರಗಳ 4750 ಕೇಂದ್ರಗಳ ಫಲಿತಾಂಶದಲ್ಲಿ ಏನು ಕ್ರಮ ಕೈಗೊಳ್ಳಬೇಕೆಂದು ನಿರ್ದೇಶಿಸಿದೆ. ದತ್ತಾಂಶ ವಿಶ್ಲೇಷಣೆಯ ಆಧಾರದ ಮೇಲೆ ತನ್ನ ಸ್ಥಾನವನ್ನು ಸೂಚಿಸುವ ಐಐಟಿ ಮದ್ರಾಸ್‌ನ ವಿಶ್ಲೇಷಣೆಯನ್ನು ಸರ್ಕಾರ ದಾಖಲಿಸಿದೆ” ಎಂದು ಮುಖ್ಯ ನ್ಯಾಯಮೂರ್ತಿಗಳು ತಮ್ಮ ಆದೇಶದಲ್ಲಿ ಹೇಳಿದ್ದಾರೆ.

ಹಜಾರಿಭಾಗ್‌ ಹಾಗೂ ಪಾಟ್ನಾದಲ್ಲಿ ಸೋರಿಕೆಯಾದ ಪ್ರಶ್ನೆ ಪತ್ರಿಕೆಯಲ್ಲಿ ಯಾವುದೇ ರೀತಿಯ ವಿವಾದವಿರಲ್ಲಿಲ್ಲ. ಈ ಕೇಂದ್ರದಲ್ಲಿ ಹಾಜರಾಗಿದ್ದ 155 ವಿದ್ಯಾರ್ಥಿಗಳು ಪತ್ರಿಕೆ ಸೋರಿಕೆಯಿಂದ ಪ್ರತ್ಯಕ್ಷವಾಗಿ ಪ್ರಯೋಜನ ಪಡೆದಿಲ್ಲ. ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಪ್ರಯೋಜನ ಪಡೆದವರ ಬಗ್ಗೆ ಸಿಬಿಐ ಮತ್ತಷ್ಟು ದಾಖಲೆಗಳನ್ನು ಬಿಡುಗಡೆ ಮಾಡಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸುಪ್ರೀಂ ಕೋರ್ಟ್ ಆದೇಶದಲ್ಲಿ ತಿಳಿಸಿದೆ.

ಒಂದು ವೇಳೆ ಮರು ಪರೀಕ್ಷೆ ಕೈಗೊಂಡರೆ ಪ್ರವೇಶ ದಿನಾಂಕದಲ್ಲಿ ತೊಂದರೆ, ವೈದ್ಯಕೀಯ ಕೋರ್ಸ್‌ನಲ್ಲಿ ಪರಿಣಾಮ, ಭವಿಷ್ಯದಲ್ಲಿ ಉತ್ತಮ ವೃತ್ತಿಪರರ ಧಕ್ಕೆ ಹಾಗೂ ಮೀಸಲಾತಿ ಆಧಾರದಲ್ಲಿ ಆಯ್ಕೆಯಾದ ತುಳಿತಕ್ಕೆ ಒಳಗಾದ ಸಮುದಾಯದ ವಿದ್ಯಾರ್ಥಿಗಳ ಭವಿಷ್ಯಕ್ಕೂ ತೊಂದರೆಯಾಗಲಿದೆ ಎಂದು ಕೋರ್ಟ್ ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!