ಮಂಡ್ಯನಗರದಲ್ಲಿ ಹಾಲಿ ಇರುವ ಪ್ರವಾಸಿ ಮಂದಿರದ ಆವರಣದಲ್ಲಿರುವ ಉದ್ಯಾನವನದ ಖಾಲಿ ನಿವೇಶನದಲ್ಲಿ ಹೊಸ ಪ್ರವಾಸಿ ಮಂದಿರ ನಿರ್ಮಿಸುವ ಮಂಡ್ಯ ಶಾಸಕ ರವಿಕುಮಾರ್ ಗಣಿಗ ಅವರ ಪ್ರಸ್ತಾವನೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸಮ್ಮತಿ ಸೂಚಿಸಿದ್ದಾರೆ.
ಮಂಡ್ಯ ನಗರದ ಪ್ರವಾಸಿ ಮಂದಿರವು 1963 ರಲ್ಲಿ ನಿರ್ಮಾಣವಾಗಿದ್ದು, ಹಳೆಯ ಕಟ್ಟಡವಾಗಿದೆ. ಈ ಪ್ರವಾಸಿ ಮಂದಿರವು ನೆಲಮಹಡಿ. ಮೊದಲನೇ ಮಹಡಿ ಒಳಗೊಂಡಿದ್ದು, ವಿ.ಐ.ಪಿ-3, ವಿ.ವಿ.ಐ.ಪಿ.-1 ಹಾಗೂ ಇತರೆ 15 ಕೊಠಡಿಗಳನ್ನು ಹೊಂದಿದೆ. ಮಂಡ್ಯ ನಗರವು ಜಿಲ್ಲಾ ಕೇಂದ್ರವಾಗಿದ್ದು, ಬೆಂಗಳೂರು ಮೈಸೂರು ಮಾರ್ಗ ಮಧ್ಯ ಇರುವುದರಿಂದ ಹಾಗೂ ಜನಪ್ರತಿನಿಧಿಗಳು, ಅಧಿಕಾರಿಗಳು ಇಲ್ಲಿಗೆ ಹೆಚ್ಚಾಗಿ ಬರುವುದರಿಂದ ಹಾಗೂ ಮೇಲ್ಕಂಡ ಪ್ರವಾಸಿ ಮಂದಿರವು ತುಂಬಾ ಹಳೆಯದಾಗಿರುವುದರಿಂದ ಇಲ್ಲಿ ಹೊಸ ಪ್ರವಾಸಿ ಮಂದಿರ ನಿರ್ಮಾಣ ಮಾಡುವುದು ಅವಶ್ಯಕತೆ ಇದೆ. ಈ ಪ್ರಸ್ತಾವನೆಯು ಸರ್ಕಾರದಲ್ಲಿ ಪರಿಶೀಲನೆ ಹಂತದಲ್ಲಿದೆ ಎಂದು ವಿಧಾನಸಭೆಯಲ್ಲಿ ಶಾಸಕ ರವಿಕುಮಾರ್ ಗಮನ ಸೆಳೆದರು.

ಪ್ರಸ್ತಾಪಿತ ಹೊಸ ಪ್ರವಾಸಿ ಮಂದಿರದಲ್ಲಿ ಏನೇನಿರಲಿದೆ ?
ಪ್ರವಾಸಿ ಮಂದಿರ ನಿವೇಶನದ ವಿಸ್ತೀರ್ಣ-2 ಎಕರೆ 30 ಗುಂಟೆ
ಹೊಸ ಪ್ರವಾಸಿ ಮಂದಿರವನ್ನು ಹಾಲಿ ಇರುವ ಪ್ರವಾಸಿ ಮಂದಿರದ ಮುಂದೆ ಇರುವ ಖಾಲಿ ಜಾಗದಲ್ಲಿ ನಿರ್ಮಿಸಲು ಪ್ರಸ್ತಾಪ
ನೆಲ ಮಹಡಿ-525.00 ಚ.ಮೀ: VVIP ಕೊಠಡಿ-2, ಸಾಮಾನ್ಯ ಕೊಠಡಿ-2, ಮತ್ತು ಕಛೇರಿ ಕೊಠಡಿ-1 ಹಾಗೂ ಸಭಾಂಗಣ -1
ಮೊದಲನೇ ಮಹಡಿಯಲ್ಲಿ -535 ಚ.ಮೀ: VVIP ಕೊಠಡಿ – 1, VVIP ಕೊಠಡಿ-1, ಹಾಗೂ ಸಾಮಾನ್ಯ ಕೊಠಡಿ-2, ನಿರೀಕ್ಷಣಾ ಕೊಠಡಿ ಹಾಗೂ ಸಭಾಂಗಣ-1.
ಎರಡನೇ ಮಹಡಿ 500 ಚ.ಮೀ: 3- VVIP ಕೊಠಡಿ, ನಿರೀಕ್ಷಣಾ ಕೊಠಡಿ -1,
ಪೀಠೋಪಕರಣಗಳು, ಒಳಾಂಗಣ ರಸ್ತೆ, ಆವರಣ ಗೋಡೆ ಒಳಗೊಂಡಿರಲಿದೆ.
ಅಲ್ಲದೇ ಈಗಿರುವ ಹಳೆಯ ಪ್ರವಾಸಿ ಮಂದಿರವನ್ನು ಸುಸ್ಥಿತಿಯಲ್ಲಿಡಲು ಸರ್ಕಾರದಿಂದ ರೂ.1 ಕೋಟಿಗಳ ಅನುದಾನವನ್ನು ಬಿಡುಗಡೆ ಮಾಡಿದೆ. ಪ್ರಸ್ತುತ ಪ್ರವಾಸಿ ಮಂದಿರದ ನವೀಕರಣ ಕಾಮಗಾರಿಯು ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಇದಕ್ಕೆ ಲಿಖಿತ ಉತ್ತರ ನೀಡಿರುವ ಸಚಿವ ಜಾರಕಿಹೊಳಿ ಅವರು ಹೊಸ ಪ್ರವಾಸಿ ಮಂದಿರವನ್ನು ನಿರ್ಮಿಸಲು ಅನುದಾನದ ಲಭ್ಯತೆಯನುಸಾರ ಕಾಮಗಾರಿಯನ್ನು ಕೈಗೊಳ್ಳಲು ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.




