ವಿದ್ಯಾರ್ಥಿಗಳು ನೂತನ ತಂತ್ರಜ್ಞಾನವುಳ್ಳ ವಿಷಯಗಳನ್ನು ಕಲಿಯುವ ಮೂಲಕ ಉದ್ಯೋಗಾವಕಾಶ ಪಡೆದು ಕೊಳ್ಳಬೇಕೆಂದು ಜಿಲ್ಲಾಧಿಕಾರಿ ಎಸ್.ಅಶ್ವತಿ ಸಲಹೆ ನೀಡಿದರು.
ಮಂಡ್ಯ ಜಿಲ್ಲೆಯಲ್ಲಿ 6 ಐ.ಟಿ.ಐ ಕಾಲೇಜುಗಳನ್ನು ಮೇಲ್ದರ್ಜೆಗೆ ಏರಿಸಲಾಗಿದ್ದು, ಮಂಡ್ಯ ನಗರದ ಸರ್ಕಾರಿ ಐಟಿಐ ಕಾಲೇಜನ್ನು ಮೇಲ್ದರ್ಜೆಗೆ ಏರಿಸಿರುವ ಹಿನ್ನಲೆಯಲ್ಲಿ ಇಂದು ಕಾಲೇಜಿಗೆ ಭೇಟಿ ನೀಡಿ ಹೊಸ ಉಪಕರಣಗಳ ಕಾರ್ಯವೈಖರಿ ಕುರಿತಂತೆ ಪರಿಶೀಲಿಸಿ ಪ್ರಾಂಶುಪಾಲರಿಂದ ಮಾಹಿತಿ ಪಡೆದುಕೊಂಡರು.
ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನದ ಬಗ್ಗೆ ತಿಳಿದುಕೊಂಡು, ಕೌಶಲ್ಯಗಳನ್ನು ಹೆಚ್ಚಿಸಿಕೊಂಡರೆ ಉದ್ಯೋಗ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ. ಉತ್ತಮ ಗುಣಮಟ್ಟದ ಯಂತ್ರೋಪಕರಣಗಳನ್ನು ಟಾಟಾ ಸಂಸ್ಥಯಿಂದ ಒದಗಿಸಲಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಇಂದಿನ ದಿನದಲ್ಲಿ ಹೆಚ್ಚು ಪ್ರಚಲಿತವಾಗುತ್ತಿರುವ ರೋಬೋಟಿಕ್ಸ್, ಮೆಕಾನಿಕಲ್, ಎಲೆಕ್ಟ್ರಿಕಲ್ ವೆಹಿಕಲ್ ಸೇರಿದಂತೆ ಒಟ್ಟು 6 ಕೋರ್ಸ್ ಗಳಿಗೆ ಸಿದ್ಧತೆ ನಡೆದಿದ್ದು,. ಯಂತ್ರೋಪಕರಣಗಳ ಸಂಪೂರ್ಣ ಅಳವಡಿಕೆ ಹಾಗೂ ಅಡಿಟ್ ಕೆಲಸಗಳು ಜುಲೈ 8 ರೊಳಗೆ ಪೂರ್ಣಗೊಳ್ಳಬೇಕು ಎಂದರು.
ಜಿಲ್ಲಾಧಿಕಾರಿಗಳು ಟೆಕ್ ಲ್ಯಾಬ್, ಕಂಪ್ಯೂಟರ್ ಲ್ಯಾಬ್ ಪರಿಶೀಲಿಸಿ ಪೇಂಟಿಂಗ್ ಟೆಕ್ನಾಲಜಿಯನ್ನು ಕಂಪ್ಯೂಟರ್ ನಲ್ಲಿ ವೀಕ್ಷಿಸಿದರು.
ಪರಿಶೀಲನೆ ವೇಳೆ ನಿರ್ಮಿತಿ ಕೇಂದ್ರದ ಕಾರ್ಯಪಾಲಕ ಅಭಿಯಂತರ ನರೇಶ್, ಕಾಲೇಜು ಪ್ರಾಂಶುಪಾಲರಾದ ನಾಗಾನಂದ ಮತ್ತಿತರರು ಉಪಸ್ಥಿತರಿದ್ದರು.