Tuesday, November 24, 2026

ಪ್ರಾಯೋಗಿಕ ಆವೃತ್ತಿ

ಕೃಷಿ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ನೂತನ ತಳಿಗಳು ರೈತರನ್ನು ಮುಟ್ಟಬೇಕು: ಹೆಚ್.ಡಿ.ಕುಮಾರಸ್ವಾಮಿ

ಕೃಷಿ ವಿಶ್ವ ವಿದ್ಯಾನಿಲಯಗಳಲ್ಲಿನ ವಿಜ್ಞಾನಿಗಳು ಅಭಿವೃದ್ಧಿಪಡಿಸುವ ನೂತನ ತಳಿಗಳು ರೈತರನ್ನು ಮುಟ್ಟಬೇಕು ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಎಚ್.ಡಿ ಕುಮಾರ ಸ್ವಾಮಿ ಹೇಳಿದರು.

ಕೃಷಿ ಮತ್ತು ತೋಟಗಾರಿಕೆ ಇಲಾಖೆ, ಪಶು ಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳು ಜಲಾನಯನ ಅಭಿವೃದ್ಧಿ ಇಲಾಖೆ, ರೇಷ್ಮೆ, ಅರಣ್ಯ, ಮೀನುಗಾರಿಕೆ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ನಬಾರ್ಡ್ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ವಿ.ಸಿ ಫಾರಂ ಆವರಣದಲ್ಲಿ ಆಯೋಜಿಸಲಾಗಿದ್ದ “ಕೃಷಿ ಮೇಳ 2025” ಸಮಗ್ರ ಕೃಷಿಯಿಂದ ಸುಸ್ಥಿರತೆ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಮೈಸೂರು ಪ್ರಾಂತ್ಯದ ರೈತರ ಹೇಳಿಕೆಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ದೂರ ದೃಷ್ಟಿಯಿಂದ ಮಂಡ್ಯದಲ್ಲಿ ವಿ ಸಿ ಫಾರ್ಮ್ ಅನ್ನು ನಿರ್ಮಾಣ ಮಾಡಿದರು. ರಾಜ್ಯ ಸರ್ಕಾರ ವಿಸಿ ಫಾರ್ಮನ್ನು ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾನಿಲಯ ಮಾಡಿ ರೈತರಿಗೆ ಕೃಷಿಯ ಕುರಿತಾಗಿ ಜ್ಞಾನ ಹೆಚ್ಚಿಸಲು ಕೃಷಿ ಮೇಳವನ್ನು ಆಯೋಜಿಸಲಾಗಿದೆ ಎಂದರು.

ಪ್ರಸ್ತುತ ರೈತರ ಬದುಕು ಮತ್ತು ಆರ್ಥಿಕತೆಯ ಕುರಿತು ಚರ್ಚೆ ಮಾಡಬೇಕಿದೆ ಸ್ವಾತಂತ್ರ ಬಂದು 75 ವರ್ಷಗಳು ಕಳೆದರೂ ರೈತರ ಜೀವನಮಟ್ಟ ಸುಧಾರಣೆ ಸಾಧ್ಯವಾಗಿಲ್ಲ, ಪತ್ರಿಕೆ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕೃಷಿಯಿಂದ ಲಾಭಗಳಿಸಿದ ಕೇವಲ ಕೃಷಿಕರನ್ನು ನಾವು ಕಾಣಬಹುದು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೃಷಿಕರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಕೇಂದ್ರ ಸರ್ಕಾರ ಕೃಷಿ ವಲಯಕ್ಕೆ 1 ಲಕ್ಷದ 34 ಸಾವಿರ ಕೋಟಿ ಅನುದಾನವನ್ನು ಮೀಸಲಿಟ್ಟಿದೆ ಎಂದು ಹೇಳಿದರು.

ಪ್ರಸ್ತುತ ರಾಜ್ಯದಲ್ಲಿ ಒಂದು ತಿಂಗಳಿನಿಂದ ಮೆಕ್ಕೆಜೋಳದ ಕುರಿತಾಗಿ ಪ್ರತಿಭಟನೆ ನಡೆಸಲಾಗುತ್ತದೆ, ರಾಜ್ಯ ಸರ್ಕಾರ ಕಳೆದ ವಾರ ಸಭೆ ನಡೆಸಿ ಕೆಎಂಎಫ್ ನಿಂದ 50,000 ಮೆ. ಟನ್ ಮೆಕ್ಕೆಜೋಳ ಖರೀದಿ ಮಾಡಲು ನಿರ್ದೇಶನ ನೀಡಿ ಸುಮ್ಮನಾಗಿದೆ. ಪ್ರಸ್ತುತ ದಿನದಲ್ಲಿ ರೂ 1400 ಕ್ಕೂ ಮೆಕ್ಕೆಜೋಳ ಖರೀದಿ ಮಾಡುವವರಿಲ್ಲ ರಾಜ್ಯ ಸರ್ಕಾರ ಖರೀದಿ ಕೇಂದ್ರಗಳನ್ನು ತೆರೆದು ಮೆಕ್ಕೆಜೋಳ ಖರೀದಿ ಮಾಡಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದರೆ ಕೇಂದ್ರ ಸರ್ಕಾರ ಎಂಎಸ್‌ಪಿ ದರಕ್ಕೆ ಮೆಕ್ಕೆಜೋಳವನ್ನು ಖರೀದಿ ಮಾಡಲಿದೆ ಎಂದು ತಿಳಿಸಿದರು.

ನಾನು ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದೇನೆ, ನನ್ನ ಅವಧಿಯಲ್ಲಿ ಕೃಷಿಗೆ ಸಂಬಂಧಿಸಿದ ಯಾವುದೇ ಲೋಕಗಳು ಉಂಟಾಗದಂತೆ ಜಾಗರೂಕವಾಗಿ ನೋಡಿಕೊಂಡಿದ್ದೇನೆ, 2006ರಲ್ಲಿ ಕಂಪನ್ನು ಕಾರ್ಖಾನೆ ಮಾಲೀಕರು ಕೊಂಡುಕೊಳ್ಳದೇ ಕಬ್ಬು ಗದ್ದೆಗಳಲ್ಲೇ ಒಣಗಿದ್ದವೂ ರೂ 248 ಕೋಟಿ ನೀಡಿ ಸದರಿ ಕಬ್ಬನ್ನು ಖರೀದಿ ಮಾಡಿ ರೈತರಿಗೆ ನಷ್ಟ ಉಂಟಾಗದಂತೆ ನೋಡಿಕೊಂಡಿದ್ದೇನೆ, ಕೇವಲ ಮಂಡ್ಯ ಭಾಗದ ಅಲ್ಲದೆ ಉತ್ತರ ಕರ್ನಾಟಕ ಭಾಗದಲ್ಲೂ ಈರುಳ್ಳಿ ಬೆಳೆಗಾರರಿಗೆ ನಷ್ಟವಾಗದಂತೆ ನೋಡಿಕೊಂಡಿದ್ದೇನೆ ಎಂದು ಹೇಳಿದರು.

ಪ್ರಧಾನ ಮಂತ್ರಿಗಳು ಹೊಸ ಯೋಜನೆಯ ಮೂಲಕ ದೇಶದ ಒಂಬತ್ತು ಕೋಟಿ ರೈತರಿಗೆ ವರ್ಷಕ್ಕೆ ರೂ 6 ಸಾವಿರವನ್ನು ಮೂರು ಕಂತುಗಳಲ್ಲಿ ನೀಡಿದ್ದಾರೆ. ರೈತರು ಕೃಷಿಗಳಲ್ಲಿ ಹೆಚ್ಚು ಮಾನವ ಸಂಪನ್ಮೂಲ ಬಳಕೆ ಮಾಡುವ ಬದಲು ಆಧುನಿಕ ಯಂತ್ರೋಪಕರಣಗಳನ್ನು ಬಳಸಿದರೆ ಹಣ ಉಳಿಸಬಹುದು ಎಂದು ತಿಳಿಸಿದರು.

ಗೋದಾಮು ಮತ್ತು ಕೋಲ್ಡ್ ಸ್ಟೋರೇಜ್ ನಿರ್ಮಾಣದ ಚಿಂತನೆ

ನಮ್ಮ ರಾಜ್ಯದಲ್ಲಿ 5600 ಗ್ರಾಮ ಪಂಚಾಯಿತಿಗಳು ಇವೆ, ಸುಮಾರು 25 ಸಾವಿರ ಕೋಟಿ ವೆಚ್ಚದಲ್ಲಿ ಪ್ರತಿ ಗ್ರಾಮ ಪಂಚಾಯಿತಿಯ ರೈತರಿಗೆ ಆರ್ಥಿಕವಾಗಿ ಶಕ್ತಿ ತುಂಬಲು ಪ್ರತಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲೂ ಗೋಧಾಮ ಮತ್ತು ಕೋಲ್ಡ್ ಸ್ಟೋರೇಜ್ ಘಟಕಗಳನ್ನು ನಿರ್ಮಾಣ ಮಾಡಬೇಕು. ರೈತರು ತಾವು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗುವವರೆಗೂ ತರಕಾರಿಗಳನ್ನು ಕೋರ್ಟ್ ಸ್ಟೋರೇಜ್ ಹಾಗೂ ದ್ವಿದಳ ಧಾನ್ಯಗಳನ್ನು ಗೋಧಾಮಗಳಲ್ಲಿ ಸ್ವೀಕರಿಸಿಕೊಳ್ಳಬಹುದಾದ ವಿಶೇಷ ಯೋಜನೆಯನ್ನು ತರಬೇಕು ಎಂದು ಚಿಂತನೆ ನಡೆಸಿದ್ದೇನೆ ಎಂದು ತಿಳಿಸಿದರು.

ರಾಜ್ಯದ ಯುವಕರು ಕೆಲಸವನ್ನರಸಿ ವಿವಿಧ ನಗರಗಳಿಗೆ ವಲಸೆ ಹೋಗದೆ ಕೃಷಿಯಲ್ಲಿ ಆದಾಯ ಹೆಚ್ಚಿಸುವುದರ ಕುರಿತು ಯುವಕರಿಗೆ ಅರಿವು ಮೂಡಿಸಬೇಕು. ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ಸೂಕ್ತ ಜಾಗವನ್ನು ಹುಡುಕಿ ಮೂಲ ಸಂಪನ್ಮೂಲ ಒದಗಿಸಿದರೆ ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಬಹುದು. ಭದ್ರಾವತಿ ಉಕ್ಕಿನ ಕಾರ್ಖಾನೆಯನ್ನು ಪುನರ್ ಆರಂಭಿಸಲು ಕೆಲಸ ಪ್ರಾರಂಭಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು ಮಾತನಾಡಿ ವಿ ಸಿ ಫಾರಂ ನಲ್ಲಿ ಕೃಷಿ ಮೇಳವನ್ನು ಅನೇಕ ಬಾರಿ ನೋಡಿದ್ದೇವೆ ಆದರೆ ವಿ ಸಿ ಫಾರಂ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾನಿಲಯ ಆದ ನಂತರ ಇಂದು ಬೃಹತ್ ಕೃಷಿಮೇಳ ಆಯೋಜನ ಮಾಡಲಾಗಿದೆ. ಕದರಿ ಕೃಷಿ ಮೇಳಕ್ಕೆ ತನ್ನದೇ ಆದ ಮಹತ್ವವಿದೆ ಎಂದು ಹೇಳಿದರು.

ನಮ್ಮ ದೇಶದಲ್ಲಿ ಸರಿಸುಮಾರು 65 ರಷ್ಟು ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ದೇಶದ ಆರ್ಥಿಕತೆಗೆ ಕೃಷಿ ವಲಯ ಶೇಕಡಾ 16 ರಿಂದ 17 ರಷ್ಟು ಕೊಡುಗೆ ನೀಡುತ್ತಿದೆ. ಜಾಗತಿಕ ಮಟ್ಟದಲ್ಲಿ ಯಾವುದೇ ದೇಶವನ್ನು ಆ ದೇಶದ ಆರ್ಥಿಕತೆಯ ಮೇಲೆ ಅದರ ಶ್ರೀಮಂತಿಕೆಯನ್ನು ಅಳೆಯಲಾಗುತ್ತದೆ. ಕೃಷಿ ವಲಯ ದೇಶದ ಆರ್ಥಿಕತೆಗೆ ಹೆಚ್ಚಿನ ಸೇವೆ ಸಲ್ಲಿಸಿದಾಗ ಮಾತ್ರ ಕೃಷಿಕರು ಪ್ರಗತಿ ಹೊಂದಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ರೈತರು ಕೃಷಿಯಲ್ಲಿ ವಿಜ್ಞಾನ ಮತ್ತು ನೂತನ ತಂತ್ರಜ್ಞಾನವನ್ನು ಬಳಸಿ ಕೃಷಿ ಬೇಸಾಯ ಮಾಡಬೇಕು. ಕೃಷಿಕರು ಶ್ರಮದಿಂದ ಕೆಲಸ ನಿರ್ವಹಿಸುವ ಬದಲು ಜಾಣ್ಮೆಯ ಕೌಶಲ್ಯಗಳನ್ನು ಬೆಳೆಸಿಕೊಂಡು ಕೃಷಿಯನ್ನು ಮಾಡಿದರೆ ಕೃಷಿಯಿಂದ ಆದಾಯ ಗಳಿಸಬಹುದಾಗಿದೆ. ಸದರಿ ಕೃಷಿ ಮೇಳದ ಸದುಪಯೋಗವನ್ನು ಪಡೆಸಿಕೊಂಡು ರೈತರು ಕೃಷಿ ಪದ್ಧತಿಯಲ್ಲಿ ಬದಲಾವಣೆ ಮಾಡಿ ಆದಾಯ ಗಳಿಸಬಹುದು ಎಂದು ಹೇಳಿದರು.

ಕೆಆರ್ ಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎಚ್ ಟಿ ಮಂಜು ಅವರು ಮಾತನಾಡಿ ನಮ್ಮ ದೇಶದಲ್ಲಿ ಅತಿ ಹೆಚ್ಚು ಜನ ಕೃಷಿಯನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ನಾನು ಸಹ ನನ್ನ ಕ್ಷೇತ್ರದಲ್ಲಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿಕೊಂಡು ಬರುತ್ತಿದ್ದೇನೆ. ಕೃಷಿಯನ್ನು ಕೈಗಾರಿಕೆಯ ರೀತಿಯಲ್ಲಿ ಮಾಡಿದರೆ ಕೃಷಿಯಲ್ಲಿ ಉದ್ಯೋಗ ಸೃಷ್ಟಿಸಬಹುದು ಯುವಕರು ಕೆಲಸವನ್ನುರಸಿ ಇತರೆ ನಗರಗಳಿಗೆ ಹೋಗುವ ಅಗತ್ಯ ಇರುವುದಿಲ್ಲ ಎಂದು ಹೇಳಿದರು.

ಕೃಷಿಯಲ್ಲಿ ಅನೇಕ ವಿಭಾಗಗಳಿವೆ ತೋಟಗಾರಿಕೆ ಹೈನುಗಾರಿಕೆ ಮೀನುಗಾರಿಕೆ ಹಾಗೂ ಸಮಗ್ರ ಕೃಷಿಯಿಂದ ರೈತರು ಆರ್ಥಿಕವಾಗಿ ಸುಧಾರಣೆ ಕಾಣಬಹುದಾಗಿದೆ. ರೈತರು ಕೃಷಿ ಮೇಳದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಮಾಜಿ ಶಾಸಕ ಸಿ ಎಸ್ ಪುಟ್ಟರಾಜು ಅವರು ಮಾತನಾಡಿ ಎಚ್ ಡಿ ದೇವೇಗೌಡ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಫಿಸಿ ಫಾರಂ ನ ಕೆನಾಲ್ ಗೆ ತೂಬು ನಿರ್ಮಾಣ ಮಾಡಿದರು. ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿ ಜಿಲ್ಲೆಯ ಜನರಿಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ನೂರಕ್ಕೂ ಹೆಚ್ಚು ವಿದ್ಯುತ್ ಘಟಕಗಳನ್ನು ಸ್ಥಾಪಿಸಿ ರೈತರಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡಿದರು ಎಂದು ಹೇಳಿದರು.

ಎಚ್ ಡಿ ಕುಮಾರಸ್ವಾಮಿ ಅವರು 2018 ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ನೂರಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸಿದ್ದಾರೆ, ಅಂದಿನ ಕೃಷಿ ವಿ ಸಿ ಫಾರ್ಮ್ ಕುಲಪತಿಗಳೊಂದಿಗೆ ನಿರಂತರ ಸಂಪರ್ಕ ದಲ್ಲಿದ್ದು ಕೃಷಿ ವಿ ಸಿ ಫಾರ್ಮ್ ನ ಅಭಿವೃದ್ಧಿಗೆ ಶ್ರಮಿಸಿದ್ದರು. ಪ್ರಸ್ತುತ ಎಚ್ ಡಿ ಕುಮಾರಸ್ವಾಮಿ ಅವರು ಸಿ ಆರ್ ಎಸ್ ಅನುದಾನದಲ್ಲಿ ಮಂಡ್ಯ ಜಿಲ್ಲೆಗೆ 14 ಕೋಟಿ ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಮಂಡ್ಯ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾನಿಲಯವನ್ನು ಉತ್ತಮವಾಗಿ ಮುನ್ನಡೆಸಲು ಕೇಂದ್ರ ಹಾಗೂ ರಾಜ್ಯದ ಎಲ್ಲಾ ನಾಯಕರು ಸಹಕಾರ ನೀಡಲಿದ್ದಾರೆ ಎಂದು ಹೇಳಿದರು.

ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ಅವರು “ಹಸಿರು ಸಿರಿ” ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ರೈತರಿಗೆ ಉಪಯುಕ್ತ ವಾಗುವ ತಾಂತ್ರಿಕ ಮಾಹಿತಿ ಒಳಗೊಂಡ ಅಸ್ತಪ್ರತಿ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ನಂತರ ಚಾಮರಾಜನಗರ ಹಾಗೂ ಹಾಸನ ಜಿಲ್ಲೆಯ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಪ್ರಗತಿಪರ ರೈತರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಶಾಸಕ ಕೆ. ವಿವೇಕಾನಂದ, ಮಾಜಿ ಶಾಸಕ ಸುರೇಶ್ ಗೌಡ, ಮಾಜಿ ಶಾಸಕ ಜಿ.ಬಿ ಶಿವಕುಮಾರ್, ಮಂಡ್ಯ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಹರಿಣಿ ಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಆರ್ ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ