Thursday, September 19, 2024

ಪ್ರಾಯೋಗಿಕ ಆವೃತ್ತಿ

 ನವಜಾತ ಶಿಶುಗಳ ಉಳಿವಿಗೆ ಜಾಗೃತಿ ಅಗತ್ಯ

ನವಜಾತ ಅವಧಿ ಮಗು ಹುಟ್ಟಿದ ಮೊದಲ 28 ದಿನಗಳು ಮಕ್ಕಳ ಉಳಿವಿಗಾಗಿ ನಿರ್ಣಾಯಕ ಅವಧಿಯಾಗಿದೆ ಆದ್ದರಿಂದ ತಾಯಂದಿರು ಜಾಗೃತಿ ವಹಿಸುವುದು ಮುಖ್ಯ ಎಂದು ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ತಜ್ಞೆ ವಿ.ಪಾರ್ವತಿ ಹೇಳಿದರು.

ಶ್ರೀರಂಗಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಸಾರ್ವಜನಿಕ ಆಸ್ಪತ್ರೆ ಸಹಯೋಗ ದೊಂದಿಗೆ “ನವಜಾತ ಶಿಶು ಆರೈಕೆ ಹಾಗೂ ಅಯೋಡಿನ್ ಕೊರತೆಯಿಂದ ಉಂಟಾಗುವ ನ್ಯೂನತೆಗಳ” ಕುರಿತು ಏರ್ಪಡಿಸಿದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಅವರು, ಮಗು ಜನಿಸಿದ ಮೊದಲ ತಿಂಗಳು ಜೀವಮಾನದ ಆರೋಗ್ಯ ಮತ್ತು ಅಭಿವೃದ್ಧಿಗೆ ಒಂದು ಅಡಿಪಾಯದ ಅವಧಿಯಾಗಿದೆ ಎಂದರು.

ಆರೋಗ್ಯವಂತ ಶಿಶುಗಳು ಆರೋಗ್ಯವಂತ ವಯಸ್ಕರಾಗಿ ಬೆಳೆದು, ತಮ್ಮ ಸಮುದಾಯ ಮತ್ತು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬಹುದು. ನವಜಾತ ಶಿಶುವನ್ನು ಬೆಚ್ಚಗಿಡುವದು ಸೇರಿದಂತೆ, ಮಗುವಿನ ಶುಚಿತ್ವದ ಕಡೆ ಗಮನ ಹರಿಸಿಸುವುದು ದಿನಕ್ಕೆ 8 ರಿಂದ 10 ಬಾರಿ ತಾಯಿ ಎಚ್ಚರಿಕೆಯಿಂದ ಎದೆ ಹಾಲುಣಿಸುವುದು, ಆರೋಗ್ಯವಂತ ನವಜಾತ ಶಿಶುವಿಗೆ 4 ಗಂಟೆಗಿಂತ ಜಾಸ್ತಿ ಹೊತ್ತು ಎದೆ ಹಾಲು ನೀಡದೆ ಇರಬಾರದು, ಸಾಮಾನ್ಯವಾಗಿ 90 ನಿಮಿಷಕ್ಕೊಮ್ಮೆ ಹಾಲುಣಿಸಬೇಕು, ಮಗುವಿಗೆ ಎದೆ ಹಾಲು ಬೇಗ ಜೀರ್ಣವಾಗುವ ಕಾರಣ, ಮಗುವಿಗೆ ಬೇಗ ಹಸಿವಾಗುವದರೊಂದಿಗೆ ಗಂಟಲು ಒಣಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಬೇಗ ಹಾಲುಣಿಸಬೇಕು ಎಂದರು.

ನವಜಾತ ಶಿಶುವಿನಲ್ಲಿ ಜ್ವರ, ಫಿಟ್ಸ್, ಅತೀಭೇದಿ, 24 ಗಂಟೆಯಲ್ಲಿ 6 ಸಲಕ್ಕಿಂತ ಕಡಿಮೆ ಮೂತ್ರ ಮಾಡಿದರೆ, ಅತೀ ವಾಂತಿ, ಮಲ ದೊಂದಿಗೆ ರಕ್ತ, ಮಗು ಚಟುವಟಿಕೆ ಇಲ್ಲದಿರುವುದು, ಕಣ್ಣು ಊದಿಕೊಂಡಿರುವುದು, ಕಣ್ಣು, ಕೈ, ಕಾಲು, ಚರ್ಮ ಹಳದಿಯಾಗುವದು, ಕಣ್ಣಲ್ಲಿ ಕೀವು ಇರುವುದು, ಕ್ಷೀಣವಾದ ಅಳು, ಉಬ್ಬಿದ ಹೊಟ್ಟೆ, ಉಸಿರಾಟದ ತೊಂದರೆ ಇಂತಹ ಅಪಾಯಕಾರಿ ಲಕ್ಷಣಗಳು ಕಂಡು ಬಂದಾಗ ತಕ್ಷಣ ಆಸ್ಪತ್ರೆಗೆ ಕರೆದು ಕೊಂಡು ಬರಬೇಕು ಹಾಗೂ ಮಗುವಿನ ವಯಸ್ಸಿಗನಗುಣವಾಗಿ ನಿಗದಿತ ಸಮಯಕ್ಕೆ ಲಸಿಕೆಗಳನ್ನು ತಪ್ಪದೇ ಕೊಡಿಸಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ.ಚಂದ್ರಿಕಾ ಅಯೋಡಿನ್ ಕೊರತೆಯಿಂದ ಉಂಟಾಗುವ ದುಷ್ಪರಿಣಾಮ ಕುರಿತು ಮಾಹಿತಿ ನೀಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ ಅಯೋಡಿನ್ ಪರೀಕ್ಷಾ ಕಿಟ್ ಸಹಾಯದಿಂದ ಪ್ರಾತ್ಯಕ್ಷಿಕೆಯ ಮೂಲಕ ಉಪ್ಪನ್ನು ಪರೀಕ್ಷಿಸಿ ಅಯೋಡಿನ್ ಬಗ್ಗೆ ಜಾಗೃತಿ ಮೂಡಿಸಿದರು.

ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಪಿ.ಮಾರುತಿ, ಆರೋಗ್ಯ ನಿರೀಕ್ಷಣಾಧಿಕಾರಿ ಎಮ್.ಸಿ.ಚಂದನ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಮಹದೇವಮ್ಮ, ರಬೇಕ, ಆಶಾ ಕಾರ್ಯಕರ್ತೆ ಚಾಂದನಿ, ಹೇಮಾ, ಮೀನಾ ಹಾಗೂ ಗರ್ಭಿಣಿಯರು ಬಾಣಂತಿಯರು ಹಾಗೂ ಸಾರ್ವಜನಿಕರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!