ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಮಂಡ್ಯ ಜಿಲ್ಲೆಯಲ್ಲಿ ಅಂಗಡಿ ಮುಚ್ಚಿಕೊಂಡು ಹೋಗಲಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಖಾರವಾಗಿ ತಿರುಗೇಟು ನೀಡಿರುವ ಜೆಡಿಎಸ್ ಪಕ್ಷವು ‘ ಈ ಹಿಂದಿನ ಚುನಾವಣೇಲಿ ಬಿಜೆಪಿಯು ಮ್ಯಾಚ್ ಪಿಕ್ಸಿಂಗ್ ನಿಂದ ತೆರದಿರುವ ಕೆ.ಆರ್.ಪೇಟೆ ಅಂಗಡಿಯನ್ನು, 2023ರ ಚುನಾವಣೇಲಿ, ಅಲ್ಲಿನ ಜನರು ಬಂದ್ ಮಾಡಲಿದ್ದಾರೆ ಎಂದು ಪ್ರತಿಕ್ರಿಯಿಸಿದೆ.
ಕಟೀಲ್ ಹೇಳಿಕೆ ಕುರಿತು ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಜಿಲ್ಲಾ ಜೆಡಿಎಸ್ ವಕ್ತಾರ ಮುದ್ದನಘಟ್ಟ ಮಹಾಲಿಂಗೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಜೆಡಿಎಸ್ ಅಂಗಡಿ ಮುಚ್ಚುವ ಮಾತಿರಲಿ, ಮೊದಲು ನಿಮ್ಮ ಅಂಗಡಿಯನ್ನು ಪರ್ಮನೆಂಟ್ ಆಗಿ ಮುಚ್ಚಲು ಜನರು ಕಾಯುತ್ತಿದ್ದಾರೆ. ಮ್ಯಾಚ್ ಫಿಕ್ಸಿಂಗ್ ರಾಜಕಾರಣ ಹೆಚ್ಚು ದಿನ ನಡೆಯುವುದಿಲ್ಲ, ನಿಮ್ಮ ಪಕ್ಷವನ್ನೇ ಜಿಲ್ಲೆಯಲ್ಲಿ ಬಂದ್ ಮಾಡಲು ಜನ ಕಾಯುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿಯು ನಿನ್ನೆ ನಡೆಸಿದ ಸಭೆಯಲ್ಲಿ ಖಾಲಿ ಖುರ್ಚಿಗಳಿಗೆ ಆ ಪಕ್ಷದ ನಾಯಕರು ಭಾಷಣ ಮಾಡಿದ್ದಾರೆಂದು ಮಾಧ್ಯಮಗಳೇ ಸುದ್ದಿ ಪ್ರಸಾರ ಮಾಡಿವೆ, ನಮ್ಮದು ಪ್ರಾದೇಶಿಕ ಪಕ್ಷ, ನಾವು ಜನರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದೇವೆ, ಪಕ್ಷ ಸಂಘಟನೆಗಾಗಿ ಪಂಚರತ್ನ ಯಾತ್ರೆ ಆಯೋಜಿಸಿದ್ದೇವೆ, ನಾವು ದೀನ ದಲಿತರ, ಬಡವರ ಪರವಾದ ರಾಜಕಾರಣ ಮಾಡುತ್ತಿದ್ದೇವೆ ಎಂದು ಹೇಳಿದರು.
ಜ್ಞಾನ ಇಟ್ಟುಕೊಂಡು ಮಾತನಾಡಲಿ
ಬಿಜೆಪಿ ರಾಜ್ಯಾಧ್ಯಕ್ಷರು ನಮ್ಮ ಪಕ್ಷದ ನಾಯಕರ ಬಗ್ಗೆ ಮಾತನಾಡುವಾಗಿ ಜ್ಞಾನ ಇಟ್ಟುಕೊಂಡು ಮಾತನಾಡಲಿ, ಲಘುವಾಗಿ ಮಾತನಾಡಿದರೆ, ನಮಗೂ ಮಾತನಾಡೋಕೆ ಬರುತ್ತೆ, ನಮ್ಮ ನಾಯಕ ಕುಮಾರಣ್ಣ ಮಾತೃ ಹೃದಯಿ. ಹಾಗಾಗಿ ಅವರು ಸದಾ ದೀನ, ದಲಿತರು, ರೈತರು ಹಾಗೂ ಬಡವರ ಪರವಾಗಿ ಮಿಡಿಯುತ್ತಾರೆ. ಜಿಲ್ಲೆಯಲ್ಲಿ ಈ ಹಿಂದೆ ಆತ್ಮಹತ್ಯೆಗಳು ನಡೆದಾಗ, ವೈಯಕ್ತಿಕವಾಗಿ ಪರಿಹಾರ ನೀಡಿ, ಜನರಿಗೆ ಸಾಂತ್ವನ ಹೇಳಿದ್ದಾರೆ. ಅಂತಹವರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಬಿಜೆಪಿಯವರಿಗಿಲ್ಲ ಎಂದರು.
ಕುಟುಂಬ ರಾಜಕಾರಣ ಎಲ್ಲಿಲ್ಲ ?
ಕುಟುಂಬ ರಾಜಕಾರಣ ಕುರಿತು ಪ್ರತಿಕ್ರಿಯಿಸಿದ ಅವರು, ಕುಟುಂಬ ರಾಜಕಾರಣ ಯಾವ ಪಕ್ಷದಲ್ಲಿ ಇಲ್ಲ ಹೇಳಿ, ಎಲ್ಲಾ ಪಕ್ಷದಲ್ಲೂ ಇದೆ, ಜನರ ನೋವಿಗೆ ಸ್ಪಂದಿಸುವ ಯಾವ ವ್ಯಕ್ತಿ ಬೇಕಾದರೂ ರಾಜಕಾರಣ ಮಾಡಬಹುದು, ಇದರಲ್ಲಿ ಕುಟುಂಬ ರಾಜಕಾರಣ ಎಂಬ ಪ್ರಶ್ನೆಯೇ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕುಮಾರಣ್ಣ ಬಂದರೆ ಜನಸಾಗರ
ಜಿಲ್ಲೆಗೆ ಕುಮಾರಣ್ಣ ಬಂದರೆ ಜನರು ಜೇನು ಸೇರಿದಂತೆ ಸೇರುತ್ತಾರೆ, ಜನ ಸಾಗರವೇ ಹರಿದು ಬರುತ್ತದೆ, ಬಿಜೆಪಿ ನಾಯಕರು ಬೇಕಾದರೆ ಡ್ರೋನ್ ಕ್ಯಾಮೆರಾಗಳನ್ನು ಹಾರಿಸಿ, ಎಷ್ಟು ಜನ ಸೇರಿದ್ದಾರೆಂಬುದನ್ನು ತಿಳಿದುಕೊಳ್ಳಲಿ, ಮಂಡ್ಯ ಜಿಲ್ಲೆಗೆ ಬಿಜೆಪಿಯವರ ಕೊಡುಗೆ ಏನು ? ಈ ಜಿಲ್ಲೆಗೆ ಕುಮಾರಣ್ಣ ಯಾವ ಕೊಡುಗೆ ನೀಡಿದ್ದಾರೆಂದು ಇಲ್ಲಿನ ಜನರಿಗೆ ಗೊತ್ತಿದೆ ಎಂದು ಹೇಳಿದರು.




