Thursday, September 19, 2024

ಪ್ರಾಯೋಗಿಕ ಆವೃತ್ತಿ

ಮುಂದಿನ ಅವಧಿಗೆ ನಾನೇ ಮುಖ್ಯಮಂತ್ರಿ : ಹೆಚ್.ಡಿ.ಕೆ

” ಬಸವ ಭವನ ಪ್ರಾರಂಭ ಮಾಡುವ ಹೊತ್ತಿಗೆ ಚುನಾವಣೆ ಬರುತ್ತದೆ, ಮುಂದಿನ ಅವಧಿಯಲ್ಲಿ ನಾನೇ ಮುಖ್ಯಮಂತ್ರಿಯಾಗುತ್ತೇನೆ, ತಕ್ಷಣದಲ್ಲಿಯೇ ಬಸವ ಭವನ ನಿರ್ಮಾಣಕ್ಕೆ 1 ಕೋಟಿ ರೂ. ಅನುದಾನ ನೀಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸರು.

ಮಳವಳ್ಳಿ ತಾಲ್ಲೂಕಿನ ಶೆಟ್ಟಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಉಪ್ಪನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಬಸವ ಭವನ ನಿರ್ಮಾಣದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ತಂದೆ ದೇವೇಗೌಡರ ರಾಜ್ಯಸಭಾ ಅನುದಾನದಲ್ಲಿಯೂ 25 ಲಕ್ಷ ರೂ. ಅನುದಾನವನ್ನು ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದರು.

ಸರ್ವ ಜನಂಗದ ಶಾಂತಿಯ ತೋಟವಾಗಿ ನಾವೆಲ್ಲ ಬಾಳಬೇಕು, ಅನ್ನದಾನಿ ನಮ್ಮ ಮನೆಯ ಹುಡುಗ, ಕ್ಷೇತ್ರದಲ್ಲಿ ಉತ್ತಮವಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ, ಕೆಲವೊಂದು ಸಣ್ಣ ಪುಟ್ಟ ತಪ್ಪುಗಳು ಆಗುವುದು ಸಹಜ, ಅವುಗಳನ್ನು ಸರಿಮಾಡಿಕೊಂಡು ಹೋಗಬೇಕೆಂದು ತಿಳುವಳಿಕೆ ನೀಡಲಾಗುವುದು ಎಂದರು.

12 ನೇ ಶತಮಾನದಲ್ಲಿ ಕಾಯಕವೇ ಕೈಲಾಸ ಎಂದು ಬಸವಣ್ಣ ಅವರು ಸಾರಿದರು ಆದರೇ ಬಸವಣ್ಣ ಅವರ ತತ್ವಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಲು ವಿಫಲರಾಗುತ್ತಿದ್ದೇವೆ, ಬಸವಣ್ಣ ಸೇರಿದಂತೆ ಮಹನೀಯರ ತತ್ವಗಳನ್ನು ವೇದಿಕೆಯಲ್ಲಿ ಚರ್ಚೆ ಮಾಡುತ್ತಿದೇವೆ ಹೊರತು ವೈಯಕ್ತಿಕವಾಗಿ ಜೀವನದಲ್ಲಿ ಅವಳವಡಿಸುಕೊಳ್ಳುವುದನ್ನು ಮರೆಯುತ್ತಿದ್ದೇವೆಂದು ಬೇಸರ ವ್ಯಕ್ತಪಡಿಸಿದರು.

ಸಮಾನತೆಯನ್ನು ಸಾರಿದ ಬಸವಣ್ಣ ಅವರ ಮಾರ್ಗದರ್ಶನದಂತೆ ಭಾವನಾತ್ಮಕ ಸಂಬಂಧಗಳಿಗೆ ಬೆಲೆ ಕೊಡಬೇಕು, ಬಸವಣ್ಣ ಅವರ ಹೆಸರಿನಲ್ಲಿ ಸಮುದಾಯ ಭವನವನ್ನು ನಿಮಾ೯ಣ ಮಾಡುತ್ತಿರುವುದರಿಂದ ಬಡವರ ಮದುವೆ ಸೇರಿದಂತೆ ಶುಭ ಸಮಾರಂಭಗಳಿಗೆ ಅನುಕೂಲವಾಗುತ್ತದೆ.

ಶಾಸಕ ಡಾ.ಕೆ ಅನ್ನದಾನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜಕೀಯದಲ್ಲಿ ನಿರಂತರವಾಗಿ ಸೇವೆ ಮಾಡುತ್ತೇನೆ, ಹಾಡು ಹೇಳುವುದು ನನ್ನ ಹವ್ಯಾಸ, ಚುನಾವಣೆಯಲ್ಲಿ ಗೆದ್ದರೂ-ಸೋತರು ಜನರೊಂದಿಗೆ ಇದ್ದು ಸೇವೆ ಮಾಡುತ್ತೇನೆಂದು ಹೇಳಿದರು.

ಕ್ಷೇತ್ರದ ಜನರಿಗೆ ಭರವಸೆ ಕೊಟ್ಟಂತೆ ಅತಿ ಹೆಚ್ಚು ಬೆಲೆ ಬಾಳುವ ಜಮೀನಿನಲ್ಲಿ 4 ಕೋಟಿ ರೂ. ಹೆಚ್ಚು ವೆಚ್ಚದಲ್ಲಿ ಬಸವ ಭವನ ನಿರ್ಮಾಣಕ್ಕೆ ಮುಂದಾಗುತ್ತಿದ್ದು, ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ಹೇಳಿದರು.

ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಬುದ್ದ ಬಸವ ಅಂಬೇಡ್ಕರ್ ಚಿಂತನೆಗಳನ್ನು ಮರೆಯುತ್ತಿದ್ದೇವೆ. ಕಾಯಕವೇ ಕೈಲಾಸ ಅನ್ನುವ ಬದಲು ಸಾಲ ಮಾಡುವುದೇ ಕಾಯಕವಾಗಿದೆ, ಅಂಬೇಡ್ಕರ್ ಅವರು ಮಹಿಳೆಯರು ಗ್ರಂಥಾಲಯಗಳಲ್ಲಿ ಪುಸ್ತಕಗಳನ್ನು ಓದಿ ಮುಖ್ಯವಾಹಿನಿಗೆ ಬರಬೇಕೆಂದು ಹೇಳಿದರು.

ಜಿ.ಪಂ. ಸಿಇಒ ಶಾಂತಾ ಎಲ್.ಹುಲ್ಮನಿ, ತಹಶೀಲ್ದಾರ್ ಎಂ.ವಿಜಯಣ್ಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಂಗೇಗೌಡ, ಸಹಾಯಕ ನಿರ್ದೇಶಕ ಎ.ಎನ್.ಜರ್ನಾದನ್, ತಾ.ಪಂ.ಇಒ ರಾಮಲಿಂಗಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ, ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬಿ.ಸಿ.ರೇಖಾ, ಜೆಡಿಎಸ್ ಯುವ ಘಟಕದ ಜಿಲ್ಲಾ ಅಧ್ಯಕ್ಷ ರವಿ ಕಂಸಾಗರ, ತಾಲ್ಲೂಕು ಘಟಕದ ಅಧ್ಯಕ್ಷ ವಿ.ಎಂ.ವಿಶ್ವನಾಥ್, ಪುರಸಭೆ ಉಪಾಧ್ಯಕ್ಷ ಎಂ.ಟಿ.ಪ್ರಶಾಂತ್, ಶೆಟ್ಟಹಳ್ಳಿ ಗ್ರಾ.ಪಂ.ಅಧ್ಯಕ್ಷ ಎಂ.ನಾಗೇಂದ್ರ, ಮಾಜಿ ಅಧ್ಯಕ್ಷ ದೊಡ್ಡಯ್ಯ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!