Thursday, September 19, 2024

ಪ್ರಾಯೋಗಿಕ ಆವೃತ್ತಿ

ನೈಸ್ ಹಗರಣದ ದಾಖಲೆ ದೆಹಲಿಯಲ್ಲಿ ಬಿಡುಗಡೆ – ಹೆಚ್.ಡಿ.ಕುಮಾರಸ್ವಾಮಿ

ನೈಸ್ ಹಗರಣದ ದಾಖಲೆಯನ್ನು ದೆಹಲಿಯಲ್ಲಿ ಬಿಡುಗಡೆ ಮಾಡುತ್ತೇನೆ. ರೈತರ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಹೊಡೆಯಲಾಗಿದೆ. ಆ ಎಲ್ಲ ದಾಖಲೆ ಸಂಗ್ರಹ ಮಾಡಿದ್ದೇನೆ ಎಂದು ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ನೈಸ್‌ ಅಕ್ರಮ ವಿಚಾರವಾಗಿ ಪ್ರಧಾನಿ ಮೋದಿಯವರಿಗೆ ಪ್ರಶ್ನೆ ಮಾಡುತ್ತೇನೆ. ನಾನು ಅವರಿಗೆ ದಾಖಲೆ ಕೊಟ್ಟು, ರೈತರಿಗೆ ನ್ಯಾಯ ಕೊಡಿಸುತ್ತೇನೆ” ಎಂದರು.

“ವರ್ಗಾವಣೆ ದಂಧೆಯಲ್ಲಿ ಒಂದು ಸಾವಿರ ಕೋಟಿಗಿಂತ ಅಧಿಕ ಹಣ ಸಂಗ್ರಹ ಮಾಡಿದ್ದಾರೆ. ಒಂದೊಂದು ಪೋಸ್ಟ್​​ಗೆ ಮೂರು ನಾಲ್ಕು ಜನಕ್ಕೆ ಲೆಟರ್ ಕೊಟ್ಟಿದ್ದಾರೆ. ಈ ಸರ್ಕಾರದ ವರ್ಗಾವಣೆ ಬಗ್ಗೆ ಮಾತನಾಡಲು ಅಸಹ್ಯ ಆಗುತ್ತದೆ” ಎಂದರು.

“ನಾನು ಮುಖ್ಯಮಂತ್ರಿಯಾಗಿದ್ದಾಗ ಏನು ಸಲಹೆ ಕೊಡುತ್ತಿದ್ದೆ ಎಂಬುದನ್ನು ಗೃಹಸಚಿವ ಪರಮೇಶ್ವರ್‌ ಹೇಳಲಿ. ಬಿಡಿಎ, ಪೊಲೀಸ್, ಅಧಿಕಾರಿಗಳ ವರ್ಗಾವಣೆಯಲ್ಲಿ ನಾನು ಯಾವುದಕ್ಕೆ ಹಸ್ತಕ್ಷೇಪ ಮಾಡಿದ್ದೇನೆ. ಏನೆಲ್ಲ ಆಯ್ತು ಅಂತ ನನಗೂ ಗೊತ್ತಿದೆ” ಎಂದು ತಿರುಗೇಟು ನೀಡಿದರು.

“ದುಡ್ಡಿಲ್ಲ ದುಡ್ಡಿಲ್ಲ ಅಂತ ಈ ಸರ್ಕಾರ ಹೇಳುತ್ತಿದೆ. ಯಾಕೆ ದುಡ್ಡಿಲ್ಲ? ಟ್ಯಾಕ್ಸ್ ಸಾಕಷ್ಟು ವಸೂಲಿ ಆಗಿದೆ. ಅಷ್ಟು ಹಣ ಇದ್ದರೂ ದುಡ್ಡಿಲ್ಲ ದುಡ್ಡಿಲ್ಲ ಅಂತಾರೆ” ಎಂದರು.

ಕಾಂಗ್ರೆಸ್ ಶಾಸಕ ಟಿ ಬಿ ಜಯಚಂದ್ರ ಬೆದರಿಕೆ ಕರೆ ವಿಚಾರವಾಗಿ ಪ್ರತಿಕ್ರಿಯಿಸಿ, “ನಿಮಗೆ ಯಾರು ಬೆದರಿಕೆ ಕರೆ ಮಾಡಿದ ರೈತರು ಯಾರು ಎಂಬುದು ಬಹಿರಂಗಪಡಿಸಲಿ” ಎಂದು ಹೇಳಿದರು.

“ಈ ಸರ್ಕಾರಕ್ಕೆ ಗ್ಯಾರಂಟಿ ವಿಚಾರ ಬಿಟ್ಟರೆ ಯಾವ ಅಭಿವೃದ್ಧಿ ವಿಚಾರವಿಲ್ಲ. ಟೋಪಿ ಹಾಕೋಕೆ ಒಂದು ಇತಿಮಿತಿ ಇದೆ. ಕಿವಿಗೆ ಹೂ ಇಟ್ಟುಕೊಂಡು ಜನರಿಗೆ ಟೋಪಿ ಹಾಕಲು ಹೊರಟ್ಟಿದ್ದೀರಾ? ಜನರ ತಲೆ ಮೇಲೆ ಹೂವಿನ ಕುಂಡ ಇಟ್ಟಿದ್ದೀರಿ” ಎಂದು ಸರ್ಕಾರದ ವಿರುದ್ಧ ಕುಮಾರಸ್ವಾಮಿ ಹರಿಹಾಯ್ದರು.

ಹಿಟ್ ಆ್ಯಂಡ್​ ರನ್ ವ್ಯಕ್ತಿ ನಾನಲ್ಲ

“ನಾನು ಕೆಲವು ವಿಚಾರ ಪ್ರಸ್ತಾಪ ಮಾಡುವುದು ಹುಡುಗಾಟಕ್ಕೆ ಅಲ್ಲ. ನಾನು ಹಿಟ್ ಆ್ಯಂಡ್​ ರನ್ ಜಾಯಮಾನದ ವ್ಯಕ್ತಿಯಲ್ಲ. ಹಿಟ್ ಆ್ಯಂಡ್​ ರನ್ ಇದ್ದರೆ ಅದು ಕಾಂಗ್ರೆಸ್. ಹಿಂದೆ ನೀವು ಸಾಕಷ್ಟು ಆರೋಪ ಮಾಡಿದ್ದೀರಿ. ಆದರೆ ಒಂದಾದರೂ ದಾಖಲೆ ಬಿಡುಗಡೆ ಮಾಡಿದ್ದೀರಾ? ನಿಮ್ಮದೆ ಸರ್ಕಾರ‌ ಇದೆ ದಾಖಲೆ ಯಾಕೆ ಬಿಡುಗಡೆ ಮಾಡಿಲ್ಲ” ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!