Friday, September 20, 2024

ಪ್ರಾಯೋಗಿಕ ಆವೃತ್ತಿ

”ಬದಲಾವಣೆ ಮಾಡುವ ಶಕ್ತಿ ನಿಮ್ಮ ಕೈಯಲ್ಲಿದೆ- ಯೋಗ್ಯರಿಗೆ ಮತ ನೀಡಿ” – ನಟ ನೀನಾಸಂ ಸತೀಶ್

ಈ ಬಾರಿಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಯುವಕರು ಹಾಗೂ ಪ್ರಜ್ಞಾವಂತ ನಾಗರೀಕರು ಪ್ರಜ್ಞೆಯಿಂದ ಮತದಾನ ಮಾಡಿ‌ ಈ ರಾಜ್ಯದ ಭವಿಷ್ಯ ಬರೆಯಬೇಕು. ಬದಲಾವಣೆ ಮಾಡುವ ಶಕ್ತಿ ನಿಮ್ಮ ಕೈಯಲ್ಲಿದ್ದು, ಜವಾಬ್ದಾರಿ ಅರಿತು ಕಡ್ಡಾಯವಾಗಿ ಯೋಗ್ಯ ವ್ಯಕ್ತಿಗೆ ಮತದಾನ ಮಾಡುವ ಮೂಲಕ ಇತರರಿಗೆ ಪ್ರೇರಣೆಯಾಗಬೇಕು ಎಂದು ಮಂಡ್ಯ ಯೂತ್ ಐಕಾನ್ ಆಗಿ ಆಯ್ಕೆಯಾಗಿರುವ ಚಲನಚಿತ್ರ ನಟ ನೀನಾಸಂ ಸತೀಶ್ ಸಲಹೆ ನೀಡಿದರು.

ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸ್ವೀಪ್ ಸಮಿತಿ ನಗರದ ಮಂಡ್ಯ ವಿಶ್ವವಿದ್ಯಾಲಯ ಆವರಣದಲ್ಲಿರುವ ಶಾರದಾ ಮಂದಿರದಲ್ಲಿ ಆಯೋಜಿಸಿದ್ದ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಮತ್ತು ಮತದಾರರ ಪಾಲ್ಗೊಳ್ಳುವಿಕೆ (ಸ್ವೀಪ್) ಕುರಿತು ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತಮ ಸಮಾಜ ಹಾಗೂ ರಾಷ್ಟ್ರ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಮತದಾನದಲ್ಲಿ ಕಡ್ಡಾಯವಾಗಿ ಭಾಗವಹಿಸಿ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಮತದಾನ ಮಾಡುವುದು ಹಕ್ಕು ಹಾಗೂ ಕರ್ತವ್ಯ. ಮತದಾನದ ಮಹತ್ವದ ಬಗ್ಗೆ ಜ್ಞಾನ ಹೆಚ್ಚಿಸಿಕೊಂಡು, ಸಮಾಜಕ್ಕೆ ಏನಾದರೂ ಒಳ್ಳೆಯದು ಮಾಡುವ ನಿಟ್ಟಿನಲ್ಲಿ ಆಲೋಚನೆ ಮಾಡಬೇಕಿದೆ ಎಂದರು.

ಯುವಕರು ಪ್ರಶ್ನೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸಮಾನವಾದ ಹಕ್ಕಿದೆ ನಮ್ಮ ಸುತ್ತಮುತ್ತಲೂ ಇರುವ ಸಮಸ್ಯೆಗಳ ಬಗ್ಗೆ ಪರಿಹಾರ ಮಾಡುವ ನಿಟ್ಟಿನಲ್ಲಿ ಚಿಂತಿಸಬೇಕಿದೆ . ಜೀವನದಲ್ಲಿ ಗುರಿ ಇಟ್ಟುಕೊಳ್ಳಿ, ಉತ್ತಮ ವ್ಯಾಸಂಗ ಮಾಡುವ ಮೂಲಕ ಆ ಗುರಿ ಸಾಧಿಸಿ, ಸಮಾಜಕ್ಕೆ ನಮ್ಮಿಂದ ಏನಾದರೂ ಸಹಾಯ ಆಗಬೇಕು. ಆಗ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು.

ಶೇಕಡವಾರು ಮತದಾನ ಹೆಚ್ಚಲಿ
ಕಳೆದ ವಿಧಾ‌ನಸಭಾ ಚುನಾವಣಾಯಲ್ಲಿ ಶೇಕಡವಾರು ಮತದಾನದಲ್ಲಿ‌ ಮಂಡ್ಯ ಜಿಲ್ಲೆ ಎರಡನೇ ಸ್ಥಾನದಲ್ಲಿತ್ತು, ಈ ಬಾರಿ ಜಿಲ್ಲೆ ಪ್ರಥಮ ಸ್ಥಾನ ಪಡೆಯಬೇಕು. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ತಿಳಿಸಿದರು.

ಈಗಾಗಲೇ ಮತದಾರರಲ್ಲಿ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ರಾಯಭಾರಿಗಳಾಗಿ ಚಲನಚಿತ್ರ ನಟ ನೀನಾಸಂ ಸತೀಶ್ ಹಾಗೂ ವಿಕಲಚೇತನ ರಾಯಭಾರಿಯಾಗಿ ಡಾ.ಚಲುವರಾಜ್ ಅವರನ್ನು ಆಯ್ಕೆ ಮಾಡಿಕೊಂಡು ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಸುಶಿಕ್ಷಿತರೇ ಹಾಗೂ ವಿದ್ಯಾವಂತರು ಹೆಚ್ಚಿನ ಸಂಖ್ಯೆಯಲ್ಲಿರುವ ನಗರ ಪ್ರದೇಶಗಳಲ್ಲಿ ಶೇ.70 ರಷ್ಟು ಮತದಾನವಾಗುತ್ತಿದೆ. ಇಂತಹ ಕಡೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ. ಈಗಾಗಲೇ ಚುನಾವಣೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸಿದೆ. ಪ್ರಜ್ಞಾವಂತ ನಾಗರೀಕರು ಕಡ್ಡಾಯವಾಗಿ ಮತ ಹಾಕುವ ಮೂಲಕ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಿದೆ. ಮತಗಟ್ಟೆಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಮಂಡ್ಯ ವಿಶ್ವವಿದ್ಯಾಲಯ ಕುಲಪತಿ ಡಾ.ಪುಟ್ಟರಾಜು, ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು, ಜಿಲ್ಲಾ ವಿಶೇಷ ಚೇತನ ರಾಯಭಾರಿ ಡಾ.ಎಂ.ಎಸ್.ಚಲುವರಾಜು, ಮಂಡ್ಯ ವಿಶ್ವವಿದ್ಯಾಲಯದ ಕುಲಸಚಿವ ಡಾ.ರಂಗರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಧನಂಜಯ್, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕ ಎಸ್.ಟಿ.ಜವರೇಗೌಡ ಹಾಗೂ ವಾರ್ತಾ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ ಹಾಜರಿದ್ದರು.

ಬೈಕ್ ರ್‍ಯಾಲಿ
ಮಂಡ್ಯ ನಗರದ ರೋಟರಿ ಶಾಲೆ ಆವರಣದಲ್ಲಿ ಮತದಾನ ಜಾಗೃತಿಯ ಜಾಥಕ್ಕೆ ನಟ ನೀನಾಸಂ ಸತೀಶ್ ಅವರು ಹಸಿರು ನಿಶಾನೆ ತೋರಿಸಿ ಚಾಲನೆ ‌ನೀಡಿದರು. ನಂತರ ಕಡ್ಡಾಯವಾಗಿ ಮತದಾನ ಮಾಡುವ ಕುರಿತು ಪ್ರತಿಜ್ಞಾ ವಿಧಿ ಭೋಧಿಸಲಾಯಿತು. ಪಿಂಕ್ ಮತಗಟ್ಟೆಗಳಲ್ಲಿ ಕಲ್ಪಿಸಿರುವ ಮೂಲಭೂತ ಸೌಕರ್ಯಗಳ ಬಗ್ಗೆ ತಿಳಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!