Thursday, September 19, 2024

ಪ್ರಾಯೋಗಿಕ ಆವೃತ್ತಿ

ಆರೋಗ್ಯ ಭಾಗ್ಯಕ್ಕಿಂತ ಮಿಗಿಲಾದ ಭಾಗ್ಯ ಯಾವುದೂ ಇಲ್ಲ- ನಿರ್ಮಲಾನಂದಶ್ರೀ

ಆರೋಗ್ಯ ಭಾಗ್ಯಕ್ಕಿಂತ ಮಿಗಿಲಾದ ಭಾಗ್ಯವು ಯಾವುದೂ ಇಲ್ಲ. ಹಾಗಾಗಿ ಪ್ರತಿಯೊಬ್ಬರೂ ಅನಾರೋಗ್ಯವನ್ನು ನಿರ್ಲಕ್ಷ್ಯ ಮಾಡದೇ ತಕ್ಷಣ ವೈದ್ಯರನ್ನು ಬೇಟಿ ಮಾಡಿ ಸೂಕ್ತ ಚಿಕಿತ್ಸೆರ ಪಡೆದುಕೊಳ್ಳಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಕೆ.ಆರ್.ಪೇಟೆ ಪಟ್ಟಣದಲ್ಲಿ ಅತ್ಯಾಧುನಿಕ ಆರೋಗ್ಯ ಚಿಕಿತ್ಸಾ ಸೌಲಭ್ಯಗಳನ್ನು ಹೊಂದಿರುವ ಮಾದೇಗೌಡ ಮೆಮೋರಿಯಲ್ ಹೈಟೆಕ್ ಆಸ್ಪತ್ರೆಯ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಇಂದಿನ ಒತ್ತಡದ ಜೀವನದಿಂದಾಗಿ ನಾವು ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದೇವೆ. ಸಣ್ಣ ಮಕ್ಕಳು, ವಿದ್ಯಾರ್ಥಿಗಳು ಸೇರಿದಂತೆ ಯುವಜನರಿಂದ ಹಿಡಿದು ವಯೋವೃದ್ಧರವರೆಗೆ ಇಂದು ಸಕ್ಕರೆ ಖಾಯಿಲೆ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಹೃದ್ರೋಗದಿಂದ ಅಕಾಲಿಕವಾಗಿ ಸಾಯುವವರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂದು ನಮಗೆ ಸಿಕ್ಕಿ ಮಾತನಾಡಿಸಿ ಕುಶಲೋಪರಿ ನಡೆಸಿದವರು ನಾಳೆ ಇಹಲೋಕಕ್ಕೆ ಹೋದರು ಎಂದು ತಿಳಿದಾಗ ಮನಸ್ಸಿಗೆ ಭಾರೀ ನೋವಾಗುತ್ತದೆ. ಮಾನವನ ಜೀವನ ಎಂಬುದು ನೀರಮೇಲಿನ ಗುಳ್ಳೆಯಿದ್ದಂತೆ ಎಂಬಂತಾಗಿದೆ, ಆದ್ದರಿಂದ ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕೆಂದರು.

ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮಾತನಾಡಿ, ಮೈಸೂರು, ಬೆಂಗಳೂರು ಮಹಾನಗರಗಳಲ್ಲಿ ದೊರೆಯುವ ವೈದ್ಯಕೀಯ ಸೌಲಭ್ಯಗಳನ್ನು ಒಳಗೊಂಡಿರುವ ಅತ್ಯಾಧುನಿಕ ತಂತ್ರಜ್ಞಾನದ ಚಿಕಿತ್ಸೆಗಳನ್ನು ಒಳಗೊಂಡಿರುವ ಹೈಟೆಕ್ ಆಸ್ಪತ್ರೆಯನ್ನು ಮೊಸಳೇಕೊಪ್ಪಲು ಗ್ರಾಮದ ಪ್ರಗತಿಪರ ರೇಷ್ಮೆ ಬೆಳೆಗಾರರಾದ ಬೋರೇಗೌಡ ಅವರ ಪುತ್ರ ಡಾ.ಲೋಹಿತ್ ಅವರು ಗ್ರಾಮೀಣ ಪ್ರದೇಶದ ಜನರಿಗೆ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ನೀಡಬೇಕೆಂಬ ಸದಾಶಯದಿಂದ ಹೈಟೆಕ್ ಆಸ್ಪತ್ರೆಯನ್ನು ಕೆ.ಆರ್.ಪೇಟೆ ಪಟ್ಟಣದಲ್ಲಿ ಆರಂಭಿಸಿದ್ದಾರೆ. ಇನ್ನು ಮುಂದೆ ನಮ್ಮ ತಾಲೂಕಿನ ಜನರು ಮೈಸೂರು ಸೇರಿದಂತೆ ಮಹಾನಗರಗಳಿಗೆ ಹೋಗಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಹೋಗುವುದು ತಪ್ಪಿದೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಿ.ಪ್ರಕಾಶ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು,  ಮಂಡ್ಯದ ಕೊಮ್ಮೇರಹಳ್ಳಿ ವಿಶ್ವಮಾನವ ಕ್ಷೇತ್ರದ ಪುರುಷೋತ್ತಮಾನಂದ ಸ್ವಾಮೀಜಿ, ಬೆಡದಹಳ್ಳಿಯ ಪಂಚಭೂತೇಶ್ವರ ಮಠದ ರುದ್ರಮುನಿಸ್ವಾಮೀಜಿ, ಪುರಸಭೆಯ ಅಧ್ಯಕ್ಷ ಎನ್.ನಟರಾಜು, ತಾಲೂಕು ಆರೋಗ್ಯಾಧಿಕಾರಿ ಡಾ.ಅಜಿತ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಎಸ್.ಬಸವೇಗೌಡ, ಆರ್.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ್, ಕೆಯುಐಡಿಎಫ್‌ಸಿ ಮಾಜಿ ರಾಜ್ಯಾಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ, ಪುರಸಭೆಯ ಮಾಜಿ ಅಧ್ಯಕ್ಷ ಕೆ.ಟಿ.ಗಂಗಾಧರ್,  ಕಾಂಗ್ರೆಸ್ ಮುಖಂಡರಾದ ವಿಜಯರಾಮೇಗೌಡ, ಕಿಕ್ಕೇರಿ ಸುರೇಶ್, ಬಿ.ನಾಗೇಂದ್ರಕುಮಾರ್, ಚಟ್ಟಂಗೆರೆ ಬಿ.ನಾಗೇಶ್, ಒಕ್ಕಲಿಗರ ಸಂಘದ ಜಿಲ್ಲಾ ಉಪಾಧ್ಯಕ್ಷ ನಾಟನಹಳ್ಳಿ ಎನ್.ಎಸ್.ಗಂಗಾಧರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!