Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಣ್ಣ ನೀರಾವರಿ ಇಲಾಖೆಯ ಗೌರವ ಹೆಚ್ಚಿಸಿದ್ದು ಸಿ‌.ಎಸ್.ಪುಟ್ಟರಾಜು : ನಿರ್ಮಲಾನಂದಶ್ರೀ

ಸಣ್ಣ ನೀರಾವರಿ ಇಲಾಖೆಯೆಂದರೆ ಮೂಗು ಮುರಿಯುತ್ತಿದ್ದ ಸಂದರ್ಭದಲ್ಲಿ ಆ ಖಾತೆಯ ಸಚಿವರಾಗಿ ಉತ್ತಮ ಕೆಲಸ ಮಾಡುವ ಮೂಲಕ ಸಣ್ಣ ನೀರಾವರಿ ಇಲಾಖೆಯ ಗೌರವ ಹೆಚ್ಚಿಸಿದ್ದು ಶಾಸಕ ಸಿ.ಎಸ್.ಪುಟ್ಟರಾಜು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಗುಣಗಾನ ಮಾಡಿದರು.

ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ಬುಧವಾರ ನಡೆದ ಶ್ರೀರಾಮೇಶ್ವರ, ಶ್ರೀಆಂಜನೇಯಸ್ವಾಮಿ ಮತ್ತು ಪರಿವಾರ ದೇವಸ್ಥಾನ, ಉದ್ಯಾನವನ ಲೋಕಾರ್ಪಣೆ ಹಾಗೂ ಶ್ರೀರಾಮೇಶ್ವರ ಸಮುದಾಯ ಭವನ ಉದ್ಘಾಟನೆ ಸಮಾರಂಭದ ಭಾಗವಹಿಸಿ ದೇವಾಲಯಗಳು ಹಾಗೂ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದರು.

ಸಿ.ಎಸ್.ಪುಟ್ಟರಾಜು ಅವರು ಸಣ್ಣನೀರಾವರಿ ಸಚಿವರಾಗುವ ಮೊದಲು, ಸಣ್ಣ ನೀರಾವರಿ ಖಾತೆ ಎಂದರೆ ಎಲ್ಲರೂ ನನಗೆ ಬೇಡ ಎಂದು ಮೂಗು ಮುರಿಯುತ್ತಿದ್ದರು. ಆದರೆ, ಸಿ.ಎಸ್.ಪುಟ್ಟರಾಜು ಅವರು ಕಳೆದ ಸರ್ಕಾರದಲ್ಲಿ ಸಣ್ಣ ನೀರಾವರಿ ಸಚಿವರಾಗಿ ಕೆಲಸ ಮಾಡಲು ಸಿಕ್ಕ ಅಲ್ಪಾವಧಿ ಕಾಲಾವಕಾಶದಲ್ಲಿ ಉತ್ತಮವಾಗಿ ಕೆಲಸ ಮಾಡಿ ರೈತರಿಗೆ ಉತ್ತಮ ನೀರಾವರಿ ಸೌಲಭ್ಯ, ಕೆರೆಕಟ್ಟೆಗಳು,ಚೆಕ್‌ ಡ್ಯಾಂಗಳ ನಿರ್ಮಾಣ ಮಾಡಿಕೊಡುವ ಮೂಲಕ ಸಣ್ಣನೀರಾವರಿ ಖಾತೆಗೆ ಗೌರವ ಹೆಚ್ಚಿಸುವ ಕೆಲಸ ಮಾಡಿದರು ಎಂದು ಬಣ್ಣಿಸಿದರು.

ಸಿ.ಎಸ್.ಪುಟ್ಟರಾಜು ಅವರ ಸೇವೆ ಕೇವಲ ಚಿನಕುರಳಿ, ಮೇಲುಕೋಟೆ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ, ಚಿನಕುರಳಿಯಿಂದ ಆದಿಚುಂಚಗಿರಿಯವರೆಗೂ ಅಭಿವೃದ್ದಿಯ ಕೆಲಸ ಮಾಡಿದ್ದಾರೆ. ಸಣ್ಣ ನೀರಾವರಿ ಸಚಿವರಾಗಿದ್ದ ವೇಳೆಯಲ್ಲಿ ಚುಂಚನಗಿರಿ ಕ್ಷೇತ್ರದಲ್ಲೂ ಹಲವು ಕೆರೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಅವರು ಕ್ರಿಯಾಶೀಲ ವ್ಯಕ್ತಿ ಎಂದರು.

ಹಿರಿಯರನ್ನು ಗೌರವಿಸುವ ವಿನಯತೆ, ಸಹನಶೀಲತೆ ಹೊಂದಿರುವ ಪುಟ್ಟರಾಜು ಅವರು, ಚಿನಕುರಳಿ ಗ್ರಾಮದಲ್ಲಿ ಶ್ರೀರಾಮೇಶ್ವರ ಸಮುದಾಯ ಭವನ, ಪರಿವಾರ ದೇವಸ್ಥಾನಗಳು, ಸುಂದರ ಪಾರ್ಕ್ ಗಳು, ಕೆರೆಕಟ್ಟೆಗಳನ್ನು ನಿರ್ಮಾಣ ಮಾಡಿ ಕೊಟ್ಟಿದ್ದಾರೆ. ಗ್ರಾಮದ ಯುವಕರು ಅವುಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯೋನ್ಮುಕರಾಗಬೇಕು ಎಂದು ತಿಳಿಸಿದರು.

ಶ್ರೀಪುರುಷೊತ್ತಮನಂದನಾಥ ಸ್ವಾಮೀಜಿ ಮಾತನಾಡಿ, ಶಾಸಕ ಸಿ.ಎಸ್.ಪುಟ್ಟರಾಜು ಅವರಿಗೆ ಗುರುಗಳ ಕೃಪೆ ಇದೆ. ಚುಂಚನಗಿರಿ ಕ್ಷೇತ್ರದ ನಿಷ್ಠಾವಂತ ಭಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪುಟ್ಟರಾಜು ಅವರು ನಮ್ಮ ಗುರುಗಳು ಹೇಳಿದಂತೆ ನಿಜವಾಗಿಯೂ ದೊಡ್ಡರಾಜುನಂತೆ ಸೇವೆ ಸಲ್ಲಿಸಿದ್ದಾರೆ. ಮಠದ ಆಶೀರ್ವಾದ ಸದಾ ಪುಟ್ಟರಾಜು ಅವರ ಮೇಲಿರಲಿದೆ ಎಂದರು.

ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, ನಾವು ಚಿಕ್ಕವಯಸ್ಸಿನಲ್ಲಿಯೇ ನಮ್ಮ ತಾಯಿ ಕಳೆದುಕೊಂಡರೂ ಸಹ ಚಿನಕುರಳಿ ಗ್ರಾಮದ ಜನತೆ ನಮಗೆ ತಬ್ಬಲಿ ಮನೋಭಾವ ಬಾರದಂತೆ ಮನೆ ಮಕ್ಕಳಂತೆ ನೋಡಿಕೊಂಡು ಬೆಳೆಸಿದರು.ಚಿಕ್ಕ ವಯಸ್ಸಿನಲ್ಲಿಯೇ ಯುವಕರು ಶ್ರೀರಾಮೇಶ್ವರ ಯುವಕರ ಬಳಗದ ಅಧ್ಯಕ್ಷನಾಗಿ ನೇಮಿಸಿ ನನ್ನನ್ನು ನಾಯಕನಾಗಿ ಬೆಳೆಸಿದರು. ಅವರೆಲ್ಲರ ಬಯಕೆಯಂತೆ ಚಿನಕುರಳಿ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರ ಸಹಕಾರದಿಂದ ಗ್ರಾಮದ ಸಮುದಾಯ ಭವನ, ದೇವಸ್ಥಾನಗಳನ್ನು ನಿರ್ಮಾಣ ಮಾಡಿ ಉದ್ಘಾಟನೆ ಮಾಡಿಸಲಾಗಿದೆ ಎಂದು ಹೇಳಿದರು.

ಚಿನಕುರಳಿಗೆ ಆಗಮಿಸಿದ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಮಹಿಳೆಯರು ಪೂರ್ಣಕುಂಭ ಸ್ವಾಗತ ಮಾಡಿ ಬರಮಾಡಿಕೊಂಡರು. ವಿವಿಧ ಕಲಾತಂಡಗಳೊಂದಿಗೆ ಅದ್ದೂರಿಯಾಗಿ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ಮಾಡಿಕೊಂಡು ವೇದಿಕೆ ಕರೆತಂದರು. ಇದೇ ವೇಳೆ ಹೊಸದಾಗಿ ನಿರ್ಮಿಸಿರುವ ಎಚ್.ಡಿ.ದೇವೇಗೌಡ, ಕುವೆಂಪು ಹಾಗೂ ಬಾಲಗಂಗಾಧರನಾಥ ಸ್ವಾಮೀಜಿಗಳ ಹೆಸರಿನ ಪಾರ್ಕ್ ಉದ್ಘಾಟನೆ ಮಾಡಲಾಯಿತು.

ಸಮಾರಂಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಅಪ್ಪಾಜಿ ಗೌಡ, ಜಿಪಂ ಮಾಜಿ ಸದಸ್ಯ ಸಿ.ಅಶೋಕ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಗುರುಸ್ವಾಮಿ, ಚಲುವರಾಜು, ವೈದ್ಯರಾದ ಡಾ.ಲಕ್ಷ್ಮೇಗೌಡ, ಡಾ.ಸೋಮಶೇಖರ್, ಡಾ.ತಿಬ್ಬೇಗೌಡ, ರಮೇಶ್‌ಮಂಜೇಗೌಡ, ಶಾಂತರಾಮು, ಡಾ.ಎಚ್.ಆರ್.ತಿಮ್ಮೇಗೌಡ, ಜಯಕುಮಾರಿ, ಬೆಳ್ಳಾಳೆ ಮಲ್ಲೇಶ್, ಎಚ್.ಎಲ್.ಶಿವಣ್ಣ, ರಮೇಶ್, ಮಾದಪ್ಪ, ನಾಗರಾಜು, ಯಜಮಾನರಾದ ತಮ್ಮಣ್ಣೇಗೌಡ, ಸುಬ್ಬೇಗೌಡ ಸೇರಿದಂತೆ ಹಲವರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!