Friday, September 20, 2024

ಪ್ರಾಯೋಗಿಕ ಆವೃತ್ತಿ

ಮಮತೆಯ ಮಡಿಲು ನಿತ್ಯ ಅನ್ನ ದಾಸೋಹಕ್ಕೆ 5 ವರ್ಷ: ಡಾ. ಹೇಮಲತಾ ಮೆಚ್ಚುಗೆ

ಮಹಿಳೆಯರ ಆರೋಗ್ಯ ಸುರಕ್ಷಿತವಾಗಿದ್ದರೆ ಕುಟುಂಬದ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಅಕ್ಕಮಹಾದೇವಿ ಮಹಿಳಾ ವಿವಿ ಪ್ರಾಧ್ಯಾಪಕಿ ಡಾ. ಎಚ್.ಎಂ.ಹೇಮಲತಾ ತಿಳಿಸಿದರು.

ಮಂಡ್ಯ ನಗರದ ಮಿಮ್ಸ್‌ ಆವರಣದಲ್ಲಿನ ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿಯ 5ನೇ ವರ್ಷದ ಮಮತೆಯ ಮಡಿಲುವಿನ ನಿತ್ಯ ಅನ್ನದಾಸೋಹದ ಕಾಯಕದಲ್ಲಿ ಭಾಗವಹಿಸಿ ಮಾತನಾಡಿದರು.

ಆಸ್ಪತ್ರೆಯ ಅಂಗಳಕ್ಕೆ ಬರುವ ರೋಗಿಗಳಿಗೆ ಆರೋಗ್ಯದೊಡನೆ ಆಹಾರ ಸಿಗುವುದು ತುಂಬಾ ಸಂತಸ ತಂದಿದೆ. ವಿಶೇಷವಾಗಿ ಮಹಿಳೆಯರ ಮಕ್ಕಳ ಆಹಾರ ಕ್ರಮದ ಬಗ್ಗೆ ಆಸಕ್ತಿ ವಹಿಸಿ ದೀರ್ಘ ಕಾಲದಿಂದ ನಡೆಸುತ್ತಿರುವ ಈ ಕಾಯಕಕ್ಕೆ ಮೆಚ್ಚುಗೆ ಇದೆ. ಸಾರ್ವಜನಿಕರು ಮತ್ತು ಆಸಕ್ತರು ಇದರ ಸದುಪಯೋಗವನ್ನು ಉತ್ತಮ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದರು.

ಜಿಲ್ಲೆಯಲ್ಲಿ ಹೆಣ್ಣು ಶಿಶುವಂತಹ ಹತ್ಯೆಗಳು ಜರುಗುತ್ತಿರುವ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಸುರಕ್ಷತೆಗಾಗಿ ಇಂತಹ ಕಾಯಕಗಳು ತುಂಬಾ ಉಪಯುಕ್ತವೆನಿಸಿವೆ ಎಂದು ಅಭಿಪ್ರಾಯಪಟ್ಟರು.
ಆರೋಗ್ಯ ಸೇವೆಯನ್ನು ಸಮರ್ಪಕವಾಗಿ ಒದಗಿಸುತ್ತಿರುವ ಸರ್ಕಾರ, ಸಾಂತ್ವನ ಹೇಳುವ ರೀತಿಯಲ್ಲಿ ಮಮತೆಯ ಮಡಿಲು ದಾಸೋಹ ಕಾಯಕವನ್ನು ನಿರಂತರವಾಗಿ ನೆರವೇರಿಸುತ್ತಿರುವುದು ಇತರರಿಗೆ ಮಾದರಿ ಎನಿಸುವ ಸೇವೆಯಾಗಿದೆ ಎಂದರು.

ಮಹಿಳೆಯರ ಆರೋಗ್ಯದಲ್ಲಿ ಸಾಕಷ್ಟು ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುತ್ತಿರುವುದನ್ನು ಗಮನಿಸಿದಾಗ ಮಹಿಳೆಯರ ಆರೋಗ್ಯ ಸಾಕ್ಷರತೆಯ ಬಗ್ಗೆ ಜಾಗೃತಿ ಮೂಡಿಸುವುದು ತೀರಾ ಅವಶ್ಯಕ ಎನಿಸಿದೆ. ಸ್ವಯಂ ಸೇವಾ ಸಂಸ್ಥೆಗಳು ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಗೆ ವಿಶೇಷ ಗಮನ ಹರಿಸಿದಾಗ ಸಮುದಾಯದಲ್ಲಿ ಉತ್ತಮ ವಾತಾವರಣ ನೆಲೆಸಲು ಸಾಧ್ಯವಾಗುತ್ತದೆ ಎಂದರು.

ಪ್ರಜ್ಞಾವಂತರು ಈ ಸೇವೆಯ ಪ್ರಯೋಜನವನ್ನು ಸಾರ್ವತ್ರಿಕರಣಗೊಳಿಸುವುದು ಅಗತ್ಯವೆನಿಸಿದೆ. ಈ ಸೇವೆಯೊಟ್ಟಿಗೆ ಹೆಣ್ಣು ಭ್ರೂಣ ಹತ್ಯೆಯಂತಹ ಪ್ರಕರಣಗಳು ಜಿಲ್ಲೆಯಲ್ಲಿ ತಲೆ ತಗ್ಗಿಸುವ ಘಟನೆಗಳಾಗಿವೆ. ಈ ಬಗ್ಗೆ ಇಲ್ಲಿ ನೆರೆದಿರುವ ಮಹಿಳೆಯರು ಇದನ್ನು ತಡೆಗಟ್ಟಲು ಬಹುಮುಖ್ಯವಾದ ಪಾತ್ರವನ್ನು ವಹಿಸಬೇಕಾಗಿದೆ ಎಂದರು.

ಪರಿಸರ ಸಂಸ್ಥೆಯ ಮಮತೆಯ ಮಡಿಲು ಮುಖ್ಯಸ್ಥ ಮಂಗಲ ಎಂ. ಯೋಗೀಶ್ ಮಾತನಾಡಿ, ಜನರಿಂದ ಜನರಿಗೆ ಸೇವೆ ಒದಗಿಸುವ ಕಾಯಕವು ಜನರ ಸಹಭಾಗಿತ್ವದಲ್ಲಿ ನೆರವೇರುತ್ತಾ ಬಂದಿದೆ. ಪ್ರತಿನಿತ್ಯ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಈ ದಾಸೋಹ ಸೇವೆಯನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ. ಅಗತ್ಯವಿರುವವರಿಗೆ ಈ ಆಹಾರವು ಲಭಿಸುತ್ತದೆ ಎಂದು ಹೇಳಿದರು.

ರಂಗ ಕಲಾವಿದರ ಸುರೇಶ್ ಕಾರಸವಾಡಿ ರಂಗಗೀತೆಗಳನ್ನು ಸಾದರಪಡಿಸಿದರು. ಯುವ ಸಂಘಟಕ ಬಿ.ಎಸ್. ಹರೀಶ್, ಮಮತೆಯ ಮಡಿಲುವಿನ ಶ್ರೀನಾಥ್, ಸುರೇಶ್ ಇತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!