Thursday, September 19, 2024

ಪ್ರಾಯೋಗಿಕ ಆವೃತ್ತಿ

ಮುಂದಿನ ವರ್ಷದಿಂದ ಎಸೆಸ್ಸೆಲ್ಸಿ ಪರೀಕ್ಷೆಗಿಲ್ಲ ಗ್ರೇಸ್ ಮಾರ್ಕ್ಸ್: ಮಧು ಬಂಗಾರಪ್ಪ

ಈ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ 20ರಷ್ಟು ಗ್ರೇಸ್‌ ಮಾರ್ಕ್ಸ್ ಕೊಟ್ಟು ವಿದ್ಯಾರ್ಥಿಗಳನ್ನ ಪಾಸ್ ಮಾಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, “ಮುಂದಿನ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗ್ರೇಸ್‌ ಮಾರ್ಕ್ಸ್‌ ಇರುವುದಿಲ್ಲ. ಈ ವರ್ಷ ಮಾತ್ರ ಗ್ರೇಸ್‌ ಮಾರ್ಕ್ಸ್ ಕೊಡಲು ತೀರ್ಮಾನ ಕೈಗೊಳ್ಳಲಾಗಿತ್ತು. ಈಗ ಕೊಟ್ಟಿರುವ ಗ್ರೇಸ್‌ ಮಾರ್ಕ್ಸ್‌ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ” ಎಂದು ತಿಳಿಸಿದ್ದಾರೆ.

ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ನೀಡಿದ 20% ಗ್ರೇಸ್ ಅಂಕಗಳಿಗೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ರಾಜ್ಯಾದ್ಯಂತ ತೀವ್ರ ಚರ್ಚೆಯಾದ ಬಳಿಕ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ. ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮೇಲೆ ಗರಂ ಆಗಿದ್ದಾರೆ ಎಂದು ವರದಿಯಾಗಿದೆ.

ಸಿಎಂ ಸಭೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 20%ರಷ್ಟು ಗ್ರೇಸ್ ಮಾರ್ಕ್ಸ್‌ ನೀಡಿದರ ಬಗ್ಗೆ ಚರ್ಚೆ ನಡೆಸಲಾಗಿದೆ. ಯಾರನ್ನ ಕೇಳಿ ಹೆಚ್ಚುವರಿ ಅಂಕ ಕೊಟ್ಟಿದ್ದೀರಾ? ಕೊಡುವ ಅಗತ್ಯತೆ ಏನಿತ್ತು? ಶಿಕ್ಷಣದ ಗುಣಮಟ್ಟ ಕುಸಿದಿದ್ದೇಕೆ ಎಂದು ಶಿಕ್ಷಣ ಇಲಾಖೆ ಕಾರ್ಯದರ್ಶಿಯನ್ನು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಸಲ ಗ್ರೇಸ್ ಮಾರ್ಕ್ಸ್ ಹೆಚ್ಚಿಸಿದ್ದಕ್ಕೆ ಶಿಕ್ಷಣ ತಜ್ಞರು ಸೇರಿ ಹಲವರಿಂದ ವಿರೋಧ ವ್ಯಕ್ತವಾಗಿದೆ.

ಈ ಬಗ್ಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಗ್ರೇಸ್ ಮಾರ್ಕ್ಸ್ ಕೊಡೋದು ಅವೈಜ್ಞಾನಿಕ ಎಂಬ ಬಗ್ಗೆ ಅಭಿಪ್ರಾಯಗಳು ಬರುತ್ತಿವೆ. ಹೀಗಾಗಿ, ಮುಂದಿನ ಶೈಕ್ಷಣಿಕ ವರ್ಷದಿಂದ ಗ್ರೇಸ್‌ ಮಾರ್ಕ್ಸ್ ಕೊಡುವ ಬಗ್ಗೆ ಮರು ಪರಿಶೀಲನೆ ಮಾಡುವಂತೆ ಸೂಚನೆ ನೀಡಿದ್ದಾರೆ.

ಮೇ 17ರಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಈ ನಿರ್ಧಾರ ಕೈಕೊಂಡರು. ಈ ಹಿನ್ನೆಲೆ, ಮುಂದಿನ ವರ್ಷದಿಂದ ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಲಾಗುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

“ಈ ವರ್ಷ ಕೊಟ್ಟಿರುವ ಗ್ರೇಸ್ ಮಾರ್ಕ್ಸ್ ನಲ್ಲಿ ಯಾವುದೂ ಬದಲಾವಣೆ ಇಲ್ಲ. ಮುಂದಿನ ವರ್ಷದಿಂದ 20% ಗ್ರೇಸ್ ಮಾರ್ಕ್ಸ್ ಕೊಡುವ ಪದ್ಧತಿ ಇರಲ್ಲ. ಇನ್ನು ಮುಂದೆ ಹಿಂದಿನ ಪದ್ಧತಿಯೇ ಮುಂದುವರಿಯಲಿದೆ” ಎಂದು ಸ್ಪಷ್ಟನೆ ನೀಡಿದ್ದಾರೆ.

“ಪರೀಕ್ಷಾ ನಡವಳಿಕೆ ಸರಿ ಮಾಡಲು ಮುಂದಾಗಿದ್ದೆವು. ಈ ವರ್ಷ ಮಾತ್ರ ಗ್ರೇಸ್ ಮಾರ್ಕ್ಸ್ ಕೊಡುವ ತೀರ್ಮಾನ ಮಾಡಲಾಗಿತ್ತು. ಯಾವಾಗಲೂ 5% ಗ್ರೇಸ್ ಅಂಕ ಇರ್ತಿತ್ತು. ಕೋವಿಡ್ ವೇಳೆ 10% ಮಾಡಲಾಗಿತ್ತು. ಇದೀಗ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿ ಪಾಸಾಗುವಂತೆ ಮಾಡಲು 20% ಗ್ರೇಸ್ ಮಾರ್ಕ್ಸ್ ನೀಡಲಾಗಿತ್ತು. ಇದು ಈ ವರ್ಷಕ್ಕೆ ಯಾವ ಸಮಸ್ಯೆ ಇಲ್ಲ. ಮುಂದಿನ ವರ್ಷದಿಂದ ಇದು ಇರಲ್ಲ” ಎಂದು ತಿಳಿಸಿದ್ದಾರೆ.

ಗ್ರೇಸ್ ನೀಡುವ ಪದ್ಧತಿಯು ಅತ್ಯಂತ ಹಾಸ್ಯಾಸ್ಪದ

“ರಾಜ್ಯದಾದ್ಯಂತ ಈ ಗ್ರೇಸ್ ನೀಡಿ ಪ್ರಕಟಿಸಿರುವ ಫಲಿತಾಂಶ ಪ್ರಶ್ನಾರ್ಹವಾಗಿದೆ ಮತ್ತು ತಾರತಮ್ಯದಿಂದ ಕೂಡಿದೆ.  ಗಡಿನಾಡು ಅನ್ಯ ಭಾಷಾ ವಿದ್ಯಾರ್ಥಿಗಳು ಮತ್ತು ಹಿಂದುಳಿದ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ತುಂಬಲಾರದ ನಷ್ಟವಾಗಿದೆ. ಹೀಗಾಗಿ, ಈ ಗ್ರೇಸ್ ನೀಡುವ ಪದ್ಧತಿಯು ಅತ್ಯಂತ ಹಾಸ್ಯಾಸ್ಪದವಾಗಿದೆ” ಎಂದು ಅಭಿವೃಧ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ .ವಿ.ಪಿ ಹೇಳಿದ್ದಾರೆ.

“ಇಷ್ಟಕ್ಕೂ ಶೈಕ್ಷಣಿಕ ಗುಣಮಟ್ಟವು  ಕೇವಲ ಮೌಲ್ಯಮಾಪನದಿಂದ ಕಂಡುಕೊಳ್ಳುವುದಲ್ಲ. ಶಾಲಾ ಶೈಕ್ಷಣಿಕ ಮೂಲಸೌಕರ್ಯದ ನಿಟ್ಟಿನಲ್ಲಿ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತದೆ. ಎಷ್ಟು ಶಾಲೆಗಳಲ್ಲಿ ವಿಷಯವಾರು ಶಿಕ್ಷಕರ ಕೊರತೆ ಇದೆ. ಖಾಯಂ ಶಿಕ್ಷಕರಿರಬೇಕಾದ ಜಾಗದಲ್ಲಿ ಸುಮಾರು 35 ಸಾವಿರ ಅತಿಥಿ ಶಿಕ್ಷಕರು ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಣವು ದಿನದಿಂದ ದಿನಕ್ಕೆ ಸೊರಗುತ್ತಿದೆ. ಹೀಗಿರುವಾಗ, ಮಂಡಳಿಯ ಪರೀಕ್ಷಾ ಮೌಲ್ಯಮಾಪನ ಪದ್ಧತಿ, ತೇರ್ಗಡೆಯ ನಿಯಮಗಳು ಹಾಗೂ ಈ ಗ್ರೇಸ್ ನೀಡುವಂತಹ ವಿಧಾನವು ಅನ್ಯಾಯದ ಪರಮಾವಧಿಯಾಗಿದೆ” ಎಂದಿದ್ದಾರೆ.

“ಶಿಕ್ಷಣ ಇಲಾಖೆಯ ಈ ಹೆಗ್ಗಳಿಕೆ ರಾಜ್ಯದಲ್ಲಿ ಕಲಿಕಾ ಬಿಕ್ಕಟ್ಟಿನ ಉದ್ದ ಆಳ ಅಗಲವನ್ನು ಪ್ರತಿಬಿಂಬಿಸುತ್ತದೆ. ಇದು ಸಂತೋಷಪಡುವುದಕ್ಕಿಂತ ನಾಚಿಕೆಯಿಂದ ತಲೆ ತಗ್ಗಿಸುವ ವಿಷಯ” ಎಂದಿದ್ದಾರೆ.

“ಈ ಬಾರಿಯ ಶೇಕಡ ಫಲಿತಾಂಶ 54% ಕ್ಕಿಂತ ಕಡಿಮೆ ದಾಖಲಿಸಿದ ಕಾರಣ, ಪರೀಕ್ಷಾ ಮಂಡಳಿಯು ಗ್ರೇಸ್ ಅಂಕಗಳನ್ನು ನೀಡಿ ಫಲಿತಾಂಶವನ್ನು ಏರಿಸಿದೆ.  ಮೊದಲನೆಯದಾಗಿ ಈ ಗ್ರೇಸ್ ಏಕೆ? ಈ ನಿರ್ದೇಶನ ನೀಡಿದವರು ಯಾರು? ತಮ್ಮ ಗಮನಕ್ಕೆ ಬಂದಿತ್ತೆ? ಒಂದು ಕ್ಷಣ  ಗ್ರೇಸ್ ಒಪ್ಪುವುದಾದರು, ಅದರಲ್ಲಿ ತಾರತಮ್ಯ ಏಕೆ?  ಈ ನಿಯಮದ ಬಗ್ಗೆ ಸಮಾಜಕ್ಕೆ, ಪೋಷಕರಿಗೆ  ಮತ್ತು ವಿದ್ಯಾರ್ಥಿಗಳಿಗೆ ಇಲಾಖೆ ತಿಳಿಸಿತ್ತೆ? ಇದು ನ್ಯಾಯ ಸಮ್ಮತವೇ?  ಎಂಬ ಎಲ್ಲ ಪ್ರಶ್ನೆಗಳು ಸಹಜವಾಗಿಯೇ ಮೂಡುತ್ತವೆ” ಎಂದು ಹೇಳಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!