ಮೈಷುಗರ್ ಸಕ್ಕರೆ ಕಾರ್ಖಾನೆಗೆ ಕಬ್ಬು ಕಟಾವು ಸಂಬಂಧ ಮೇಸ್ತ್ರಿಗಳಿಗೆ ನೀಡಲಾಗಿದ್ದ ಮುಂಗಡ ಹಣ ವಿಚಾರವಾಗಿ ದುರಪಯೋಗ ನಡೆದಿದೆ ಎಂದು ಇಲ್ಲಸಲ್ಲದ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾಗಿದೆ ಎಂದು ಮೈಷುಗರ್ ನಿಕಟ ಪೂರ್ವ ಕಬ್ಬು ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್ ಡಿ.ಎನ್. ಸ್ಪಷ್ಟ ಪಡಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಬ್ಬು ಕಟಾವು ಮೇಸ್ತ್ರಿಗಳಿಗೆ ಮುಂಗಡ ಹಣ ನೀಡುವ ಸಲುವಾಗಿ ಮೇಲಧಿಕಾರಿಗಳ ಸಮ್ಮುಖದಲ್ಲಿ ಸಭೆ ಕರೆದು ಮುಂಗಡ ಹಣದ ಭದ್ರತೆಗಾಗಿ ದಾಖಲಾತಿಗಳನ್ನು ಪಡೆಯಲಾಗಿತ್ತು ಎಂದರು.
ಈ ದಾಖಲೆಗಳ ಪರಿಶೀಲನೆ ನಂತರ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಪ್ರಧಾನ ವ್ಯವಸ್ಥಾಪಕರಿಗೆ ಅನುಮೋದನೆಗೆ ನೀಡಿ, ಪರಿಶೀಲನೆಯ ನಂತರವಷ್ಟೆ ಹಣಕಾಸು ವಿಭಾಗದಿಂದ ಕಂಪನಿಯ ಖಾತೆಯಿಂದಲೇ ಮೇಸ್ತ್ರಿಗಳ ಉಳಿತಾಯ ಖಾತೆಗೆ ಹಣ ಜಮೆ ಮಾಡಲಾಗಿದೆ ಎಂದು ಹೇಳಿದರು.
ಮೇಸ್ತ್ರಿಗಳಿಗೆ ನೀಡಲಾಗಿದ್ದ ೩ ಕೋಟಿ ೨೮ ಲಕ್ಷ ೭೫ ಸಾವಿರ ಮುಂಡ ಹಣದಲ್ಲಿ ೨ ಕೋಟಿ ೫೮ ಲಕ್ಷದ ೨೩,೭೭೬ ರೂ ವಸೂಲಾಗಿದ್ದು, ೭೦ ಲಕ್ಷದ ೫೧,೨೨೪ ರೂ ಮೇಸ್ತ್ರಿಗಳಿಂದ ಬಾಕಿ ಉಳಿದಿದೆ. ಅಲ್ಲದೇ ಮೈಷುಗರ್‌ನಲ್ಲಿ ಯಂತ್ರೋಪಕರಣಗಳ ತಾಂತ್ರಿಕ ದೋಷದಿಂದ ಕಬ್ಬು ನುರಿಸದೇ ನಿಂತರ ಕೆಲಸ ನೀಡಲಾಗಿರುವುದಿಲ್ಲ ಎಂದು ಮಾಹಿತಿ ನೀಡಿದರು.
ಬಾಕಿ ಉಳಿಸಿಕೊಂಡ ಒಟ್ಟು ೪೩ ಮೇಸ್ತ್ರಿಗಳ ಪೈಕಿ ೨೧ ಮಂದಿ ಸ್ಥಳೀಯರು, ೨೧ ಮಂದಿ ಬಳ್ಳಾರಿಯ ಮೇಸ್ತ್ರಿಗಳಿದ್ದು, ಓರ್ವ ಮೃತ ಹೊಂದಿರುತ್ತಾರೆ. ಇವರ ವಿರುದ್ಧ ಭದ್ರತೆಯ ದೃಷ್ಠಿಯಿಂದ ೪೨ ದೂರುಗಳನ್ನು ದಾಖಲಿಸಲಾಗಿದ್ದು, ಮತ್ತೆ ತಮ್ಮ ಕರ್ತವ್ಯ ನಿರ್ವಹಿಸುವ ಮುನ್ನ ಬಾಕಿ ಹಣ ವಸೂಲಿ ಮಾಡಲಾಗುವುದು ಎಂದು ಉತ್ತರ ನೀಡಿದರು.
ಕಂಪನಿಗೆ ಎರಡು ವರ್ಷಗಳ ಅವಧಿಗೆ ಕರ್ತವ್ಯ ನಿರ್ವಹಿಸುವಂತೆ ಒಪ್ಪಂದ ಮಾಡಿಕೊಂಡಿದ್ದು, ಕಬ್ಬು ಅರಿಯುವ ವೇಳೆ ಕೆಲಸದಿಂದ ಬಿಡುಗಡೆ ಪಡೆಯದೇ ಕಬ್ಬು ಅರೆಯುವ ಕಾರ್ಯ ಮುಗಿಸಿ ಕೆಲಸದಿಂದ ಬಿಡುಗಡೆ ಪಡೆಯುವಂತೆ ಅಧ್ಯಕ್ಷರು ಮನವಿ ಮಾಡಿದ ಮೇರೆಗೆ ಕಬ್ಬು ಅರೆಯುವಿಕೆ ಕಾರ್ಯ ಮುಗಿಸಿ ಕರ್ತವ್ಯದಿಂದ ಬಿಡುಗಡೆಗೊಂಡಿದ್ದೇನೆ ಎಂದು ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.
ಕಂಪನಿಗೆ ಪ್ರಾಮಾಣಿಕವಾಗಿ ನಿಷ್ಠತೆ, ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿದ್ದು, ಯಾವುದೇ ರೀತಿಯಲ್ಲಿ ಭ್ರಷ್ಟಚಾರ ಮಾಡಿರುವುದಿಲ್ಲ, ಕೆಲ ಕಿಡಿಗೇಡಿಗಳು ವಿನಃಕಾರಣ ನನ್ನ ವಿರುದ್ಧ ಆರೋಪ ಮಾಡಿದ್ದು, ಆಧಾರ ಸಹಿತ ನಿರೂಪಿಸದೇ ಇದ್ದಲ್ಲಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಎಚ್ಚರಿಸಿದರು.




