ಮಂಡ್ಯ ನಗರದ ಕನಕಭವನದಲ್ಲಿ ಕಳೆದ ಭಾನುವಾರ ನಡೆದ ಜಿಲ್ಲಾ ಕುರುಬರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಸದಸ್ಯರಲ್ಲದ ಕೆಲವರಿಂದ ಗೊಂದಲ ಸೃಷ್ಠಿ ಆಯಿತು. ಆದರೆ ಅಧ್ಯಕ್ಷನಾಗಿ ಸಭೆಯಿಂದ ಪಲಾಯನ ಮಾಡಿದ್ದೇನೆ ಎಂಬುದು ಸತ್ಯಕ್ಕೆ ದೂರವಾದದು ಎಂದು ಮಂಡ್ಯ ಜಿಲಾ ಕುರುಬರ ಸಂಘದ ಅಧ್ಯಕ್ಷ ಎಂ.ಎಲ್.ಸುರೇಶ್ ಸ್ಪಷ್ಟ ಪಡಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ಸದಸ್ಯರಲ್ಲದವರಿಂದ ಗೊಂದಲ ಸೃಷ್ಠಿಯಾಗಿ, ಮಧ್ಯಾಹ್ನದ ಊಟ ಮುಗಿಸಿ ಬರುವುದನ್ನೇ ಕಾಯುತ್ತಿದ್ದ ಕೆಲವರು ನನ್ನ ವಿರುದ್ದ ಅಸಭ್ಯ ಪದ ಬಳಸಿ, ಸಭೆಯಿಂದ ಪಲಾಯನ ಮಾಡಿದ್ದೇನೆ ಎಂದು ಆರೋಪ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಊಟ ಮುಗಿಸಿ ಕನಕಭವನದ ಮುಂದೆ ಪ್ರತಿಭಟನಾನಿರತರನ್ನು ಭೇಟಿ ಮಾಡಿ ೨೦೨೬ರ ಮಾರ್ಚ್ ೬ರವೆರೆಗೆ ಹಾಲಿ ಆಡಳಿತ ಮಂಡಳಿಯ ಅಧಿಕಾರಾವಧಿಯಿದೆ. ನಂತರ ಸಮುದಾಯದ ವರಿಷ್ಟರು ಮುಂದೆ ಚರ್ಚಿಸಿ ತೀರ್ಮಾನ ಮಾಡುವುದಾಗಿ ಹೇಳಿದ್ದೆ. ಇದಕ್ಕೆ ನಿರ್ದೇಶಕರಾದ ಎ.ಕೃಷ್ಣ, ಸಾತನೂರು ಮಹೇಶ್, ಅಣಸಾಲೆ ಶಿವಣ್ಣ, ಸದಸ್ಯರೇ ಅಲ್ಲದ ಚಂದಳ್ಳಿ ಶ್ರೀಧರ್ ಅವರು ಭ್ರಷ್ಟ ಅಧ್ಯಕ್ಷ ಎಂದು ಕೂಗಿ ಸಮುದಾಯಕ್ಕೆ ತಪ್ಪು ಸಂದೇಶ ರವಾನಿಸಿದ್ದಾರೆ. ಇವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದರು.
ಉದ್ದೇಶ ಪೂರ್ವಕವಾಗಿ ಭ್ರಷ್ಟ ಎಂದು ನಿಂದಿಸಲಾಗಿದೆ. ಸಂಘದ ಸದಸ್ಯರಾದ ದೊಡ್ಡಯ್ಯ, ಕೃಷ್ಣ, ಶಿವಣ್ಣ ಅವರುಗಳು ಏಕ ವಚನದಲ್ಲಿ ಮಾತನಾಡಿ ಸಂಘಕ್ಕೆ ಧಕ್ಕೆ ತಂದಿದ್ದಲ್ಲದೆ ಸಭೆಯಲ್ಲಿ ಚರ್ಚೆಗೆ ಅವಕಾಶ ನೀಡದೇ ಅಸಭ್ಯವಾಗಿ ನಡೆದುಕೊಂಡಿದ್ದು, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಗೋಷ್ಠಿಯಲ್ಲಿ ಪ್ರಧಾನ ಕಾರ್‍ಯದರ್ಶಿ ಎಂ.ಜೆ.ಶಶಿಧರ, ಖಜಾಂಚಿ ಎಸ್.ಎನ್.ರಾಜು, ಉಪಾಧ್ಯಕ್ಷರಾದ ಶ್ರೀನಿವಾಸ, ಬಿ.ಕೆ.ರೇವಣ್ಣ, ಆಂತರಿಕ ಲೆಕ್ಕ ಪರಿಶೋಧಕ ಎಂ.ಮಹೇಶ್, ನಿರ್ದೇಶಕ ಸಿದ್ದರಾಮು ಇತರರಿದ್ದರು.




