Thursday, September 19, 2024

ಪ್ರಾಯೋಗಿಕ ಆವೃತ್ತಿ

ಎನ್‌ಡಿಎ ಸರ್ಕಾರವಲ್ಲ: ಮೋದಿ‌ 3.0 ಸರ್ಕಾರ

ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸಚಿವರಿಗೆ ಖಾತೆ ಹಂಚಿಕೆ ಮಾಡಿರುವುದನ್ನು ನೋಡಿದರೆ, ಇದು ಎನ್‌ಡಿಎ ಸರ್ಕಾರವಲ್ಲ, ಬದಲಿಗೆ ಮೋದಿ 3.0 ಸರ್ಕಾರ ಎಂಬ ಭಾವನೆ ಮೂಡಿದೆ.

ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿಗೆ ಕೇವಲ 240 ಸ್ಥಾನ ಬಂದಿತ್ತು. ಈ ಹಿನ್ನೆಲೆಯಲ್ಲಿ ಎನ್‌ಡಿಎ ಮಿತ್ರ ಪಕ್ಷಗಳಾದ ಚಂದ್ರಬಾಬು ನಾಯ್ಡು ಹಾಗೂ ನಿತೀಶ್ ಕುಮಾರ್ ಅವರನ್ನು ಜೊತೆಗೂಡಿಸಿಕೊಂಡು ಸರ್ಕಾರ ನಡೆಸುವುದಾಗಿ ಮೋದಿಯವರು ಹೇಳಿದ್ದರು.

ಹಾಗಾಗಿ ಸರ್ಕಾರದ ಪ್ರಮುಖ ಖಾತೆಗಳನ್ನು ತಮ್ಮ ಪಕ್ಷದ ಸಂಸದರಿಗೆ ನೀಡಬೇಕೆಂದು ನಾಯ್ಡು,ನಿತೀಶ್ ಕುಮಾರ್, ಏಕನಾಥ್ ಶಿಂಧೆ, ಚಿರಾಗ್ ಪಾಸ್ವಾನ್ ಮೊದಲಾದವರು ನಮಗೆ ಇಷ್ಟೇ ಖಾತೆಗಳನ್ನು ಕೊಡಬೇಕು, ಕೃಷಿ ,ಗೃಹ, ರಕ್ಷಣೆ, ಹಣಕಾಸು ಖಾತೆಗಳನ್ನು ನೀಡಬೇಕೆಂದು ಒತ್ತಡ ಹೇರಿದ್ದರು. ಈ ಹಿನ್ನಲೆಯಲ್ಲಿ ಈ ಬಾರಿ ಮೋದಿ ಮಿತ್ರ ಪಕ್ಷಗಳಿಗೆ ಮಣೆ ಹಾಕುತ್ತಾರೆಂಬ ಮಾತುಗಳು ಕೇಳಿ ಬರುತ್ತಿದ್ದವು.

ಆದರೆ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುವ ಸಂದರ್ಭದಲ್ಲಿ ಮೋದಿಯವರು, ಕಳೆದ ಸರ್ಕಾರದಲ್ಲಿ ತಮ್ಮ ಸಂಪುಟದಲ್ಲಿ ಭಾಗಿಯಾಗಿದ್ದ ತನ್ನ ಆಪ್ತರಿಗೆ ಈ ಬಾರಿ ಕೂಡ ಅದೇ ಖಾತೆಗಳನ್ನು ನೀಡುವ ಮೂಲಕ ಇದು ಎನ್‌ಡಿಎ ಸರ್ಕಾರವಲ್ಲ, ಬದಲಿಗೆ ಮೋದಿ 3.0 ಸರ್ಕಾರ ಎಂಬುದನ್ನು ಸಾಬೀತು ಮಾಡಿದ್ದಾರೆ.

ಮೋದಿ 1.0, 2.0 ದಲ್ಲಿದ್ದಂತೆ ಈ ಎನ್‌ಡಿಎ ಸರ್ಕಾರದಲ್ಲೂ ಮೊದಲ ಹಾಗೂ ಎಲ್ಲಾ ಪ್ರಮುಖ ರಾಜಕೀಯ, ಆರ್ಥಿಕ ಇಲಾಖೆಗಳ ಮಂತ್ರಿ ಪದವಿ ಉಳಿಸಿಕೊಂಡಿರುವ ಬಿಜೆಪಿ, ಎನ್‌ಡಿಎ ಪಾಲುದಾರ ಪಕ್ಷಗಳಿಗೆ ಕೇಳಿದ್ದ ಖಾತೆಗಳನ್ನು ನೀಡದೆ ಖಾತೆ ಹಂಚಿಕೆಯಲ್ಲಿ ನನ್ನದೇ ಅಂತಿಮ ಮಾತು ಎಂಬ ಸಂದೇಶವನ್ನು ಕೊಟ್ಟಿದೆ.

ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಬಾರಿ ಮಿತ್ರ ಪಕ್ಷಗಳಿಗೂ ಹೆಚ್ಚಿನ ಪ್ರಾಧಾನ್ಯತೆ ನೀಡಿ ಅವರಿಗೆ ಉತ್ತಮ ಖಾತೆಗಳನ್ನು ನೀಡುತ್ತಾರೆಂಬ ಮಾತು ಕೇಳಿ ಬರುತ್ತಿತ್ತು.ಆದರೆ ಮೋದಿಯವರು ಮಿತ್ರ ಪಕ್ಷಗಳ ಒತ್ತಡಗಳಿಗೆ ಮಣೆ ಹಾಕದೆ,ಕಳೆದ ಸರ್ಕಾರದಲ್ಲೂ ಭಾಗಿಯಾಗಿದ್ದ ತನ್ನ ಆಪ್ತರಿಗೆ ಈ ಬಾರಿಯೂ ಉತ್ತಮ ಖಾತೆಗಳನ್ನು ನೀಡುವ ಮೂಲಕ ಮಿತ್ರ ಪಕ್ಷಗಳಿಗೆ ಸೆಡ್ಡು ಹೊಡೆದಿದ್ದಾರೆ.

ಗೃಹ ಸಚಿವರಾಗಿ ಅಮಿತ್ ಷಾ ಈ ಬಾರಿ ಮುಂದುವರೆಯಬಾರದು, ಪ್ರಮುಖ ಖಾತೆಗಳು ಸೇರಿದಂತೆ ಲೋಕಸಭಾ ಸ್ಪೀಕರ್ ಸ್ಥಾನ ನೀಡಬೇಕು ಎಂದು ಎನ್‌ಡಿಎ ಮಿತ್ರ ಪಕ್ಷಗಳ ನಾಯಕರಾದ ಚಂದ್ರಬಾಬು ನಾಯ್ಡು ಹಾಗೂ ನಿತೀಶ್ ಕುಮಾರ್ ಒತ್ತಡ ಹಾಕಿದ್ದರು ಎಂಬುದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಆದರೆ ಇವರಿಗೆ ಕ್ಯಾರೆ ಎನ್ನದೆ ತನ್ನ ಆಪ್ತ ಅಮಿತ್ ಶಾ ಅವರಿಗೆ ಈ ಬಾರಿ ಕೂಡ ಗೃಹ ಇಲಾಖೆ, ರಾಜನಾಥ್ ಸಿಂಗ್ ಅವರಿಗೆ ರಕ್ಷಣಾ ಇಲಾಖೆ, ನಿರ್ಮಲ ಸೀತಾರಾಮನ್ ಅವರಿಗೆ ಹಣಕಾಸು, ಎಸ್.ಜೈ ಶಂಕರ್ ಅವರಿಗೆ ವಿದೇಶಾಂಗ ಖಾತೆಗಳನ್ನು ನೀಡಿದ್ದಾರೆ.

ನಿತಿನ್ ಗಡ್ಕರಿಗೆ ಹೆದ್ದಾರಿ, ಪಿಯುಷ್ ಗೋಯಲ್ ಅವರಿಗೆ ವಾಣಿಜ್ಯ,ಧರ್ಮೇಂದ್ರ ಪ್ರಧಾನ್ ಅವರಿಗೆ ಶಿಕ್ಷಣ, ಭೂಪೇಂದ್ರ ಯಾದವ್ ಗೆ ಪರಿಸರದಂತಹ ಈ ಹಿಂದಿನ ಖಾತೆಗಳನ್ನೇ ನೀಡಿದ್ದಾರೆ. ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕೃಷಿ, ಜೆ.ಪಿ.ನಡ್ಡಾ ಅವರಿಗೆ ಆರೋಗ್ಯ ಖಾತೆ ನೀಡಿದ್ದಾರೆ.ಎನ್.ಸಿ.ಪಿ ಯ ಅಜಿತ್ ಪವಾರ್ ಸಂಪುಟ ದರ್ಜೆ ಕೇಳಿದ್ದರೆ, ರಾಜ್ಯ ಖಾತೆ ಕೊಡ್ತೇವೆ ಒಪ್ಪಿಕೊಂಡರೆ ಸರಿ, ಇಲ್ಲವಾದರೆ ನಿಮ್ಮಿಷ್ಟ ಎಂದು ಖಡಕ್ಕಾಗಿ ಸೂಚನೆ ನೀಡಿರುವುದು ಅಜಿತ್ ಪವಾರ್ ಸಿಟ್ಟಿಗೆ ಕಾರಣವಾಗಿದೆ.

ಮಿತ್ರ ಪಕ್ಷಗಳಿಗೆ ನೀಡಿರುವ ಖಾತೆಗಳಲ್ಲಿ ಒಂದೆರೆಡನ್ನು‌ ಬಿಟ್ಟರೆ ಉಳಿದೆಲ್ಲವೂ ಅಂತಹ ಹೇಳಿಕೊಳ್ಳುವ ಖಾತೆಗಳಲ್ಲ. ಹಾಗಾಗಿ ಈ ಬಾರಿ ಬಂದಿರೋದು ಮೋದಿಯ 3.0 ಸರ್ಕಾರವೇ ಹೊರತು,ಎನ್‌ಡಿಎ ಸರ್ಕಾರವಲ್ಲ ಎಂದು ಮಾಧ್ಯಮಗಳೇ‌ ಹೇಳುತ್ತಿರುವುದು ಕುತೂಹಲ ಮೂಡಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!