ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯ ಸರ್ಕಾರಿ ನೌಕರರಿಗೆ ಒಪಿಎಸ್ ( Old Pension Scheme) ಜಾರಿಗೆ ತರುತ್ತೇವೆ ಎಂದು ಕಾಂಗ್ರೆಸ್ ನೀಡಿದ್ದ ಪ್ರಣಾಳಿಕೆಗೆ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಕ್ಕಾಗಿ ವಾಟ್ಸಾಪ್ ಗ್ರೂಪ್ ಒಂದರ ಅಡ್ಮಿನ್ ಗಳಾಗಿದ್ದ 24 ಮಂದಿ ಮಂಡ್ಯ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ನೋಟಿಸ್ ಜಾರಿ ಮಾಡಿದ್ದಾರೆ.
ಒಂದು ನಿರ್ದಿಷ್ಟ ಮೊಬೈಲ್ ಸಂಖ್ಯೆಯಿಂದ ಉಪನ್ಯಾಸ ತಮ್ಮೇಗೌಡ ಎಂಬುವವರು ಕಾಂಗ್ರೆಸ್ ಪಕ್ಷ ನೀಡಿರುವ ಪ್ರಣಾಳಿಕೆಯ ಸ್ಕ್ರೀನ್ ಶಾಟ್ ಒಂದನ್ನು K.S.PU.CLA MANDYA ಎಂಬ ತಮ್ಮ ವಾಟ್ಸಾಪ್ ಗ್ರೂಪ್ ನಲ್ಲಿ ಹಂಚಿಕೊಂಡಿದ್ದರು. ಆದರೆ ಅವರು ಇಂತಹ ನಿರ್ದಿಷ್ಟ ಪಕ್ಷವನ್ನು ಬೆಂಬಲಿಸಿ ಎಂಬಂತಹ ಯಾವುದೇ ಬರಹವನ್ನು ಬರೆದಿರಲಿಲ್ಲ ಎಂದು ತಿಳಿದು ಬಂದಿದೆ.
ಆದರೆ ಇದನ್ನೇ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ಪರಿಗಣಿಸಿರುವ ನೋಡಲ್ ಅಧಿಕಾರಿಗಳು ಈ ವಾಟ್ಸಾಪ್ ಗ್ರೂಪ್ ನಲ್ಲಿದ್ದ ಎಲ್ಲ 24 ಮಂದಿ ಅಡ್ಮಿನ್ ಗಳಿಗೆ ನೋಟೀಸ್ ಜಾರಿಗೊಳಿಸಿ, ಈ ಉಪನ್ಯಾಸಕರು ಇಂದು (ಮೇ.4ರಂದು) ಸಂಜೆ 5.30 ಗಂಟೆಗೆ ಅಪರ ಜಿಲ್ಲಾಧಿಕಾರಿಗಳು (ಉಪಚುನಾವಣಾಧಿಕಾರಿಗಳು), ಜಿಲ್ಲಾಧಿಕಾರಿಗಳ ಕಚೇರಿ ಮಂಡ್ಯ ಇಲ್ಲಿಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿ ಚುನಾವಣಾ ನೋಟೀಸ್ ಜಾರಿ ಮಾಡಲಾಗಿತ್ತು, ಅದರಂತೆ ಪ್ರಸ್ತುತ ವಿಚಾರಣೆ ನಡೆಯುತ್ತಿದೆ ಎಂಬುದು ತಿಳಿದು ಬಂದಿದೆ.




