ಮದ್ದೂರು ತಾಲೂಕಿನ 42 ಗ್ರಾಮ ಪಂಚಾಯಿತಿಗಳ ವಾರ್ಡ್ ಸಭೆ, ಗ್ರಾಮ ಸಭೆ, ಗ್ರಾಪಂ ಸಭೆಗಳಲ್ಲಿ ಚರ್ಚಿಸಿ, ನಿರ್ಣಯಿಸಿದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕ್ರಿಯಾ ಯೋಜನೆಯನ್ನು ಅಧಿಕಾರಿಗಳು ಬದಲಿಸುತ್ತಿದ್ದಾರೆ ಎಂಬ ಆರೋಪದ ಬಗ್ಗೆ ವರದಿ ನೀಡುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಂಡ್ಯ ಜಿಪಂ ಸಿಇಒ ಅವರಿಗೆ ಆದೇಶಿಸಿದ್ದಾರೆ.
ಅಧಿಕಾರಿಗಳ ನಿಲುವನ್ನು ಖಂಡಿಸಿ, ಮದ್ದೂರಿನ ವಿವಿಧ ಗ್ರಾಪಂಗಳ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು ಮದ್ದೂರು ಗ್ರಾಪಂ ಸದಸ್ಯರ ಒಕ್ಕೂಟದ ಬ್ಯಾನರ್ ಅಡಿ ಧರಣಿ ನಡೆಸುತ್ತಿದ್ದಾರೆ. ಈ ಬಗ್ಗೆ ಶಾಸಕರಾದ ದಿನೇಶ ಗೂಳಿಗೌಡ ಕೆ. ಎಂ. ಉದಯ್ ಅವರು ಗ್ರಾಮೀಣಾಭಿವೃದ್ಧಿ ಸಚಿವರನ್ನು ಭೇಟಿಯಾಗಿ ವಿಷಯ ತಿಳಿಸಿ, ಮನವಿ ಪತ್ರ ಸಲ್ಲಿಸಿದರು. ಮದ್ದೂರು ಗ್ರಾಪಂ ಸದಸ್ಯರ ಒಕ್ಕೂಟದ ಮನವಿಯನ್ನು ಪರಿಗಣಿಸಬೇಕು ಎಂದು ಶಾಸಕದ್ವಯರು ವಿನಂತಿಸಿದರು.

ಅಲ್ಲದೆ, ಈ ವರ್ಷದ ನರೇಗಾ ಕ್ರಿಯಾ ಯೋಜನೆಯ ಕಾಮಗಾರಿಗಳನ್ನು 60:40 ಸರಾಸರಿಯಲ್ಲಿ ಇರುವ ಪಂಚಾಯಿತಿಗಳ ಕಾಮಗಾರಿಗಳನ್ನು ಚಾಲ್ತಿಗೊಳಿಸಬೇಕು. (ಆನ್ ಗೋಯಿಂಗ್) ಎಂದು ಮನವಿ ಮಾಡಿದರು. ತಕ್ಷಣ ಸ್ಪಂದಿಸಿದ ಸಚಿವರು ಈ ಬಗ್ಗೆ ಪರಿಶೀಲನೆಗೆ ಆದೇಶ ಮಾಡಿದ್ದಾರೆ.
ಮನವಿಯಲ್ಲೇನಿದೆ…?
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಗ್ರಾಮ ಸಭೆಗಳ ಪ್ರಕರಣ 3ರಲ್ಲಿ ತಿಳಿಸಿರುವಂತೆ ಗ್ರಾಮ ಪಂಚಾಯತಿಗಳು ಪ್ರತಿ ಆರ್ಥಿಕ ವರ್ಷದಲ್ಲಿ ಎರಡು ಬಾರಿ ಎಂದರೆ, ಪ್ರತಿ ಆರು ತಿಂಗಳಿಗೊಮ್ಮೆ ಗ್ರಾಮ ಸಭೆಗಳನ್ನು ಆಯೋಜನೆ ಮಾಡಬೇಕು. ಜನರನ್ನ ಸೇರಿಸಿ, ಆ ಗ್ರಾಮಗಳ ಸಮಸ್ಯೆಗಳು ಮತ್ತೆ ಬೇಡಿಕೆಗಳನ್ನು ಪಟ್ಟಿ ಮಾಡಿ ಅವುಗಳ ಆಧಾರದ ಮೇಲೆ ಮುಂದಿನ ಆರ್ಥಿಕ ವರ್ಷದಲ್ಲಿ ಕ್ರಿಯಾ ಯೋಜನೆಗಳನ್ನು ರೂಪಿಸಬೇಕು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಅದಧಿನಿಯಮದ 2025-26 ನೇ ಸಾಲಿಗೆ ಸಂಬಂಧಿಸಿದ ಕ್ರಿಯಾ ಯೋಜನೆಯನ್ನು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ 42 ಗ್ರಾಮ ಪಂಚಾಯತಿಗಳು ಇದೇ ಜನವರಿ ಅಂತ್ಯದಲ್ಲಿ ರಚಿಸಿ ತಾಲ್ಲೂಕು ಪಂಚಾಯಿತಿಗೆ ತಂತ್ರಾಂಶದ ಮೂಲಕ ಕಳಿಸಿದ್ದವು.

42 ಗ್ರಾಮ ಪಂಚಾಯತಿಗಳ ಒಟ್ಟಾರೆ ಕ್ರಿಯಾ ಯೋಜನೆಯ ಮೊತ್ತ 187 ಕೋಟಿ ರೂ.ಗಳಷ್ಟು ಆಗಿದೆ. ಆದರೆ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸರ್ಕಾರದ ಯಾವುದೇ ಅಧಿಕೃತ ಆದೇಶ ಮತ್ತು ಸುತ್ತೋಲೆಗಳು ಇಲ್ಲದೇ ತಂತ್ರಾಂಶದಲ್ಲಿರುವಂತಹ ಕಾಮಗಾರಿಗಳ ಕ್ರಿಯಾ ಯೋಜನೆಗಳನ್ನು ಕಾನೂನುಬಾಹಿರವಾಗಿ ರದ್ದುಗೊಳಿಸಿದ್ದಾಗಿ ತಿಳಿದು ಬಂದಿದೆ. ಪುನಃ ಕ್ರಿಯಾಯೋಜನೆಯನ್ನು ತಯಾರಿಸಲು ಗ್ರಾಮ ಪಂಚಾಯಿತಿಗಳಿಗೆ ಮೌಖಿಕವಾಗಿ ತಿಳಿಸಿದ್ದಾರೆ.
ಈ ಸಂಬಂಧ ಗ್ರಾಪಂ ಪಿಡಿಒಗಳು ವಾರ್ಡ್ ಸಭೆ ಮತ್ತು ಗ್ರಾಮ ಸಭೆ, ಪಂಚಾಯತಿ ಸಭೆಗಳನ್ನು ಆಯೋಜನೆ ಮಾಡದೆ, ಹಿರಿಯ ಅಧಿಕಾರಿಗಳ ಮಾತುಗಳ ಮೇರೆಗೆ ತಮಗೆ ಬೇಕಾದ ರೀತಿಯಲ್ಲಿ ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ಬದಲಾಯಿಸಿದ್ದಾರೆ. ತಾಲ್ಲೂಕಿನ ಒಟ್ಟಾರೆ ಎನ್‌ಆರ್‌ಇಜಿಎ ಕ್ರಿಯಾ ಯೋಜನೆಯನ್ನು 187 ಕೋಟಿ ಕ್ರಿಯಾ ಯೋಜನೆಯನ್ನು 57 ಕೋಟಿಗೆ ಸೀಮಿತಗೊಳಿಸಿದ್ದಾರೆ. ಸುಮಾರು 130 ಕೋಟಿ ಮೊತ್ತದ ಕಾಮಗಾರಿಗಳ ಕ್ರಿಯಾಯೋಜನೆಯನ್ನು ಕೈಬಿಟ್ಟು ಗ್ರಾಮಸ್ತರಿಗೆ ತೊಂದರೆ ಉಂಟಾಗಿದೆ ಎಂದು ಶಾಸಕರು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.




