Thursday, July 25, 2024

ಪ್ರಾಯೋಗಿಕ ಆವೃತ್ತಿ

ಒಕ್ಕಲಿಗ ಸ್ವಾಮೀಜಿಯ ಆ ಮಾತೂ; ತುರ್ತಾಗಿ ಬೇಕಿರುವ ಜಾತಿಗಣತಿಯೂ…

ಮಾಚಯ್ಯ ಎಂ ಹಿಪ್ಪರಗಿ

ಒಕ್ಕಲಿಗ ಮಠದ ಸ್ವಾಮಿಯೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿದ್ದ ವೇದಿಕೆಯಲ್ಲೇ, “ಸಿಎಂ ಸ್ಥಾನವನ್ನು ನಮ್ಮ ಡಿ ಕೆ ಶಿವಕುಮಾರರಿಗೆ ಬಿಟ್ಟುಕೊಡಿ” ಅಂತ ಹೇಳಿದ್ದಾರೆ. ಆ ಸ್ವಾಮೀಜಿ ಹಾಗೆ ಡಿಕೆಶಿ ಪರವಾಗಿ ವಕಾಲತ್ತು ಮಾಡಲು ಇದ್ದ ಏಕಮಾತ್ರ ಕಾರಣವೆಂದರೆ, ಜಾತಿ!

ಆ ಸ್ವಾಮಿಯ ಮಾತಿನ ಸರಿತಪ್ಪಿನ ಸಂಗತಿಗೆ ನಂತರ ಬರೋಣ. ಆದರೆ, ಕರ್ನಾಟಕದ ರಾಜಕಾರಣದಲ್ಲಿ ಜಾತಿಯ ಆಟ ಅದೆಷ್ಟು ನಯವಂಚಕವಾಗಿರುತ್ತದೆ ಅನ್ನೋದನ್ನು ಸ್ವಲ್ಪ ನೋಡೋಣ. ಕರ್ನಾಟಕ ರಾಜಕಾರಣವನ್ನು ಪ್ರಭಾವಿಸುತ್ತಾ ಬಂದ ಎರಡು ಮುಖ್ಯ ಜಾತಿಗಳೆಂದರೆ, ಲಿಂಗಾಯತರು ಮತ್ತು ಒಕ್ಕಲಿಗರು. ಇದುವರೆಗೆ ಆಗಿಹೋಗಿರುವ ಎಲ್ಲಾ ಸಿಎಂಗಳಲ್ಲಿ ಗರಿಷ್ಠ ಸಿಎಂ ಗಳು ಇವೆರಡು ಸಮುದಾಯಕ್ಕೆ ಸೇರಿದವರು. ಹಾಗೆಯೇ ಸುಮಾರು ನಾಲ್ಕು ದಶಕಗಳ ಪ್ರತಿ ಸಚಿವ ಸಂಪುಟದ ಜಾತಿಲೆಕ್ಕಾಚಾರ ತೆಗೆದುಕೊಂಡರೆ ಈ ಎರಡು ಜಾತಿಯ ಸಚಿವರೇ ಹೆಚ್ಚಿರುತ್ತಾರೆ. ಇನ್ನು ಗೆದ್ದುಬರುವ ಶಾಸಕರಲ್ಲೂ ಈ ಎರಡು ಜಾತಿಯ ಶಾಸಕರೇ ಹೆಚ್ಚು. ಇದನ್ನೆಲ್ಲ ನೋಡಿದಾಗ, ಈ ಸಮುದಾಯಗಳು ಕರ್ನಾಟಕದ ಜನಸಂಖ್ಯೆಯಲ್ಲಿ ಏನಿಲ್ಲವೆಂದರು 50%ಗಿಂತ ಹೆಚ್ಚಿನ ಪಾಲು ಹೊಂದಿರಬೇಕು ಅನ್ನಿಸುತ್ತೆ. ಆದರೆ ವಾಸ್ತವದಲ್ಲಿ 12-16% ಲಿಂಗಾಯತರಿದ್ದರೆ, 10-11% ಒಕ್ಕಲಿಗರಿದ್ದಾರೆ. ಎರಡನ್ನೂ ಸೇರಿಸಿದರೆ ಇವರ ಜನಸಂಖ್ಯೆ 27%ಗಿಂತ ಹೆಚ್ಚು ದಾಟುವುದಿಲ್ಲ. ಆದರೆ ಅಧಿಕಾರ ಅನುಭವಿಸುವ ವಿಚಾರಕ್ಕೆ ಬಂದಾಗ 50%ಗಿಂತ ಹೆಚ್ಚು ಶೇರನ್ನು ಈ ಎರಡು ಸಮುದಾಯಗಳು ಲಪಟಾಯಿಸುತ್ತಾ ಬಂದಿವೆ.

ಇಲ್ಲಿ `ಲಪಟಾಯಿಸು’ ಎನ್ನುವ ಖಾರದ ಪದವನ್ನು ಉದ್ದೇಶಪೂರ್ವಕವಾಗಿಯೇ ಬಳಸಲಾಗಿದೆ. ಒಬ್ಬ ವ್ಯಕ್ತಿ ತನ್ನ ಸಾಮರ್ಥ್ಯಕ್ಕೆ ಅಥವಾ ಶ್ರಮಕ್ಕೆ ತಕ್ಕಷ್ಟು ಪ್ರತಿಫಲ ಪಡೆಯುವುದು ಆತನ/ಆಕೆಯ ನ್ಯಾಯಯುತ ಪಾಲು ಎನಿಸಿಕೊಳ್ಳುತ್ತದೆ. ಆದರೆ, ತನಗಿರುವ ಪ್ರಿವಿಲೇಜ್‌ಗಳನ್ನು ಬಳಸಿಕೊಂಡು, ಒಂದು ಅಸಮಾನ ಸ್ಪರ್ಧೆಯ ವಾತಾವರಣವನ್ನು ಸೃಷ್ಟಿಸಿ, ಅದರ ಆಧಾರದ ಮೇಲೆ ತನ್ನ ಸಾಮರ್ಥ್ಯಕ್ಕೂ ಮೀರಿದ್ದನ್ನು ಪಡೆದುಕೊಳ್ಳುವಿಕೆಯನ್ನು ನಾವು ಲಪಟಾಯಿಸುವುದು ಅಂತಲೇ ಪರಿಗಣಿಸಬೇಕಾಗುತ್ತದೆ. ಒಕ್ಕಲಿಗರು ಮತ್ತು ಲಿಂಗಾಯತರು ರಾಜಕೀಯ ಅಧಿಕಾರ ಅನುಭವಿಸುವ ವಿಚಾರಕ್ಕೆ ಬಂದಾಗ, ಮಿಕ್ಕ ಅಹಿಂದ ಸಮುದಾಯಗಳನ್ನು ವಂಚಿಸುತ್ತಿರುವುದೇ ಈ ರೀತಿ.

ಈಗ, ಈ ಸಲದ ಲೋಕಸಭಾ ಚುನಾವಣೆಯ ಫಲಿತಾಂಶವನ್ನೇ ಪರಿಗಣಿಸೋಣ. ಈ ಎರಡೂ ಸಮುದಾಯಗಳು ನಿರ್ಣಾಯಕ ಸಂಖ್ಯೆಯಲ್ಲಿ ಕ್ರೋಢೀಕೃತವಾಗಿರುವ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಹಿನ್ನಡೆಯಾಗಿದೆ. ಒಕ್ಕಲಿಗರ ಪ್ರಾಬಲ್ಯವಿರುವ ಹಳೇ ಮೈಸೂರು ಭಾಗದ 11 ಜಿಲ್ಲೆಗಳ ಪೈಕಿ ಕಾಂಗ್ರೆಸ್ ಗೆದ್ದಿದ್ದು ಕೇವಲ 2 ಸ್ಥಾನಗಳಲ್ಲಿ ಮಾತ್ರ. ಹಾಸನದಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸಿದ್ದು ಕೂಡಾ ಕಾಂಗ್ರೆಸ್ ಮೇಲಿನ ಒಲವಿಗಿಂತ ಹೆಚ್ಚಾಗಿ, ಜೆಡಿಸ್ ಅಭ್ಯರ್ಥಿಯ ಭಾನ್ಗಡಿಯ ಕಾರಣಕ್ಕೆ. ಇನ್ನು ಲಿಂಗಾಯತರ ಪ್ರಾಬಲ್ಯವಿರುವ ಮಧ್ಯಕರ್ನಾಟಕ ಮತ್ತು ಮುಂಬೈ ಕರ್ನಾಟಕ ಭಾಗದಲ್ಲೂ ಬಿಜೆಪಿ ಮೇಲುಗೈ ಸಾಧಿಸಿದೆ. ಈ ಭಾಗದ ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದದ್ದು ಪಕ್ಷದ ಕಾರಣಕ್ಕಿಂತ ಹೆಚ್ಚಾಗಿ ಶಾಮನೂರು ಫ್ಯಾಮಿಲಿಯ ವರ್ಚಸ್ಸು ಮತ್ತು ಆ ಫ್ಯಾಮಿಲಿ ಯಡಿಯೂರಪ್ಪನವರ ಜೊತೆ ಮಾಡಿಕೊಂಡ ಒಳ ಒಪ್ಪಂದದಿಂದ.

ಅಹಿಂದ ಮತಗಳು ನಿರ್ಣಾಯಕವಾದ ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್ ಸಾಧನೆ ಮಾಡದೆ ಹೋಗಿದ್ದರೆ, ಈ ಎರಡು ಪ್ರಭಾವಿ ಸಮುದಾಯಗಳು 2019ರ ಫಲಿತಾಂಶವನ್ನೇ ಕಾಂಗ್ರೆಸಿನ ಜೋಳಿಗೆ ತುಂಬಿಸುತ್ತಿದ್ದವು. ಕಾಂಗ್ರೆಸ್ ಪಕ್ಷದ ಮಾನ ಉಳಿಸಿದ್ದು ಅಹಿಂದ ಮತದಾರರು. ಯಾಕೆಂದರೆ ಅವರಿಗೆ ಗ್ಯಾರಂಟಿ ಯೋಜನೆಗಳ ಕುರಿತು ಒಂದಷ್ಟು ನಿಷ್ಠೆ ಇತ್ತು. ಒಟ್ಟಿನಲ್ಲಿ ಈ ಚುನಾವಣಾ ಫಲಿತಾಂಶದಿಂದ ಈ ಎರಡೂ ಸಮುದಾಯಗಳು ಬಿಜೆಪಿ-ಜೆಡಿಎಸ್ ಪಕ್ಷಕ್ಕೆ ತಮ್ಮ ನಿಷ್ಠೆ ತೋರಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಮತ ಹಾಕೋದು ಆ ಪಕ್ಷಗಳಿಗೆ, ಆದರೆ ಅಧಿಕಾರ ಕೇಳೋದು ಈ ಪಕ್ಷದಲ್ಲಿ? ಇದು ವೈಚಿತ್ಯ್ರ! ಯಾವ ಪಕ್ಷ ಅಧಿಕಾರಕ್ಕೆ ಬಂದರೇನು? ತಾವು ಜಾತಿಯ ಕಾರಣಕ್ಕೆ ಯಾವ ಪಕ್ಷದ ಮೈತ್ರಿಗೆ ಮತ ಹಾಕಿದ್ದರೇನು? ಅಧಿಕಾರದ ವಿಚಾರಕ್ಕೆ ಬಂದಾಗ ನಮಗೆ ನೀಡಲೇಬೇಕು ಎಂಬ ಯಜಮಾನಿಕೆಯ ಧೋರಣೆಯೇ ಆ ಒಕ್ಕಲಿಗ ಸ್ವಾಮೀಜಿ, ಸಾರ್ವಜನಿಕ ಕಾರ್ಯಕ್ರಮವೊಂದರ ಸಭಾಗೌರವವನ್ನೂ ಧಿಕ್ಕರಿಸಿ ಅಷ್ಟು ಅಸಂವಿಧಾನಿಕ ಮಾತನ್ನಾಡಲು ಪ್ರೇರೇಪಣೆ ನೀಡಿದ್ದು ಎನ್ನಬಹುದು!

ರಾಜ್ಯ ರಾಜಕಾರಣದಲ್ಲಿ ನಾವು ಪ್ರಭಾವಿ ಜಾತಿಗಳು ಎನ್ನುವ `ಜಾತಿ ಅಹಂಕಾರವೇ’ ಆ ಸಮುದಾಯಗಳು ಹೀಗೆ ಮಿಕ್ಕ ಜಾತಿಗಳ ಅವಕಾಶಗಳನ್ನು ಅಧಿಕಾರಯುತವಾಗಿ ಅಪಹರಿಸುವ ಧೈರ್ಯ ತಂದಿದೆ. ಒಮ್ಮೆ ಯೋಚಿಸಿ ನೋಡಿ, ಸಿದ್ದರಾಮಯ್ಯನವರಿದ್ದ ಜಾಗದಲ್ಲಿ ಯಡಿಯೂರಪ್ಪನೋ ಅಥವಾ ಮತ್ತ್ಯಾವುದೆ ಲಿಂಗಾಯತ ವ್ಯಕ್ತಿಯೋ ಸಿಎಂ ಆಗಿದ್ದಿದ್ದರೆ, ಒಕ್ಕಲಿಗರ ಆ ಸ್ವಾಮೀಜಿ ಅಷ್ಟು ಸಲೀಸಾಗಿ ನಮ್ಮವನಿಗೆ ಸಿಎಂ ಸ್ಥಾನ ಬಿಟ್ಟುಕೊಡಿ ಎಂದು ಕೇಳುತ್ತಿದ್ದರೆ? ಒಂದೊಮ್ಮೆ, ಹುಂಬತನದಿಂದ ಹಾಗೆ ಕೇಳಿದರು ಅಂತಿಟ್ಟುಕೊಳ್ಳಿ, ಇಷ್ಟೊತ್ತಿಗಾಗಲೇ ದೊಡ್ಡ ಜಾತಿ ಕೋಲಾಹಲವೇ ಭುಗಿಲೇಳುತ್ತಿತ್ತು. ಇದನ್ನು ಇನ್ನೊಂದು ರೀತಿಯಾಗಿ ಯೋಚಿಸಿ ನೋಡೋಣ. ಸಿದ್ದರಾಮಯ್ಯನವರಿದ್ದ ಜಾಗದಲ್ಲಿ ಕುಮಾರಸ್ವಾಮಿಯೋ, ಡಿಕೆ ಶಿವಕುಮಾರೋ ಅಥವಾ ಬೇರಾವುದೆ ಒಕ್ಕಲಿಗ ಸಿಎಂ ಇದ್ದರು ಅಂತಿಟ್ಟುಕೊಳ್ಳಿ. ಆಗ ಯಾರಾದರು ಲಿಂಗಾಯತ ಸ್ವಾಮಿ ಇಷ್ಟು ಸಲೀಸಾಗಿ ನಮ್ಮ ಜಾತಿಯವನಿಗೆ ಸ್ಥಾನ ಬಿಟ್ಟುಕೊಡಿ ಅಂತ ಕೇಳುತ್ತಿದ್ದರೇ? ಹಾಗೊಮ್ಮೆ ಕೇಳಿದ್ದರೆ, ಒಕ್ಕಲಿಗರು ಸುಮ್ಮನಿರುತ್ತಿದ್ದರೇ? ಇದೆಲ್ಲ ಹಾಳಾಗಿ ಹೋಗಲಿ, ಲಿಂಗಾಯತರೋ ಅಥವಾ ಒಕ್ಕಲಿಗರೋ ಸಿಎಂ ಆಗಿದ್ದರು ಅಂತಿಟ್ಟುಕೊಳ್ಳಿ ಆಗ ಒಬ್ಬ ಹಿಂದುಳಿದ ವರ್ಗದ ಸ್ವಾಮಿಯೋ ಅಥವಾ ದಲಿತ ಸ್ವಾಮಿಯೋ ನಮ್ಮವರಿಗೆ ಸೀಟು ಬಿಟ್ಟುಕೊಡಿ ಎಂದು ಕೇಳುವ ಸ್ವಾತಂತ್ಯ್ರವಿದೆಯೇ? ಸ್ವಾತಂತ್ಯ್ರ ಒಂದುಕಡೆಗಿರಲಿ, ಹಾಗೆ ಕೇಳಬಹುದೆನ್ನುವ ಕನಸನ್ನಾದರೂ ಇವರು ಸಹಿಸುತ್ತಿದ್ದರೇ?

ಒಟ್ಟಾರೆ ಜನಸಂಖ್ಯೆಯಲ್ಲಿ ಎರಡೂ ಜಾತಿಗಳನ್ನು ಒಟ್ಟುಗೂಡಿಸಿದರೆ 27% ಕೂಡಾ ದಾಟದ ಈ ಜಾತಿಗಳಿಗೆ ಇಷ್ಟು ಪ್ರಭಾವ ದಕ್ಕಿದ್ದಾದರೂ ಹೇಗೆ? ಇದಕ್ಕೆ ಹಿರಿಯ ರಾಜಕೀಯ ಸಂಶೋಧಕರಾದ ಪ್ರೊ. ಎ ನಾರಾಯಣ್ ಅವರು, ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್ ಆಯೋಜಿಸಿದ್ದ ಸಂವಾದದಲ್ಲಿ ಮೂರು ಕಾರಣಗಳನ್ನು ಮುಂದಿಡುತ್ತಾರೆ. ಜಾತಿಯ ಕಾರಣಕ್ಕೆ ಈ ಸಮುದಾಯಗಳಿಗೆ ದಕ್ಕಿದ ಭೂಒಡೆತನ ಹಾಗೂ ಅದರ ಮೂಲಕ ಲಭಿಸಿದ ಆರ್ಥಿಕ ಯಜಮಾನಿಕೆ; ಮೇಲ್ಜಾತಿಗಳೆಂಬ ಸಾಮಾಜಿಕ ಒಡೆತನ; ಮತ್ತು ಒಟ್ಟಾರೆ ಜನಸಂಖ್ಯೆಯಲ್ಲಿ ಕಡಿಮೆಯಿದ್ದರೂ, ರಾಜಕೀಯ ಲೆಕ್ಕಾಚಾರದಲ್ಲಿ ಕೆಲವು ಕ್ಷೇತ್ರಗಳನ್ನು ಗೆಲ್ಲಿಸಿಕೊಡಬಹುದಾದಷ್ಟು ಆಯಾ ಕ್ಷೇತ್ರಗಳಲ್ಲಿ (ಪ್ರಾಂತ್ಯಗಳಲ್ಲಿ) ಈ ಜಾತಿಗಳ ಸಂಖ್ಯಾಸಾಂದ್ರತೆ. ಈ ಮೂರು ಕಾರಣಗಳಲ್ಲದೆ, ಮತ್ತೂ ಒಂದು ಕಾರಣವಿದೆ. ಅದು ಜಾತಿಸಮೀಕ್ಷೆಯ ಅನುಪಸ್ಥಿತಿ!

ಸ್ವಾತಂತ್ಯ್ರಪೂರ್ವದಲ್ಲಿ, ಅಂದರೆ 1931ರಲ್ಲಿ ನಡೆದ ಸಾಮಾಜಿಕ, ಶೈಕ್ಷಣಿಕ, ಜಾತಿ ಸಮೀಕ್ಷೆಯೇ ಕಟ್ಟಕಡೆಯದು. ಅದಾದ ಮೇಲೆ ಜಾತಿ ಸಮೀಕ್ಷೆ ನಡೆದೇ ಇಲ್ಲ. ಈ ಎರಡು ಸಮುದಾಯಗಳು, ನಾವು ಪ್ರಭಾವಿ ಅಥವಾ ರಾಜಕೀಯ ನಿರ್ಣಾಯಕ ಎಂದು ಕ್ಲೇಮ್ ಮಾಡಿಕೊಳ್ಳುತ್ತಿರುವುದು ಕೂಡಾ ಆ ಸಮೀಕ್ಷೆಯ ಅಂಕಿಅಂಶದ ಆಧಾರದಲ್ಲಿ. ಈಗ ಪ್ರಸ್ತುತ ಜಾತಿ ಸಮೀಕ್ಷೆ ನಡೆದರೆ, ಯಾವ ಜಾತಿಗಳ ಪ್ರಾಬಲ್ಯ ಎಷ್ಟೆಂಬ ವಾಸ್ತವ ಚಿತ್ರಣ ಬಯಲಾಗುತ್ತದೆ. ಅಹಿಂದ ಸಮುದಾಯಗಳು ತಮ್ಮ ಬಲವನ್ನು ಅರ್ಥ ಮಾಡಿಕೊಂಡು ಒಗ್ಗೂಡಿ, ಒಂದು ಪ್ರಬಲ ರಾಜಕೀಯ ಮತಬ್ಯಾಂಕ್ ಆಗಿ ರೂಪಾಂತರಗೊಳ್ಳುವ ಸಾಧ್ಯತೆ ಇದೆ. ಆ ಸಾಧ್ಯತೆಯನ್ನು ಮನಗಂಡೇ ಒಕ್ಕಲಿಗರು ಮತ್ತು ಲಿಂಗಾಯತರು ಜಾತಿಸಮೀಕ್ಷೆಗೆ ಅಡ್ಡಗಾಲು ಹಾಕ್ತಾ ಇರೋದು.

ಕಾಂಗ್ರೆಸ್‌ ಪಕ್ಷ ಈಗಲಾದರೂ, ಮರ್ಜಿ-ಮುಲಾಜುಗಳಿಗೆ ಬಿಕರಿಯಾಗದೆ ತಮ್ಮ ಪಕ್ಷಕ್ಕೆ ಮತ ನೀಡುತ್ತಿರುವ ಅಹಿಂದ ಸಮುದಾಯಗಳ ಹಿತಕಾಯುವ ಜಾತಿಸಮೀಕ್ಷೆಯ ಅನಾವರಣಕ್ಕೆ ಧೈರ್ಯ ತೋರಬೇಕಿದೆ. ಹೇಗೂ ಅವರ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿಯವರೇ ಜಾತಿ ಗಣತಿಯ ಬಗ್ಗೆ ಸಕಾರಾತ್ಮಕ ಒಲವು ಹೊಂದಿರುವುದರಿಂದ ಪಕ್ಷದ ವತಿಯಿಂದ ಹೆಚ್ಚೇನು ಅಡೆತಡೆ ಬಾರದು. ಇಲ್ಲವಾದಲ್ಲಿ, ಇಂತಹ ಜಾತಿದರ್ಪದ ಮಾತುಗಳನ್ನು ಕೇಳುತ್ತಿರಲೇಬೇಕಾಗುತ್ತದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!