Thursday, September 19, 2024

ಪ್ರಾಯೋಗಿಕ ಆವೃತ್ತಿ

ನಾಗಮಂಗಲ | ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಲು ಆಗ್ರಹ

ಸರ್ಕಾರಿ ನೌಕರರಿಗೆ ನಿವೃತ್ತಿಯ ನಂತರ ಆರ್ಥಿಕವಾಗಿ, ಸಾಮಾಜಿಕವಾಗಿ ಭದ್ರತೆ ನೀಡದ ಹೊಸ ಪಿಂಚಣಿ ಯೋಜನೆಯನ್ನು ತೊಲಗಿಸಿ, ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರುವಂತೆ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ಸದಸ್ಯರು ಆಗ್ರಹಿಸಿದರು.

ನಾಗಮಂಗಲ ಪಟ್ಟಣದ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ನೂರಾರು ಸದಸ್ಯರು,ನಿವೃತ್ತ ನೌಕರರ ಬದುಕಿಗೆ ಭದ್ರತೆ ನೀಡುವ ಹಳೆ ಪಿಂಚಣಿ ಯೋಜನೆ ಜಾರಿಗೆ ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತರಾಮ್ ಮಾತನಾಡಿ, ಸುಮಾರು 73 ತಾಲೂಕುಗಳಲ್ಲಿ ಈಗಾಗಲೇ ಓ ಪಿ ಎಸ್ ಸಂಕಲ್ಪ ಯಾತ್ರೆ ನಡೆದಿದೆ. ರಾಜ್ಯ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಯೋಜನೆ ಜಾರಿಗೆ ತಂದು ತುಂಬಾ ಅನ್ಯಾಯ ಮಾಡಲಾಗಿದೆ. ಇಂತಹ ಅಪಮಾನಕರ ಯೋಜನೆಯನ್ನು ಸರ್ಕಾರ ಕೂಡಲೇ ಹಿಂದಕ್ಕೆ ಪಡೆದು, ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತರಬೇಕು. ಹಳೆ ಪಿಂಚಣಿ ಯೋಜನೆ ಜಾರಿಗೆ ತರುವವರಿಗೆ ನಮ್ಮ ಮತ ನೀಡುತ್ತೇವೆ ಎಂದು ಸಂಘದಲ್ಲಿ ನಿರ್ಣಯಿಸಲಾಗಿದೆ ಎಂದು ತಿಳಿಸಿದರು‌‌

ನವೆಂಬರ್ 13ರಂದು ದಾವಣಗೆರೆಯಲ್ಲಿ vote for OPS ಅಭಿಯಾನಕ್ಕೆ ಸಂಘ ಕರೆ ನೀಡಿತ್ತು. ಅದರಂತೆ ಪ್ರತಿ ಕ್ಷೇತ್ರದ ಶಾಸಕರು ನಮ್ಮ ಪ್ರಮುಖ ಬೇಡಿಕೆಯಾದ ಹಳೆ ಪಿಂಚಣಿ ಯೋಜನೆ(ಒಪಿಎಸ್) ಜಾರಿಗೆ ತರಲು ಕೈ ಜೋಡಿಸಬೇಕು ಎಂದು ಮನವಿ ಮಾಡಲಾಗಿದೆ. ಯಾರು ನಮ್ಮ ಮನವಿ ಸ್ವೀಕರಿಸಿ ಹಳೆ ಪಿಂಚಣಿ ಯೋಜನೆ ಜಾರಿಗೆ ಹೋರಾಟ ಮಾಡುತ್ತಾರೋ ಅವರಿಗೆ ನಮ್ಮ ಮತ ಎಂದು ನಮ್ಮ ಸಂಘಟನೆ ನಿರ್ಧರಿಸಿದೆ ಎಂದರು.

ನಿವೃತ್ತ ಸರ್ಕಾರಿ ನೌಕರರಿಗೆ ಸಂಧ್ಯಾಕಾಲದಲ್ಲಿ ಭದ್ರತೆ ಒದಗಿಸುವ ಹಳೆ ಪಿಂಚಣಿ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತರಲು ರಾಜ್ಯ ಸಂಘ ರಾಜ್ಯಾದ್ಯಂತ ಹೋರಾಟ ರೂಪಿಸುತ್ತಿದೆ. 1-4- 2006ರಿಂದ ಕೆಲಸಕ್ಕೆ ಸೇರಿರುವ ನೌಕರರಿಗೆ ಹೊಸ ಪಿಂಚಣಿ ಯೋಜನೆಯಿಂದ ಆರ್ಥಿಕವಾಗಿ, ಸಾಮಾಜಿಕವಾಗಿ ಭದ್ರತೆ ಸಿಗುವುದಿಲ್ಲ‌. ಸರ್ಕಾರದಲ್ಲಿ 30-40 ವರ್ಷ ಸೇವೆ ಸಲ್ಲಿಸಿದ ನಿವೃತ್ತ ನೌಕರರನ್ನು ಗೌರವಯುತವಾಗಿ ನೋಡಿಕೊಳ್ಳಬೇಕಾದದ್ದು ಸರ್ಕಾರದ ಜವಾಬ್ದಾರಿ. ಆದರೆ ನಿವೃತ್ತ ನೌಕರರಿಗೆ ಸಾಮಾಜಿಕ, ಆರ್ಥಿಕ ಭದ್ರತೆ ನೀಡದ ಇಂತಹ ಅಪಮಾನಕರ ಯೋಜನೆಯನ್ನು ಈಗಾಗಲೇ ಛತ್ತೀಸ್ ಗಡ ಮತ್ತು ಜಾರ್ಖಂಡ್ ಸರ್ಕಾರ ತೆಗೆದು ಹಾಕಿದ್ದು, ಕರ್ನಾಟಕ ಸರ್ಕಾರ ಕೂಡ ತೆಗೆದು ಹಾಕಬೇಕೆಂದು ಮನವಿ ಮಾಡಿದರು.

ಎನ್‌ಪಿಎಸ್ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗನಗೌಡ, ಮಂಜುನಾಥ್, ದಿವ್ಯ ರಾಜು, ತಾಲ್ಲೂಕು ಎನ್‌ಪಿಎಸ್ ನೌಕರರ ಸಂಘದ ಗೌರವಾಧ್ಯಕ್ಷೆ ಪ್ರೇಮಾ,ಪ್ರಧಾನ ಕಾರ್ಯದರ್ಶಿ ಮನು ಕುಮಾರ್, ನಂದನ್, ರಘು ಸೇರಿದಂತೆ ನೂರಾರು ಎನ್ ಪಿ ಎಸ್ ನೌಕರರು ಪ್ರತಿಭಟನೆಯಲ್ಲಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!