ಜುಲೈ 21ರಂದು ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಕೆ.ಆರ್.ಪೇಟೆ ತಾಲ್ಲೂಕಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಆಗಮಿಸುತ್ತಿದ್ದು, ಕಾರ್ಯಕ್ರಮ ಉತ್ತಮ ರೀತಿಯಲ್ಲಿ ನಡೆಯುವಂತೆ ವ್ಯವಸ್ಥೆ ಮಾಡಬೇಕೆಂದು ಜಿಲ್ಲಾಧಿಕಾರಿ ಎಸ್. ಅಶ್ವತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಡ್ಯದ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಇಂದು ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ಶಿಕ್ಷಣ ಇಲಾಖೆಯಿಂದ ಕೆ.ಪಿ.ಎಸ್ ಶಾಲೆ ಉದ್ಘಾಟನೆ, ಲೋಕೋಪಯೋಗಿ ಇಲಾಖೆಯಿಂದ 36 ಕ್ಕೂ ಹೆಚ್ಚು ಕಾಮಗಾರಿ ಉದ್ಘಾಟನೆ ಮತ್ತು ಶಂಕುಸ್ಥಾಪನೆ, ಆರೋಗ್ಯ ಇಲಾಖೆಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮೀಣ ಕುಡಿಯುವ ನೀರು ಇಲಾಖೆಯ ಯೋಜನೆಗಳು, ಬಿ.ಸಿ.ಎಂ, ಸಮಾಜ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಬರುವ ವಸತಿನಿಲಯ ಶಾಲೆಗಳ ಉದ್ಘಾಟನೆ, ಅಂಗನವಾಡಿ ಕೇಂದ್ರಗಳು ಸೇರಿದಂತೆ ಇನ್ನಿತರ ಇಲಾಖೆಗಳಲ್ಲಿ ಉದ್ಘಾಟನೆ ಮತ್ತು ಶಂಕುಸ್ಥಾಪನೆಗೆ ಸಿದ್ಧವಿರುವ ಕಾಮಗಾರಿಗಳ ಪಟ್ಟಿಯನ್ನು ಸಲ್ಲಿಸುವಂತೆ ತಿಳಿಸಿದರು.
ತೋಟಗಾರಿಕೆ, ಕೃಷಿ, ರೇಷ್ಮೆ, ಆರೋಗ್ಯ, ಪಶುಸಂಗೋಪನೆ, ಮೀನುಗಾರಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಯಿಂದ ಫಲಾನುಭವಿಗಳಿಗೆ ಸಹಾಯಧನ/ ಸವಲತ್ತುಗಳನ್ನು ಮಾನ್ಯ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ವಿತರಿಸಲು ಕ್ರಮ ಕೈಗೊಳ್ಳಿ ಎಂದರು.
ಎಲ್ಲಾ ಇಲಾಖೆಗಳ ಫಲಾನುಭವಿಗಳನ್ನು ಲೆಕ್ಕಾಚಾರ ಮಾಡಿದರೆ ಅಂದಾಜು 50,000 ಜನರು ಸೇರುವ ನಿರೀಕ್ಷೆ ಇದೆ. ಫಲಾನುಭವಿಗಳಿಗೆ ಮಾಹಿತಿ ನೀಡಿ ಕಾರ್ಯಕ್ರಮದ ಸ್ಥಳಕ್ಕೆ ಕರೆದುಕೊಂಡು ಬಂದು ಹೋಗಲು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದರು.
ಕಾರ್ಯಕ್ರಮದ ಸ್ಥಳ ಪರಿಶೀಲನೆ ನಡೆಸಿ, ವೇದಿಕೆ ನಿರ್ಮಾಣವಾಗಬೇಕು, ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯ, ವಾಹನಗಳ ನಿಲುಗಡೆಯ ಸ್ಥಳ ಗುರುತಿಸುವಿಕೆ ಸೇರಿದಂತೆ ವಿವಿಧ ಕೆಲಸಗಳ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿವ್ಯಾಪ್ರಭು, ಉಪವಿಭಾಗಾಧಿಕಾರಿ ಆರ್.ಐಶ್ವರ್ಯ, ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.