Friday, November 20, 2026

ಪ್ರಾಯೋಗಿಕ ಆವೃತ್ತಿ

ವಿಜಯದಶಮಿಯಂದು ರೈತರನ್ನು ಬೀದಿಯಲ್ಲಿ ನಿಲ್ಲಿಸಿದ ಸರ್ಕಾರ


  • ಕಬ್ಬಿಗೆ ಸೂಕ್ತ ಬೆಲೆ ನೀಡಲು ಸರ್ಕಾರ ವಿಫಲ ರೈತಸಂಘದಿಂದ ಹೆದ್ದಾರಿ ತಡೆ

  • ಎತ್ತಿನಗಾಡಿ, ದನ ಕರುಗಳೊಂದಿಗೆ ಶ್ರೀರಂಗಪಟ್ಟಣದಲ್ಲಿ ರೈತರ ಪ್ರತಿಭಟನೆ

ರೈತರು ಬೆಳೆದ ಕಬ್ಬಿಗೆ ಸೂಕ್ತ ಬೆಲೆ ನಿಗದಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ವಿಫಲವಾಗಿರುವ ರಾಜ್ಯ ಸರ್ಕಾರದ ವಿರುದ್ಧ ರೈತರು ವಿಜಯದಶಮಿಯ ದಿನ ಬೀದಿಗೀಳಿದು ಹೋರಾಟ ನಡೆಸಿದ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ.

ರೈತರ ಬೇಡಿಕೆಗಳನ್ನು ಈಡೇರಿಸಲು ವಿಫಲವಾಗಿರುವ ಸರ್ಕಾರದ ವಿರುದ್ಧ ಶ್ರೀರಂಗಪಟ್ಟಣದ ಕಿರಂಗೂರು ಗೇಟ್ ಬಳಿ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲೆ ಕಬ್ಬಿನ ಲಾರಿ, ಎತ್ತಿಗಾಡಿಗಳೊಂದಿಗೆ ದನಕರು, ಆಡು, ಕುರಿ, ನಾಯಿಗಳೊಂದಿಗೆ ಬೀದಿಗಿಳಿದ ರೈತರು ಮೈಸೂರು ದಸರಾಗೆ ತೆರಳುತ್ತಿದ್ದ ವಾಹನಗಳನ್ನು ತಡೆದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಡಿಸಿದರು.

ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ನೂರಾರು ರೈತರು ಸರ್ಕಾರ ಒಂದೆಡೆ ನಾಡಹಬ್ಬವೆಂದು ಕೋಟ್ಯಂತರ ರೂ. ವೆಚ್ಚ ಮಾಡಿ ಆಚರಣೆ ಮಾಡಿ ಸಂಭ್ರಮಿಸುತ್ತಿದ್ದರೆ ಮತ್ತೊಂದೆಡೆ ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ನೀಡದೆ ವಿಜಯದಶಮಿಯ ದಿನ ರೈತರನ್ನು ಬೀದಿಯಲ್ಲಿ ನಿಲ್ಲಿಸಿದೆ ಎಂದು ಆಕ್ರೋಶ ಹೊರಹಾಕಿದರು..

ಈ ಸಂದರ್ಭದಲ್ಲಿ ಬಡಗಲಪುರ ನಾಗೇಂದ್ರ ಅವರು ಮಾತನಾಡಿ, ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರಗಳು ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿವೆ, ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿವೆ, ಕಳೆದ 6 ವರ್ಷಗಳಿಂದ ರೈತರಿಗೆ ಬೆಂಬಲ ಬೆಲೆ ನೀಡದೆ ವಂಚಿಸುತ್ತಿದೆ ಎಂದು ಕಿಡಿಕಾರಿದರು.

ಸಕ್ಕರೆ ಕಾರ್ಖಾನೆ ನಡೆಸುತ್ತಿರುವ ಬಂಡವಾಳಶಾಹಿಗಳ ಮಂತ್ರಿಗಳಾಗಿರುವುದರಿಂದ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಕೆಳದ ಜುಲೈ 11ರಂದು ಸಿಎಂ ಬಸವರಾಜು ಬೊಮ್ಮಾಯಿ ಅವರು ರೈತರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಆದರೆ 3 ತಿಂಗಳುಗಳೇ ಸಮೀಪಿಸುತ್ತಾ ಬಂದಿದ್ದರೂ ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ, ಕಳೆದ ಸೆ.19ರಂದು ಮಂಡ್ಯದಲ್ಲಿ ರೈತ ಸಮಾವೇಶ ನಡೆಸಿ ಒತ್ತಾಯ ಮಾಡಿದ್ದರು. ಇಂದು ನಮ್ಮನ್ನು ಸರ್ಕಾರ ಬೀದಿಗೆ ತಂದು ನಿಲ್ಲಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

2012ರ ವಿಜಯದಶಮಿ ಸಂದರ್ಭದಲ್ಲಿ ರೈತ ನಾಯಕ ಕೆ.ಎಸ್.ಪುಟ್ಟಣಯ್ಯ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದಾಗ ಅಂದಿನ ಮುಖ್ಯಮಂತ್ರಿ ಸದಾನಂದಗೌಡ ಅವರು ಕಬ್ಬಿಗೆ 400 ಎ.ಎಸ್.ಪಿ ನಿಗಧಿ ಮಾಡಿದ್ದರು. ಆದರೆ ಇಂದಿನ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರಿಗೆ ರೈತರ ಮೇಲೆ ಯಾವುದೆ ಕಾಳಜಿ ಇಲ್ಲದಿರುವ ಕಾರಣ ನಾವು ಬೀದಿಯಲ್ಲಿ ನಿಲ್ಲುವಂತಾಗಿದೆ ಎಂದು ಕಿಡಿಕಾರಿದರು.

ದಲಿತ ಸಂಘರ್ಷ ಸಮಿತಿ ಹಾಗೂ ಆಮ್ ಆದ್ಮಿ ಪಾರ್ಟಿಗಳು ರೈತಸಂಘದ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದವು.

ಪ್ರತಿಭಟನೆಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ರೈತ ಮುಖಂಡರಾದ ಸುನೀತಾ ಪುಟ್ಟಣ್ಣಯ್ಯ, ಕಡತನಾಳು ಬಾಲಕೃಷ್ಣ, ಚಿಕ್ಕಾಡೆ ಹರೀಶ್, ವಿಜಯ ಕುಮಾರ್, ಕೋಕೀಲ ಜ್ಞಾನೇಶ್, ಹೆಚ್.ಎಲ್.ಪ್ರಕಾಶ್ ಮತ್ತಿತರರು ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ