Friday, September 20, 2024

ಪ್ರಾಯೋಗಿಕ ಆವೃತ್ತಿ

ಒಂದು ದೇಶ- ಒಂದೇ ಚುನಾವಣೆ; ಚುನಾವಣಾ ಸರ್ವಾಧಿಕಾರದ ಚಿತಾವಣೆಯನ್ನು ಧಿಕ್ಕರಿಸೋಣ!

✍️ ಶಿವಸುಂದರ್

ಏಕಕಾಲಕ್ಕೆ ಸಂಸತ್ತು ಮತ್ತು ಎಲ್ಲಾ ರಾಜ್ಯಗಳ ಶಾಸನಾ ಸಭೆಗಳಿಗೆ ಚುನಾವಣೆ ನಡೆಸುವ ಬಗ್ಗೆ ಕಳೆದ ಲೋಕಸಭಾ ಅಧಿವೇಷನದಲ್ಲಿ ತರಾತುರಿಯಲ್ಲಿ ಮೋದಿ ಸರ್ಕಾರ ನಿವೃತ್ತ ರಾಷ್ಟ್ರಪತಿ ಕೋವಿಂದ್ ಅವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ಮಾಡಿತ್ತು. ಅದು ಈಗ ಜನವರಿ 15 ರೊಳಗೆ ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕೆಂದು ಪತ್ರಿಕಾ ಪ್ರಕಟಣೆ ನೀಡಿದ್ದು ಕೇವಲ ಒಂದು ವಾರಗಳ ಅವಕಾಶ ಕೊಟ್ಟಿದೆ. ಹೀಗಾಗಿ ಇದು ಕೇವಲ ಪ್ರಜಾತಾಂತ್ರಿಕ ಕ್ರಮಗಳನ್ನು ಅನುಸರಿಸಲಾಗಿದೆ ಎಂದು ದಾಖಲಿಸುವುದಕ್ಕಾಗಿಯೇ ಹೊರತು ಜನರ ಅಭಿಪ್ರಾಯಗಳನ್ನು ಮತ್ತು ವಿವಿಧ ದೃಷ್ಟಿಕೋನಗಳನ್ನು ಗಣನೆಗೆ ತೆಗೆದುಕೊಳ್ಳಲು ಅಲ್ಲ ಎಂಬುದು ಸ್ಪಷ್ಟ.

ಮೇಲಾಗಿ ಮೋದಿ ಸರ್ಕಾರವು ಕೋವಿಂದ್ ಸಮಿತಿಯನ್ನು ರಚಿಸಿದ್ದು ಏಕಕಾಲಿಕ ಚುನಾವಣೆಗಳ ಸಾಧಕ ಮತ್ತು ಬಾಧಕಗಳ ವಸ್ತುನಿಷ್ಟ ಅಧ್ಯನಕ್ಕಾಗಿ ಅಲ್ಲವೇ ಅಲ್ಲ. ಸಮಿತಿಯ ಟರ್ಮ್ ಆಫ್ ರೆಫ಼ರೆನ್ಸ್ ನಲ್ಲಿ ಇರುವುದೇ ಏಕಕಾಲದಲ್ಲಿ ಲೋಕಸಭೆ, ರಾಜ್ಯ ಶಾನಸಭೆಗಳ ಮತ್ತು ಇನ್ನು ತಳಹಂತದ ನಗರ ಮತ್ತು ಗ್ರಾಮ ಪಂಚಾಯತ್‌ಗಳ ಚುನಾವಣೆಗಳನ್ನು ಹೇಗೆ ನಡೆಸಬಹುದು ಎಂದು ಸಲಹೆ ನೀಡಲು.

ಅಂದರೆ ಸರ್ಕಾರ ಈಗಾಗಲೇ ಏಕಕಾಲದಲ್ಲಿ ಚುನಾವಣೆ ನಡೆಸಬೇಕು ಎಂಬ ಸರ್ವಾಧಿಕಾರಿ ತೀರ್ಮಾನಕ್ಕೆ ಬಂದು ಅದಕ್ಕೆ ಪೂರಕವಾಗಿ ಸಲಹೆ ನೀಡಲು ಸಮಿತಿಯನ್ನು ರಚಿಸಿದೆ. ಈಗ ಆ ಸಮಿತಿ ಏಕಕಾಲದಲ್ಲಿ ಚುನಾವಣೆ ನಡೆಸಲು ಸಲಹೆಗಳನ್ನು ಕೊಡಿ ಎಂದು ಜನರನ್ನು ಕೇಳಿದೆಯೇ ವಿನಾ ಏಕಕಾಲದಲ್ಲಿ ಚುನಾವಣೆಯ ಬೇಕೆ ಎಂಬ ಬಗ್ಗೆ ಜನರ ಅಭಿಪ್ರಾಯಗಳನ್ನು ಕೇಳುತ್ತಿಲ್ಲ.

ಆದ್ದರಿಂದ ಇದು ಒಂದು ಸರ್ವಾಧಿಕಾರಿ ಸರ್ಕಾರವು ಈಗಾಗಲೇ ಮಾಡಿರುವ ತೀರ್ಮಾನಕ್ಕೆ ಜನಾಭಿಪ್ರಾಯದ ಒಕ್ಕಣೆ ಪಡೆದುಕೊಳ್ಳುವ ಮೋಸದ ತಂತ್ರವಷ್ಟೇ ಆಗಿದೆ. ಆದ್ದರಿಂದ ಏಕಕಾಲದಲ್ಲಿ ಚುನಾವಣೆ ನಡೆಸಲು ಮುಂದಿಡುತ್ತಿರುವ ಕಾರಣಗಳ ಸೋಗಲಾಡಿತನವನ್ನು ಮೊದಲು ಅರ್ಥಮಾಡಿಕೊಳ್ಳಬೇಕಿದೆ:

ಅ) ಏಕಕಾಲಕ್ಕೆ ಎಲ್ಲಾ ಚುನಾವಣೆಗಳು ಮುಗಿದುಹೋದರೆ ಸರ್ಕಾರಗಳು ನಿರಾತಂಕವಾಗಿ ಆಡಳಿತದ ಕಡೆ ಗಮನಹರಿಸಬಹುದು ಮತ್ತು ಪ್ರತಿ ಚುನಾವಣೆ ಘೋಷಿಸಿದಾಗ ಮಾದರಿ ನೀತಿ ಸಂಹಿತೆ ಗಳು ಜಾರಿಗೆ ಬಂದು ಹಲವಾರು ತಿಂಗಳು ಅಭಿವೃದ್ಧಿ ಕೆಲಸಗಳು ನಿಂತುಹೋಗುವುದನ್ನು ತಡೆಯಬಹುದು. :

ಸರ್ಕಾರದ ಈ ವಾದದ ಹಿಂದೆ ಚುನಾವಣೆಗಳು ಅರ್ಥಾತ್ ಜನರನ್ನು ಪದೇಪದೇ ಮುಖಾಮುಖಿಯಾಗುವುದು ಸರ್ಕಾರ ನಡೆಸಲು ಅಡ್ಡಿಯೆಂಬ ಸರ್ವಾಧಿಕಾರಿ-ಫ್ಯಾಸಿಸ್ಟ್ ತಿಳವಳಿಕೆ ಇದೆ. ವಾಸ್ತವದಲ್ಲಿ ಪ್ರಬುದ್ಧ ಪ್ರಜಾತಂತ್ರಗಳು ಚುನಾವಣೆಯ ಸಮಯದಲ್ಲಿ ಮಾತ್ರವಲ್ಲದೆ ಜನರ ಬದುಕನ್ನು ಪ್ರಭಾವಿಸುವ ಯಾವುದೇ ನೀತಿಗಳನ್ನು ಜಾರಿ ಮಾಡುವಾಗಲೂ ಜನಮತಗಣನೆ ನಡೆಸುತ್ತವೆ. ಆದರೆ ಬಿಜೆಪಿ-ಆರೆಸ್ಸೆಸ್-ಕಾರ್ಪೊರೇಟ್ ಕೂಟವು ಜನರು ಒಮ್ಮೆ ಚುನಾವಣೆಯಲ್ಲಿ ಒಟು ಕೊಟ್ಟ ನಂತರ ಉಳಿದ ಐದು ವರ್ಷಗಳ ಕಾಲ ತಟಸ್ಥ ಪ್ರೇಕ್ಷಕರಾಗಿ ಉಳಿಯಬೇಕೆಂದು ನಿರೀಕ್ಷಿಸುತ್ತವೆ.

ಎರಡನೆಯದಾಗಿ ಮಾದರಿ ನೀತಿ ಸಂಹಿತೆಯಿಂದಾಗಿ ಕೆಲವು ತಿಂಗಳು ಕಾಲ ಆಡಳಿತ ಯಂತ್ರಾಂಗ ನಿಷ್ಖ್ರಿಯವಾಗುತ್ತದೆ ಎಂಬ ವಾದವನ್ನು ಆಡಳಿತರೂಢ ಪಕ್ಷವು ತಮ್ಮ ಐದು ವರ್ಷಗಳ ನಿಷ್ಖ್ರಿಯತೆಗೆ ಗುರಾಣಿಯನ್ನಾಗಿ ಬಳಸಿಕೊಳ್ಳುತ್ತಿವೆ ಎಂಬುದು ಎಳೆ ಮಕ್ಕಳಿಗೂ ಅರ್ಥವಾಗುತ್ತದೆ. ಇಷ್ಟಾಗಿ ಅದು ತೊಡಕಾಗಿದ್ದರೆ, ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಅಯೋಗವನ್ನು ಭೇಟಿಯಾಗಿ ಪರಿಹರಿಸಿಕೊಳ್ಳಬಹುದಾಷ್ಟು ಚಿಲ್ಲರೆ ಸಮಸ್ಯೆ ಅದು. ಹಾಗೆ ನೋಡಿದರೆ, ಮಾದರಿ ಸಂಹಿತೆ ಇದ್ದರೂ ಬಾಲಾಕೋಟ್ ದಾಳಿಯಾಗಲಿಲ್ಲವೇ? ಸೈನಿಕ ವಿಜಯವನ್ನು ಮೋದಿ ವಿಜಯವೆಂದು ಪ್ರಚಾರ ಮಾಡಲಿಲ್ಲವೇ?

ಆ) ವೆಚ್ಚಗಳು ಕಡಿಮೆಯಾಗುತ್ತವೆ !

ಮೋದಿ ಸರ್ಕಾರ ಪ್ರಕಾರ 2014 ರ ಚುನಾವಣೆ ನಡೆಸಲು ಭಾರತ ಸರ್ಕಾರಕ್ಕೆ ಅಧಿಕೃತವಾಗಿ 3870 ಕೋಟಿ ವೆಚ್ಚವಾಯಿತು. ಆಗಲೇ ಎಲ್ಲಾ ರಾಜ್ಯಗಳಲ್ಲೂ ಚುನಾವಣೆಗಳು ನಡೆದಿದ್ದರೆ ಹೆಚ್ಚುವರಿಯಾಗಿ 500 ಕೋಟಿ ಮಾತ್ರ ಖರ್ಚಾಗುತ್ತಿತ್ತು. ಆದರೆ ಪ್ರತ್ಯೇಕವಾಗಿ ಎಲ್ಲಾ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವುದರಿಂದ 3-4000 ಕೋಟಿ ವೆಚ್ಚ ಹೆಚ್ಚುವರಿಯಾಗಿದೆ.

ಆದರೆ ಇದೊಂದು ಹಸಿ ಸುಳ್ಳು. ಚುನಾವಣ ಅಯೋಗದ ಮತ್ತೊಂದು ಲೆಕ್ಕಾಚಾರದ ಪ್ರಕಾರವೇ ಏಕಕಾಲದಲ್ಲಿ ಚುನಾವಣೆ ನಡೆದರೆ 2019 ರ ಲೆಕ್ಕಾಚಾರದಲ್ಲಿ 10 ಲಕ್ಷ ಬೂತುಗಳಲ್ಲಿ ಎರಡೆರಡು EVM ಯಂತ್ರಗಳಂತೆ 20 ಲಕ್ಷ ಯಂತ್ರಗಳು ಹಾಗೂ 3-4 ಲಕ್ಷ VVPAT ಯಂತ್ರಗಳಿಗಾಗಿ ಒಟ್ಟಾರೆಯಾಗಿ 10,000 ಕೋಟಿ ರೂಪಾಯಿಗಳು ಬೇಕಾಗುತ್ತವೆ. ಈ ಎಲ್ಲಾ ಯಂತ್ರಗಳನ್ನು ಪ್ರತಿ 15 ವರ್ಷಗಳಿಗೊಮ್ಮೆ ಬದಲಾಯಿಸಬೇಕಾಗುತ್ತದೆ!

ಇ) ಕಪ್ಪುಹಣ ಚಲಾವಣೆ ನಿಯಂತ್ರಣಕ್ಕೆ ಬರುತ್ತದೆ

ಬಿಜೆಪಿ ಪಕ್ಷ ಈ ವಾದವನ್ನು ಮುಂದಿಡುತ್ತಿರುವುದೇ ಅತ್ಯಂತ ಹಾಸ್ಯಾಸ್ಪದವಾದ ಸಂಗತಿ. ಇಂದು ಚುನಾವಣೆಗಳಲ್ಲಿ ಅಪಾರವಾದ ಕಪ್ಪುಹಣವನ್ನು ಬಳಸುತ್ತಿರುವ ಪಕ್ಷಗಳಲ್ಲಿ ಬೆಜೆಪಿ ಕಾಂಗ್ರೆಸ್ಸನ್ನು ತುಂಬಾ ಹಿಂದಕ್ಕೆ ಹಾಕಿದೆ. ಕಾರ್ಪೊರೇಟ್ ಶಕ್ತಿಗಳು ತಮ್ಮ ಪರವಾದ ಸರ್ಕಾರ-ನೀತಿಗಳು ಜಾರಿಗೆ ಬರಲು ಪಕ್ಷಗಳಿಗೆ ನೀಡುವ ದೇಣಿಗೆಯನ್ನು ಎಲೆಕ್ಟೊರಲ್ ಬಾಂಡ್ ಯೋಜನೆಯ ಮೂಲಕ ಅಪಾರದರ್ಶಕಗೊಳಿಸಿದ್ದೂ ಮತ್ತು ಅದರ ಅತ್ಯಂತ ದೊಡ್ಡ ಫಲಾನುಭವಿಯಾಗಿರುವುದೂ ಸಹ ಬಿಜೆಪಿ ಪಕ್ಷವೇ ಆಗಿದೆ. ಐದುವರ್ಷಕ್ಕೊಮ್ಮೆ ಮಾತ್ರ ನಡೆಯುವ ಗ್ರಾಮ ಪಂಚಾಯತಿ ಚುನಾವಣೆಗಳಲ್ಲೂ ಕಪ್ಪುಹಣದ ಹೊಳೆ ಹರಿಸಿದ ಕೀರ್ತಿ ಬಿಜೆಪಿ ಪಕ್ಷಕ್ಕೇ ಸಲ್ಲಬೇಕು. ಎಲ್ಲಿಯತನಕ ಎಲೆಕ್ಟೋರಲ್ ಬಾಂಡ್ ಪದ್ಧತಿ ರದ್ದಾಗುವುದಿಲ್ಲವೋ, ಸರ್ಕಾರವೇ ಪಕ್ಷಗಳ ವೆಚ್ಚವನ್ನು ವಹಿಸಿಕೊಂಡು ಪಕ್ಷಗಳ ಎಲ್ಲಾ ಚುನಾವಣಾ ವೆಚ್ಚಗಳು ರದ್ದಾಗುವುದಿಲ್ಲವೋ ಅಲ್ಲಿಯತನಕ ಚುನಾವಣೆಯಲ್ಲಿ ಕಪ್ಪುಹಣ ಚಲಾವಣೆ ನಿಲ್ಲುವುದಿಲ್ಲ. ಅದು ಏಕಕಾಲಿಕ ಚುನಾವಣೆಯಾದರೂ ಅಷ್ಟೆ..ಭಿನ್ನ ಚುನಾವಣೆಯಾದರೂ ಅಷ್ಟೆ.

ಹೀಗೆ ಏಕಕಾಲಿಕ ಚುನಾವಣೆಗಳ ಬಗ್ಗೆ ಸರ್ಕಾರ ಮುಂದಿಡುತ್ತಿರುವ ಎಲ್ಲಾ ವಾದಗಳೂ ಅಸಂಬದ್ಧವಾಗಿವೆ. ಅಸಂಗತವಾಗಿವೆ.

ಆದರೆ ಏಕಕಾಲಿಕ ಚುನಾವಣೆಗಳು ಸಂವಿಧಾನಿಕ ಪ್ರಜಾತಂತ್ರಕ್ಕೆ ಮತ್ತು ಭಾರತದ ಫೆಡರಲ್ ವ್ಯವಸ್ಥೆಗ ಮಾಡುವ ಅಪಾಯ ಮಾತ್ರ ಅಪಾರವಾಗಿದೆ.

ಫ಼್ಯಾಸಿಸ್ಟ್ ಪರಿಹಾರಗಳು

ಏಕಕಾಲಿಕ ಚುನಾವಣೆ ನಡೆದರೂ ಚುನಾಯಿತ ಪಕ್ಷ ಸದನದ ವಿಶ್ವಾಸ ಕಳೆದುಕೊಂಡಾಗ ಏಕಕಾಲಿಕ ವ್ಯವಸ್ಥೆ ಮುರಿಯುತ್ತದೆ. ಅದನ್ನು ತಡೆಯಲು ಚುನಾವಣ ಅಯೋಗ ಮತ್ತು ನೀತಿ ಅಯೋಗ ಹಾಗೂ ಬಿಜೆಪಿ ಪಕ್ಷ ಮುಂದಿಡುತ್ತಿರುವ ಪರಿಹಾರ ಸಮಸ್ಯೆಗಿಂತ ಭೀಕರವಾಗಿದೆ.

ಅ) ವಿಶ್ವಾಸ ಇದ್ದರೆ ಮಾತ್ರ ಅವಿಶ್ವಾಸ?

ಈಗಿರುವ ಪ್ರಜಾತಾಂತ್ರಿಕ ನಿಯಮಗಳಂತೆ ಐದು ವರ್ಷಗಳ ಕಾಲ ಆಡಳಿತ ನಡೆಸಲು ಚುನಾಯಿತವಾದ ಸರ್ಕಾರವೊಂದು ಶಾಸನಸಭೆಯ ವಿಶ್ವಾಸವನ್ನು ಕಳೆದುಕೊಂಡರೆ ಅದು ಬಹುಮತವನ್ನು ಸಾಬೀತುಪಡಿಸಬೇಕು ಅಥವಾ ಅಧಿಕಾರ ಬಿಟ್ಟುಕೊಡಬೇಕು. ಬೇರೊಂದು ಪಕ್ಷದ ನಾಯಕರ ನೇತೃತ್ವದಲ್ಲಿ ಬಹುಮತವಿರುವ ಸರ್ಕಾರ ಸ್ಥಾಪನೆಯಾಗಬೇಕು. ಅದಾಗದಿದ್ದಲ್ಲಿ ರಾಜ್ಯಪಾಲ/ರಾಷ್ಟ್ರಪತಿ ಆಡಳಿತ ಜಾರಿಯಾಗಿ ಆದಷ್ಟು ಬೇಗ ಮರುಚುನಾವಣೆ ನಡೆಯುತ್ತದೆ. ಅದರಲ್ಲಿ ಗೆದ್ದುಬಂದವರು ಮುಂದಿನ ಐದು ವರ್ಷಗಳ ಕಾಲ ಅಧಿಕಾರ ನಡೆಸುತ್ತಾರೆ.

ಆದರೆ ಒಂದು ದೇಶ-ಒಂದು ಚುನಾವಣೆ ಜಾರಿಗೆ ಬರಬೇಕೆಂದರೆ ವಿಧಾನಮಂಡಲದ ಅವಧಿ ಚುನಾವಣೆಗಳಿಗೆ ತಕ್ಕಂತೆ ನಿಗದಿಯಾಗದೆ, ಪೂರ್ವ ನಿಗದಿಯಾದ ಅವಧಿಕೆ ತಕ್ಕಂತೆ ಚುನಾವಣೆಗಳು ನಡೆಯಬೇಕೆಂದು ಲಾ ಕಮಿಷನ್ನಿನ 170 ನೇ ವರದಿ ಸಲಹೆ ಮಾಡುತ್ತದೆ.
(https://lawcommissionofindia.nic.in/lc170.htm)

ಚುನಾವಣಾ ಅಯೋಗ ಹಾಗೂ ಲಾ ಕಮಿಷನ್ 2018 ರಲ್ಲಿ ಕೊಟ್ಟ ವರದಿಯಲ್ಲಿ ಒಂದು ವೇಳೆ ಸದನದಲ್ಲಿ ಆಳುವ ಸರ್ಕಾರದ ಬಗ್ಗೆ ಅವಿಶ್ವಾಸ ಗೊತ್ತುವಳಿ ಮಂಡಿಸಬೇಕೆಂದರೆ ಕಡ್ಡಾಯವಾಗಿ ಅದರ ಜೊತೆಗೆ ಯಾರ ನೇತೃತ್ವದ ಸರ್ಕಾರದ ಬಗ್ಗೆ ವಿಶ್ವಾಸ ಇದೆಯೆಂಬುದನ್ನು ಕೂಡಿಸಿ ಮಂಡಿಸಬೇಕೆಂದು ಸಲಹೆ ಮಾಡಿದೆ.
(http://164.100.47.5/newcommittee/reports/EnglishCommittees/Committee%20on%20Personnel,%20PublicGrievances,%20Law%20and%20Justice/79.pdf)

NiTi ಅಯೋಗವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 14 ದಿನಗಳ ಒಳಗೆ ಬದಲಿ ಸರ್ಕಾರವನ್ನು ರಚಿಸುವ ಸಾಧ್ಯತೆ ಇಲ್ಲದಿದ್ದರೆ ಅವಿಶ್ವಾಸ ಗೊತ್ತುವಳಿಗೆ ಅವಕಾಶವೇ ಕೊಡಕೂಡದೆಂದು ಸಲಹೆ ಮಾಡಿದೆ.
(http://niti.gov.in/writereaddata/files/document_publication/Note%20on%20Simultaneous%20Elections.pdf)

ಅವಧಿ ಕಡಿತ- ಸರ್ಕಾರದ ತಪ್ಪು-ಜನರಿಗೆ ಶಿಕ್ಷೆ

ಒಂದು ವೇಳೆ ಬದಲಿ ಸರ್ಕಾರ ರಚಿಸಲು ಸಾಧ್ಯವೇ ಆಗದೆ ಹೋದಲ್ಲಿ ಏನು ಮಾಡಬೇಕು? ಆಗ ಆ ಸದನದ ಅವಧಿ ಮುಗಿದುಹೋಗಲು ಕಡಿಮೆ ಕಾಲಾವಧಿ ಇದ್ದಲ್ಲಿ ರಾಷ್ಟ್ರಪತಿ/ರಾಜ್ಯಪಾಲರ ಆಡಳಿತ ಜಾರಿಯಾಗಬೇಕು. ಒಂದು ವೇಳೆ ಆಯಾ ಲೋಕಸಭ/ ಶಾಸನಸಭಾ ಅವಧಿ ಇನ್ನೂ ಹೆಚ್ಚು ಕಾಲವಿದ್ದರೆ ಹೊಸ ಚುನಾವಣೆ ನಡೆಯಬೇಕು. ಆದರೆ ಆಗ ಚುನಾಯಿತವಾಗುವ ಸರ್ಕಾರದ ಅವಧಿ ಐದು ವರ್ಷಗಳಾಗಿರುವುದಿಲ್ಲ. ಬದಲಿಗೆ ಉಳಿಕೆ ಅವಧಿಗೆ ಮಾತ್ರ ಹೊಸ ಸರ್ಕಾರದ ಆಡಳಿತ ಅವಧಿ ಸೀಮಿತವಾಗಿರುತ್ತದೆ!

ಅಂದರೆ ಏಕಕಾಲಿಕ ಚುನಾವಣೆಯನ್ನು ಸಾಧ್ಯಗೊಳಿಸಲು ಈಬಗೆಯ ಅಪಾಯಕಾರಿ ತಾಂತ್ರಿಕ ಪರಿಹಾರಗಳನ್ನು ಒದಗಿಸುತ್ತಿರುವ ಬಿಜೆಪಿ ಸರ್ಕಾರ ಇದರಿಂದ ಜನರ ಸಾಂವಿಧಾನಿಕ ಹಕ್ಕುಗಳು ಹೇಗೆ ಬಲಿಯಾಗುತ್ತಿವೆ ಎಂಬುದನ್ನು ಮರೆಸುತ್ತಿದೆ.

ಬದುಕಿನ ಅಭಿಮತಕ್ಕಿಂತ ಭಾವೋದ್ವೇಗಕ್ಕೆ ಮತಾಧಿಕಾರ

ಅಸಲು ಬಿಜೆಪಿ ಸರ್ಕಾರಕ್ಕೆ ಒಂದು ದೇಶ ಒಂದೇ ಚುನಾವಣೆಯ ವಿಷಯದ ಏಕೆ ಮುಖ್ಯವಾಗಿದೆ?
IDFC Institute ಎಂಬ ಸಂಸ್ಥೆಯು 1999, 2004, 2009 ಮತ್ತು 2014 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಲೋಕಸಭೆ ಮತ್ತು ರಾಜ್ಯಗಳ ಶಾಸನಸಭೆಗಳಿಗೆ ಏಕಾಕಾಲದಲ್ಲಿ ಚುನಾವಣೆ ನಡೆದ ರಾಜ್ಯಗಳ ಮತದಾನದ ಸ್ವರೂಪವನ್ನು ಅಧ್ಯಯನ ಮಾಡಿದೆ.

ಅದರ ಪ್ರಕಾರ ಏಕಕಾಲದಲ್ಲಿ ಕೇಂದ್ರ ಮತ್ತು ರಾಜ್ಯಗಳಿಗೆ ಚುನಾವಣೆ ನಡೆದರೆ ಮತದಾರರು ಒಂದೇ ಪಕ್ಷಕ್ಕೆ ಓಟು ಹಾಕುವ ಸಾಧ್ಯತೆ ಶೇ.77ರಷ್ಟು ಹೆಚ್ಚು. ಕೆಲವು ರಾಜ್ಯಗಳಲ್ಲಿ ಅದು ಶೇ.85ರಷ್ಟು!!

1967 ರ ಪೂರ್ವದ ಅವಧಿಯಲ್ಲೂ ಇದೇ ಸ್ವರೂಪದಲ್ಲೇ ಮತದಾನವಾಗಿವೆ

ಅಮೆರಿಕದ ಮತ್ತೊಂದು ಅಧ್ಯಯನ ಸಂಸ್ಥೆಯ ಪ್ರಕಾರ 2014 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ಜೊತೆಗೇ ಎಲ್ಲಾ ರಾಜ್ಯಗಳ ಶಾಸನಸಭಾ ಚುನಾವಣೆಗಳು ನಡೆದಿದ್ದರೆ ಬಹುಪಾಲು ರಾಜ್ಯಗಳಲ್ಲಿ ಬಿಜೆಪಿ ಅಪಾರ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತಿತ್ತು. ಆದರೆ ಒಂದು ವರ್ಷದ ನಂತರ ದೆಹಲಿ ವಿಧಾನಸಭೆಗೆ ಮತ್ತು ಬಿಹಾರ ವಿಧಾನಸಭೆಗೆ ಚುನಾವಣೆ ನಡೆದದ್ದರಿಂದ ಆ ರಾಜ್ಯಗಳಲ್ಲಿ ಲೋಕಸಭೆಯಲ್ಲಿ ಅಪಾರ ಬಹುಮತ ಪಡೆದಿದ್ದ ಬಿಜೆಪಿ ಪಕ್ಷಕ್ಕೆ ಹೋಲಿಕೆಯಲ್ಲಿ ಅತ್ಯಂತ ಕಡಿಮೆ ಓಟು ಮತ್ತು ಸೀಟುಗಳು ಮಾತ್ರ ದಕ್ಕಿದವು.

ಇದಕ್ಕೆ ಮುಖ್ಯ ಕಾರಣ ಲೋಕಸಭೆಯ ಚುನಾವಣೆಗಳಲ್ಲಿ ರಾಷ್ಟ್ರ , ಧರ್ಮ, ಭದ್ರತೆಯಂಥ ಭಾವನಾತ್ಮಕ ವಿಷಯಗಳು ಪ್ರಾಧಾನ್ಯತೆಯನ್ನು ಪಡೆದರೆ, ಸಾಮಾನ್ಯವಾಗಿ ರಾಜ್ಯಗಳ ಶಾಸನಾಸಭಾ ಚುನಾವಣೆಗಳಲ್ಲಿ ಬದುಕಿಗೆ ಸಂಬಂಧಪಟ್ಟ ವಿಷಯಗಳು ಪ್ರಾಧಾನ್ಯತೆಯನ್ನು ಪಡೆದುಕೊಳ್ಳುತ್ತವೆ.

ಹೀಗಾಗಿ ಏಕಕಾಲದಲ್ಲಿ ಚುನಾವಣೆ ನಡೆದಾಗ ಬದುಕಿಗೆ ಸಂಬಂಧಪಟ್ಟ ವಿಷಯಗಳನ್ನು ಭಾವನಾತ್ಮಕ ವಿಷಯಗಳು ನುಂಗಿಹಾಕುತ್ತವೆ. ಹಾಗೂ ಪ್ರಾದೇಶಿಕ ಪಕ್ಷಗಳಿಗಿಂತ ರಾಷ್ಟ್ರೀಯ ಪಕ್ಷಗಳಿಗೇ ಹೆಚ್ಚಿನ ಮನ್ನಣೆಯನ್ನು ಪಡೆದುಕೊಳ್ಳುತ್ತವೆ.

ಇದು ಪ್ರಜಾತಂತ್ರದಲ್ಲಿ ಪ್ರಬುದ್ಧ ಮತದಾರರ ಪಾತ್ರವನ್ನು ಮತ್ತಷ್ಟು ಗೌಣಗೊಳಿಸಿ ಸರ್ವಾಧಿಕಾರಿ, ಹುಸಿ ರಾಷ್ಟ್ರವಾದಿ ರಾಜಕಾರಣಕ್ಕೆ ದಾರಿ ಮಾಡಿಕೊಡುತ್ತದೆ.

ಸ್ಥಿರತೆಯ ಹೆಸರಿನಲ್ಲಿ ಬಂಡವಾಳಶಾಹಿ ಫ಼್ಯಾಸಿಸ್ಟ್ ಆಕ್ರಮಣ

ವಾಸ್ತವದಲ್ಲಿ ಭಾರತವನ್ನೂ ಒಳಗೊಂಡಂತೆ ವಸಹತೋತ್ತರ ಪ್ರಜಾತಂತ್ರಗಳು ರೂಪದಲ್ಲಿ ಚುನಾವಣಾ ಪ್ರಜಾತಂತ್ರವನ್ನು ಅನುಸರಿಸಿದವು. ಪ್ರಾರಂಭದಲ್ಲಿ ಸ್ವಾತಂತ್ರ್ಯದ ಹಸಿರು ನಿರೀಕ್ಷೆಗಳು ಚುನಾವಣೆಯಲ್ಲಿ ಸ್ಥಿರ ಸರ್ಕಾರವನ್ನು ಒದಗಿಸಿದವು. ಹೀಗಾಗಿಯೇ ಭಾರತದಲ್ಲೂ 1952-67ರ ತನಕ ಲೋಕಸಭೆ ಮತ್ತು ರಾಜ್ಯದ ಶಾಸನ ಸಭೆಗಳಿಗೆ ಏಕಕಾಲದಲ್ಲೇ ಚುನಾವಣೆಗಳು ನಡೆಯುತ್ತಿದ್ದವು.

ಆದರೆ ಭಾರತದ ಚುನಾವಣಾ ಪ್ರಜಾತಂತ್ರಗಳು ಸಾರದಲ್ಲಿ ಅರೆ ಊಳಿಗಮಾನ್ಯ ಮತ್ತು ಬಂಡವಾಳಶಾಹಿ ಅಭಿವೃದ್ಧಿ ಮಾದರಿಯನ್ನೇ ಅನುಸರಿಸಿದ್ದರಿಂದ ದಿನಗಳೆದಂತೆ ಜನರಿಗೆ ಸ್ವಾತಂತ್ರ್ಯೋತ್ತರ ವ್ಯವಸ್ಥೆಯ ಬಗ್ಗೆ ಅಸಮಾಧಾನ ಹೆಚ್ಚಾಗುತ್ತಾ ಹೋಯಿತು. ಇದರಿಂದಾಗಿ ಚುನಾವಣೆಗಳು ಅಸ್ಥಿರ ಸರ್ಕಾರವನ್ನು ಕೊಡತೊಡಗಿದವು.ಅಯ್ಕೆಯಾದ ಸರ್ಕಾರಗಳು ಅವಧಿಗೆ ಮುನ್ನಾ ಕುಸಿದು ಅಥವಾ ಆಗಿನ ಕಾಂಗೆಸ್ ಸರ್ಕಾರ ತನ್ನ ನಿಲುವಿಗೆ ಒಪ್ಪದ ಸರ್ಕಾರಗಳನ್ನು ವಜಾ ಮಾಡಿದ್ದರಿಂದಲೂ ಲೋಕಸಭಾ ಹಾಗೂ ಶಾನಸಭೆಗಳ ವೇಳಾಪಟ್ಟಿ ಬದಲಾದವು.

1990 ರ ನಂತರದಲ್ಲಿ ಬಂಡವಾಳಶಾಹಿ ವ್ಯವಸ್ಥೆ ಅಲ್ಪಸ್ವಲ್ಪ ಸಂಪನ್ಮೂಲವನ್ನು ಜನರ ಜೊತೆ ಹಂಚಿಕೊಳ್ಳಲು ಸಿದ್ಧವಿರದೆ ಜನತೆಯ ಮೇಲೆ ಉಗ್ರ ಆಕ್ರಮಣ ಮಾಡಲು ಕಾಂಗ್ರೆಸ್ ನೇತೃತ್ವದಲ್ಲಿ ಬಿಜೆಪಿಯ ಸಮ್ಮತಿಯೊಂದಿಗೆ ನವ ಉದಾರವಾದ ಜಾರಿಯಾಯಿತು. ಇದರಿಂದಾಗಿ ಭಾರತ ಸಂವಿಧಾನದಲ್ಲಿ ಕಲ್ಯಾಣ ರಾಜ್ಯದ ಆಶಯಗಳಿದ್ದರೂ ಸಾರದಲ್ಲಿ ಭಾರತವು ಜನರನ್ನು ಸುಲಿದು ತಿನ್ನುವ ನವ ಉದಾರವಾದಿ ಆರ್ಥಿಕ ವ್ಯವಸ್ಥೆಯಾಗಿ ಬದಲಾಯಿತು.

ಇಂಥಾ ಆಕ್ರಮಣಕ್ಕೂ ಪ್ರಜಾತಂತ್ರದ ಮುಸುಕನ್ನು ಹೊದಿಸಲು ಜನರಿಗೆ ಸುಳ್ಳು ಭರವಸೆ ನೀಡಿ ಮೋಸ ಮಾಡುವ ಕಾಂಗ್ರೆಸ್ ಮಾದರಿ ರಾಜಕಾರಣ ವಿಫಲವಾಗಿದ್ದೇ ೯೦ ರ ದಶಕದ ಅತಂತ್ರ ಸರ್ಕಾರಗಳ ಯುಗಕ್ಕೆ ಕಾರಣವಾಯಿತು.

ಆಗ ಈ ದೇಶದ ಆಳುವವರ್ಗಗಳು ಜನರನ್ನು ದ್ವೇಷದ ರಾಜಕಾರಣದಲ್ಲಿ ಧೃವೀಕರಣ ಮಾಡಿ ಬದುಕಿನ ಸಮಸ್ಯೆಗಳಿಗಿಂತ ಪೊಳ್ಳು ಭಾವನಾತ್ಮಕ ಸಮಸ್ಯೆಗಳ ಆಧಾರದ ಮೇಲೆ ಚುನಾವಣೇಯನ್ನು ಗೆದ್ದು ಕಾರ್ಪೊರೇಟ್ ಆಕ್ರಮಣವನ್ನು ಮಾನ್ಯಗೊಳಿಸುವ ಆರೆಸ್ಸೆಸ್- ಬಿಜೆಪಿಯ ಫ಼್ಯಾಸಿಸ್ಟ್ ರಾಜಕಾರಣಕ್ಕೆ ಸಂಪೂರ್ಣ ಕುಮ್ಮಕ್ಕು ಕೊಡತೊಡಗಿದರು.

ಅದರ ಭಾಗವಾಗಿಯೇ ಸ್ಥಿರ ಸರ್ಕಾರದ ಹೆಸರಿನಲ್ಲಿ ಜನಕ್ಕೆ ಉತ್ತರದಾಯಿಯಲ್ಲದ ಫ಼್ಯಾಸಿಸ್ಟ್ ಸರ್ಕಾರದ ಸ್ಥಾಪನೆಯೇ ನಿಜವಾದ ಪ್ರಾಜಾತಂತ್ರವೇನೋ ಎಂಬ ಹುಸಿ ಕಲ್ಪನೆಯನ್ನು ಈ ಒಂದೇ ದೇಶ ಒಂದು ಚುನಾವಣೆ ಎಂಬ ಹೆಸರಿನಲ್ಲಿ ಚಲಾವಣೆಗೆ ಬಿಟ್ಟಿದೆ.

ಹೀಗಾಗಿ ಒಂದು ದೇಶ-ಒಂದು ಚುನಾವಣೆ ಎಂಬುದು ಸ್ಥಿರ ಸರ್ಕಾರವೆಂಬ ಹುಸಿತನದಲ್ಲಿ ಫ಼್ಯಾಸಿಸ್ಟ್ ಸರ್ಕಾರವನ್ನು ಸಂವಿಧಾನಬಧ್ಹವಾಗಿ ಜಾರಿಗೆ ತರುವ ಹುನ್ನಾರವಾಗಿದೆ. ಆದ್ದರಿಂದ ಭಾರತದ ಜನತೆ ಮೋದಿ ಸರ್ಕಾರದ ಒಂದು ದೇಶ-ಒಂದು ಚುನಾವಣೆ ಪ್ರಸ್ತಾಪವನ್ನು ಸಾರಾ ಸಗಟು ತಿರಸ್ಕರಿಸಬೇಕು.

ಮತ್ತು

ಬಂಡವಾಳಶಾಹಿ ಸಾರವನ್ನು ಹೊಂದಿರುವ ಮೋಸದ ಪ್ರಜಾತಂತ್ರವನ್ನು ಧಿಕ್ಕರಿಸಿ ನಿಜವಾದ ಜನ ಕಲ್ಯಾಣದ ಅಸಲೀ ಪ್ರಜಾತಂತ್ರಕ್ಕೆ ಹೋರಾಡಬೇಕು

. ಅದು ಬಿಟ್ಟು ಬೇರೆ ಪರ್ಯಾಯವಿಲ್ಲ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!