Thursday, September 19, 2024

ಪ್ರಾಯೋಗಿಕ ಆವೃತ್ತಿ

ಸದ್ದಿಲ್ಲದೇ ಹೆಚ್ಚಾಗುತ್ತಿದೆ ಈರುಳ್ಳಿ ಬೆಲೆ….ಕಾರಣವೇನು ಗೊತ್ತೇ…?

ರಾಜ್ಯದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಟೊಮೆಟೊ ಬೆಲೆ ಗಗನಕ್ಕೇರಿ ಜನರನ್ನು ಕಂಗಾಲಾಗಿ ಮಾಡಿತ್ತು. ಇದೀಗ ಜನ ಬೆಲೆ ಇಳಿಕೆ ಕಂಡಿದೆ ಎಂದು ನಿಟ್ಟುಸಿರು ಬಿಡುವಷ್ಟರಲ್ಲಿಯೇ ಈರುಳ್ಳಿ ದರ ಏರಿಕೆ ಆತಂಕ ಎದುರಾಗಿದೆ.

ಕಳೆದ ವಾರ ಕೆಜಿಗೆ ₹15 ರಿಂದ ₹20 ಇದ್ದ ಈರುಳ್ಳಿ ದರ ಇದೀಗ, ಕೆಜಿಗೆ ₹40 ರಿಂದ ₹45 ಏರಿಕೆ ಕಂಡಿದೆ. ರಾಜ್ಯದಲ್ಲಿ ಈರುಳ್ಳಿ ಬೆಳೆಯುವ ಜಿಲ್ಲೆಗಳಿಂದ ಪೂರೈಕೆ ಬಹುತೇಕ ಕುಸಿದಿದೆ. ಅಲ್ಲದೇ ನಾಸಿಕ್ ಹಾಗೂ ಪುಣೆಯಿಂದ ಪೂರೈಕೆಯಾಗುತ್ತಿರುವುದು ಸ್ಥಗಿತವಾಗಿದೆ. ಈರುಳ್ಳಿಗೆ ಬೇಡಿಕೆ ಹೆಚ್ಚಾಗಿದ್ದರಿಂದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.

ಪ್ರತಿ ವರ್ಷ ಚಿತ್ರದುರ್ಗ, ಚಳ್ಳಕೆರೆ, ಚಿಕ್ಕಬಳ್ಳಾಪುರ ಸೇರಿ ದಕ್ಷಿಣದ ರಾಜ್ಯಗಳಿಂದ ಈರುಳ್ಳಿ ಮಾರುಕಟ್ಟೆಗೆ ಬರುತ್ತದೆ. ನವೆಂಬರ್ ಬಳಿಕ ಗದಗ, ವಿಜಯಪುರದಿಂದ ಪೂರೈಕೆಯಾಗುತ್ತದೆ. ಕಳೆದೆರಡು ವರ್ಷ ಅತಿವೃಷ್ಟಿ, ರೋಗಬಾಧೆಯಿಂದ ಈರುಳ್ಳಿ ನಷ್ಟವಾಗಿದ್ದರೆ, ಈ ಬಾರಿ ಅನಾವೃಷ್ಟಿ ಬಿತ್ತನೆ ಪ್ರಮಾಣವನ್ನು ಕುಗ್ಗಿಸಿದೆ.

ಬೆಂಗಳೂರಿನ ಯಶವಂತಪುರ ಎಪಿಎಂಸಿಗೆ ಈ ವೇಳೆಗೆ 1.20 ಲಕ್ಷ ಚೀಲ ಈರುಳ್ಳಿ ಬರಬೇಕಿತ್ತು. ಆದರೆ, ಶೇ. 35ರಷ್ಟು ಕಡಿಮೆ ಅಂದರೆ, ನಿತ್ಯ ಸರಾಸರಿ 60 ಸಾವಿರದಿಂದ 70 ಸಾವಿರ ಚೀಲಗಳು ಮಾತ್ರ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಡು ಕೊರತೆಯಾಗುವ ಸಾಧ್ಯತೆಗಳಿವೆ. ಯಶವಂತಪುರ, ದಾಸನಪುರ ಎಪಿಎಂಸಿಯಲ್ಲಿ ಕ್ವಿಂಟಲ್‌ಗೆ ₹ 1,000 ದಿಂದ ₹ 3,000 ಈರುಳ್ಳಿ ಬೆಲೆಯಿದೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.

ಕೇಂದ್ರ ಸರ್ಕಾರ ನಾಫೆಡ್ (ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ) ಮೂಲಕ ಮಹಾರಾಷ್ಟ್ರದ ಈರುಳ್ಳಿಯನ್ನು ರಾಜ್ಯಕ್ಕೆ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಬೆಲೆ ನಿಯಂತ್ರಣದಲ್ಲಿದೆ. ಒಂದು ವೇಳೆ ಮಹಾರಾಷ್ಟ್ರದಲ್ಲಿ ಈರುಳ್ಳಿ ಪೂರೈಕೆ ಕಡಿಮೆಯಾದರೆ ರಾಜ್ಯದಲ್ಲಿ ಈರುಳ್ಳಿ ಬೆಲೆ ಗಗನಕ್ಕೇರುವ ಸಾಧ್ಯತೆ ಹೆಚ್ಚಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!