ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾಗಿರುವ ಹಿನ್ನೆಲೆ ಹಳೆಮೈಸೂರು ಭಾಗದ ಜೀವನಾಡಿಯಾಗಿರುವ ಕೆಆರ್‌ಎಸ್ ಅಣೆಕಟ್ಟೆಯ ನೀರಿನ ಮಟ್ಟ ಪ್ರಸ್ತುತ 120.20 ಅಡಿಗೆ ತಲುಪಿದ್ದು, ಭರ್ತಿಗೆ ಇನ್ನೂ 4 ಅಡಿಯಷ್ಟೇ ಬಾಕಿ ಉಳಿದಿದೆ.
ಕಳೆದದೊಂದು ವಾರದಿಂದ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಅಲ್ಲದೇ, ಈಗಾಗಲೇ ಹಾರಂಗಿ ಹಾಗೂ ಹೇಮಾವತಿ ಅಣೆಕಟ್ಟೆಗಳು ಭರ್ತಿಯಾಗಿರುವುದರಿಂದ ಹೆಚ್ಚುವರಿ ನೀರು ಹರಿದು ಬರುತ್ತಿದ್ದು ಕೆ.ಆರ್.ಎಸ್ ನ ಒಳಹರಿವಿನ ಹೆಚ್ಚಳಕ್ಕೆ ಕಾರಣವಾಗಿದೆ.
ಗರಿಷ್ಟ ಮಟ್ಟ: 124.80 ಅಡಿ
ಇಂದಿನ ಮಟ್ಟ: 120.20 ಅಡಿ
ಗರಿಷ್ಟ ಸಂಗ್ರಹ ಸಾಮರ್ಥ್ಯ : 49.452 ಟಿ.ಎಂ.ಸಿ.
ಇಂದಿನ ಸಂಗ್ರಹ : 43.298 ಟಿ.ಎಂ.ಸಿ
ಒಳ ಹರಿವು : 13,856 ಕ್ಯೂಸೆಕ್
ಹೊರ ಹರಿವು : 1,965 ಕ್ಯೂಸೆಕ್
ಪ್ರಸ್ತುತ ಅಣೆಕಟ್ಟೆ 13,856 ಕ್ಯೂಸೆಕ್ ಒಳಹರಿವು ಹರಿದು ಬರುತ್ತಿದ್ದು, 1,965 ಕ್ಯೂಸೆಕ್ ಹೊರ ಹರಿವಿದೆ ( ಕುಡಿಯುವ ನೀರು ಸರಬರಾಜು ಹಾಗೂ ನಾಲೆಗಳಿಗೆ ನೀರು ಹರಿಸುತ್ತಿರುವುದೆ ಸೇರಿ). 49.452 ಟಿ.ಎಂ.ಸಿಯ ಗರಿಷ್ಠ ಸಂಗ್ರಹ ಸಾಮರ್ಥ್ಯ ಹೊಂದಿರುವ ಕೆಆರ್‌ಎಸ್ ಡ್ಯಾಂನಲ್ಲಿ ಪ್ರಸ್ತುತ 43.298 ಟಿ.ಎಂ.ಸಿ ನೀರಿನ ಸಂಗ್ರಹವಿದೆ. ಆದ್ದರಿಂದ ಜೂನ್ ತಿಂಗಳಲ್ಲೇ ಅಣೆಕಟ್ಟು ಸಂಪೂರ್ಣ ಭರ್ತಿಯಾಗುವ ಸಾಧ್ಯತೆ ಇದೆ.
1932ರಲ್ಲಿ ಜಲಾಶಯ ನಿರ್ಮಾಣವಾದಾಗಿನಿಂದ ಮೊದಲ ಬಾರಿಗೆ ಜೂನ್ ತಿಂಗಳಲ್ಲಿ ಇಷ್ಟೊಂದು ಪ್ರಮಾಣದ ನೀರು ಸಂಗ್ರಹವಾಗುವ ಮೂಲಕ ಇತಿಹಾಸ ಸೃಷ್ಟಿಯಾಗಿದೆ. ಸಾಮಾನ್ಯವಾಗಿ ಜುಲೈ ಅಂತ್ಯ ಅಥವಾ ಆಗಸ್ಟ್‌ನಲ್ಲಿ ಜಲಾಶಯ ಭರ್ತಿಯಾಗುವುದು ವಾಡಿಕೆ. ಈ ಬಾರಿ ಒಂದು ವಾರ ಮುಂಚಿತವಾಗಿ ಮುಂಗಾರು ರಾಜ್ಯಕ್ಕೆ ಪ್ರವೇಶ ಮಾಡಿದ್ದರಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾದ ಹಿನ್ನೆಲೆ ಜೂನ್ ಅಂತ್ಯದಲ್ಲೇ ಭರ್ತಿಯಾಗುವ ಸಂಭವ ಹೆಚ್ಚಾಗಿದೆ.




