Friday, October 18, 2024

ಪ್ರಾಯೋಗಿಕ ಆವೃತ್ತಿ

ಕಸಾಪ ಪ್ರಸ್ತಾಪಿತ ನಿಬಂಧನೆ ತಿದ್ದುಪಡಿಗೆ ವಿರೋಧ ; ತಿರಸ್ಕರಿಸಲು ಮನವಿ

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಸ್ತಾಪಿತ ನಿಬಂಧನೆ ತಿದ್ದುಪಡಿ ಮಾಡುವ ಕಾರ್ಯಕ್ಕೆ ಬಹುತೇಕ ಎಲ್ಲಾ ಜಿಲ್ಲೆ\ಗಡಿಗಳ ಕಸಾಪ ಅಧ್ಯಕ್ಷರು ವಿರೋಧ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೆ ತಿದ್ದುಪಡಿ ಮಾಡಬಾರದೆಂದು ಒತ್ತಾಯಿಸಿ ಹಲವು ಸಾಹಿತ್ಯಾಸಕ್ತರು ಮಂಡ್ಯ ಜಿಲ್ಲಾಡಳಿತದ ಮೂಲಕ ಕೇಂದ್ರ ಕಸಾಪ ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಿದರು.

ಅಂಕಣಕಾರ ಬಿ.ಚಂದ್ರೇಗೌಡ, ಚಿತ್ರಕೂಟದ ಭಗವಾನ್ ಚಕ್ರವರ್ತಿ, ಸಂತೋಷ್ ಜಿ., ಸತೀಶ್ ಜವರೇಗೌಡ  ಹಾಗೂ ಅರವಿಂದ ಪ್ರಭು ಅವರು ಮಂಡ್ಯ ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು ಅವರ ಮೂಲಕ ಕೇಂದ್ರ ಕಸಾಪ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಸ್ತಾಪಿತ ನಿಬಂಧನೆ ತಿದ್ದುಪಡಿಯ ಕರಡು ಪ್ರತಿಯನ್ನು ಕೂಲಂಕಷವಾಗಿ ಅವಲೋಕಿಸಿದಾಗ ಚುನಾಯಿತ ಜಿಲ್ಲಾ ಗಡಿ ಅಧ್ಯಕ್ಷರಿಗೆ ತೀವ್ರ ಆಘಾತ ಮತ್ತು ಆತಂಕವಾಗಿದೆ. ಪ್ರಸ್ತಾಪಿತ ಬಹು ಬಹುತೇಕ ತಿದ್ದುಪಡಿಗಳು ಮುಂದಿನ ದಿನಗಳಲ್ಲಿ ಪರಿಷತ್ತು ವಿಕೇಂದ್ರೀಕರಣಗೊಳ್ಳದೆ, ಅಧಿಕಾರ ಕೇಂದ್ರೀಕರಣದ ನೆಲೆಯಲ್ಲಿ ಏಕವ್ಯಕ್ತಿ ಅಧಿಕಾರ ಕೇಂದ್ರಿತ ಸಂಸ್ಥೆಯಾಗಿ ರೂಪುಗೊಳ್ಳುವ ಅಂಶಗಳನ್ನು ಎತ್ತಿ ತೋರಿಸುತ್ತವೆ ಎಂದು ದೂರಿದ್ದಾರೆ.

ಪ್ರಸ್ತಾಪಿತ ನಿಬಂಧನೆ ತಿದ್ದುಪಡಿಯಲ್ಲಿ ಚುನಾಯಿತ ಜಿಲ್ಲಾ ಮತ್ತು ಗಡಿನಾಡ ಅಧ್ಯಕ್ಷರ ಪ್ರಸ್ತುತ ಚಾಲ್ತಿಯಲ್ಲಿರುವ ನಿಬಂಧನೆಯ ಬಹುತೇಕ ಹಕ್ಕುಗಳನ್ನು ಕಿತ್ತುಕೊಂಡು ಎಲ್ಲಾ ಚುನಾಯಿತ ಪ್ರತಿನಿಧಿಗಳನ್ನು ಮೂಲೆಗುಂಪು ಮಾಡಿ ಆಡಳಿತ ನಡೆಸುವ ಮತ್ತು ಸರ್ವನಿರ್ಧಾರಗಳನ್ನೂ ಕೇಂದ್ರ ಅಧ್ಯಕ್ಷರೇ ತೆಗೆದುಕೊಳ್ಳುವ ಅಧಿಕಾರ ಕೇಂದ್ರೀಕರಣ ವ್ಯವಸ್ಥೆಯು ಕಂಡು ಬಂದಿದ್ದು, ಮುಂದಿನ ದಿನಗಳಲ್ಲಿ ಪರಿಷತ್ತು ಪ್ರಜಾಸತ್ತಾತ್ಮಕ ನೆಲೆಯಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದಿಲ್ಲವೆಂಬ ಅಂಶವು ಮೇಲ್ನೋಟದಲ್ಲಿಯೇ ಸಾಬೀತಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

೦೪,೧೨,೨೦೨೧ ರಂದು ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚುನಾವಣಾಧಿಕಾರಿಗಳು ನೀಡಿದ ಸಲಹೆಯ ಮೇರೆಗೆ ಮುಂದಿನ ದಿನಗಳಲ್ಲಿ “ಪರಿಷತ್ತಿನ ಚುನಾವಣೆ” ಸುಗಮವಾಗಿ ನಡೆಸಲು ಬೇಕಾದ ಅಗತ್ಯ ತಿದ್ದುಪಡಿಗಳನ್ನು ಮಾಡುವುದರ ಕುರಿತು ಚರ್ಚಿಸಲಾಗಿತ್ತು. ಆದರೆ ಈಗ ಪ್ರಸ್ತಾಪಿಸಿರುವ ತಿದ್ದುಪಡಿ ಕರಡಿನಲ್ಲಿ ಚುನಾವಣೆಗೆ ಸಂಬಂಧಿಸಿದ ಯಾವ ಅಂಶಗಳೂ ಪ್ರಸ್ತಾಪಿತವಾಗದೆ ಸಮಗ್ರವಾಗಿ ಅದನ್ನು ಕೈ ಬಿಡಲಾಗಿದೆ. ಕಾರ್ಯಕಾರಿ ಸಮತಿ ಸಭೆಯಲ್ಲಿ ಚರ್ಚೆಗೆ ಬಾರದಿದ್ದ ಅಧಿಕಾರ ಕೇಂದ್ರೀಕೃತ ವಿಷಯಗಳು ಪ್ರಸ್ತಾಪಿತ ನಿಬಂಧನೆಯಾದ್ಯಂತ ವ್ಯಾಪಿಸಿಕೊಂಡಿವೆ ಎಂದು ದೂರಿದರು.

ಭಾರತೀಯ ಸಂಘ ಸಂಸ್ಥೆಗಳ ನಿಯಮಾವಳಿ’ಯ ಅನುಸಾರ ಯಾವುದೇ ಸಂಘ-ಸಂಸ್ಥೆಯ ಅಧಿಕಾರವು ಕೇಂದ್ರೀಕೃತಗೊಳ್ಳುವಂತಿಲ್ಲ, ಅಲ್ಲದೆ, “ನಿಬಂಧನೆ ತಿದ್ದುಪಡಿ ಸಲಹಾ ಸಮಿತಿ”ಯ ಪಟ್ಟಿಯನ್ನು ಮುಂದಿನ ಕಾರ್ಯಕಾರಿ ಸಭೆಯಲ್ಲಿ ಅಧಿಕೃತವಾಗಿ ದೃಢೀಕರಣ ಪಡೆದುಕೊಳ್ಳುವ ಮುನ್ನವೇ ಸಮಿತಿಯು ಕಾರ್ಯತತ್ಪರವಾಗಿ ವರದಿ ನೀಡಿರುವುದು ನಿಯಮಾವಳಿಗೆ ವಿರುದ್ಧವಾಗಿದೆ ಎಂದು ತಿಳಿಸಲಾಗಿದೆ.

ಚುನಾಯಿತ ಜಿಲ್ಲಾ ಗಡಿ ಅಧ್ಯಕ್ಷರುಗಳ ಹಕ್ಕುಗಳನ್ನು ಕಿತ್ತುಕೊಳ್ಳುವ ಮತ್ತು ಪರಿಷತ್ತಿನ ಆಡಳಿತದ ಋಣಾತ್ಮಕ ಪರಿಣಾಮ ಬೀರುವ ಅಂಶಗಳನ್ನು ಪ್ರಸ್ತಾಪಿತ ನಿಬಂಧನೆಯು ಮೇಲೆ ಒಳಗೊಂಡಿರುವುದರಿಂದ ಎಲ್ಲ ವಿಚಾರಗಳನ್ನು ಸಾರಾಸಗಟಾಗಿ ನಿರಾಕರಿಸಿ ತಿರಸ್ಕರಿಸಬೇಕೆಂದು ಒತ್ತಾಯಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!