Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಮಂಡ್ಯದ ಯುವಕ

ಮೆದುಳು ನಿಷ್ಕ್ರಿಯಗೊಂಡು ಬದುಕುಳಿಯುವ ಸಾಧ್ಯವಿಲ್ಲದ ಯುವಕನ ಅಂಗಾಂಗಗಳನ್ನು ಯುವಕನ ಪೋಷಕರು ದಾನ ಮಾಡಿ ಸಾರ್ಥಕತೆ ಮೆರೆದಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಸಿಂಗಪುರದಲ್ಲಿ ನಡೆದಿದೆ.

ಸಿಂಗಪುರ ಗ್ರಾಮದ ಯುವಕ 21 ವರ್ಷದ ಸಚಿನ್ ಎಸ್.ಎ. ಕಳೆದ ನ.28ರಂದು ರಸ್ತೆ ಅಪಘಾತಕ್ಕೀಡಾಗಿ ಮೆದುಳಿನ ತೀವ್ರ ರಕ್ತಸ್ರಾವದಿಂದ ಮೈಸೂರಿನ ಜೆಎಸ್‌ಎಸ್‌ ಆಸ್ಪತ್ರೆಗೆ ದಾಖಲಾಗಿದ್ದರು. ಈತನಿಗೆ ಚಿಕಿತ್ಸೆ ನೀಡಿದ ವೈದ್ಯರು ರೋಗಿಯ ಮೆದುಳು ನಿಷ್ಕ್ರಿಯಗೊಂಡಿರುವುದರಿಂದ ಆತ, ಬದುಕುವ ಸಾಧ್ಯತೆ ಇಲ್ಲ ಎಂದು ಪೋಷಕರಿಗೆ ಮನವರಿಕೆ ಮಾಡಿಕೊಟ್ಟರು. ಅಂತಹ ದುಃಖದ ಸಂದರ್ಭದಲ್ಲಿಯೂ ಅವರ ಕುಟುಂಬದ ಸದಸ್ಯರು ಅಂಗಾಂಗ ದಾನ ಮಾಡಲು ನಿರ್ಧರಿಸಿ, ಮುಂದಿನ ಕ್ರಮ ಕೈಗೊಳ್ಳುವಂತೆ ವೈದ್ಯರಿಗೆ ತಿಳಿಸಿದರು.

ವೈದ್ಯರ ತಂಡ ರೋಗಿಯ ಹೃದಯ, 2 ಕಾರ್ನಿಯಾ (ಕಣ್ಣುಗಳು), 2 ಕಿಡ್ನಿಗಳು ಮತ್ತು ಲಿವರ್ ಗಳನ್ನು ಯುವಕನ ದೇಹದಿಂದ ತೆಗೆದು, ಅವಶ್ಯಕತೆಯಿದ್ದ ರೋಗಿಗಳಿಗೆ ಅಳವಡಿಸಲು ಬೆಂಗಳೂರಿನ ವೈದೇಹಿ ಆಸ್ಪತ್ರೆ ಹಾಗೂ  ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ಪೋಲಿಸ್ ಇಲಾಖೆಯ ಸಹಕಾರದೊಂದಿಗೆ ಗ್ರೀನ್ ಕಾರಿಡಾ‌ರ್ ಮುಖಾಂತರ ರವಾನಿಸಿದರು.

ಕಾರ್ನಿಯಾ (ಕಣ್ಣುಗಳು)ಗಳ ಅವಶ್ಯಕತೆಯಿದ್ದವರು ಈ ಸಂದರ್ಭದಲ್ಲಿ ಸಿಗದ ಕಾರಣ, ಎರಡೂ ಕಾರ್ನಿಯಾಗಳನ್ನು ಬೆಂಗಳೂರಿನ ಲಯನ್ಸ್ ಆಸ್ಪತ್ರೆಗೆ ರವಾನಿಸಲಾಯಿತು. ಅಂಗಾಂಗ ದಾನ ಮಾಡಲು ಶ್ಲಾಘನೀಯ ನಿರ್ಧಾರ ತೆಗೆದುಕೊಂಡ ಸಚಿನ್ ಎಸ್.ಎ. ಕುಟುಂಬ ಸದಸ್ಯರಿಗೆ ಜೆಎಸ್‌ ಎಸ್ ಆಸ್ಪತ್ರೆ ಮತ್ತು ಆಡಳಿತ ಮಂಡಳಿ ಧನ್ಯವಾದ ಅರ್ಪಿಸಿತು. ಈ ಅಂಗಾಂಗ ದಾನವು ಹಲವರಿಗೆ ಹೊಸ ಜೀವನವನ್ನು ನೀಡಿದ್ದು, ಅವರ ಜೀವನದಲ್ಲಿ ಹೊಸ ಬದಲಾವಣೆಗೆ ಕಾರಣವಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!