Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಂಗಾಂಗ ದಾನದ ಮೂಲಕ ಸಾವಿನ ನಂತರವೂ ಬದುಕಿದ ಯುವಕ

ಮೂರು ದಿನಗಳ ಹಿಂದೆ ಸಂಭವಿಸಿದ್ದ ಅಪಘಾತದಲ್ಲಿ ತೀವ್ರ ಗಾಯಗೊಂಡು ಶನಿವಾರ ಮೃತಪಟ್ಟಿದ್ದ ಯುವಕನ ಅಂಗಾಂಗಗಳನ್ನು, ಆತನ ಕುಟುಂಬದವರು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಮಂಡ್ಯ ತಾಲೂಕಿನ ಚಿಕ್ಕಮಂಡ್ಯ ಗ್ರಾಮದ ನಿವಾಸಿ ಗಿರೀಶ್ ಅಲಿಯಾಸ್ ಸಾಧು ಮಹಾರಾಜ್(32) ಮೃತ ಯುವಕ. ಆತನ ಪೋಷಕರು ಅಂಗಾಂಗಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಕಳೆದ ಶುಕ್ರವಾರ ರಾತ್ರಿ ಮಂಡ್ಯ-ಚಿಕ್ಕಮಂಡ್ಯ ನಡುವಿನ ರಸ್ತೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಗಳ ಕಚೇರಿ ಎದುರು ಬೈಕ್‌ನಿಂದ ಆಯತಪ್ಪಿ ಬಿದ್ದು ಗಿರೀಶ್ ತೀವ್ರವಾಗಿ ಗಾಯಗೊಂಡಿದ್ದನು. ಕೂಡಲೇ ಆತನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಪಘಾತದಿಂದ ಆತನ ಮೆದುಳು ನಿಷ್ಕ್ರಿಯ ಗೊಂಡಿತ್ತು. ಗಿರೀಶ್ ಬದುಕುವುದಿಲ್ಲ ಎಂದು ಆತನ ಕುಟುಂಬ ಸದಸ್ಯರಿಗೆ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ತಿಳಿಸಿ, ಅಂಗಾಗಗಳ ದಾನ ಮಾಡುವಂತೆ ಸಲಹೆ ನೀಡಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ಗಿರೀಶ್ ಕುಟುಂಬದವರು ಗಿರೀಶನ ಕಣ್ಣುಗಳು, ಹೃದಯ ಮತ್ತು ಕಿಡ್ನಿಯನ್ನು ದಾನ ಮಾಡಿ, ಮಗನ ಸಾವಿಗೆ ಸಾರ್ಥಕತೆ ತಂದು ಕೊಟ್ಟಿದ್ದಾರೆ.

ಸಾವಿನ ನಂತರವೂ ಮತ್ತೊಬ್ಬರ ಬದುಕಿಗೆ ಬೆಳಗಾದ ಗಿರೀಶ್ ಮತ್ತವನ ಕುಟುಂಬದ ತ್ಯಾಗ, ಮಾನವೀಯತೆಗೆ ಚಿಕ್ಕ ಮಂಡ್ಯ ಗ್ರಾಮಸ್ಥರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯಿಂದ ಗಿರೀಶನ ಪಾರ್ಥಿವ ಶರೀರವನ್ನು ಹೊರಗೆ ತರುತ್ತಿದ್ದಂತೆ ಅಲ್ಲಿನ ಸಿಬ್ಬಂದಿ ಮತ್ತು ಸಾರ್ವಜನಿಕರು ಚಪ್ಪಾಳೆ ತಟ್ಟುತ್ತಾ ಗಿರೀಶ್ ಸಾವಿನ ಸಾರ್ಥಕತೆಯನ್ನು ಕೊಂಡಾಡಿದ್ದಾರೆ.

ಸಾವಿನ ನಂತರವೂ ಅಂಗಾಗಗಳ ಮೂಲಕ ಬದುಕಿರುವ ಗಿರೀಶನ ಬಗ್ಗೆ ಹೆಮ್ಮೆ ಪಡುತ್ತಿರುವ ಸ್ನೇಹಿತರು, ಗಿರೀಶನ ಫೋಟೋ ಮತ್ತು ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಶ್ರದ್ದಾಂಜಲಿ ಸೂಚಿಸುತ್ತಿದ್ದಾರೆ.ಗಿರೀಶ್ ಎಂದೆಂದಿಗೂ ಅಜರಾಮರ ಎಂದು ಕೊಂಡಾಡುತ್ತಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!