Thursday, November 19, 2026

ಪ್ರಾಯೋಗಿಕ ಆವೃತ್ತಿ

ಸಾವಯವ ಕೃಷಿಯಿಂದ ರೈತರ ಬದುಕು ಹಸನು : ಕೆ.ಟಿ.ಹನುಮಂತು

ರಸಗೊಬ್ಬರಗಳು ಹಾಗೂ ಕ್ರಿಮಿನಾಶಕಗಳನ್ನು ಅತಿಯಾಗಿ ಬಳಸಿ ಬೇಸಾಯ ಮಾಡುವುದರಿಂದ ಭೂಮಿಯು ಬಂಜರಾಗುವುದಲ್ಲದೆ, ಫಲವತ್ತತೆ ನಾಶವಾಗಿ ಬೇಸಾಯ ಚಟುವಟಿಕೆಯ ಮೇಲೆ ದುಷ್ಪರಿಣಾಮ ಬೀರುತ್ತದೆ ಆದ್ದರಿಂದ ಸಾವಯವ ಚಟುವಟಿಕೆಗಳನ್ನು ಕೈಗೊಂಡು ನೈಸರ್ಗಿಕ ಪದ್ಧತಿಯಲ್ಲಿ ಬೇಸಾಯ ಮಾಡಿದರೆ ರೈತನ ಬದುಕು ಬಂಗಾರವಾಗುತ್ತದೆ ಎಂದು ಮಂಡ್ಯ ಕೃಷಿಕ ಲಯನ್ ಸಂಸ್ಥೆಯ ಆಡಳಿತಾಧಿಕಾರಿ ಲಯನ್ ಕೆ.ಟಿ.ಹನುಮಂತು ಹೇಳಿದರು.

ಕೆ.ಆರ್.ಪೇಟೆ ತಾಲೂಕಿನ ವಿಠಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾವಯವ ನೈಸರ್ಗಿಕ ಕೃಷಿಕ ವಿಠಲಪುರ ಸುಬ್ಬೇಗೌಡ ಅವರ ತೋಟದಲ್ಲಿ ಕೃಷಿಕ ಲಯನ್ ಸಂಸ್ಥೆ, ನಂಜಮ್ಮ ಮೋಟೆಗೌಡ ಚಾರಿಟಬಲ್ ಟ್ರಸ್ಟ್ ಹಾಗೂ ಸಕ್ಕರೆ ನಾಡು ಲಯನ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಗತಿಪರ ರೈತ ಸುಬ್ಬೇಗೌಡರಿಗೆ ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್. ಮರಿಗೌಡ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಅತಿಯಾದ ಇಳುವರಿಯ ಆಸೆಗಾಗಿ ರೈತರು ಅವೈಜ್ಞಾನಿಕವಾಗಿ ಬೇಸಾಯ ಮಾಡಿ ಮಿತಿ ಇಲ್ಲದಂತೆ ರಾಸಾಯನಿಕ ಗೊಬ್ಬರಗಳು ಹಾಗೂ ಕ್ರಿಮಿನಾಶಕಗಳನ್ನು ಬಳಸುವುದರಿಂದ ಭೂಮಿಯ ಫಲವತ್ತತೆಯು ನಾಶವಾಗುವುದಲ್ಲದೆ ಇಳುವರಿಯು ಕಡಿಮೆಯಾಗಿ ರೈತನು ಸಂಕಷ್ಟಕ್ಕೆ ಸಿಕ್ಕಿ ನರಳ ಬೇಕಾಗುತ್ತದೆ. ಆದ್ದರಿಂದ ರೈತನಿಗೆ ವರದಾನವಾಗಿರುವ ಸಾವಯವ ಕೃಷಿ ಚಟುವಟಿಕೆಗಳನ್ನು ಕೈಗೊಂಡು ಕಡಿಮೆ ಖರ್ಚಿನಲ್ಲಿ ಬೇಸಾಯ ಮಾಡುವ ಜೊತೆಗೆ ಗುಣಮಟ್ಟದ ಆಹಾರ ಪದಾರ್ಥಗಳ ಉತ್ಪಾದನೆ ಮಾಡುವುದರಿಂದ ನಾವು ಬೆಳೆದ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕವಾಗಿ ದರವನ್ನು ಪಡೆಯುವುದಲ್ಲದೆ, ಭೂಮಿಯ ಫಲವತ್ತತೆಯನ್ನು ಕೂಡ ಕಾಪಾಡಿಕೊಂಡು ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ಮಾಡಿಕೊಳ್ಳಬಹುದಾಗಿದೆ ಎಂದರು.

ಪ್ರಗತಿಪರ ಕೃಷಿಕರಾದ ಕೆ.ಎಸ್.ಸೋಮಶೇಖರ್ ವಿಠಲಾಪುರಸಿದ್ದೇಗೌಡ ಅವರನ್ನು ಅಭಿನಂದಿಸಿ ಮಾತನಾಡಿ, ಭೂಮಿ ತಾಯಿಯನ್ನು ನಂಬಿ ಶ್ರದ್ಧಾ ಭಕ್ತಿಯಿಂದ ಬೇಸಾಯ ಮಾಡುತ್ತಿರುವ ಸುಬ್ಬೇಗೌಡರು ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿಸಿಕೊಂಡಿದ್ದಾರೆ ಎಂದರು.

ಪ್ರಶಸ್ತಿ ಸ್ವೀಕರಿಸಿದ ಸಾವಯವ ಕೃಷಿಕ ವಿಠಲಾಪುರ ಸುಬ್ಬೆಗೌಡ ಮಾತನಾಡಿ, ಕಾಡಿನಂತಿದ್ದ ಈ ಭೂ ಪ್ರದೇಶದಲ್ಲಿ ನನ್ನ ಪತ್ನಿ ಹಾಗೂ ನನ್ನ ಮಕ್ಕಳ ಸಹಾಯದಿಂದ ಕಷ್ಟಪಟ್ಟು ಶ್ರದ್ಧೆಯಿಂದ ಬೇಸಾಯ ಮಾಡಿ ಮಲೆನಾಡಿನಲ್ಲಿ ಬೆಳೆಯುವ ಕಾಫಿ, ಏಲಕ್ಕಿ, ಕರಿಮೆಣಸು, ಜಾಯಿಕಾಯಿ, ಮೋಸಂಬಿ, ಚಕ್ಕೆ, ಲವಂಗ ಮುಂತಾದ ಪದಾರ್ಥಗಳನ್ನು ನಾನು ನಮ್ಮ ಭೂಮಿಯಲ್ಲಿಯೇ ಬೆಳೆದು ವಾರ್ಷಿಕ ಲಕ್ಷಗಟ್ಟಲೆ ಆದಾಯ ಸಂಪಾದನೆ ಮಾಡುತ್ತಿದ್ದೇನೆ. ನನ್ನ ಶ್ರಮದ ದುಡಿಮೆಯನ್ನು ಗೌರವಿಸಿ ಮಂಡ್ಯದ ಲಯನ್ಸ್ ಸೇವಾ ಸಂಸ್ಥೆಯು ತೋಟಗಾರಿಕಾ ಪಿತಾಮಹ ಮರಿಗೌಡ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿರುವುದು ನನಗೆ ಸಂತೋಷ ತಂದಿದೆ ಎಂದರು.

ಹಿರಿಯ ಪತ್ರಕರ್ತರಾದ ಬಳ್ಳೇಕೆರೆ ಮಂಜುನಾಥ್, ಕೆ.ಆರ್.ನೀಲಕಂಠ, ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪದ್ಮೇಶ್ ಸುಬ್ಬೇಗೌಡರ ಜೀವನ ಸಾಧನೆಯನ್ನು ಕುರಿತು ಮಾತನಾಡಿದರು. ಮಂಡ್ಯದ ಕೃಷಿಕ ಲಯನ್ ಸಂಸ್ಥೆ ಅಧ್ಯಕ್ಷ ಕೆ.ಪಿ. ವೀರಪ್ಪ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಂಡ್ಯದ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಪ್ರೊ.ಡೇವಿಡ್, ಜಿಲ್ಲಾ ಲಯನ್ಸ್ ನಾಯಕ ಈಚೆಗೆರೆ ಕೆ.ಆರ್.ಶಶಿಧರ್, ಎಸ್.ಎನ್.ಕೃಷ್ಣಪ್ಪ, ಖಜಾಂಚಿ ರಮೇಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಅಮೂಲ್ಯ, ಉದ್ಯಮಿ ಬಿ.ರಾಜಶೇಖರ್, ಸಕ್ಕರೆ ನಾಡು ಲಯನ್ ಸಂಸ್ಥೆಯ ಅಧ್ಯಕ್ಷ ಮದ್ದನಘಟ್ಟ ಮಹಾಲಿಂಗೇಗೌಡ ಸೇರಿದಂತೆ ನೂರಾರು ರೈತ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ