Saturday, May 18, 2024

ಪ್ರಾಯೋಗಿಕ ಆವೃತ್ತಿ

ಪತ್ರಕರ್ತರ ಕಲ್ಯಾಣಕ್ಕೆ ಅಗತ್ಯ ಅನುದಾನ – ಎನ್.ಜಯರಾಂ

ಮುಂಬರುವ ದಿನಗಳಲ್ಲಿ ರಾಜ್ಯದ ಕಾರ್ಯನಿರತ ಪತ್ರಕರ್ತರ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು
ರಾಜ್ಯ ಸರ್ಕಾರವು ಸುಮಾರು ₹ 500 ಕೋಟಿ ಅನುದಾನವನ್ನು ಮೀಸಲಿಡಲಿದೆ ಎಂದು ಮುಖ್ಯಮಂತ್ರಿಗಳ ಕಾರ್ಯಾಲಯದ ಕಾರ್ಯದರ್ಶಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಎನ್.ಜಯರಾಂ ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಂಡ್ಯ ಜಿಲ್ಲಾ ಘಟಕದ ವತಿಯಿಂದ ಶನಿವಾರ ಮಂಡ್ಯನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಸಭಾಂಗಣದಲ್ಲಿ ನಡೆದ ಸಾಧನೆಗೈದ ಪತ್ರಕರ್ತರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ರೆವರೆಂಡ್ ಫಾದರ್ ಹರ್ಮನ್ ಮೊಗ್ಲಿಂಗ್ ಸಂಪಾದಕತ್ವದಲ್ಲಿ ಮಂಗಳೂರು ಸಮಾಚಾರ ಪತ್ರಿಕೆ ಪ್ರಾರಂಭಗೊಂಡಿತು. ಆದರೆ ಇಂದಿನ ಆಧುನಿಕ ಯುಗದಲ್ಲಿ ಪತ್ರಿಕೋದ್ಯಮವು ಹೊಸ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ, ಪರ್ತಕರ್ತರು ಕೂಡ ಹೊಸ ಸವಾಲುಗಳನ್ನು ಎದುರಿಸುವಂತಾಗಿದೆ. ಡಿಜಿಟಲೀಕರಣದ ಮಧ್ಯೆಯೂ ಮುದ್ರಣ ಮಾಧ್ಯಮಗಳು ಎದ್ದು ನಿಲ್ಲಬೇಕಿದೆ ಎಂದು ಅಭಿಪ್ರಾಯಪಟ್ಟರು.

ಪತ್ರಕರ್ತರು ಸಮಾಜ ಒರೆ ಕೋರೆಗಳನ್ನು ತಿದ್ದುವ ಕೆಲಸ ಮಾಡಬೇಕು. ಇಂದಿನ ಆಧುನಿಕ ಜಗತ್ತಿನಲ್ಲಿ ಸುದ್ದಿ ನೀಡುವ ಭರದಲ್ಲಿ ಸುದ್ದಿಯ ಸಾರವನ್ನು ನಿರಾಕರಿಸಬಾರದು ಎಂಬ ಎಚ್ಚರಿಕೆ ಪರ್ತಕರ್ತರಿಗೆ ಇರಬೇಕು. ಸಮಾಜ ಆರೋಗ್ಯವಾಗಿರಬೇಕಾದರೆ ಪರ್ತಕರ್ತರು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕೆಂದರು.

ಉಪಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ  ಪಿ ತ್ಯಾಗರಾಜ್ ಮಾತನಾಡಿ, ಪತ್ರಕರ್ತರಿಗೆ ಆರೋಗ್ಯ ಬಹಳ ಮುಖ್ಯವಾದದ್ದು, ಅವರನ್ನು ಯಶಸ್ವಿನಿ ಯೋಜನೆಯಡಿ ತರಬೇಕು. ಅಲ್ಲದೇ ಅವರಿಗೆ ಉಚಿತ ಬಸ್ ಪಾಸ್ ನೀಡಬೇಕೆಂಬುದು ಬಹು ವರ್ಷಗಳ ಬೇಡಿಕೆ. ಈ ಬೇಡಿಕೆಗಳನ್ನು ಈಗಿನ ಸರ್ಕಾರ ಈಡೇರಿಸುವ ವಿಶ್ವಾಸವಿದೆ ಎಂದರು.

ಮುಖ್ಯವಾಗಿ ಪತ್ರಕರ್ತರು ‘ಟೀಕೆಯಲ್ಲಿ ಅಡಗಿರುವ ಸತ್ಯ ಹಾಗೂ ಹೊಗಳಿಕೆಯಲ್ಲಿ ಅಡಗಿರುವ ಸಂಚನ್ನು’ ಅರ್ಥ ಮಾಡಿಕೊಂಡು ಕಾರ್ಯ ನಿರ್ವಹಿಸಬೇಕೆಂದು ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ ಮೂಲತಃ ಪತ್ರಕರ್ತರಾಗಿ ಮಂಡ್ಯ ಶಾಸಕರಾಗಿ ಆಯ್ಕೆಯಾಗಿರುವ ರವಿಕುಮಾರ್ ಗಣಿಗ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಮುಖ್ಯಮಂತ್ರಿಗಳ ಕಾರ್ಯಾಲಯದ ಕಾರ್ಯದರ್ಶಿ ಎನ್.ಜಯರಾಂ, ಉಪಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಪಿ.ತ್ಯಾಗರಾಜು, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಸೋಮಶೇಖರ್ ಕೆರಗೋಡು, ಡಿ.ಎಲ್.ಲಿಂಗಣ್ಣ ಅವರನ್ನು  ಅಭಿನಂದಿಸಲಾಯಿತು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಸಿ.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾ ವಾರ್ತಾಧಿಕಾರಿ, ನಿರ್ಮಲ, ಹಿರಿಯ ಪರ್ತಕರ್ತ ಪಿ.ಜೆ.ಚೈತನ್ಯ ಕುಮಾರ್, ಮತ್ತೀಕೆರೆ ಜಯರಾಂ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!