Saturday, July 13, 2024

ಪ್ರಾಯೋಗಿಕ ಆವೃತ್ತಿ

ಧಾರಾಕಾರ ಮಳೆ : ಜಿಲ್ಲಾಡಳಿತದ ವಿರುದ್ಧ ಆಕ್ರೋಶ – ಪ್ರತಿಭಟನೆ

ಮಂಡ್ಯ ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಅದರಲ್ಲೂ ನಿನ್ನೆ ಸಂಜೆಯಿಂದ ಇಂದು ಬೆಳಗಿನವರೆಗೆ ದಿನವಿಡೀ ಸುರಿದ ಮಳೆಗೆ ಮಂಡ್ಯದ ಎಲ್ಲಾ ಸ್ಲಂ (ಶ್ರಮಿಕ ನಗರ) ಗಳು ಮತ್ತು ಮಂಡ್ಯದ ಕೆರೆ ಅಂಗಳದಲ್ಲಿರುವ ಬೀಡಿ ಕಾರ್ಮಿಕರ ಕಾಲೋನಿಯ ನಿವಾಸಿಗಳು ತತ್ತರಿಸಿ ಹೋಗಿದ್ದಾರೆ.ನಮ್ಮ ಈ ಪರಿಸ್ಥಿತಿಗೆ ಕಾರಣವಾದ ವ್ಯವಸ್ಥೆಗೆ ಶಪಿಸುತ್ತಿದ್ದಾರೆ.

ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿದ್ದು,ಹಲವೆಡೆ ವ್ಯವಸಾಯದ ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳು ನೀರಿನಲ್ಲಿ ಸಂಪೂರ್ಣವಾಗಿ ಜಲಾವೃತವಾಗಿವೆ.

ಮಂಡ್ಯದ ಹಾಲಹಳ್ಳಿ ಸ್ಲಂ, ಕಾಳಿಕಾಂಭ ದೇವಾಲಯದ ಬಳಿ ಇರುವ ಸ್ಲಂ, ಕೆರೆ ಅಂಗಳದಲ್ಲಿರುವ ಸ್ಲಂ ಜನತೆಯು ಸಂಕಷ್ಟದಲ್ಲಿ ಸಿಲುಕಿದ್ದು, ಮನೆಗಳಿಗೆ ನೀರು ನುಗ್ಗಿದೆ.ಮಕ್ಕಳು ನೀರು ತುಂಬಿದ ಮನೆಯಲ್ಲಿ ದಿನವಿಡೀ ಮಲಗದೆ ನೀರು ಹೊರಹಾಕುವ ದೃಶ್ಯ ನೋಡಿದರೆ ಕರುಳು ಹಿಂಡುತ್ತದೆ.

ನಗರದ ಕೆರೆ ಅಂಗಳದಲ್ಲಿ ಹೆಚ್ಚು ಮನೆಗಳು ಜಲಾವೃತಗೊಂಡಿದ್ದರಿಂದ ಬೀಡಿ ಕಾರ್ಮಿಕರು ಹಾನಿಗೊಳಗಾಗಿದ್ದಾರೆ. ನಿವಾಸಿಗಳು ತಮ್ಮ ಮನೆಯಲ್ಲಿರುವ ವಸ್ತುಗಳನ್ನು ರಕ್ಷಿಸಲು ಇಡೀ ರಾತ್ರಿ ನಿದ್ದೆ ಮಾಡದೆ ದಿನ ಕಳೆಯಬೇಕಾಯಿತು.  ಮಳೆ ನೀರು ಮನೆಗಳಿಗೆ ನುಗ್ಗಿದ್ದರಿಂದ ಬಡವರು ಆಹಾರ ಧಾನ್ಯ, ಬಟ್ಟೆ ಮತ್ತಿತರ ವಸ್ತುಗಳನ್ನು ಕಳೆದುಕೊಂಡಿದ್ದಾರೆ.

ಕಳೆದ ಇಪ್ಪತ್ತು ವರ್ಷಗಳಿಂದ ಇಲ್ಲಿಯ ನಿವಾಸಿಗಳ ಗೋಳನ್ನು ಕೇಳುವವರೇ ಇಲ್ಲವಾಗಿದೆ. ಚುನಾವಣೆ ವೇಳೆಯಲ್ಲಿ ಬರುವ ಪಕ್ಷಗಳ ನಾಯಕರು ಎಲ್ಲವನ್ನೂ ಸರಿ ಮಾಡುವುದಾಗಿ ಬರೀ ಬೊಗಳೆ ಆಶ್ವಾಸನೆ ಕೊಡುತ್ತಾರೆ. ಆದರೆ ಏನನ್ನೂ ಮಾಡುವುದಿಲ್ಲ. ನಮ್ಮನ್ನು ಸರ್ಕಾರ,ಜನಪ್ರತಿನಿಧಿಗಳು ಮನುಷ್ಯರನ್ನಾಗಿ ಏಕೆ ನೋಡುತ್ತಿಲ್ಲ ಎಂದು ನಿವಾಸಿ ಫರಾಜ್ ಅಹಮದ್ ಗೋಳು ತೋಡಿಕೊಳ್ಳುತ್ತಾನೆ.

ಹಾಲಹಳ್ಳಿ ಕೊಳೆಗೇರಿಯಲ್ಲಿ ಮನೆಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ. ನಿವಾಸಿಗಳ ಪ್ರಕಾರ, ಚರಂಡಿಗಳು ತುಂಬಿ ಹರಿಯಿತು ಮತ್ತು ತಗ್ಗು ಪ್ರದೇಶಗಳಲ್ಲಿನ ಹಲವು ಮನೆಗಳು ಜಲಾವೃತವಾಗಿವೆ. ಅನೇಕ ಕುಟುಂಬಗಳು ಖರೀದಿಸಿದ ಧಾನ್ಯಗಳು, ಪಾತ್ರೆಗಳು, ಇತರ ವಸ್ತುಗಳನ್ನು ಕಳೆದುಕೊಂಡಿವೆ. ಮಳೆಯ ಕಾರಣ ಹಲವರು ಮೊಣಕಾಲು ಆಳದ ನೀರಿನಲ್ಲಿ ರಾತ್ರಿಯಿಡೀ ಕಳೆಯಬೇಕಾಯಿತು.ಜನರ ಜೊತೆ ಜಾನುವಾರುಗಳು ಕೂಡ ಕಷ್ಟ ಪಡುವಂತಾಗಿದೆ.

ನಮ್ಮ ಈ ದುಸ್ಥಿತಿಗೆ ಜಿಲ್ಲಾಡಳಿತ, ಕೊಳಗೇರಿ ಅಭಿವೃದ್ಧಿ ಮಂಡಳಿ ಮತ್ತು ಶಾಸಕರೇ ಕಾರಣ.ನಮಗೆ ಈಗಾಗಲೇ ಮನೆ ನೀಡಿದ್ದರೆ ಈ ಸಂಕಷ್ಟದ ಬದುಕು ಬಾಳ ಬೇಕಿರಲಿಲ್ಲ.ಎಷ್ಟು ವರ್ಷ ಅಂತ ಸಹಿಸುವುದು. ನಮಗೆ ಇಂದು ಮನೆ ಕೊಡದಿದ್ದರೆ ನಾವೇ ಬೀಗ ಒಡೆದು ಒಳಹೋಗುತ್ತೇವೆ. ಇದುವರೆಗೂ ಅರವತ್ತಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

ನಮ್ಮ ಮಕ್ಕಳು ರೋಗ-ರುಜಿನದಿಂದ ಸಾಯುವುದನ್ನು ನೋಡಲು ಇನ್ನು ನಮ್ಮಿಂದ ಸಾಧ್ಯವಿಲ್ಲ. ನಮ್ಮನ್ನು ಬಂಧಿಸಿ ಜೈಲಿಗೆ ಕಳುಹಿಸಿದರೂ ಸರಿ ಇನ್ನು ನಾವು ಸುಮ್ಮನಿರಲ್ಲ ಎಂಬುದು ಹಾಲಹಳ್ಳಿ ಸ್ಲಂ ನಿವಾಸಿ ಬಾಬು ಆಕ್ರೋಶದ ಮಾತುಗಳು.

ಈ ಧಾರಾಕಾರದ ಮಳೆಯಿಂದ ಹಲವಾರು ಅನಾಹುತಗಳಾಗಿದ್ದು, ಜಲಾವೃತ್ತಗೊಂಡಿರುವ ಪ್ರದೇಶದಲ್ಲಿ ಬಹುಬೇಗ ಸಾಂಕ್ರಾಮಿಕ ರೋಗ-ರುಜಿನಗಳು ಬರುವ ಸಾಧ್ಯತೆ ಹೆಚ್ಚಿದ್ದು,ಈ ಜನರ ಪಾಡು ಹೇಳ ತೀರದಾಗಿದೆ.

ಮೊದಲೇ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಈ ಜನತೆ ಕೂಲಿ ಮತ್ತು ಸಣ್ಣಪುಟ್ಟ ವ್ಯಾಪಾರಸ್ಥರಾಗಿದ್ದಾರೆ. ಈ ಮಳೆಯಿಂದಾಗಿ, ಜನರ ಆರ್ಥಿಕ ಜೀವನಕ್ಕೆ ಪೆಟ್ಟಾಗಿದೆ. ಸ್ವಾಭಿಮಾನದಿಂದ ಬದುಕನ್ನು ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ಜನರಿಗೆ ದಿಢೀರನೆ ಎರಗುವ ಇಂತಹ ಸಂಕಷ್ಟಗಳಿಗೆ ಸವಾಲೊಡ್ಡುವುದು ತುಂಬಾನೇ ಕಷ್ಟಕರವಾಗಿದೆ. ಇಂತಹ ಆರ್ಥಿಕ ಹೊಡೆತಗಳು ಅವರ ಬದುಕನ್ನು ಮತ್ತಷ್ಟು ಹೈರಾಣಾಗಿಸುತ್ತದೆ.

ಹಾಲಹಳ್ಳಿ ನಿವಾಸಿಗಳಿಗೆ ಮನೆ ಕಟ್ಟಿಸುವ ಸಲುವಾಗಿ, ಪುನರ್ ವಸತಿ ಕಲ್ಪಿಸಿರುತವುದು ತೀರಾ ಕಳಪೆಯದಾಗಿದ್ದು, ಇಡೀ ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಬಹಳ ಸಂಕಷ್ಟಕ್ಕೀಡು ಮಾಡಿದೆ. ಅಲ್ಲಿಯ ಜನತೆ ಬೇರೆ ದಾರಿಯಿಲ್ಲದೆ ಇಂದು ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ, ಮುಷ್ಕರ ಹೂಡುತ್ತೇವೆ ಎಂದು ತಿಳಿಸಿದ್ದಾರೆ.

ಮಂಡ್ಯ ನಗರಸಭೆಗೆ ಮುತ್ತಿಗೆ ಹಾಕಿದ ಬೀಡಿ ಕಾರ್ಮಿಕ ಕಾಲೋನಿ ನಿವಾಸಿಗಳು ಮಳೆಯಿಂದಾಗುವ ಅವ್ಯವಸ್ಥೆ ಸರಿಪಡಿಸಲು ಒತ್ತಾಯಿಸಿದ್ದಾರೆ.

ಸಂಬಂಧಪಟ್ಟ ಶಾಸಕರು,ಕೊಳಗೇರಿ ಆಡಳಿತ ಮಂಡಳಿ  ಈ ಜನತೆಗೆ ಸರ್ಕಾರದಿಂದ ಮಂಜೂರಾಗಿರುವ ವಸತಿಗಳನ್ನು, ಮೂಲಭೂತ ಸೌಕರ್ಯಗಳನ್ನು, ರಸ್ತೆ, ಚರಂಡಿ ಕಾಮಗಾರಿ ವ್ಯವಸ್ಥೆಯನ್ನು ಇನ್ನಾದರೂ ಸರಿ ಮಾಡಬೇಕಿದೆ. ಕಾಲಕಾಲಕ್ಕೆ ಸುಂಕ, ತೆರಿಗೆ ಕಟ್ಟಿಸಿಕೊಳ್ಳುವ ಸಂಬಂಧಪಟ್ಟ ಇಲಾಖೆಗಳು ಈ ದಿಕ್ಕಿನತ್ತ ನೋಡಬೇಕಿದೆ ಎಂಬುದು ನುಡಿ ಕರ್ನಾಟಕ. ಕಾಮ್ ಆಶಯ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!