Tuesday, November 24, 2026

ಪ್ರಾಯೋಗಿಕ ಆವೃತ್ತಿ

ಕಾವೇರಿ ಕಿಚ್ಚು| ಮದ್ದೂರು, ಶ್ರೀರಂಗಪಟ್ಟಣ, ಪಾಂಡವಪುರದಲ್ಲೂ ಬಂದ್ ಯಶಸ್ವಿ

ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕರೆ ನೀಡಿದ್ದ ಮಂಡ್ಯ ಬಂದ್ ಯಶಸ್ವಿಯಾಯಿತು. ಮೊದಲು ಕೇವಲ ಮಂಡ್ಯ ನಗರ ಬಂದ್‌ಗೆ ಕರೆ ನೀಡಲಾಗಿತ್ತು. ಆದರೆ, ಸಮಿತಿಯ ಹೋರಾಟವನ್ನು ಬೆಂಬಲಿಸಿ ಮದ್ದೂರು, ಭಾರತೀನಗರ, ಶ್ರೀರಂಗಪಟ್ಟಣ, ಪಾಂಡವಪುರ ಬಂದ್‌ಗೂ ಸ್ಥಳೀಯರು ಕರೆ ನೀಡಿದ್ದರು.

ಮಂಡ್ಯ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಬಂದ್ ಸಂಪೂರ್ಣ ಯಶಸ್ವಿಯಾಯಿತು. ಬಂದ್ ಅಂಗವಾಗಿ ಎಲ್ಲ ಅಂಗಡಿ-ಮುಂಗಟ್ಟುಗಳು ಹೋಟೆಲ್‌ಗಳು, ಬೇಕರಿಗಳು, ಚಿತ್ರಮಂದಿರಗಳು, ಖಾಸಗಿ ಕಚೇರಿಗಳು ಮುಚ್ಚಿದ್ದವು.

ಹಣ್ಣು, ಹೂವು, ತರಕಾರಿ, ದಿನಸಿ ಮಾರಾಟ ಮಳಿಗೆಗಳು, ಮೆಡಿಕಲ್ ಸ್ಟೋರ್‌ಗಳು, ಅಲ್ಲೊಂದು ಇಲ್ಲೊಂದರಂತೆ ಕ್ಯಾಂಟೀನ್‌ಗಳು ತೆರೆದಿದ್ದವು. ಕೆಲವು ಪೆಟ್ರೋಲ್ ಬಂಕ್‌ಗಳು ಕಾರ‍್ಯಾಚರಣೆ ನಡೆಸಿದರೆ, ಕೆಲವು ಮುಚ್ಚಿದ್ದವು. ಕೆಲವು ಅಂಗಡಿಗಳ ಬಾಗಿಲನ್ನು ಅರ್ಧಂಬರ್ಧ ತೆರೆದು ಕದ್ದುಮುಚ್ಚಿ ವ್ಯಾಪಾರ ಮಾಡಲಾಗುತ್ತಿತ್ತು.

ಕೆಲವು ಖಾಸಗಿ ಶಾಲಾ-ಕಾಲೇಜುಗಳಿಗೆ ಮುಂಜಾಗ್ರತಾ ಕ್ರಮವಾಗಿ ಆಡಳಿತ ಮಂಡಳಿಗಳು ರಜೆ ನೀಡಿದ್ದವು. ಕೆಲವು ಶಾಲೆಗಳು ಬಂದ್ ನಡುವೆಯೂ ಬಾಗಿಲು ತೆರೆದಿದ್ದು, ಮಕ್ಕಳಿಗೆ ತರಗತಿಗಳನ್ನು ನಡೆಸಲಾಯಿತು. ಅಂತಹ ಕೆಲವು ಶಾಲೆಗಳನ್ನು ಮನವಿ ಮಾಡಿ, ಬಂದ್ ಮಾಡಿಸಲಾಯಿತು. ಹೀಗಾಗಿ ತರಗತಿಗಳಿಂದ ಹೊರಬಂದ ಕಾಲೇಜು ವಿದ್ಯಾರ್ಥಿಗಳು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಮುಂಜಾನೆಯಿಂದ ಬೆಳಗ್ಗೆ 6.30ರವರೆಗೆ ಸರಕಾರಿ ಬಸ್‌ಗಳ ಕಾರ‍್ಯಾಚರಣೆ ನಡೆಯುತ್ತಿತ್ತು. ಆದರೆ, ಪ್ರತಿಭಟನೆಯ ಕಾವು ಏರುತ್ತಿದ್ದಂತೆ ಬಸ್‌ಗಳ ಕಾರ‍್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು. ಮಧ್ಯಾಹ್ನದವರೆಗೆ ಆಟೋಗಳ ಸಂಚಾರವನ್ನು ಸ್ಥಗಿತಗೊಳಿಸಿ, ಮಧ್ಯಾಹ್ನದ ಬಳಿಕ ರಸ್ತೆಗಿಳಿಸಲಾಗಿತ್ತು. ಜನರು ಮತ್ತು ಖಾಸಗಿ ವಾಹನಗಳ ಓಡಾಟವೂ ವಿರಳವಾಗಿತ್ತು.

ರಸ್ತೆತಡೆ, ಪ್ರತಿಭಟನಾ ಮೆರವಣಿಗೆ, ರಸ್ತೆಯಲ್ಲಿ ಉರುಳು ಸೇವೆ, ಬಾಯಿ ಬಡಿದುಕೊಳ್ಳುವುದು, ಮಕ್ಕಳಿಂದ ಖಾಲಿ ಕೊಡಗಳ ಪ್ರದರ್ಶನ, ಮಾನವ ಸರಪಳಿ ರಚನೆ ಹೀಗಾಗಿ ಹತ್ತಾರು ಮಾದರಿಯಲ್ಲಿ ಪ್ರತಿಭಟನೆ ನಡೆಸಲಾಯಿತು. “ಕಾವೇರಿ ನಮ್ಮದು” ಎಂದು ಬರೆದಿದ್ದ ಖಾಲಿ ಕೊಡವನ್ನು ಬಾಯಿಯಲ್ಲಿ ಕಚ್ಚಿಕೊಂಡಿದ್ದ ನಾಯಿಯೊಂದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ರೈತಸಂಘದ ಮುಖಂಡರು ಎಮ್ಮೆ ಹಾಗೂ ಎಮ್ಮೆ ಕರುವೊಂದನ್ನು ಕರೆತಂದು ಪ್ರತಿಭಟನೆ ನಡೆಸಿ ಗಮನ ಸೆಳೆದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೆಆರ್‌ಎಸ್ ಜಲಾಶಯಕ್ಕೆ ತೆರಳಿ, ನೀರಿನ ಲಭ್ಯತೆ ಬಗ್ಗೆ ವಸ್ತುಸ್ಥಿತಿ ಪರಿಶೀಲನೆ ನಡೆಸಿದರು. ಬಳಿಕ ರಸ್ತೆ ಮಾರ್ಗವಾಗಿ ಮಂಡ್ಯಕ್ಕೆ ಆಗಮಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿದ್ದ ಅನಿರ್ಧಿಷ್ಟಾವಧಿ ಹೋರಾಟದಲ್ಲಿ ಭಾಗಿಯಾಗಿದ್ದರು. ಮಾಜಿ ಸಚಿವ ಸಿ.ಟಿ.ರವಿ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಧರಣಿಯಲ್ಲಿ ಭಾಗವಹಿಸಿದ್ದರು. ಹತ್ತಾರು ಸಂಘಟನೆಗಳ ಪ್ರತಿನಿಧಿಗಳು ಬಂದ್ ವೇಳೆ ಪ್ರತಿಭಟನೆ ನಡೆಸಿದರು.

ಬಂದ್ ಅಂಗವಾಗಿ ನಗರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಕ್ಷಿಪ್ರ ಕಾರ‍್ಯಪಡೆ ತಂಡವನ್ನೂ ಆಯಕಟ್ಟಿನ ಸ್ಥಳಗಳಲ್ಲಿ ಬಂದೋಬಸ್ತ್ ಗೆ ನಿಯೋಜಿಸಿ, ಕಟ್ಟೆಚ್ಚರ ವಹಿಸಲಾಗಿತ್ತು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ