Friday, September 20, 2024

ಪ್ರಾಯೋಗಿಕ ಆವೃತ್ತಿ

ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿಯಿಂದ ಜೈಲ್ ಭರೋ

ಮಂಜೂರಾಗಿರುವ ಭೂಮಿ ಹಸ್ತಾಂತರಿಸಲು ತೊಡಕು ಮಾಡುತ್ತಿರುವ ಕಂದಾಯ ಅಧಿಕಾರಿಗಳ ನಡೆ ವಿರೋಧಿಸಿ ಮಂಡ್ಯ ತಾಲ್ಲೂಕಿನ ಬೂದನೂರು ಗ್ರಾಮದ ಬಳಿ ಅ.19ರಂದು ರಸ್ತೆ ತಡೆ ಹಾಗೂ ಜೈಲೋಭರೋ ಹಮ್ಮಿಕೊಳ್ಳಲಾಗಿದೆ ಎಂದು ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿಯ ಕಾನೂನು ಸಲಹೆಗಾರ ಜೆ.ರಾಮಯ್ಯ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ತಾಲ್ಲೂಕಿನ ಬೂದನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸರ್ಕಾರ ಮಂಜೂರು ಮಾಡಿರುವ ಸರ್ವೇ ನಂ.190 ರಲ್ಲಿನ 2 ಎಕರೆ ಭೂಮಿ ಯನ್ನು ತಹಶೀಲ್ದಾರ್ ಅವರು ಗ್ರಾಮ ಪಂಚಾಯತಿಗೆ ಹಸ್ತಾಂತರಿಸಲು ಇಲ್ಲದ ಕಾನೂನು ತೊಡಕು ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಮಿತಿಯ ಸಂಚಾಲಕ ಬಿ.ಕೆ.ಸತೀಶ್ ಮಾತನಾಡಿ, ಮಂಡ್ಯ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಅವರು, ಅನಾವಶ್ಯಕವಾಗಿ ಹೈಕೋರ್ಟ್ ಹಾಗೂ ಕರ್ನಾಟಕ ಆಡಳಿತಾತ್ಮಕ ನ್ಯಾಯಾಲಯಗಳಲ್ಲಿ ಸುಳ್ಳು ಮಾಹಿತಿ ನೀಡಿ ನಿವೇಶನರಹಿತರಿಗೆ ಅನ್ಯಾಯವೇನಗಲು ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು.

ಸರ್ವೇ ನಂಬರ್ 190ರಲ್ಲಿನ 2 ಎಕರೆ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿ ಅಧಿಕಾರಿಗಳ ಬೆಂಬಲದಿಂದ ಗೊಂದಲ ಉಂಟು ಮಾಡುತ್ತಿದ್ದಾರೆ. ಅ.15ರಂದು ಗ್ರಾಮ ಪಂಚಾಯತಿಗೆ ಹಸ್ತಾಂತರಿಸಲು ಸ್ಥಳೀಯ ಕೆಲ ಭೂ ಒತ್ತುವರಿದಾರರು ತಡೆ ಮಾಡಿದ್ದಾರೆ. ಈ ಗೋಮಾಳ ಭೂಮಿಯಲ್ಲಿ ಗ್ರಾಮಸ್ಥರು ಬೆಳೆಸಿರುವ ಬೆಲೆ ಬಾಳುವ ಮರಗಿಡಗಳನ್ನು ಲಪಟಾಯಿಸಲು ಅಧಿಕಾರಿಗಳು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ದೂರಿದರು.

ಆದ್ದರಿಂದ ಜಿಲ್ಲಾಡಳಿತ ಕೂಡಲೇ ಮಧ್ಯ ಪ್ರವೇಶಿಸಿ ಭೂಮಿ ಹಸ್ತಾಂತರಿಸಿ ನಿವೇಶನ ಹಂಚಿಕೆಗೆ ಅನುವು ಮಾಡಿಕೊಡಬೇಕು ಇಲ್ಲವಾದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ವಸತಿ ರಹಿತ ಕುಟುಂಬದವರಾದ ಸವಿತಾ, ಸರಸಿಬಾಯಿ, ಮಲ್ಲಮ್ಮ, ಸುಧಾ ಹಾಗೂ ನಾಗರತ್ನ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!