ಓಝೋನ್ ಪದರ ನಾಶಗೊಂಡರೆ ಜೀವಸಂಕಲದ ಅಳಿವು ಖಚಿತ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾಧ್ಯಕ್ಷೆ ಮೀರಾಶಿವಲಿಂಗಯ್ಯ ಹೇಳಿದರು.
ಮಂಡ್ಯ ತಾಲ್ಲೂಕು ತಿಮ್ಮನಹೊಸೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ನಂಜಮ್ಮ ಮೋಟೆಗೌಡ ಚಾರಿಟಬಲ್ ಟ್ರಸ್ಟ್ ಕೊಪ್ಪ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ, ಕೃಷಿಕ ಲಯನ್ಸ್ ಸಂಸ್ಥೆ ಇವರು ಆಯೋಜಿಸಿದ ವಿಶ್ವ ಓಝೋನ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಜಗತ್ತು ಬೆಳೆದಂತೆ ಜಾಗತೀಕ ಸಮಸ್ಯೆಗಳು ಹೆಚ್ಚಾಗುತ್ತಿವೆ, ಜೀವಸಂಪತ್ತಿಗೆ ಮಾರಕವಾಗುತ್ತಿದೆ, ಆಧುನಿಕ ಜೀವನಶೈಲಿಗಾಗಿ ಮನುಷ್ಯ ಬಳಸುವ ವಸ್ತುಗಳಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ ಎಂದರು.
ಗೃಹಬಳಕೆಗಾಗಿ ತಯಾರಿಸಿದ ರೆಫ್ರಿಜರೇಟರ್, ಏರ್ಕಂಡೀಷನರ್, ಕಾಸ್ಮೆಟಿಕ್ಸ್ ಬಳಕೆಯಿಂದಾಗಿ ಕ್ಲೊರೊಫ್ಕೋರ್ ಕಾರ್ಬನ್ ಬಿಡುಗಡೆಯಾಗಿ ಓಝೋನ್ ಮಾರಕವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಭೂಮಿಗೆ ನೇರವಾಗಿ ಬರುವ ಸೂರ್ಯನ ನೇರಳೆತೀತ ಕಿರಣಗಳಿಂದ ರಕ್ಷಣೆ ನೀಡುತ್ತಿರುವ ವಾಯುಮಂಡಲದ ಓಝೋನ್ ಪದರವು ಛತ್ರಿಯಾಂತೆ ಭೂಮಿಯನ್ನು ಆವರಿಸಿದೆ, ಜೀವರಕ್ಷಕದಂತೆ ಜೀವಸಂಪತ್ತನ್ನು ಕಾಪಾಡುತ್ತಿದೆ, ಅದನ್ನು ಹಾಗೆಯೇ ಕಾಪಾಡಿಕೊಳ್ಳುವ ಜವಾಬ್ದಾರಿ ಮಾನವ ಕುಲದ ಮೇಲಿದೆ ಎಂದರು.
ನಂಜಮ್ಮ ಮೋಟೆಗೌಡ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ. ಟಿ. ಹನುಮಂತು ಮಾತನಾಡಿ, ಇಂದಿನ ಗ್ರಾಮೀಣ ವ್ಯಾಪ್ತಿಯ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಹೆಚ್ಚಿಸಿಕೊಂಡು ಮೂಢನಂಬಿಕೆಯಿಂದ ಹೊರಬರಬೇಕು, ವಿಜ್ಞಾನ, ಗಣಿತ, ಇತಿಹಾಸ, ಪರಿಸರ ಕಾಳಜಿ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಪ್ರಮಾಣಪತ್ರ ನೀಡಲಾಯಿತು, ಪರಿಸರ ಬಗ್ಗೆ ಕಾಳಜಿ ವಹಿಸಿರುವ ಶಿಕ್ಷಕರಿಗೆ ಸಾಲುಮರದ ತಿಮ್ಮಕ್ಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕ ಎನ್.ಯೋಗೇಶ್, ಪರಿಸರ ತಜ್ಞೆ ಪ್ರೊ.ಭವ್ಯ, ಗಾಯಕ ರಮೇಶ್ ಕರಿಘಟ್ಟ, ಕೃಷಿಕ ಲಯನ್ಸ್ ಸಂಸ್ಥೆ ಅಧ್ಯಕ್ಷ ಮೋಹನ್ ಕುಮಾರ್, ವಿಷಯ ಪರಿವೀಕ್ಷಕರಾದ ಸಿ.ಎಲ್.ನಂಜರಾಜು, ಎಸ್. ಲೋಕೇಶ್, ಲಯನ್ಸ್ ಸಂಸ್ಥೆಯ ರಕ್ಷಿತ್ರಾಜ್, ಸುಬ್ಬೆಗೌಡ, ಗ್ರಾ.ಪಂ.ಸದಸ್ಯ ಆನಂದ್ ಹಾಗೂ ಶಾಲಾ ಶಿಕ್ಷಕರು ಹಾಜರಿದ್ದರು




