Thursday, September 19, 2024

ಪ್ರಾಯೋಗಿಕ ಆವೃತ್ತಿ

ಪ.ಜಾತಿ ಮತ್ತು ಪ.ಪಂಗಡದ ಸಮಸ್ಯೆ ಬಗೆಹರಿಸಲು ಮುಂದಾಗಿ: ಡಿಸಿ ಅಶ್ವತಿ

ಜಿಲ್ಲೆಯಲ್ಲಿರುವ ಪ. ಜಾತಿ ಮತ್ತು ಪ. ಪಂಗಡದವರ ಸಮಸ್ಯೆಗಳ ಬಗೆಹರಿಸಲು ಅಧಿಕಾರಿಗಳು ಮುಂದಾಗಿ, ಯಾವುದೇ ಲೋಪವಾಗದಂತೆ ಕಾರ್ಯನಿರ್ವಹಿಸಿ ಎಂದು ಜಿಲ್ಲಾಧಿಕಾರಿ ಎಸ್.ಅಶ್ವತಿ ಅವರು ತಿಳಿಸಿದರು.

ಮಂಡ್ಯ ಜಿಲ್ಲಾ ಪಂಚಾಯತ್ ನ ಕಾವೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ (ದೌರ್ಜನ್ಯ ಪ್ರತಿಬಂಧ) ಕಾಯ್ದೆ -1989 ಹಾಗೂ ನಿಯಮಗಳನ್ನು ಅನುಷ್ಠಾನಗೊಳಿಸುವ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮದ್ದೂರು ತಾಲ್ಲೂಕಿನ ಕೊಪ್ಪ, ಚಿಕ್ಕರಸಿನಕೆರೆ, ಮಂಡ್ಯ ತಾಲ್ಲೂಕಿನ ದುದ್ದ ಗ್ರಾಮಗಳಲ್ಲಿ ವಸತಿ ಶಾಲೆಗಳ ನಿರ್ಮಾಣ ಮಾಡಲು ನಿವೇಶನ ಮಂಜೂರಾಗಿದ್ದು,ಇನ್ನಿತರ ತಾಲ್ಲೂಕಿನ ಗ್ರಾಮದಲ್ಲಿ ವಸತಿ ಶಾಲೆಗಳ ನಿರ್ಮಾಣಕ್ಕೆ ನಿವೇಶನ ದೊರಕಿಸಿಕೊಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾ ಕೇಂದ್ರ ಹಾಗೂ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಬುದ್ಧ ವಿಹಾರ ಕೇಂದ್ರ ನಿರ್ಮಾಣ ಮಾಡುವ ಕುರಿತು ಚರ್ಚಿಸಿ ಇರುವ ಗೊಂದಲವನ್ನು ಶೀಘ್ರದಲ್ಲಿಯೇ ಪರಿಹರಿಸಿ, ತಾಲ್ಲೂಕಿನಲ್ಲಿ ಪರಿಶೀಲಿಸಿ 3ರಿಂದ 5 ಎಕರೆ ಜಮೀನು ಮಂಜೂರು ಮಾಡುವಂತೆ ಉಪವಿಭಾಗಾಧಿಕರಿ ಹಾಗೂ ತಹಶೀಲ್ದಾರ್ ರವರಿಗೆ ಸೂಚನೆ ನೀಡಿದರು.

ಮಂಡ್ಯ ತಾಲ್ಲೂಕಿನ ಹುಳ್ಳೇನಹಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ಮೀಸಲಿರಿಸಿದ್ದ ನಿವೇಶನದಲ್ಲಿ ಗುಡಿಸಲುಗಳಿದ್ದು, ಅರ್ಹ ನಿವಾಸಿಗಳಿಗೆ ಬದಲಿ ನಿವೇಶನ ಒದಗಿಸಿ ಗುಡಿಸಲನ್ನು ತೆರವುಗೊಳಿಸುವ ಸಂಬಂಧ ವಿಶೇಷ ಗ್ರಾಮ ಸಭೆ ಕರೆದು ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು.

ಜಿಲ್ಲೆಯ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಲ್ಲಿ ಕುರಿ ಮತ್ತು ಉಣ್ಣೆ ಸಹಕಾರ ಸಂಘದಲ್ಲಿ ಇರುವ ಗೊಂದಲವನ್ನು ಸರಿಪಡಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಯಾವುದೇ ತೊಂದರೆಯಾಗದ ರೀತಿ ಸಮಿತಿಯಲ್ಲಿ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳಿ ಎಂದು ಹೇಳಿದರು.

ಜಿಲ್ಲೆಯಲ್ಲಿ ಕೆ.ಆರ್.ಐ.ಡಿ.ಎಲ್ ಸಂಸ್ಥೆಗೆ ವಹಿಸಲಾಗಿರುವ ಡಾ.ಅಂಬೇಡ್ಕರ್ ಭವನಗಳ ನಿರ್ಮಾಣ ಕಾಮಗಾರಿಯನ್ನು ತುರ್ತಾಗಿ ಕೈಗೊಂಡು ಪೂರ್ಣಗೊಳಿಸಿ,ಕಾಮಗಾರಿ ಮತ್ತು ಅನುದಾನದ ವಿವರದ ಜೊತೆ ಮುಕ್ತಾಯಗೊಂಡ ಹಾಗೂ ಬಾಕಿ ಇರುವ ಕಾಮಗಾರಿಗಳ ವಿವರವನ್ನು ಮುಂದಿನ ಸಭೆಗೆ ವರದಿ ಸಲ್ಲಿಸಬೇಕು ಎಂದರು.

ಸಭೆಯಲ್ಲಿ ಜಿ.ಪಂ.ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಶಾಂತಾ ಎಲ್.ಹುಲ್ಮನಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೇಣು ಗೋಪಾಲ್, ಉಪವಿಭಾಗಾಧಿಕಾರಿಗಳಾದ ಬಿ.ಸಿ.ಶಿವಾನಂದಮೂರ್ತಿ, ಆರ್.ಐಶ್ವರ್ಯ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಬಿ. ರಂಗೇಗೌಡ, ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರುಗಳಾದ ವೆಂಕಟಗಿರಿಯಯ್ಯ, ಎನ್.ಆರ್ ಚಂದ್ರಶೇಖರ್, ಅಮ್ಜದ್ ಪಾಷ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!