‘ಹಿಂದೂಸ್ಥಾನವು ಎಂದೂ ಮರೆಯದ..’, ‘ಒಲವಿನ ಉಡುಗೊರೆ ಕೊಡಲೇನು..’, ‘ಮಂದಾರ ಪುಷ್ಪವು ನೀನು..’ ಸೇರಿದಂತೆ ಕನ್ನಡದ ಅನೇಕ ಸೂಪರ್ ಹಿಟ್ ಹಾಡುಗಳಿಗೆ ಧ್ವನಿಯಾಗಿದ್ದ ಖ್ಯಾತ ಗಾಯಕ ಪಿ. ಜಯಚಂದ್ರನ್ ಅವರು ಮೃತರಾಗಿದ್ದಾರೆ. ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿದ್ದ ಜನವರಿ 9ರಂದು ನಿಧನರಾಗಿದ್ದಾರೆ.
ಕೇರಳ ಮೂಲದ ಅವರು ಹಲವು ಭಾಷೆಯಲ್ಲಿ ಹಾಡುವ ಮೂಲಕ ಜನರನ್ನು ರಂಜಿಸಿದ್ದರು. ಕನ್ನಡದಲ್ಲೂ ಹಲವು ಸೂಪರ್ ಹಿಟ್ ಗೀತೆಗಳಿಗೆ ಪಿ. ಜಯಚಂದ್ರನ್ ಧ್ವನಿಯಾಗಿದ್ದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಕ್ಯಾನ್ಸರ್ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿ ಆಗದೇ ತ್ರಿಶುರ್ನ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ. ಪಿ. ಜಯಚಂದ್ರನ್ ನಿಧನದ ಸುದ್ದಿ ತಿಳಿದು ಅಭಿಮಾನಿಗಳು, ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ.
ಇಳಯರಾಜ, ಎ.ಆರ್. ರೆಹಮಾನ್, ಎಂಎಂ ಕೀರವಾಣಿ, ವಿಜಯ ಭಾಸ್ಕರ್, ಎಂ. ರಂಗ ರಾವ್ ಮುಂತಾದ ಲೆಜೆಂಡರಿ ಸಂಗೀತ ನಿರ್ದೇಶಕರ ಜೊತೆಗೆ ಪಿ. ಜಯಚಂದ್ರನ್ ಅವರು ಕೆಲಸ ಮಾಡಿದ್ದರು. ಮಲಯಾಳಂ, ಕನ್ನಡ, ಹಿಂದಿ, ತೆಲುಗು, ತಮಿಳು ಮುಂತಾದ ಭಾಷೆಗಳ ಸಿನಿಮಾ ಗೀತೆಗಳಿಗೆ ಅವರು ಧ್ವನಿಯಾಗಿದ್ದರು. ಅವರನ್ನು ಕಳೆದುಕೊಂಡು ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.
ಕನ್ನಡದಲ್ಲಿ ಪಿ. ಜಯಚಂದ್ರನ್ ಅವರು ಹಾಡಿದ ಗೀತೆಗಳು ಇಂದಿಗೂ ಎವರ್ಗ್ರೀನ್ ಆಗಿ ಉಳಿದುಕೊಂಡಿವೆ. ‘ಅಮೃತ ಗಳಿಗೆ’ ಸಿನಿಮಾದ ‘ಹಿಂದೂಸ್ಥಾನವು ಎಂದೂ ಮರೆಯದ..’, ಒಲವಿನ ಉಡುಗೊರೆ ಚಿತ್ರದ ‘ಒಲವಿನ ಉಡುಗೊರೆ ಕೊಡಲೇನು..’, ‘ರಂಗನಾಯಕಿ’ ಸಿನಿಮಾದ ‘ಮಂದಾರ ಪುಷ್ಪವು ನೀನು..’, ‘ಮಾನಸ ಸರೋವರ’ ಸಿನಿಮಾದ ‘ಚಂದ ಚಂದ..’, ‘ಕಿಲಾಡಿಗಳು’ ಚಿತ್ರ ‘ಕಾಲ ಮತ್ತೊಮ್ಮೆ ನಮಗಾಗಿ ಬಂತು..’ ಸೇರಿದಂತೆ ಅನೇಕ ಗೀತೆಗಳನ್ನು ಜಯಚಂದ್ರನ್ ಅವರು ಹಾಡಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಭಿಮಾನಿಗಳು, ಆಪ್ತರು, ಸೆಲೆಬ್ರಿಟಿಗಳು ಪ್ರಾರ್ಥಿಸುತ್ತಿದ್ದಾರೆ.




